Sunday, 11th May 2025

Vishwavani Editorial: ಹೊಣೆಗಾರಿಕೆಯ ನೊಗ ಬಲುಭಾರ

ಆಂಧ್ರಪ್ರದೇಶದ ತಿರುಪತಿ ಶ್ರೀಕ್ಷೇತ್ರವು ಸುದ್ದಿಯ ಮುನ್ನೆಲೆಗೆ ಬಂದಿದೆ. ವೈಎಸ್‌ಆರ್ ಕಾಂಗ್ರೆಸ್ ಸರಕಾರವು ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಅವಧಿಯಲ್ಲಿ, ತಿರುಪತಿ ತಿಮ್ಮಪ್ಪನ ದೇಗುಲದ ಲಡ್ಡು ಪ್ರಸಾದವನ್ನು ತಯಾರಿಸಲು ಹಸುವಿನ ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ತೈಲವನ್ನು ಬಳಸಲಾಗುತ್ತಿತ್ತು. ಜತೆಗೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಲಾಗುತ್ತಿತ್ತು ಎಂದು ಆಂಧ್ರದ ಈಗಿನ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಆರೋಪಿಸಿರುವುದು ಇದಕ್ಕೆ ಕಾರಣ.

ಈ ಆರೋಪದಲ್ಲಿ ರಾಜಕೀಯವಿಲ್ಲ ಎನ್ನುವುದಾದರೆ ಈ ವಿಷಯದಲ್ಲಿ ಸಿಬಿಐ ತನಿಖೆಗೆ ಆದೇಶಿಸಿ ಎಂದು
ಆಂಧ್ರಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಆಗ್ರಹಿಸಿದ್ದೂ ಆಗಿದೆ. ಕೂಲಂಕಷ ತನಿಖೆ
ಮಾತ್ರವೇ ಈ ವಿವಾದಕ್ಕೆ ತಾರ್ಕಿಕ ಅಂತ್ಯವನ್ನು ನೀಡಬಲ್ಲದು. ರಾಜಕೀಯ ಧುರೀಣರ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಪಕ್ಕಕ್ಕಿಟ್ಟು ಮಾತಾಡುವುದಾದರೆ, ತಿರುಪತಿ ಲಡ್ಡು ಮಾತ್ರವೇ ಅಲ್ಲ ಯಾವುದೇ ದೇವರ
ಪ್ರಸಾದವಿರಲಿ ಅದು ಭಕ್ತರ ಪಾಲಿಗೆ ಕೇವಲ ಸಿಹಿ ಅಥವಾ ಖಾರದ ಭಕ್ಷ್ಯವಾಗಿರುವುದಿಲ್ಲ; ಅದು ಸಾಕ್ಷಾತ್ ಪರಮಾತ್ಮನ ಅನುಗ್ರಹವೇ ಆಗಿರುತ್ತದೆ.

ಹೀಗಿರುವಾಗ ಇಂಥ ಸೂಕ್ಷ್ಮ ವಿಷಯಗಳಲ್ಲಿ ಹುಡುಗಾಟ ಅಥವಾ ಬೇಜವಾಬ್ದಾರಿತನ ಸಲ್ಲದು ಎಂದಷ್ಟೇ ಇಲ್ಲಿ ಹೇಳಬೇಕಾಗುತ್ತದೆ. ಅದರಲ್ಲೂ, ಕೋಟ್ಯಂತರ ಶ್ರದ್ಧಾವಂತರ ನಂಬುಗೆಯ ನೆಲೆಯಾದ ತಿರುಪತಿ ತಿಮ್ಮಪ್ಪನ ದೇಗುಲ ಮತ್ತು ಅಲ್ಲಿನ ಲಡ್ಡು ಪ್ರಸಾದದೊಂದಿಗೆ ಭಕ್ತರಿಗೆ ಅವಿನಾಭಾವ ಸಂಬಂಧವಿದೆ. ಇಂಥ ಕ್ಷೇತ್ರದ ಪ್ರಸಾದ ವನ್ನು ತಯಾರಿಸುವಾಗ, ನಿಗದಿಪಡಿಸಲಾದ ಧಾರ್ಮಿಕ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದರ ಜತೆಜತೆಗೆ ಭಕ್ತ ಜನರ ನಂಬಿಕೆಗೆ ಧಕ್ಕೆಯಾಗದಂತೆಯೂ ನೋಡಿಕೊಳ್ಳಬೇಕಾದ್ದು ಸಂಬಂಧಪಟ್ಟವರ ಹೆಗಲ ಮೇಲಿನ ಹೊಣೆಯ ನೊಗ.

ಈ ನೊಗವನ್ನು ಕೊಂಚವೇ ಆಚೀಚೆ ಸರಿಸಿದರೂ, ಪರಿಣಾಮ ವ್ಯತಿರಿಕ್ತವೇ ಆಗಿರುತ್ತದೆ ಎಂಬುದನ್ನು ಇಂಥವರು ಅರಿತರೆ ಸಾಕು. ವಿವಿಧತೆಯಲ್ಲಿ ಏಕತೆಯನ್ನು ಹರಸಾಹಸ ಪಟ್ಟು ರೂಢಿಸಿಕೊಂಡಿರುವ ನಮ್ಮ ದೇಶದಲ್ಲಿ ಭಾಷೆ, ಬಣ್ಣ, ಪ್ರದೇಶ, ಗಡಿ, ನೀರು, ಧಾರ್ಮಿಕ ನಂಬಿಕೆ ಇತ್ಯಾದಿ ವಿಷಯಗಳನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾಗುತ್ತದೆ ಅಲ್ಲವೇ?

ಇದನ್ನೂ ಓದಿ: Tirupati laddu row : ತಿರುಪತಿ ಲಡ್ಡು ತಯಾರಿಸಲು ನಾವು ತುಪ್ಪ ಕೊಟ್ಟಿಲ್ಲ; ಅಮೂಲ್‌ ಸ್ಪಷ್ಟನೆ