-ಅರವಿಂದ ಸಿಗದಾಳ್, ಮೇಲುಕೊಪ್ಪ

‘ಅಡಿಕೆ ಮತ್ತು ಮಾನವನ ಆರೋಗ್ಯ’ ಕುರಿತ ಸಾಕ್ಷ್ಯ ಆಧಾರಿತ ಸಂಶೋಧನೆ (Areca Nut Ban) ನಡೆಸಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಯೋಚಿಸಿದೆಯಂತೆ. ಅಖಿಲ ಭಾರತ ವೈದ್ಯಕೀಯ ಸಂಸ್ಥೆ (ಏಮ್ಸ್), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ಪರಿಷತ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ 16 ಸಂಸ್ಥೆಗಳ ತಜ್ಞರು ಮಾನವನ ಆರೋಗ್ಯದ ಮೇಲೆ ಅಡಿಕೆಯ ಪರಿಣಾಮದ ಕುರಿತು ವಿವರವಾದ ಸಂಶೋಧನೆ ನಡೆಸಲಿದ್ದಾರೆ ಎಂದು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವರು ತಿಳಿಸಿದ್ದಾರೆ.
ಅಡಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಪ್ರಕಟಿಸಿರುವ ವರದಿ ಕುರಿತು ಸಂಸದ ರಾಜ್‌ಮೋಹನ್ ಉನ್ನಿತಾನ್ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವ ಭಗೀರಥ ಚೌಧರಿ ಲಿಖಿತ ಉತ್ತರ ನೀಡಿದ್ದಾರೆ.
ಇನ್ನೊಮ್ಮೆ ಸಂಶೋಧನೆ ನೆಡೆಯಲಿ. ಇನ್ನೂ ಹತ್ತು ಬಾರಿ ಸಂಶೋಧನೆ ನೆಡೆಯಲಿ. ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಂಡು ಜಗಿಯುವಂತೆ, ಸಂಶೋಧನಾ ಕೇಂದ್ರಗಳು ಸಂಶೋಧನೆಯ ಜಗಿಯುವಿಕೆಯನ್ನು ನಿರಂತರವಾಗಿಸಲಿ! ಆದರೆ, 16 ಸಂಸ್ಥೆಗಳ ತಜ್ಞರು ಮಾನವನ ಆರೋಗ್ಯದ ಮೇಲೆ ಅಡಿಕೆಯ ಪರಿಣಾಮದ ಕುರಿತು ವಿವರವಾದ ‘ಮರು ಸಂಶೋಧನೆಗೆ’ ಕೆಂದ್ರ ತೀರ್ಮಾನಿಸಿರುವುದು ಒಂದಿಷ್ಟು ಗೊಂದಲಗಳಿಗೆ ಕಾರಣವಾಗುವುದಿಲ್ಲವೆ? ಮತ್ತಷ್ಟು ಪ್ರಶ್ನೆಗಳನ್ನು ಸೃಷ್ಟಿ ಮಾಡುವಂತಿಲ್ಲವೆ?
- ಅಡಿಕೆ ಹಾನಿಕಾರಕ ಅನ್ನುವ ಒಂದು ಕೇಸ್ ಸುಪ್ರಿಮ್ ಕೋರ್ಟ್‌ನಲ್ಲಿ ಇದೆ. ಕೋರ್ಟ್‌ನಲ್ಲಿ ಆಗಾಗ ಅದರ ವಿಚಾರಣೆ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಮಲೆನಾಡು ಕರಾವಳಿಯ ಅಡಿಕೆ ಕುಯಿಲು ಶುರುವಾಗುವಾಗ ಸುದ್ದಿ ಮಾಧ್ಯಮಗಳಲ್ಲಿ, ಅಡಿಕೆ ಬೆಳೆಗಾರರು, ವ್ಯಾಪಾರಸ್ಥರ ಮಧ್ಯೆ ದೊಡ್ಡ ಮಟ್ಟದಲ್ಲಿ ವಿಚಾರಣೆ ನಡೆಯುತ್ತೆ ಯಾಕೆ?
- ದಶಕಗಳ ಹಿಂದಿನ ಅಡಿಕೆ ಹಾನಿಕರ ಕೇಸ್‌ಗೆ, ಕೆಲವು ವರ್ಷಗಳ ಹಿಂದೆ “ಅಡಿಕೆ ಹಾನಿಕರ ಅಲ್ಲ” ಎಂದು ಸರಕಾರದಿಂದ ಅನುಮೋದನೆ ಪಡೆದ ಖಾಸಗಿ ಸಂಶೋಧನಾ ಕೇಂದ್ರಗಳಿಂದ ಸಂಶೋಧನಾ ವದಿಗಳನ್ನು ಸಲ್ಲಿಸಲಾಗಿದೆ ಎಂದೂ, ನಂತರ ಆಗಾಗ ಸುಪ್ರಿಮ್ ಕೋರ್ಟ್ ‘ಖಾಸಗಿ ಸಂಸ್ಥೆಯ ವರದಿಗಳನ್ನು’ ಮಾನ್ಯ ಮಾಡುವುದಿಲ್ಲ ಎಂದೂ, ಸರಕಾರಿ ಆರೋಗ್ಯ ಸಂಸ್ಥೆಗಳಿಂದಲೇ ಸಂಶೋಧನೆ ಮಾಡಿಸಿ, ಅಲ್ಲಿಯೂ ‘ಅಡಿಕೆ ಆರೋಗ್ಯಕ್ಕೆ ಹಾನಿಕರ ಅಲ್ಲ’ ಎಂದು ವರದಿ ಬಂದಿದ್ದು, ಅದನ್ನು ಸುಪ್ರಿಮ್ ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದೂ ಜನಪ್ರತಿನಿಧಿಗಳು ಚುನಾವಣಾ ಸಂದರ್ಭದಲ್ಲಿ ಭಾಷಣ ಮಾಡಿ, ರೈತರ ಆತಂಕಗಳನ್ನು ಕಮ್ಮಿ ಮಾಡಿದ್ದರು. ವರದಿ, ಸಾಕ್ಷಿಗಳ ಆಧಾರದ ಮೇಲೆ ಸುಪ್ರಿಮ್ ಕೋರ್ಟ್ ಇನ್ನೂ ತೀರ್ಮಾನ ಕೊಟ್ಟಿಲ್ಲವೆ? ಸರಕಾರಿ ಆರೋಗ್ಯ ಸಂಸ್ಥೆಗಳಿಂದ ವರದಿಯನ್ನು ಕೋರ್ಟ್‌ಗೆ ನೀಡಿರುವುದು ನಿಜವೇ? ಸಮಾನಾಂತರವಾಗಿ ಯಾವುದಾದರು ವಿರುದ್ದ ಸಂಶೋಧನಾ ವರದಿ (ಅಡಿಕೆ ಹಾನಿಕಾರಕ ಎಂದು) ಯನ್ನೂ ಸುಪ್ರಿಮ್ ಕೋರ್ಟ್‌ಗೆ ನೀಡಲ್ಪಟ್ಟಿದೆಯೇ? ನೀಡಿದ ನಂತರ ಕೋರ್ಟಿನಲ್ಲಿ ವಾದ-ವಿವಾದ ನೆಡೆದಿದೆಯಾ? ಮಧ್ಯಂತರ ತೀರ್ಪು ಬಂದಿದೆಯಾ? ಅಂತಿಮ ತೀರ್ಪು ಬಾಕಿ ಇದೆಯಾ? ತ್ವರಿತ ನ್ಯಾಯದಾನಕ್ಕೆ ಸರಕಾರ ಮನವಿ ಮಾಡಿದೆಯಾ? ಸರಕಾರವೇ ಅಡಿಕೆಯನ್ನು ಜಗಿಯುತ್ತಿದೆಯಾ?
- ಈಗ ವಿಶ್ವ ಆರೋಗ್ಯ ಸಂಸ್ಥೆ(WHO) ಭಾರತಕ್ಕೆ ಮತ್ತೆ ಸಂಶೋಧನಾ ವರದಿ ಕೊಡುವಂತೆ ಕೇಳಿದೆಯಾ? ಅಥವಾ WHO ಪ್ರಕಟಣೆಗೆ ಭಾರತ ಸ್ವಯಂಪ್ರೇರಿತವಾಗಿ 16 ಸಂಸ್ಥೆಗಳನ್ನು ಮರು ಸಂಶೋಧನೆಗೆ ನೇಮಕ ಮಾಡಿದೆಯಾ? WHO ಭಾರತವನ್ನು ಕೇಳಿಲ್ಲ ಅಂತಾದರೆ, 16 ಸಂಸ್ಥೆಗಳ ತಜ್ಞರ ಮರು ಸಂಶೋಧನೆ ಯಾವ ಕಾರಣಕ್ಕಾಗಿ? ಅಲ್ಲ, WHO ಪ್ರಕಟಣೆಗೆ ಪೂರಕವಾಗಿ, ಭಾರತ ಸ್ವಯಂ ಪ್ರೇರಿತಗೊಂಡು ಸಂಶೋಧನೆಗೆ ಮುಂದಾಗಿ, 16 ಸಂಸ್ಥೆಗಳ ತಜ್ಞರ ಮರು ಸಂಶೋಧನೆ ವರದಿ ಬಂದ ಮೇಲೆ, ಅದು WHO ನ ಈಗಿನ ಪ್ರಕಟಣೆಗೆ ವಿರುದ್ದವಾಗಿ (ಅಡಿಕೆ ಹಾನಿಕಾರಕ ಅಲ್ಲ) ಬಂದಿದ್ದು, ಅದನ್ನು WHOಗೆ ಸಲ್ಲಿಸಿದರೆ, WHO ತನ್ನ ಹಿಂದಿನ ಪ್ರಕಟಣೆಯನ್ನು ಭಾರತದ ವರದಿಯ ಆಧಾರದ ಮೇಲೆ ಸೂಪರ್ ಸೀಡ್ ಮಾಡಲಿದೆಯಾ? ವಿಶ್ವಸಂಸ್ಥೆ ನ್ಯಾಯಾಲಯದಲ್ಲಿ ಈಗಿನ ಪ್ರಕಟಣೆಯ ಹಿಂದಿನ ವರದಿ, ಮತ್ತು ಭಾರತದ 16 ಸಂಸ್ಥೆಗಳ ತಜ್ಞರ ವರದಿ ಎರಡೂ ವಿಚಾರಣೆಗೆ ಬಂದು ನಿಲ್ಲಬಹುದಾ?
- ಭಾರತದ ಸುಪ್ರಿಮ್ ಕೋರ್ಟಿನಲ್ಲಿ ಇರುವ ಅಡಿಕೆ ಹಾನಿಕಾರಕ ಕೇಸನ್ನೇ ಕೋರ್ಟ್‌ನಲ್ಲಿ ತ್ವರಿತ ತೀರ್ಮಾನಕ್ಕೆ ಒತ್ತಾಯಿಸಿ, ಕೋರ್ಟಿನ ಅಂತಿಮ ತೀರ್ಪನ್ನೇ ಬೇಗ ಸಿಗುವಂತೆ ಮಾಡಿ, ಅದನ್ನೇ ದೇಶದ ನಿಲುವು ಮತ್ತು ವರದಿಯಾಗಿ WHO ಕೊಡಲು ಬರುವುದಿಲ್ಲವಾ?
- ಸುಪ್ರಿಮ್ ಕೋರ್ಟ್‌ನಲ್ಲಿ ಅಡಿಕೆ ಹಾನಿಕಾರಕ ಅಲ್ಲ ಎಂಬುದರ ವಿರುದ್ಧ ತೀರ್ಪು ಬರುವ ಸಾಧ್ಯತೆ ಇದೆಯಾ?
- ಒಂದು ವೇಳೆ ಕೋರ್ಟ್ ತೀರ್ಮಾನ ಅಡಿಕೆ ಹಾನಿಕಾರಕ ಅಲ್ಲ ಎಂಬುದರ ವಿರುದ್ಧ (ಅಡಿಕೆ ಹಾನಿಕಾರಕ ಎಂದು) ತೀರ್ಪು ಬಂದರೆ, 16 ಸಂಸ್ಥೆಗಳ ವರದಿಯಲ್ಲಿ ಏಕರೂಪ ಅಡಿಕೆ ಹಾನಿಕಾರಕ ಅಲ್ಲ ಎಂದೋ 16 ಸಂಸ್ಥೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಸ್ಥೆಗಳಿಂದ ಅಡಿಕೆ ಹಾನಿಕಾರಕ ಅಲ್ಲ ಎಂದೋ ವರದಿ ಬಂದರೆ ಆಗ ಸರಕಾರದ WHO ನೊಂದಿಗಿನ ನೆಡೆ ಏನಾಗಬಹುದು?
- ಒಂದು ವೇಳೆ ಸುಪ್ರಿಮ್ ಕೋರ್ಟ್ ತೀರ್ಮಾನ ಅಡಿಕೆ ಹಾನಿಕಾರಕ ಅಲ್ಲ ಎಂದು ತೀರ್ಪು ಬಂದರೆ, 16 ಸಂಸ್ಥೆಗಳ ವರದಿಯಲ್ಲಿ ಏಕರೂಪ ಅಡಿಕೆ ಹಾನಿಕಾರಕ ಎಂದೋ, 16 ಸಂಸ್ಥೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಸ್ಥೆಗಳಿಂದ ಅಡಿಕೆ ಹಾನಿಕಾರಕ ಎಂದೊ ವರದಿ ಬಂದರೆ ಆಗ ಸರಕಾರದ WHOನೊಂದಿಗಿನ ನಡೆ ಏನಾಗಬಹುದು?
- ಅಡಿಕೆ ಹಾನಿಕಾರಕ ಎಂದೇ ತೀರ್ಮಾನ, ತೀರ್ಪು ಬಂದರೆ (ಮುಂದಿನ ಸಂಶೋಧನೆಗಳ ನಂತರವೇ ಅದು ಗೊತ್ತಾಗುವುದಾದರೆ!) ಆಗ ಅಡಿಕೆಯ ಭವಿಷ್ಯ ಏನಾಗಬಹುದು? ಸಿಗರೇಟ್ ಪ್ಯಾಕಿನ ಮೇಲೆ, ತಂಬಾಕು ಉತ್ಪನ್ನಗಳ ಮೇಲೆ ಮುದ್ರಿಸಿರುವಂತೆ ಅಡಿಕೆಯ 70 ಕೆಜಿ ಗೋಣಿ ಚೀಲದ ಮೇಲೆ ಅಡಿಕೆ ಹಾನಿಕಾರಕ ಎಂದು ಮುದ್ರಿಸಿ, ಅಡಿಕೆ ಬೆಳೆ, ಅಡಿಕೆ ವ್ಯಾಪಾರ, ಅಡಿಕೆ ಬಳಕೆ ಈಗಿನಂತಯೇ, ರೈತರಿಗೆ, ವ್ಯಾಪಾರಸ್ತರಿಗೆ, ಅಡಿಕೆ ಉತ್ಪನ್ನಗಳ ಉತ್ಪಾದಕರಿಗೆ ಯಾವುದೇ ತೊಂದರೆ ಇಲ್ಲದಂತೆ ಮುಂದುವರೆಯಬಹುದಾ?
- ಅಡಿಕೆ ಹಾನಿಕಾರಕ ಅನ್ನುವುದು, ಹಾನಿಕಾರಕ ಅಲ್ಲ ಎನ್ನುವ ವಾದಗಳು, ಪ್ರತಿವಾದಗಳು ಆರ್ಥಿಕ ರಾಜಕೀಯ ಲಾಬಿಯಾಗಿ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಎಷ್ಟು ವರ್ಷಗಳ ಕಾಲ ಹೀಗೆ ಮುಂದುವರಿಯಬಹುದು?
- ಅಡಿಕೆ ಹಾನಿಕಾರಕ ಎಂದು ವರದಿಗಳ ಮತ್ತು ಕೋರ್ಟ್ ತೀರ್ಪು ಬಂದರೆ, ಅಡಿಕೆ ಬೆಳೆಯನ್ನು, ವ್ಯಾಪಾರವನ್ನು, ಬಳಕೆಯನ್ನು ನಿಲ್ಲಿಸಲು ಮತ್ತು ಸೂಕ್ತ ಪ್ಯಾಕೇಜ್ ಪರಿಹಾರ (ಅಡಿಕೆ ರೈತರ ಬದುಕಿಗೆ) ಹಾಗು ಪರ್ಯಾಯ ಬೆಳೆಗೆ ಮುಂದಾಗುವಂತೆ ಮಾಡಲು ದೇಶದ ಸರಕಾರಕ್ಕೆ ಅರ್ಥಿಕವಾಗಿ ಸಾಮಾಜಿಕವಾಗಿ ಸಾಧ್ಯ ಇದೆಯಾ?
- ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಹಾನಿಕಾರಕ, ಕ್ಯಾನ್ಸರ್ ಕಾರಕ ಎಂದು ಪ್ರಕಟಣೆ ಕೊಡುವ ಮೊದಲು ವಿಶ್ವದ 65% ಅಡಿಕೆ ಬೆಳೆಯುವ ದೇಶವಾದ ಭಾರತವನ್ನು ಸೌಜನ್ಯಕ್ಕಾದರೂ ಸಲಹೆ, ಅಭಿಪ್ರಾಯ, ಮಾಹಿತಿ ಕೇಳಬೇಕಿತ್ತು ಅಲ್ಲವಾ? ಕೇಳಿದೆಯಾ?
- ಸಚಿವರು ಹೇಳಿದಂತೆ ವಿಶ್ವ ಆರೋಗ್ಯ ಸಂಸ್ಥೆ ನೆಡೆಸಿರುವ ಕೆಲವು ಸಂಶೋಧನೆಗಳು ಮಿತಿಯಿಂದ ಕೂಡಿವೆ. ಹಾಗಾಗಿ ಅಧ್ಯಯನಗಳು ಅಪೂರ್ಣವಾಗಿವೆ ಅಂತಾದರೆ ವಿಶ್ವ ಆರೋಗ್ಯ ಸಂಸ್ಥೆಗೆ ಈ ಬಗ್ಗೆ ಮನವಿ ಅಥವಾ ಒತ್ತಾಯ ಮಾಡಿ ಗಮನ ಸೆಳೆಯಲಾಗಿದೆಯಾ? 65% ಅಡಿಕೆ ಬೆಳೆಯುವ ರಾಷ್ಟ್ರದ ಒತ್ತಾಯವನ್ನು WHO ಪರಿಗಣಿಸಲೇಬೇಕು ಅಲ್ವಾ? ಆಗಿದೆಯಾ?
- ಅಡಿಕೆ ಕ್ಯಾನ್ಸರ್‌ಕಾರಕ ಎಂದು ಬಿಂಬಿಸುವ ಉದ್ದೇಶದಿಂದ ಸಂಶೋಧನಾ ವರದಿಗಳನ್ನೇ ತಿರುಚಿ ಪ್ರಕಟಿಸಿರುವ WHO ಮತ್ತು ಇಂಟರ್‌ನ್ಯಾಷನಲ್ ಏಜನ್ಸಿ ಫಾರ್ ರೀಸರ್ಚ್ ಆನ್ ಕ್ಯಾನ್ಸರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷರ ಪತ್ರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನ ನೆಡೆಸಲಾಗಿದೆಯಾ? ಅಡಿಕೆ ಕೃಷಿಯನ್ನೇ ನಂಬಿರುವ ರೈತರ ಬದುಕಿಗೆ ಬಲವಾದ ಪೆಟ್ಟು ನೀಡಿರುವ WHO ಅಕ್ಷಮ್ಯ ಪ್ರಕಟಣೆಗೆ ಕೇಂದ್ರದಿಂದ ಯಾವ ಕ್ರಮದ ಪ್ರಯತ್ನ ಆಗಿದೆ?
- WHO ಈಗಾಗಲೆ ಪ್ರಕಟಿಸಿರುವ ಅಡಿಕೆ ಹಾನಿಕಾರಕ ಎಂಬ ಪ್ರಕಟಣೆಗೆ ಮುಂದುವರಿದು, ಜಾಗತಿಕ ಮಟ್ಟದಲ್ಲಿ WHO ತೆಗೆದುಕೊಳ್ಳಬಹುದಾದ ನಿರ್ಣಯಗಳು ಮತ್ತು ನಿಯಮಗಳು ಏನೇನಿರಬಹುದು? ಅದರ ಪರಿಣಾಮ 65% ಅಡಿಕೆ ಬೆಳೆಯುವ ಭಾರತದ ಮೇಲೆ ಮತ್ತು ಅಡಿಕೆಯ ವಿಶ್ವ ಮಾರುಕಟ್ಟೆಯ ಮೇಲೆ ಆಗಬಹುದಾದ ಪರಿಣಾಮಗಳೇನು?
- ಪ್ರತಿಯೊಂದು ವಸ್ತು, ಕೆಮಿಕಲ್‌ಗಳ ಹಾನಿಕಾರಕ ಮಟ್ಟವನ್ನು ಪ್ರಕಟಿಸುವಾಗ ಬಣ್ಣ (ರೆಡ್, ಆರೇಂಜ್, ಎಲ್ಲೋ, ಬ್ಲೂ, ಗ್ರೀನ್) ಅಥವಾ ಸೂಚ್ಯಂಕಗಳ (ಪರ್ಸಂಟೇಜ್) ಅಥವಾ ಕೆಟಗರಿಗಳ (ಡ್ರಗ್ಸ್, ನಾರ್ಕೋಟಿಕ್) ಮೇಲೆ ಸೂಚಿಸಲಾಗುತ್ತದೆ. ಈಗ ಅಡಿಕೆ ಹಾನಿಕಾರಕ ಎಂದು ಪ್ರಕಟಿಸಿದ WHO, ಅಡಿಕೆಯನ್ನು ಯಾವ ಬಣ್ಣ/ಸೂಚ್ಯಂಕ/ಕೆಟಗರಿಗಳ ಕಾಲಂನಲ್ಲಿ ಪ್ರಕಟಿಸಿದೆ?
- ವಿಶ್ವದ 65% ಅಡಿಕೆ ಬೆಳೆಯುವ ದೇಶ ಭಾರತ. ಭಾರತದಲ್ಲಿ ದೇಶದ 68% ಅಡಿಕೆ ಬೆಳೆಯುವ ರಾಜ್ಯ ಕರ್ನಾಟಕ (ಈಗ ಅಡಿಕೆ ಬೆಳೆ ಬೇರೆ ರಾಜ್ಯಗಳಲ್ಲಿ ವಿಸ್ತರಣೆ ಆದಂತೆ ಇದರಲ್ಲಿ ಸಣ್ಣ ವ್ಯತ್ಯಾಸ ಆಗಿರಬಹುದು). ಒಟ್ಟಿನಲ್ಲಿ ವಿಶ್ವದ 44% ಅಡಿಕೆ ಬೆಳೆಯುವ ಕರ್ನಾಟಕ ರಾಜ್ಯ ಸರಕಾರವೂ, ಕರ್ನಾಟಕದ ಎಲ್ಲ ಶಾಸಕರು, ಸಂಸದರು, ಸಚಿವರುಗಳು ತಕ್ಷಣ WHO ಪ್ರಕಟಣೆಯ ಗಂಭೀರತೆಯನ್ನು ಗಮನಿಸಿ, ಸೂಕ್ತ ಕ್ರಮಕ್ಕೆ ಕೇಂದ್ರವನ್ನು ಒತ್ತಾಯಿಸಬೇಕಲ್ಲವೆ? ಅಂತಹ ಒತ್ತಾಯ ನೆಡೆದಿದೆಯಾ? ಏನೇನು?
ದಶಕಗಳ ಕಾಲ ಅಡಿಕೆ ಹಾನಿಕಾರಕ ಎಂಬ ದೊಡ್ಡ ತೂಗುಕತ್ತಿಯಾಗಿ ಅಡಿಕೆ ಬೆಳೆಗಾರನ ತಲೆಯ ಮೇಲೆ ತೂಗುತ್ತಿದ್ದ ಕತ್ತಿ, ಈಗ ಮತ್ತಷ್ಟು ಬೆಳೆಗಾರನ ಕುತ್ತಿಗೆಯ ಸನಿಹ ಬಂದಿದೆ. ಒಂದು ವೇಳೆ, ಅಡಿಕೆ ಹಾನಿಕಾರಕ ಎಂದು ತೀರ್ಮಾನ-ತೀರ್ಪು ಬಂದರೆ, ಪರಿಣಾಮ ಅಡಿಕೆ ಬ್ಯಾನ್ ಆಗುವುದಾದರೆ ಮೊದಲು ಬ್ಯಾನ್ ಆಗಬೇಕಾಗಿದ್ದು ಅಡಿಕೆ ಅಲ್ಲ!
ಅತಿಯಾದ ಕೆಮಿಕಲ್ ಬಳಸಿ ಬೆಳೆಯುತ್ತಿರುವ ಸೋನಾ ಮಸೂರಿ ಅಕ್ಕಿ, ಗೋದಿ, ಸಕ್ಕರೆ, ಖಾದ್ಯ ತೈಲಗಳು ಹಾನಿಕಾರಕ ಎಂದು ವರದಿಗಳಾಗುತ್ತಿವೆ. ವಿಸ್ತರಿಸುತ್ತಿರುವ ಆಸ್ಪತ್ರೆಗಳ ಸಂಖ್ಯೆ, ಮೆಡಿಕಲ್ ಶಾಪ್‌ಗಳ ಸಂಖ್ಯೆ, ಹಳ್ಳಿ ನಗರಗಳೆನ್ನದೆ ವಿಸ್ತರಿಸುತ್ತಿರುವ ಕ್ಯಾನ್ಸರ್, ಹೃದಯಾಘಾತ, ಅಸಹಜ ಸಾವುಗಳು ಒತ್ತಿ ಹೇಳುತ್ತಿವೆ… ಬಹುತೇಕ ಆಹಾರ ಪದಾರ್ಥಗಳು ಹಾನಿಕಾರಕ ಎಂದು. ಅಗತ್ಯ ಇದ್ದರೆ, ಮರು ಸಂಶೋಧನೆಗೆ ಅದೇ 16 ಸಂಸ್ಥೆಗಳ ತಜ್ಞರಿಗೆ ವಹಿಸಬಹುದು! ಬ್ಯಾನ್ ಮಾಡುವುದಾದರೆ ಅಡಿಕೆಗೆ ಮೊದಲು ಸೋನಾ ಮಸೂರಿ ಅಕ್ಕಿ, ಗೋದಿ, ಸಕ್ಕರೆ, ಖಾದ್ಯ ತೈಲಗಳು ಬ್ಯಾನ್ ಆಗಲಿ!
ಅದೇ ರೀತಿ, ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ, ಭೀಕರವಾಗಿ ಪ್ಲಾಸ್ಟಿಕ್ ಮೈಕ್ರೋ ಕಣಗಳು ನೀರು, ಗಾಳಿ ಮತ್ತು ಆಹಾರದ ಮೂಲಕ ಮನುಷ್ಯನ ದೇಹ ಸೇರಿ ಮನುಷ್ಯನಿಗೆ ಭೀಕರ ಹಾನಿಕಾರಕ ಆಗುತ್ತಿದೆಯಂತೆ! ಅಡಿಕೆಗೂ ಮೊದಲು ಬ್ಯಾನ್ ಆಗಬೇಕಾದ್ದು ಈ ಪ್ಲಾಸ್ಟಿಕ್!
ಈ ಸುದ್ದಿಯನ್ನು ಓದಿ: Kasturirangan Report: ಪಶ್ಚಿಮ ಘಟ್ಟದ ಜನ ಇನ್ನು ಜಾನುವಾರುಗಳನ್ನು ಕಾಡಿಗೆ ಬಿಡುವಂತಿಲ್ಲ!