Saturday, 10th May 2025

Vishwavani Editorial: ಅರಾಜಕತೆ, ಯುದ್ದೋನ್ಮಾದದ ಸುತ್ತ..

ಇದೇನು ಸ್ವಾರ್ಥ ಲಾಲಸೆಯ ಪರಮಾವಧಿಯೋ, ಯುಗಧರ್ಮವೇ ಹಾಗೆ ಬದಲಾಗಿದೆಯೋ ಗೊತ್ತಾಗುತ್ತಿಲ್ಲ. ಕಾರಣ ವಿಶ್ವದ ಕೆಲ ದೇಶಗಳು ಅರಾಜಕತೆ, ಯುದ್ಧೋನ್ಮಾದ, ಸಂಘರ್ಷಗಳಿಂದ ನಲುಗುತ್ತಿವೆ. ಇಸ್ರೇಲ್-ಪ್ಯಾಲೆಸ್ತೀನ್ ಕದನ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮೊನ್ನೆ ಪ್ಯಾಲೆಸ್ತೀನಿನ ಗಾಜಾಪಟ್ಟಿ ಪ್ರದೇಶದ ಮೇಲೆ ಇಸ್ರೇಲ್‌ ನಿಂದ ಡ್ರೋನ್ ದಾಳಿಯಾಗಿ 29 ಮಂದಿ ಹತರಾಗಿರುವುದು ಇದಕ್ಕೆ ತಾಜಾ ಉದಾಹರಣೆ.

ಮತ್ತೊಂದೆಡೆ ಸಿರಿಯಾ ಹಾಗೂ ಬಾಂಗ್ಲಾ ದೇಶಗಳಲ್ಲಿ ಚುನಾಯಿತ ಸರಕಾರಗಳ ಪತನವಾಗಿದ್ದು, ಅರಾಜಕತೆ ತಾಂಡವವಾಡುತ್ತಿರುವುದು ಗೊತ್ತಿರುವ ಸಂಗತಿಯೇ. ಸಿರಿಯಾದಲ್ಲಿ ಅಧ್ಯಕ್ಷ ಬಶರ್ ಅಸಾದ್ ಬಂಡುಕೋರರ ದಾಳಿಗೆ ಬೆದರಿ ರಾಜೀನಾಮೆ ನೀಡಿ ದೇಶಬಿಟ್ಟು ಪರಾರಿಯಾದ ನಂತರ, ಪ್ರತಿಭಟನಾಕಾರರು ಮಿಂಚಿನ ಕಾರ್ಯಾ ಚರಣೆ ನಡೆಸಿ ಆಡಳಿತದ ಮೇಲೆ ಹಿಡಿತ ಸಾಧಿಸಿದ್ದರ ಜತೆಗೆ ಎಲ್ಲ ಕೈದಿಗಳನ್ನೂ ಬಿಡುಗಡೆ ಮಾಡಿದ ಬೆಳವಣಿಗೆ ಯಾಯಿತು.

ಸಿರಿಯಾದಲ್ಲಿ ತಲೆದೋರಿರುವ ಭಯಗ್ರಸ್ತ ವಾತಾವರಣ, ಅರಾಜಕತೆಗೆ ಅಮೆರಿಕ ಮತ್ತು ಇಸ್ರೇಲ್‌ಗಳೇ
ತೆರೆಮರೆಯ ಸೂತ್ರಧಾರಿಗಳು ಎಂಬ ಅಭಿಪ್ರಾಯವೂ ಕೆಲವರಿಂದ ವ್ಯಕ್ತವಾಗಿದೆ. ಇನ್ನು ಬಾಂಗ್ಲಾದಲ್ಲಿ ಶೇಖ್ ಹಸೀನಾರ ಪದಚ್ಯುತಿಯಾಗಿ ಅವರು ಭಾರತದಲ್ಲಿ ಆಶ್ರಯ ಪಡೆದ ನಂತರ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ-ನಡೆಯುತ್ತಿರುವ ದಾಳಿ-ಹಿಂಸಾಚಾರಗಳನ್ನು ಇಡೀ ಜಗತ್ತೇ ನೋಡಿದೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ‘ದಾಯಾದಿ ಕಲಹ’ದಿಂದ ಉಂಟಾಗಿರುವ ಅವ್ಯವಸ್ಥೆಯನ್ನು ಬಿಡಿಸಿ ಹೇಳ ಬೇಕಿಲ್ಲ. ಒಟ್ಟಾರೆ ಹೇಳುವುದಾದರೆ, ವಿಶ್ವದ ವಿವಿಧ ಭಾಗಗಳಲ್ಲಿ ‘ಶಾಂತಿಮಂತ್ರ ಪಠನ’ ಮಾಯವಾಗಿ, ‘ಹಿಂಸೆಯ ಹೇಷಾರವ’ ವ್ಯಾಪಕವಾಗಿದೆ. ಬಹಳ ಹಿಂದೆ ಇದ್ದ ಬುದ್ಧ ಮತ್ತು ಗಾಂಧಿಯವರು, ಶಾಂತಿ ಮತ್ತು ಅಹಿಂಸೆಗಿರುವ ಮಹತ್ವವನ್ನು ಬಾಯಿಮಾತಿಗಷ್ಟೇ ಹೇಳದೆ ಆಚರಣೆಯಲ್ಲೂ ತೋರಿಸಿದರು. ‘ಯುಗಪರಿವರ್ತಕ ದಿವ್ಯಾತ್ಮ’ಗಳಲ್ಲಿ ಎದ್ದು ಕಾಣುವಂಥ ಎರಡು ಹೆಸರುಗಳಿವು.

ಇವರಿಬ್ಬರ ಬೋಧನೆಗಳು ವಿಶ್ವದೆಲ್ಲೆಡೆ ಪುಸ್ತಕ ರೂಪದಲ್ಲಿ ಹಬ್ಬಿವೆ, ಆದರೆ ಆಚರಣೆ ಮಾತ್ರ ಮೂಲೆ ಸೇರಿದೆ. ಪ್ರಾಯಶಃ ‘ಶಾಂತಿ-ಅಹಿಂಸೆ’ ಎಂಬ ಪರಿಕಲ್ಪನೆಗಳು ‘ಪುಸ್ತಕದ ಬದನೇಕಾಯಿ’ ಎಂಬುದು ಹಿಂಸೆಯ ಪ್ರವರ್ತಕರ ಗ್ರಹಿಕೆಯಿದ್ದಿರಬೇಕು!

ಇದನ್ನೂ ಓದಿ: Vishwavani Editorial: ಗತವೈಭವಕ್ಕೆ ಮರಳಲಿ ಚಂದನವನ