Sunday, 11th May 2025

ವಿಶ್ವಾಸ ಬರುವಂತಹ ನಡೆಯಿರಲಿ

ಆರು ತಿಂಗಳ ಬಳಿಕ ರಾಜ್ಯದಲ್ಲಿ ಅಧಿವೇಶನ ನಡೆಯುತ್ತಿದೆ. ಮುಂಗಾರು ಅಧಿವೇಶನವಾಗಿರುವ ಈ ಕಲಾಪವೂ, ಬಸವರಾಜ ಬೊಮ್ಮಾಯಿ ಅವರ ಪಾಲಿಗೆ ಮುಖ್ಯಮಂತ್ರಿಯಾಗಿ ಮೊದಲ ಅಧಿವೇಶನ. ಆದ್ದರಿಂದಲೇ ಸಹಜವಾಗಿ ವೈಯಕ್ತಿಕವಾಗಿ ಈ ಕಲಾಪ ಪ್ರಮುಖ ಘಟ್ಟ.

ಇನ್ನು ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ನಡೆಯುತ್ತಿರುವ ಕಲಾಪ ಯಾವ ರೀತಿ ನಡೆಯುತ್ತಿದೆ ಎನ್ನುವ ಕುತೂಹಲ ಸಹಜವಾಗಿಯೇ ಸಾರ್ವಜನಿಕರ ಲ್ಲಿದೆ. ಆದರೆ ಪ್ರತಿಪಕ್ಷಗಳು ಸಹಜವಾಗಿಯೇ ಸರಕಾರದ ವೈಫಲ್ಯಗಳನ್ನು ಇಟ್ಟು ಕೊಂಡು ಸರಕಾರವನ್ನು ಕಟ್ಟಿಹಾಕುವ ಭಾಗವಾಗಿ, ವಾಕ್ಸಮರ, ಟೀಕಾ ಪ್ರಹಾರ, ಬಾವಿಗಿಳಿದು ಪ್ರತಿಭಟನೆ ನಡೆಸುತ್ತವೆ. ಆದರೆ ಇತ್ತೀಚಿಗಷ್ಟೇ, ರಾಜ್ಯಸಭೆಯಲ್ಲಿ ನಡೆದಿರುವ ಗದ್ದಲ ಗಲಾಟೆ ಯಿಂದ ಸಂವಿಧಾನದ ಮುಖ್ಯ ಅಂಗವಾಗಿ ರುವ ಶಾಸಕಾಂಗದ ಮೇಲೆ ಸಾರ್ವಜನಿಕರಲ್ಲಿ ಅನುಮಾನ ಹುಟ್ಟು ವಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಜೆಗಳಿಂದ ಆಯ್ಕೆಯಾಗಿ ಹೋಗಿ ಅವರ ಪ್ರತಿನಿಧಿಗಳು ಎಂದು ವಿಧಾನಸಭೆಯಲ್ಲಿ ಆಸೀನರಾಗುವ ಶಾಸಕರುಗಳು ಈ ನಾಡ ಕ್ಷೇಮಾಭಿವೃದ್ಧಿಯ ಜವಾಬ್ದಾರಿ ಹೊತ್ತವರು.

ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿ ಸ್ಥಾಪಿಸಲು ಅವಶ್ಯವಾಗಿ ಬೇಕಾದ ಕಾನೂನು ಕಟ್ಟಳೆಗಳನ್ನೂ, ಅಶಕ್ತ ವರ್ಗದವರ ಶ್ರೇಯಸ್ಸಿಗೆ ಶ್ರಮಿಸಬೇಕಾದರೂ, ಕಲಾಪದಲ್ಲಿ ಗದ್ದಲ ಗಲಾಟೆ ಮಾಡುವುದನ್ನು ಬಿಟ್ಟು, ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಸದನಕ್ಕೆ ವ್ಯಯಿಸುವ ಪ್ರತಿ ಒಂದು ರುಪಾಯಿ ಸಹ ಜನರ ತೆರಿಗೆ ಯಿಂದ ಸಂಗ್ರಹಿಸಿರುವ ಹಣ ಎನ್ನುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಸದನಕ್ಕೆ ಬಂದು ಪ್ರತಿಭಟನೆ ಮಾಡಿದ ಮಾತ್ರಕ್ಕೆ ಪ್ರತಿಪಕ್ಷದ ಕಾರ್ಯ ಮುಗಿದಂತೆ ಅಲ್ಲ. ಅದರ ಬದಲು ಸರಕಾರ ರೂಪಿಸಲು ಸಜ್ಜಾಗಿರುವ ನಿಯಮಗಳು ಜನರಿಗೆ ಅಗತ್ಯವಿದೆಯೇ, ಇಲ್ಲವೇ ಎನ್ನುವ ಬಗ್ಗೆ ಪರಾಮರ್ಶೆ ನಡೆಸಿ, ಸರಕಾರಕ್ಕೆ ಸರಿ ದಾರಿ ತೋರುವ ಕೆಲಸವನ್ನು ಮಾಡಬೇಕು. ಆಡಳಿತ ನಡೆಸುವವರು ಸಹ, ಆತುರಾತುರವಾಗಿ ಬಿಲ್‌ಗಳನ್ನು ತರದೇ, ಪ್ರತಿ ಬಿಲ್‌ಗಳನ್ನು ಮಂಡಿಸಿ ಚರ್ಚೆಗೆ ಅವಕಾಶ ನೀಡಬೇಕು.

Leave a Reply

Your email address will not be published. Required fields are marked *