Saturday, 10th May 2025

Vishwavani Editorial: ಸಚಿನ್-ಕಾಂಬ್ಳಿ ಬದುಕು ನಮಗೂ ಪಾಠ

ಸೋಶಿಯಲ್ ಮೀಡಿಯಾಗಳಲ್ಲಿ ವಿಶ್ವಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮತ್ತು ಅವರ ಬಾಲ್ಯದ ಗೆಳೆಯ, ಪ್ರತಿಭಾನ್ವಿತ ಕ್ರಿಕೆಟಿಗ ವಿನೋದ್ ಕಾಂಬ್ಳಿ ಸಾರ್ವಜನಿಕ ವೇದಿಕೆಯೊಂದರಲ್ಲಿ ಪರಸ್ಪರ ಭೇಟಿಯಾಗುತ್ತಿರುವ ಚಿತ್ರ ವೈರಲ್ ಆಗುತ್ತಿದೆ. ರಮಾಕಾಂತ್ ಅಚ್ರೇಕರ್ ಸ್ಮಾರಕ ಅನಾವರಣ ಕಾರ್ಯಕ್ರಮಕ್ಕೆ ಸಚಿನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಕಾಂಬ್ಳಿ ಅವರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ವೇದಿಕೆಯ ಮೂಲೆಯಲ್ಲಿ ಕುಳಿತಿದ್ದ ಕಾಂಬ್ಳಿ ಸಮೀಪಕ್ಕೆ ಸಾಗಿ ಅವರನ್ನು ಮಾತನಾಡಿಸುತ್ತಿದ್ದಂತೆಯೇ ಬಾಲ್ಯದ ಗೆಳೆಯನ ಕಣ್ಣಲ್ಲಿ ಹೊಳಪು ಕಾಣಿಸಿತ್ತು. ಆದರೆ ಕಾಂಬ್ಳಿ ಬಳಿ ಎದ್ದು ನಿಂತು ಆಲಂಗಿಸುವಷ್ಟು ಶಕ್ತಿ ಇರಲಿಲ್ಲ. ಜೀವನದಲ್ಲಿ ಶಿಸ್ತು, ಪರಿಶ್ರಮ, ಮೌಲ್ಯಗಳನ್ನು ಅಳವಡಿಸಿಕೊಳ್ಳದೇ ಹೋದರೆ, ಎಷ್ಟೇ ಪ್ರತಿಭಾವಂತ ರಾದರೂ ಮೇಲೇರಲು ಸಾಧ್ಯವಿಲ್ಲ ಎನ್ನುವುದಕ್ಕೆ ಕಾಂಬ್ಳಿ ಸಾಕ್ಷಿ. ೧೮ನೇ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಪಡೆದ ಕಾಂಬ್ಳಿ, ಮೊದಲ ಟೆಸ್ಟ್ ಸರಣಿಯಲ್ಲಿಯೇ ಶತಕ ಬಾರಿಸಿ ಮಿಂಚಿದ್ದರು.

ನಂತರ 3 ದೇಶಗಳ ಎದುರು ನಿರಂತರ 3 ಶತಕ ಬಾರಿಸಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಟೆಸ್ಟ್‌ನಲ್ಲಿ ಅತಿ ವೇಗ ವಾಗಿ (14 ಇನ್ನಿಂಗ್ಸ್) 1000 ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದರು. ಏಕದಿನ ಪಂದ್ಯದಲ್ಲಿ ತಮ್ಮ ಜನ್ಮದಿನದಂದೇ ಶತಕ ಬಾರಿಸಿ ಸಂಭ್ರಮಿಸಿದ್ದರು. ಎಲ್ಲವೂ ಸುಗಮವಾಗಿ ಸಾಗಿದ್ದರೆ ಕಾಂಬ್ಳಿ, ಸಚಿನ್ ಎಂಬ ಸ್ಟಾರ್ ಆಟಗಾರನ ಜತೆಯಲ್ಲಿಯೇ ಸಾಗಬೇಕಿತ್ತು.

ಆದರೆ ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಕಾಂಬ್ಳಿಗೆ ಸಣ್ಣ ವಯಸ್ಸಿನಲ್ಲಿಯೇ ಸಿಕ್ಕ ಯಶಸ್ಸನ್ನು ಸಂಭಾಳಿಸಲು ಆಗಲಿಲ್ಲ. ದುಡ್ಡು ಬರುತ್ತಿ ದ್ದಂತೆಯೇ ಕುಡಿತ, ಮೋಜು, ಮಸ್ತಿಗಳಲ್ಲಿ ಕಳೆದ ಆಟಗಾರ, ಭವಿಷ್ಯದ ಬಗ್ಗೆ ಯೋಚಿಸಲೇ ಇಲ್ಲ. 23ನೇ ವಯಸ್ಸಿಗೆ ಕಾಂಬ್ಳಿ ಟೆಸ್ಟ್ ಕೆರಿಯರ್ ಕೊನೆಗೊಂಡರೆ ನಂತರ ಏಕದಿನ ಪಂದ್ಯಗಳಲ್ಲೂ ಹೆಚ್ಚು ಯಶಸ್ಸು ಕಾಣಲಿಲ್ಲ. ನಂತರ ಸಿನಿಮಾ, ಕೋಚ್, ರಿಯಾಲಿಟಿ ಶೋ ಹೀಗೆ ನಾನಾ ಪಾತ್ರಗಳಲ್ಲಿ ಜೀವನ ಕಂಡುಕೊಳ್ಳುವ ಪ್ರಯತ್ನ ಮಾಡಿದರೂ ಶಿಸ್ತಿನ ಕೊರತೆಯಿಂದ ಇದಾವುದೂ ಕೈಗೂಡಲಿಲ್ಲ.

ಸಾಲದೆಂಬಂತೆ 41ನೇ ವಯಸ್ಸಿನಲ್ಲಿಯೇ ಹೃದಯಾಘಾತ ಕ್ಕೊಳಗಾದ ಕಾಂಬ್ಳಿ ಬೇರೆಯವರ ಆಸರೆ ಪಡೆಯಬೇಕಾದ ಅನಿವಾರ‍್ಯತೆಗೆ ಸಿಲುಕಿ ದರು. ಸಮಾಜ ವ್ಯಕ್ತಿಯ ಯಶಸ್ಸನ್ನು ಮಾತ್ರ ಗುರುತಿಸುತ್ತದೆ. ಸಚಿನ್ ಪರಿಶ್ರಮ ಮತ್ತು ಯಶಸ್ಸಿನ ಸಂಕೇತವಾದರೆ, ಕಾಂಬ್ಳಿ ಸೋಲಿನ ಪ್ರತೀಕವಾದರು. ಇವರಿಬ್ಬರ ಬದುಕು ನಮಗೂ ಪಾಠವಾಗಬಹುದು.

ಇದನ್ನೂ ಓದಿ: Vishwavani Editorial: ತಮಸೋಮಾ ಜ್ಯೋತಿರ್ಗಮಯ