Friday, 16th May 2025

ಟೆಕ್ ಸಮಿಟ್ ; ದೂರದೃಷ್ಟಿ ಇರಲಿ

ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ರಾಜ್ಯ ಸರಕಾರ ಐಟಿ ಸಮಿಟ್ ಅನ್ನು ನಡೆಸಿದೆ. ಕರೋನಾ ಆತಂಕದ ನಡುವೆಯೂ
ಅಂತಾರಾಷ್ಟ್ರೀಯ ಮಟ್ಟದ ಈ ಸಮಾವೇಶವನ್ನು ಆಯೋಜಿಸಿರುವುದು ಸ್ವಾಗತಾರ್ಹ. ಆದರೆ ಈ ಜಾಗತಿಕ ಸಮಾವೇಶದಿಂದ ರಾಜ್ಯದ ಐಟಿ ವಲಯಕ್ಕೆ ಎಷ್ಟು ಲಾಭವಾಗುತ್ತದೆ? ಎಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದನ್ನು ನೋಡಬೇಕಿದೆ.

ಬೆಂಗಳೂರಿನಲ್ಲಿ ಐಟಿ ಸಮಿಟ್ ನಡೆಯುತ್ತಿರುವುದು ಇದೇ ಮೊದಲಲ್ಲ, ಪ್ರತಿ ವರ್ಷವೂ ಐಟಿ ಸಮಾವೇಶ ನಡೆಯುತ್ತದೆ. ಇದರೊಂದಿಗೆ ಗ್ಲೋಬಲ್ ಟೆಕ್ ಮೀಟ್, ಜಾಗತಿಕ ಹೂಡಿಕೆದಾರರ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಆದರೆ ಈ ರೀತಿಯ ಸಮಾವೇಶದಿಂದ ಬಂದ ಔಟ್‌ಕಮ್ ಏನು ಎನ್ನುವ ಬಗ್ಗೆ ಅನೇಕರಿಗೆ ಕುತೂ ಹಲ ವಿರುತ್ತದೆ.

ಪ್ರತಿಬಾರಿ ಸಮಾವೇಶ ಮುಗಿದ ಬಳಿಕ ಹತ್ತಾರು ಸಾವಿರ ಕೋಟಿ ರು. ಹೂಡಿಕೆ ರಾಜ್ಯಕ್ಕೆ ಬಂದಿದೆ ಎಂದು ಪ್ರಕಟಿಸಲಾಗುತ್ತದೆ. ಆದರೆ ಪೇಪರ್ ಮೇಲಿರುವ ಹತ್ತಾರು ಸಾವಿರ ಕೋಟಿ ರು. ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವುದಿಲ್ಲ. ಬಂದರೂ, ಹತ್ತು ಹಲವು ಬದಲಾವಣೆಯೊಂದಿಗೆ ಬರುತ್ತದೆ. ಇನ್ನು ಪ್ರತಿಬಾರಿ ಸಮಾವೇಶ ನಡೆದಾಗಲೂ ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕಾ ಸ್ಥಾಪನೆಗೆ ಒತ್ತು ನೀಡುವುದಾಗಿ ಸರಕಾರ ಹೇಳುತ್ತವೆ. ಆದರೆ ನಿಜವಾಗಿಯೂ ಇದು ಜಾರಿಗೆ ಬಂದಿದೆಯೇ
ಎನ್ನುವುದನ್ನು ನೋಡಬೇಕಿದೆ. ಈ ಬಾರಿ ಕರೋನಾ ಸಂಕಷ್ಟದ ನಡುವೆ ನಡೆಸುತ್ತಿರುವ ಐಟಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬೆಂಗಳೂರಿನ ಆಚೆ ಐಟಿ ಸಂಸ್ಥೆಗಳನ್ನು ತಗೆದುಕೊಂಡು ಹೋಗಲು ಸಾಧ್ಯವೇ ಎನ್ನುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿದೆ.

ಇದರಿಂದ ಗ್ರಾಮೀಣ ಭಾಗದಲ್ಲಿರುವ ಯುವಕರಿಗೂ ಉದ್ಯೋಗಾವಕಾಶ ಲಭಿಸಲಿದೆ. ಸಮಾವೇಶವಾದ ಮರುದಿನವೇ ಇದರ ಯಶಸ್ಸು ಸಿಗಬೇಕಿಲ್ಲ. ಭವಿಷ್ಯದಲ್ಲಾದರೂ ಇದು ಕಾರ್ಯಸಾಧುವಾಗುವಂತೆ ನೋಡಿಕೊಳ್ಳಬೇಕಿದೆ.

Leave a Reply

Your email address will not be published. Required fields are marked *