Sunday, 11th May 2025

ಮಳೆ ಸಂಕಷ್ಟಕ್ಕೆ ಶಾಶ್ವತ ಪರಿಹಾರ

ಬೆಂಗಳೂರಿನಲ್ಲಿ ಶುಕ್ರವಾರ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇದು ಬೆಂಗಳೂರಿನ ನಿಜವಾದ ಸ್ಥಿತಿ ಯನ್ನು ಬಯಲುಗೊಳಿಸಿದೆ.

15ಕ್ಕೂ ಅಧಿಕ ಸ್ಥಳಗಳು ನೀರಿನ ಹರಿವಿಗೆ ಸಿಲುಕಿ ಸಂಕಷ್ಟಎದುರಿಸಿವೆ. ಇದರಿಂದ ಬೆಂಗಳೂರಿನ ವಾಸ್ತವ ಸ್ಥಿತಿ ಅನಾವರಣ ಗೊಂಡಂತಾಗಿದೆ. ಹಾನಿಗೊಳಗಾದ ಮನೆ ಮಾಲೀಕರಿಗೆ ಸರಕಾರದಿಂದ ಪರಿಹಾರ ಘೋಷಿಸಲಾಗಿದೆಯಾದರೂ, ಸರಿಪಡಿಸ ಬೇಕಿರುವ ಸಮಸ್ಯೆಯೊಂದರ ಚಿತ್ರಣವನ್ನು ಸಂಪೂರ್ಣವಾಗಿ ಪರಿಚಯಿಸಿದೆ. ರಾಜ್ಯ ಸರಕಾರವು ರಾಜಧಾನಿಯ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಹೊಸ ಅಭಿವೃದ್ಧಿ ಕಾರ್ಯಗಳಿಗಿಂತ ಮೊದಲು ರಾಜಧಾನಿಯಲ್ಲಿ ಜೀವಂತ ವಾಗಿರುವ ಹಳೆಯ ಸಮಸ್ಯೆಗಳನ್ನು ಬಗೆಹರಿಸಬೇಕಿರುವುದು ಮುಖ್ಯ ಎಂಬುದನ್ನು ಸಾರುತ್ತಿದೆ.

ರಾಜ ಕಾಲುವೆಗಳ ಒತ್ತುವರಿ, ಅವೈಜ್ಞಾನಿಕ ಕಾಮಗಾರಿಗಳು ಹಾಗೂ ಸಣ್ಣ ಪ್ರಮಾಣದ ಮಳೆಗೂ ಸಮಸ್ಯೆ ಎದುರಿಸುತ್ತಿರುವ ಬಡಾವಣೆಗಳ ಸಂಕಷ್ಟವನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರವೇ ಅಧ್ಯಯನ ನಡೆಸಿ, ಸಮಸ್ಯೆಯನ್ನು ಶಾಶ್ವತವಾಗಿ
ಬಗೆಹರಿಸಬೇಕಿರುವುದು ಮುಖ್ಯ. ಬೆಂಗಳೂರನ್ನು ಐಟಿ-ಬಿಟಿ ಕ್ಷೇತ್ರ ಮಾತ್ರವಲ್ಲದೆ ಮೂಲಸೌಕರ್ಯಗಳ ದೃಷ್ಟಿಯಿಂದಲೂ ಅಭಿವೃದ್ಧಿಗೊಳಿಸಬೇಕು ಎಂಬ ಬಯಕೆಯೊಂದಿಗೆ ಈಗಾಗಲೇ ಅನೇಕ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಬೆಂಗಳೂರನ್ನು ಮತ್ತಷ್ಟು ಸ್ಮಾರ್ಟ್‌ಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ವಿವಿಧ ಇಲಾಖೆಗಳ ಮೂಲಕ ಬಹಳಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದೆ. ಬಿಬಿಎಂಪಿ ಮೂಲಕ ದೂರದೃಷ್ಟಿಯ ‘ಮುನ್ನೋಟ-2050’ ಯೋಜನೆ ರೂಪಿಸಲು ನಗರಾಭಿವೃದ್ಧಿ ತಜ್ಞರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡ ವನ್ನು ರಚಿಸಲಾಗಿದೆ. ಆದರೆ ಹೊಸ ಯೋಜನೆಗಳ ಜತೆಗೆ ಮಳೆಯಿಂದ ಹಾನಿಗೊಳಗಾಗುವ ಪ್ರದೇಶಗಳ ಸಮಸ್ಯೆಗಳನ್ನು ಶಾಶ್ವತ ಬಗೆಹರಿಸಬೇಕಿದೆ.

Leave a Reply

Your email address will not be published. Required fields are marked *