Tuesday, 13th May 2025

ಸತ್ಯದ ಅನಾವರಣವಾಗಲಿ

ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರಕಾರವು ‘ಕೇಂದ್ರ ವಿಕೋಪ ಪರಿಹಾರ ನಿಧಿ’ (ಎನ್‌ಡಿಆರ್‌ಎಫ್) ಅಡಿಯಲ್ಲಿ ೩,೪೫೪ ಕೋಟಿ ರುಪಾಯಿ ಅನುದಾನವನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

ಇದರಿಂದ ಜನರು ಒಂದು ಮಟ್ಟಿಗಾದರೂ ನೆಮ್ಮದಿಯ ನಿಟ್ಟುಸಿರು ಬಿಡಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಬೆಳವಣಿಗೆಯ ಬೆನ್ನಲ್ಲೇ ಒಂದಷ್ಟು ಗೊಂದಲಗಳೂ ಹೊಮ್ಮಿವೆ. ‘ನಾವು ಕೇಳಿದ್ದು ೧೮ ಸಾವಿರ ಕೋಟಿ ರುಪಾಯಿ, ಆದರೆ ದಕ್ಕಿದ್ದು ೩,೪೫೪ ಕೋಟಿ; ರಾಜ್ಯದಲ್ಲಿ ಭೀಕರ ಬರಗಾಲವಿರುವುದು ಗೊತ್ತಿದ್ದರೂ ಇಷ್ಟು ಕಡಿಮೆ ಮೊತ್ತ ನೀಡಿರುವುದು ಅನ್ಯಾಯ’ ಎಂದು ಕಾಂಗ್ರೆಸ್ ಟೀಕಿಸಿರುವುದು ಈ ಗೊಂದಲದ ಒಂದು ಭಾಗ.

ಇದಕ್ಕೆ ಎಂದಿನಂತೆ ಸಮರ್ಥನೆ ನೀಡಿರುವ ಬಿಜೆಪಿ ಮೂಲಗಳು, ‘ರಾಜ್ಯದಿಂದ ವರದಿ ಸಲ್ಲಿಕೆಯಲ್ಲಿ ತಡವಾಗಿದ್ದರೂ ಕೇಂದ್ರ ಸರಕಾರವು ಪರಿಹಾರ ವನ್ನು ನೀಡಿದೆ; ತನ್ನ ಬೊಕ್ಕಸವು ಬರಿದಾಗಿರುವುದಕ್ಕೆ ಕೇಂದ್ರದ ಮೇಲೆ ಆರೋಪ ಹೊರಿಸಿದ್ದ ರಾಜ್ಯ ಸರಕಾರವು ಬರ ಪರಿಸ್ಥಿತಿಯ ನಿರ್ವಹಣೆಯಲ್ಲಿ ವಿಫಲವಾಗಿದೆ’ ಎಂದಿವೆ. ಇದು ಗೊಂದಲದ ಮತ್ತೊಂದು ಭಾಗ. ಹಾಗಿದ್ದಲ್ಲಿ ಸತ್ಯಸಂಗತಿಯೇನು? ಬರಗಾಲದಿಂದಾಗಿ ಬಳಲಿ ಬೆಂಡಾದವರಿಗೆ, ಆಳುಗ ವ್ಯವಸ್ಥೆಗಳು ಯಾವ ತಾಂತ್ರಿಕ ನೆಲೆಗಟ್ಟಿನಲ್ಲಿ ತಪ್ಪುಮಾಡಿವೆ ಎಂಬುದಾಗಲೀ, ಯಾರಿಂದ ಕರ್ತವ್ಯಲೋಪವಾಗಿದೆ ಎಂಬುದಾಗಲೀ ಅರಿವಾಗುವುದಿಲ್ಲ.

ಅದರಿಂದ ಒದಗುವ ಸಂಭಾವ್ಯ ವ್ಯತಿರಿಕ್ತ ಪರಿಣಾಮದ ಸಂತ್ರಸ್ತರು ಅವರಾಗುತ್ತಾರೆ ಅಷ್ಟೇ. ಸಂತ್ರಸ್ತರಿಗೆ ತಮ್ಮ ಕಣ್ಣೀರನ್ನು ಒರೆಸಿ ಬೆನ್ನು ತಟ್ಟಿ ಸಾಂತ್ವನ ಹೇಳುವ ಕೈಗಳು ಬೇಕಿರುತ್ತವೆ ಯಷ್ಟೇ. ಆದರೆ, ಇಂಥ ವಿಷಯಗಳಲ್ಲೂ ಆಳುಗರು ಮತ್ತದೇ ರಾಜಕೀಯದ ಬೆಂಕಿಯನ್ನು ಭುಗಿಲೆಬ್ಬಿಸಿ, ಅದರಲ್ಲಿ ತಂತಮ್ಮ ಹಿತಾಸಕ್ತಿಯ ಬೇಳೆ ಬೇಯಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ‘ರಾಜಕೀಯ’ ಮಾಡಲಿಕ್ಕೆ ಬೇರೆಯದೇ ವಿಷಯಗಳಿವೆ, ಅಖಾಡ ಗಳಿವೆ. ಆದರೆ ಜನರ ಹಿತರಕ್ಷಣೆಯ ವಿಷಯ ಬಂದಾಗ, ಪಕ್ಷಭೇದ ಮರೆತು ಆ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವುದು ನಮ್ಮ ರಾಜಕೀಯ ಪಕ್ಷಗಳ ಮೂಲ ಮಂತ್ರವಾಗ ಬೇಕು. ಇಂಥ ನಡೆಯಿಂದ ಅವು ವಿಮುಖವಾದಲ್ಲಿ, ಜನರ ವಿಶ್ವಾಸವನ್ನು ಕಳೆದುಕೊಳ್ಳುವುದು ನಿಶ್ಚಿತ.

Leave a Reply

Your email address will not be published. Required fields are marked *