ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್
ನಾನು ಜಪಾನಿನಲ್ಲಿದ್ದಾಗ, ಅಲ್ಲಿನ ಪ್ರತಿಷ್ಠಿತ ಟೊಯೋಟಾ ಕಂಪನಿಯಲ್ಲಿ ಕಳೆದ 12 ವರ್ಷಗಳಿಂದ ಕೆಲಸ ಮಾಡುತ್ತಿರುವ ಕನ್ನಡಿಗ ಸ್ನೇಹಿತರೊಬ್ಬರು ಸಿಕ್ಕಿದ್ದರು. ನಮ್ಮ ಮಾತುಕತೆ ಸಹಜವಾಗಿ ಟೊಯೋಟಾ ಮ್ಯಾನೇ ಜ್ಮೆಂಟ್ ವಿಧಾನ ಮತ್ತು ಆ ಸಂಸ್ಥೆಯ ಉತ್ತಮ ಗುಣಗಳು ಹಾಗೂ ಕಾರ್ಯಪದ್ಧತಿಗಳತ್ತ ಹೊರಳಿತು. ಟೊಯೋಟಾ ಮೋಟರ್ ಕಾರ್ಪೊರೇಷನ್ ಜಗತ್ತಿನ ಅತ್ಯಂತ ಯಶಸ್ವಿ ಕಂಪನಿಗಳಲ್ಲಿ ಒಂದು. ಈ ಸಂಸ್ಥೆಯು ತನ್ನ ನಿರ್ವಹಣಾ ನೀತಿಗಳು, ಕಾರ್ಯ ನೈಪುಣ್ಯ ಮತ್ತು ಕಾರ್ಯಪದ್ಧತಿಗಳ ಮೂಲಕ ಉದ್ಯಮ ವಲಯದ ಮಾದರಿಯಾಗಿದೆ.
ಅದರ ಯಶಸ್ಸು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ, ಪ್ರಕ್ರಿಯೆಗಳ ಮಾದರಿತನ ಮತ್ತು ಮಾನವ ಸಂಪತ್ತಿನ ನಿಖರ ನಿರ್ವಹಣೆಯಲ್ಲಿ ಉನ್ನತ ಸ್ಥಾನದಲ್ಲಿದೆ. ಟೊಯೋಟಾ ಸಂಸ್ಥೆಯ ಅತ್ಯುತ್ತಮ ಗುಣವೆಂದರೆ ಅದರ ಟೊಯೋಟಾ
ಪ್ರೊಡಕ್ಷನ್ ಸಿಸ್ಟಮ್ (TPS). ಅದನ್ನು ಲೀನ್ ಮ್ಯಾನುಫ್ಯಾಕ್ಚರಿಂಗ್ ಎಂದೂ ಕರೆಯುತ್ತಾರೆ. ಇದು ಎಫಿಷಿಯನ್ಸಿ ಮತ್ತು ಬೆಲೆ ಕಡಿತಕ್ಕೆ ಗಮನಹರಿಸುವ ವ್ಯವಸ್ಥೆ.
TPSನ ಪ್ರಮುಖ ಅಂಶಗಳೆಂದರೆ, ಜಸ್ಟ್ ಇನ್ -ಟೈಮ್. ಬೆಲೆ/ಸಮಯ ವ್ಯರ್ಥವನ್ನು ತಡೆಯುವ ಮೂಲಕ ಉತ್ಪಾದನಾ ಚಕ್ರವನ್ನು ಸುಧಾರಣೆಗೊಳಿಸುವ ಈ ವಿಧಾನವನ್ನು ಎಲ್ಲ ಪ್ರಮುಖ ಕಂಪನಿಗಳೂ ಈಗ ಅಳವಡಿಸಿ ಕೊಂಡಿವೆ. ಹಾಗೆಯೇ ಗುಣಮಟ್ಟದ ಮೇಲೆ ಕಣ್ಣಿಟ್ಟುಕೊಳ್ಳುವ, ದೋಷ ಕಂಡುಬಂದ ಕೂಡಲೇ ಉತ್ಪಾದನೆ ನಿಲ್ಲಿಸುವ ಕ್ರಮ. ಅದನ್ನು ಜಪಾನಿ ಭಾಷೆಯಲ್ಲಿ ಜಿಡೋಕಾ (Jidoka) ಅಂತ ಹೇಳುತ್ತಾರೆ. ಹಾಗೆಯೇ ಕೈಜನ್ (Kaizen). ಕೈಜನ್ ಅಂದರೆ ನಿರಂತರ ಸುಧಾರಣೆಗಾಗಿ ಪ್ರಯತ್ನಿಸುವ ಪ್ರಕ್ರಿಯೆ. ಟೊಯೋಟಾ ಪ್ರೊಡಕ್ಷನ್
ಸಿಸ್ಟಮ್ ಲೀನ್ ಮ್ಯಾನೇಜ್ಮೆಂಟ್ ತತ್ವಕ್ಕೆ ಬೆಂಬಲ ನೀಡುತ್ತದೆ.
ಇದು ಸಂಸ್ಥೆಯು ಸಮಯ, ಸಂಪತ್ತು ಮತ್ತು ಶ್ರಮವನ್ನು ವ್ಯರ್ಥ ಮಾಡದೆ ಶ್ರದ್ಧೆಯಿಂದ ಉತ್ಪಾದನೆಗೆ ಮುಂದಾಗಲು ಸಹಾಯ ಮಾಡುತ್ತದೆ. ಯಾವುದೇ ಪ್ರಕ್ರಿಯೆಯಲ್ಲಿ ಉಂಟಾಗುವ ಅನವಶ್ಯಕ ವ್ಯರ್ಥವನ್ನು
ತಡೆಗಟ್ಟುವುದು, ಕಾರ್ಯಕರ್ತರ ಅಥವಾ ಪ್ರಕ್ರಿಯೆಗಳ ಮೇಲೆ ಅತಿಭಾರ ಇರದಂತೆ ನೋಡಿಕೊಳ್ಳುವುದು, ಉತ್ಪಾದನೆ ಅಥವಾ ಪ್ರಕ್ರಿಯೆಯಲ್ಲಿ ಅಸಮತೋಲನವನ್ನು ನಿವಾರಿಸುವುದು ಇದರ ಭಾಗವಾಗಿದೆ.
ಟೊಯೋಟಾ ಕಂಪನಿಯು ತನ್ನ ಉದ್ಯೋಗಿಗಳು ಮತ್ತು ಗ್ರಾಹಕರ ಮೇಲೆ ವಿಶೇಷ ಗಮನ ಕೊಡುತ್ತದೆ. ಪ್ರತಿ ಯೊಬ್ಬ ಉದ್ಯೋಗಿಗೂ ತಾಂತ್ರಿಕ ತಿಳಿವಳಿಕೆ, ಹೊಸದನ್ನು ಕಲಿಯುವ ಅವಕಾಶವನ್ನು ಒದಗಿಸುತ್ತದೆ. ಅದು
ಗ್ರಾಹಕ ಕೇಂದ್ರೀಕೃತ ಸಂಸ್ಥೆ. ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಹೂಡಿಕೆ ಮತ್ತು ಸೇವೆಗೆ ಆದ್ಯತೆ ನೀಡುತ್ತದೆ. ನಿರಂತರ ಸುಧಾರಣೆ ಅದರ ಮಂತ್ರ. ಟೊಯೋಟಾ ಸಂಸ್ಥೆಯು ಹೊಸ ತಂತ್ರಜ್ಞಾನಗಳನ್ನು ಅಳವಡಿ
ಸಿಕೊಳ್ಳಲು ಹೆಸರಾಗಿದೆ. ಇನ್ನೊಂದು ಪ್ರಮುಖ ಅಂಶವೆಂದರೆ ಕೆನ್ಸೆನ್ (Genshin Genbutsu). ಅಂದರೆ ಸಮಸ್ಯೆಯ ಮೂಲ ಸ್ಥಳಕ್ಕೆ ಹೋಗಿ ನಿಜವಾದ ಪರಿಸ್ಥಿತಿಯನ್ನು ವೀಕ್ಷಿಸಿ ನಿರ್ಣಯ ಮಾಡುವುದು.
ಯೋಜನೆ, ನಿರ್ವಹಣೆ, ಪರಿಶೀಲನೆ ಮತ್ತು ಅನುಸರಣೆ (ಇದನ್ನು PDCA Plan-Do-Check-Act ಅಂತಾರೆ) ಚಕ್ರವನ್ನು ಅನುಸರಿಸುವ ಮೂಲಕ ನಿರಂತರ ಸುಧಾರಣೆಗೆ ಪ್ರಯತ್ನಿಸುತ್ತದೆ. ಗುಣಮಟ್ಟದ ಮೇಲೆ ಕಠಿಣ ಗಮನ ನೀಡುವುದು ಅದರ ಮೂಲ ಧರ್ಮಗಳಂದು. ಟೊಯೋಟಾ ತನ್ನ ಉತ್ಪನ್ನಗಳಲ್ಲಿ ಶೂನ್ಯ ದೋಷವನ್ನು ಸಾಧಿಸಲು ಸತತವಾಗಿ ಪ್ರಯತ್ನಿಸುತ್ತದೆ. ಟೊಯೋಟಾ ಹೊಸ ತಂತ್ರಜ್ಞಾನ, ಡಿಜಿಟಲ್ ಪರಿವರ್ತನೆ, ಮತ್ತು ಇ-ವೇಹಿಕಲ್‌ಗಳ ಉತ್ಪಾದನೆಗೆ ಹೆಚ್ಚು ಹೂಡಿಕೆ ಮಾಡುವ ಮೂಲಕ ಅಡಾಪ್ಟೇಶನ್ ಮತ್ತು ನಾವೀನ್ಯತೆಗೆ ಪ್ರಾಮುಖ್ಯ ನೀಡಿದೆ. ಕೃತಕ ಬುದ್ಧಿಮತ್ತೆ , ಮಶೀನ್ ಲರ್ನಿಂಗ್, ಮತ್ತು IoT (Internet Of Things) ಬಳಕೆಯು ಸಂಸ್ಥೆಯ ತಂತ್ರಜ್ಞಾನಾಧಾರಿತ ನಿರ್ವಹಣೆಗೆ ಸಹಕಾರಿಯಾಗಿದೆ.
ಟೊಯೋಟಾ ತನ್ನ ನಿರ್ಧಾರಗಳನ್ನು ತಕ್ಷಣದ ಲಾಭಕ್ಕಿಂತ ದೀರ್ಘಕಾಲಿಕ ಬಲವರ್ಧನೆಗೆ ಹೆಚ್ಚು ಮಹತ್ವ
ನೀಡುತ್ತದೆ. ಸರಬರಾಜುದಾರರು, ಗ್ರಾಹಕರು ಮತ್ತು ನೌಕರರೊಂದಿಗೆ ದೀರ್ಘಕಾಲಿಕ ಸಂಬಂಧ ಬೆಳೆಸುವುದು ಅದರ ಆದ್ಯತೆ. ಪರಿಸರ ಸಂರಕ್ಷಣೆ ಟೊಯೋಟಾ ಕಂಪನಿಯ ಪ್ರಮುಖ ಗುರಿಗಳಲ್ಲಿ ಒಂದಾಗಿದೆ. ಕಡಿಮೆ ಇಂಧನ ಬಳಕೆಯನ್ನು ಉತ್ತೇಜಿಸುವ ಹೈಬ್ರಿಡ್ ಮತ್ತು ಇಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಟೊಯೋಟಾ ತನ್ನ ಉದ್ಯೋಗಿಗಳಲ್ಲಿ ಶ್ರದ್ಧೆ ಮತ್ತು ನಿಷ್ಠೆಯನ್ನು ಬೆಳೆಸುವ ಮೂಲಕ ನಂಬಿಕಸ್ಥ ಸಂಸ್ಥೆ ಆಗಿದೆ, ಪ್ರಪಂಚದ
ಉದ್ಯಮಗಳಿಗೆ ಮಾರ್ಗದರ್ಶಕ ಸಂಸ್ಥೆಯಾಗಿದೆ.
ಇದನ್ನೂ ಓದಿ: @vishweshwarbhat