ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಸಿಂಗಾಪುರದಲ್ಲಿ ಎರಡು ಹೆಂಡತಿಯರನ್ನಾದರೂ ಕಟ್ಟಿಕೊಳ್ಳಬಹುದು, ಆದರೆ ಒಂದು ಕಾರನ್ನು ನಿಭಾಯಿಸುವುದು ಕಷ್ಟ ಎಂಬ ತಮಾಷೆಯ ಮಾತಿದೆ. ಸ್ವಂತ ಕಾರನ್ನು ಇಟ್ಟುಕೊಳ್ಳುವುದು ಆ ದೇಶದಲ್ಲಿ ಬಹಳ ದುಬಾರಿ. ಪ್ರಾಯಶಃ ಜಗತ್ತಿನಲ್ಲಿಯೇ ಸ್ವಂತ ಕಾರನ್ನು ಇಟ್ಟುಕೊಳ್ಳುವುದು ಬಹಳ ದುಬಾರಿಯಾಗಿರುವುದು ಸಿಂಗಾಪುರದಲ್ಲೇ. ಆಮದು ಸುಂಕ, ರಿಜಿಸ್ಟ್ರೇಷನ್ ಮತ್ತು ಖರೀದಿ ತೆರಿಗೆ (ಸರ್ಟಿಫಿಕೇಟ್ ಆಫಗ ಎಂಟೈಟಲ್ಮೆಂಟ್) ಬರೋಬ್ಬರಿ ದುಪ್ಪಟ್ಟು. ಇದರ ಮೇಲೆ ಓಪನ್ ಮಾರ್ಕೆಟ್ ವ್ಯಾಲ್ಯೂ, ಹೆಚ್ಚುವರಿ ರಿಜಿಸ್ಟ್ರೇಷನ್ ಶುಲ್ಕ, ಸೀಮಾ ಸುಂಕ, ಸರಕು-ಸೇವಾ ತೆರಿಗೆ, ವೆಹಿಕಲ್ ಎಮಿಷನ್ ಸ್ಕೀಮ್ಸ್, ಕಾರ್ ಪ್ಲೇಟ್ ಫೀ. ಒಂದೆಡೆ ಕಾರನ್ನು ಖರೀದಿಸುವುದು ದುಬಾರಿ, ಮತ್ತೊಂದೆಡೆ ಕಾರಿನ ನಿರ್ವಹಣೆಯೂ ದುಬಾರಿ.
ಸಿಂಗಾಪುರದಲ್ಲಿ ಒಂದು ಲೀಟರ್ ಪೆಟ್ರೋಲಿಗೆ 1.56 ಅಮೆರಿಕನ್ ಡಾಲರ್. ಅದೇ ಪಕ್ಕದ ಮಲೇಷಿಯಾದಲ್ಲಿ 0.50 ಡಾಲರ್. ಸಿಂಗಾಪುರದಲ್ಲಿ ಮಲಯ ಭಾಷೆಯಲ್ಲಿ ಒಂದು ಮಾತಿದೆ: ‘ಸೇದಿಕಿಟ್ ಸೇದಿಕಿಟ್ ಲಮ ಲಮ ಜಾಡಿ
ಬುಕಿತ್’. ಇದರ ಅರ್ಥ: ‘ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ’. ಸಿಂಗಾಪುರದಲ್ಲಿ ಖರೀದಿಸುವ ಒಂದು ಕಾರಿನ ಬೆಲೆಗೆ ಜಪಾನಿನಲ್ಲಿ ಐದು ಕಾರುಗಳನ್ನು ಖರೀದಿಸಬಹುದು. ಸಿಂಗಾಪುರದ ಜನಸಂಖ್ಯೆ, ಭೂ ವಿಸ್ತೀರ್ಣ ಮತ್ತು ಕಾರಿನ ಸಂಖ್ಯೆಯನ್ನು ನೋಡಿ, ಉದ್ದೇಶಪೂರ್ವಕ ಕಾರು ಖರೀದಿಯನ್ನು ಮತ್ತು ಅದರ ನಿರ್ವಹಣೆಯನ್ನು ದುಬಾರಿಯಾಗಿಸಲಾಗಿದೆ.
ಇಲ್ಲದಿದ್ದರೆ ಅಲ್ಲಿನ ಮೂರರಲ್ಲಿ ಒಂದು ಭಾಗ ಕಾರುಗಳಿಂದಲೇ ತುಂಬಿಹೋಗುತ್ತಿತ್ತು. ಜನ ಕಾರನ್ನು ಖರೀದಿಸ ಬಾರದು, ಸುಲಭ ಬೆಲೆಗೆ ಕೈಗೆಟುಕಬಾರದು ಎಂಬ ಕಾರಣದಿಂದಲೇ ಸ್ವಂತ ವಾಹನಗಳ ಬೆಲೆಯನ್ನು ಜಾಸ್ತಿ ಮಾಡಲಾಗಿದೆ. 1000 ಜನರಿಗೆ 149 ಕಾರುಗಳಿವೆ. ಯಾವ ಕಾರಣಕ್ಕೂ ಈ ಸಂಖ್ಯೆ 160 ದಾಟಬಾರದು ಎಂಬ ಷರತ್ತನ್ನು ಅದು ವಿಧಿಸಿಕೊಂಡಿದೆ. ವರ್ಷಕ್ಕೆ 2 ಲಕ್ಷ ಸಿಂಗಾಪುರ ಡಾಲರ್ (ಒಂದೂಕಾಲು ಕೋಟಿ ರುಪಾಯಿ) ಗಳಿಸುವ ವ್ಯಕ್ತಿಗೆ ಒಂದು ಕಾರನ್ನು ಇಟ್ಟುಕೊಳ್ಳುವುದು ತುಸು ದುಸ್ತರವೇ. ರಸ್ತೆ ತೆರಿಗೆ, ವಾರ್ಷಿಕ ತಪಾಸಣೆ ವೆಚ್ಚ ಮತ್ತು ಇಆರ್ಪಿ (ಇಲೆಕ್ಟ್ರಾನಿಕ್ ರೋಡ್ ಪ್ರೈಸಿಂಗ್) ವಿಪರೀತ ದುಬಾರಿ.
ಯಾವುದೇ ರಸ್ತೆಯಲ್ಲಿ ಹೋಗುವಾಗ ತನ್ನಷ್ಟಕ್ಕೆ ಟೋಲ್ ಕಟ್ ಆಗಿಬಿಡುತ್ತದೆ. ಸುಮಾರು ಬೆಂಗಳೂರಿನ ಅರ್ಧ ದಷ್ಟಿರುವ ಸಿಂಗಾಪುರದಂಥ ಪುಟ್ಟ ನಗರದಲ್ಲಿ 93 ಇಲೆಕ್ಟ್ರಾನಿಕ್ ರೋಡ್ ಪ್ರೈಸಿಂಗ್ ತಾಣಗಳಿವೆ. ಇದಿರುವ ಮಾರ್ಗದಲ್ಲಿ ಸಂಚರಿಸುವಾಗ ಹಣ ತನ್ನಷ್ಟಕ್ಕೇ ಕಟ್ ಆಗಿಬಿಡುತ್ತದೆ. ಅಲ್ಲಿನ ಜನ ಹೆಚ್ಚು ಹೆಚ್ಚು ಸಾರ್ವಜನಿಕ
ಸಾರಿಗೆಯನ್ನು ಬಳಸಬೇಕು, ವಾಹನ ದಟ್ಟಣೆಗೆ ಕಾರಣವಾಗುವ, ಸ್ವಂತ ವಾಹನ ಬಳಕೆ ಮೇಲೆ ಕಡಿವಾಣ ಹೇರ ಬೇಕು ಎಂಬ ಉದ್ದೇಶದಿಂದ ಅಲ್ಲಲ್ಲಿ ಇಲೆಕ್ಟ್ರಾನಿಕ್ ರೋಡ್ ಪ್ರೈಸಿಂಗ್ ಕಂಬಗಳನ್ನು ನೆಡಲಾಗಿದೆ. ಬಸ್ಸು,
ಮೆಟ್ರೋ ರೈಲು ಸಂಪರ್ಕ ಬಹಳ ಚೆನ್ನಾಗಿದೆ. ನಗರದ ಯಾವುದೇ ತಾಣಕ್ಕಾದರೂ ಅವುಗಳ ಮೂಲಕ ಹೋಗ ಬಹುದು. ಅಲ್ಲಿನ ಜನರೂ ಸಾರಿಗೆ ವ್ಯವಸ್ಥೆಯ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ.
ಸ್ವಂತ ವಾಹನಗಳ ಮಾರಾಟ ಬೆಲೆಯನ್ನು ಸರಕಾರ ಆಗಾಗ ಏರಿಸುತ್ತಲೇ ಇರುತ್ತದೆ. ಅವು ರಸ್ತೆದಟ್ಟಣೆಗೆ, ವಾಯು ಮಾಲಿನ್ಯಕ್ಕೆ ಕಾರಣವಾಗುತ್ತವೆ ಎಂಬುದು ಇದರ ಹಿಂದಿನ ಆಶಯ. ಒಂದು ವೇಳೆ ಕಾರಿನ ಖರೀದಿಯನ್ನು ಸುಲಭ ಗೊಳಿಸಿ ಬಿಟ್ಟರೆ, ಸಿಂಗಾಪುರದಲ್ಲಿ ತಿರುಗಾಡುವುದು ಸಾಧ್ಯವೇ ಇಲ್ಲ. ಅಲ್ಲಿ ಭೂಮಿಗೆ ತತ್ವಾರವಾಗಿರುವುದರಿಂದ ಇಷ್ಟೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಸಿಂಗಾಪುರದಲ್ಲಿ ಕಾರುಗಳನ್ನು ಹೊಂದಿರುವುದೆಂದರೆ ಅಗತ್ಯ ಕ್ಕಿಂತ ಪ್ರತಿಷ್ಠೆಯ ಸಂಕೇತ. ಅಲ್ಲಿ ಕಾರೇ ದುಬಾರಿ, ಇನ್ನು ದುಬಾರಿ ಕಾರುಗಳನ್ನು ಹೊಂದುವುದು ಮತ್ತಷ್ಟು ದುಬಾರಿ ಮತ್ತು ಲಕ್ಸುರಿ. ಕಳೆದ ವರ್ಷ ಸಿಂಗಾಪುರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.79.89ರಷ್ಟು
ಜನರಿಗೆ ಮುಂದಿನ 5 ವರ್ಷಗಳವರೆಗೆ ಹೊಸ ಕಾರನ್ನು ಖರೀದಿಸುವ ಇರಾದೆಯೇ ಇಲ್ಲವಂತೆ.
ಇದನ್ನೂ ಓದಿ: @vishweshwarbhat