Sunday, 11th May 2025

Vishwavani Editorial: ಇದು ಮದೋನ್ಮತರ ಅಟ್ಟಹಾಸ

‘ಕೇಡುಗಾಲ ಬಂದಾಗ ನಾಯಿ ಮೊಟ್ಟೆ ಇಡ್ತಂತೆ’ ಎಂಬುದೊಂದು ಜಾಣನುಡಿಯನ್ನು ನೀವು ಕೇಳಿರಬಹುದು. ನೆರೆಯ ಬಾಂಗ್ಲಾ ದೇಶದಲ್ಲಿ ಈಗ ಕಾಣಬರುತ್ತಿರುವ ಅತಿರೇಕಗಳನ್ನು ಕಂಡಾಗ ಈ ಮಾತುಕೆಲವರಿಗೆ ನೆನಪಾದರೆ ಅಚ್ಚರಿಯೇನಿಲ್ಲ. ಶೇಖ್ ಹಸೀನಾರ ಪದಚ್ಯುತಿಯ ಆಸುಪಾಸಿನಲ್ಲಿ ಬಾಂಗ್ಲಾದಲ್ಲಿ ತಲೆದೋರಿರುವ ಅರಾಜಕತೆಯನ್ನು ಒಂದಿಡೀ ವಿಶ್ವವೇ ಕಣ್ತುಂಬಿಕೊಂಡಿದೆ. ಬಾಂಗ್ಲಾದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅಲ್ಲಿನ ಕೆಲವು ಧರ್ಮಾಂಧರು ನಡೆಸಿದ ದಾಳಿ, ಥಳಿತ, ಹಿಂದೂಗಳ ಆಸ್ತಿ ಪಾಸ್ತಿಗೆ ಉಂಟುಮಾಡಿದ ಹಾನಿ ಇವೆಲ್ಲವಕ್ಕೂ ಜಗದ ಜನರು ಸಾಕ್ಷಿಯಾಗಿದ್ದಾರೆ.

ಇಷ್ಟು ಸಾಲದೆಂಬಂತೆ ಮೊನ್ನೆ ಇಸ್ಕಾನ್‌ನ ಸಂತರ ಮೇಲೆ ಅಲ್ಲಿನ ಕಿಡಿಗೇಡಿಗಳ ಕಣ್ಣುಬಿದ್ದಿದೆ. ಪ್ರವಾಹ, ಕೋವಿಡ್ ಪಿಡುಗು ಸೇರಿದಂತೆ ಬಾಂಗ್ಲಾ
ದೇಶ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ತಮಗೆ ಸಹಾಯಹಸ್ತ ಚಾಚಿದ್ದು ಇದೇ ಇಸ್ಕಾನ್ ಸಂಸ್ಥೆ ಎಂಬುದನ್ನೂ ಮರೆತು ಅಲ್ಲಿನ ಧರ್ಮಾಂಧರು ಇಸ್ಕಾನ್‌ನ ಸಂತರ ಮೇಲೆ ಕೆಂಗಣ್ಣು ಬೀರಿರುವುದು ವಿಪರ್ಯಾಸವೇ ಸರಿ. ಇವೆಲ್ಲಕ್ಕೂ ಕಳಶವಿಟ್ಟಂತೆ ಬಾಂಗ್ಲಾದ ಚಟ್ಟೋಗ್ರಾಮ್‌ನಲ್ಲಿ ಮುಸ್ಲಿಮರ ದೊಡ್ಡ ಗುಂಪೊಂದು ಘೋಷಣೆಗಳನ್ನು ಕೂಗುತ್ತಾ, ಹಿಂದೂಗಳಿಗೆ ಸೇರಿದ ಮೂರು ದೇಗುಲಗಳನ್ನು ಧ್ವಂಸಮಾಡಿರುವ ಸಂಗತಿಯೂ ವರದಿಯಾಗಿದೆ.

ಧರ್ಮಾಂಧತೆಯಿಂದಾಗಿ ನೋಟ ಮತ್ತು ಒಳನೋಟಗಳನ್ನೇ ಕಳೆದುಕೊಂಡವರು, ಉಪಕಾರ ಸ್ಮರಣೆಯಿಲ್ಲದವರು ಇನ್ನೇನು ತಾನೇ ಮಾಡಿಯಾರು?! ಈ ಅತಿರೇಕಗಳ ಹಿಂದೆ ಕೆಲವೊಂದು ‘ಭಾರತ-ವಿರೋಧಿ’ ಶಕ್ತಿಗಳ ಚಿತಾವಣೆಯೂ ಇದೆ ಎನ್ನಲಾಗುತ್ತಿದೆ. ಆದರೆ ಇಂಥ ವೇಳೆ ಅಚ್ಚರಿಗೆ ಕಾರಣವಾಗುವುದು ಕೆಲ ಆಷಾಢಭೂತಿಗಳ, ತಥಾಕಥಿತ ಬುದ್ಧಿಜೀವಿಗಳ ವರ್ತನೆ. ಜಗತ್ತಿನ ವಿವಿಧ ಭಾಗಗಳಲ್ಲಿ ಅನ್ಯಕೋಮಿನ ಅಲ್ಪಸಂಖ್ಯಾತರ ಮೇಲೆ ಹೀಗೆ ದಾಳಿ ಗಳಾದಾಗ, ಆಕಾಶ-ಭೂಮಿಯನ್ನು ಒಂದು ಮಾಡಿ ಅಬ್ಬರಿಸುವ ಇವರೆಲ್ಲಾ, ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಇಷ್ಟೊಂದು ಅನ್ಯಾಯ -ಅಪಚಾರ-ಅತ್ಯಾಚಾರಗಳಾಗುತ್ತಿದ್ದರೂ ಬಾಯಿ ಹೊಲಿದುಕೊಂಡು ಕೂತಿದ್ದಾರೆ.

ಇವರ ‘ಡಬಲ್ ಸ್ಟಾಂಡರ್ಡ್’ಗೆ ಏನನ್ನುವುದು? ಬಾಂಗ್ಲಾದ ಹಿಂದೂ ಅಲ್ಪಸಂಖ್ಯಾತರ ಮೈಯಲ್ಲೂ ಹರಿಯುತ್ತಿರುವುದು ರಕ್ತವೇ ಎಂಬು ದನ್ನು
ಅರಿಯದಷ್ಟರ ಮಟ್ಟಿಗೆ ಇವರಲ್ಲಿ ಅರಿವುಗೇಡಿತನ ಬೇರೂರಿದೆಯೇ? ಇವರ ಈ ವರ್ತನೆ ಕಂಡು ಗೋಸುಂಬೆಯೂ ನಾಚೀತು!

ಇದನ್ನೂ ಓದಿ: Vishwavani Editorial: ಗತವೈಭವಕ್ಕೆ ಮರಳಲಿ ಚಂದನವನ