ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್
ಜಪಾನಿನ ಕನ್ಸೈ ವಿಮಾನ ನಿಲ್ದಾಣದಲ್ಲಿ ಇಳಿದು ಡ್ಯೂಟಿ ಫ್ರೀ ಶಾಪ್ ಮುಂದೆ ನಿಂತಾಗ ಕಣ್ಣಿಗೆ ರಾಚಿದ್ದು ‘ಕಿಟ್ ಕ್ಯಾಟ್’ ಚಾಕೊಲೇಟ್‌ಗಳ
ದೊಡ್ಡ ಮಳಿಗೆ. ನನಗೆ ಅದರಲ್ಲಿ ಯಾವ ವಿಶೇಷವೂ ಕಾಣಲಿಲ್ಲ. ನಂತರ ಯಾವುದೇ ಊರಿಗೆ ಹೋದಾಗಲೂ, ‘ಕಿಟ್ ಕ್ಯಾಟ್’ ದೃಶ್ಯವನ್ನು ತಪ್ಪಿಸಿ
ಕೊಳ್ಳಲು ಆಗುತ್ತಿರಲಿಲ್ಲ. ಅಲ್ಲಿಂದ ವಾಪಸ್ ಬರುವಾಗ, ಟೋಕಿಯೋದ ನರಿಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಂತೂ ಕಿಟ್ ಕ್ಯಾಟ್ ಚಾಕೊಲೇಟಿನ ಬಹುದೊಡ್ಡ ಮಳಿಗೆಯೇ ಕಂಡಿತು.
ಅಲ್ಲಿನ ಡ್ಯೂಟಿ ಫ್ರೀ ಶಾಪ್ ನಲ್ಲಿ ಏನಿಲ್ಲವೆಂದರೂ 50 ಬಗೆಯ ಕಿಟ್ ಕ್ಯಾಟ್ ಚಾಕೊಲೇಟ್‌ಗಳಿದ್ದವು. ಅಲ್ಲಿಯೇ ನಿಂತಿದ್ದ ಮಾರಾಟ ಪ್ರತಿನಿಧಿ ಯನ್ನು, ‘ನಮ್ಮ ದೇಶದಲ್ಲೂ ಕಿಟ್ ಕ್ಯಾಟ್ ಚಾಕೊಲೇಟ್‌ಗಳಿವೆ. ನಾನು ಬಹಳ ವರ್ಷಗಳಿಂದ ಅದನ್ನು ಸೇವಿಸುತ್ತಾ ಬಂದಿದ್ದೇನೆ. ಆದರೆ ನಿಮ್ಮ ದೇಶದಲ್ಲಿನ ಕಿಟ್ ಕ್ಯಾಟ್ ಚಾಕೊಲೇಟಿನ ವೈಶಿಷ್ಟ್ಯವೇನು?’ ಎಂದು ಕೇಳಿದೆ. ಅದಕ್ಕೆ ಆತ, ‘ನೀವು ಎಷ್ಟು ಸ್ವಾದದ, ಬಗೆಯ ಕಿಟ್ ಕ್ಯಾಟ್ ಚಾಕೊಲೇಟ್ ಸೇವಿಸಿದ್ದೀರಿ? ನೆನಪಿಸಿಕೊಳ್ಳಿ’ ಎಂದು ನನಗೇ ಮರುಪ್ರಶ್ನೆ ಹಾಕಿದ.
ನಾನು ‘ಒಂದೋ, ಎರಡೋ ಬಗೆಯ ಚಾಕೊಲೇಟ್ ಸೇವಿಸಿರಬಹುದು’ ಎಂದೆ. ಅದಕ್ಕೆ ಆತ, ‘ಜಪಾನಿನಲ್ಲಿ ಏನಿಲ್ಲ ವೆಂದರೂ ಸುಮಾರು 300 ಸ್ವಾದದ ಕಿಟ್ ಕ್ಯಾಟ್ ಚಾಕೊಲೇಟು ಗಳಿರಬಹುದು’ ಎಂದ. ನನಗೆ ನಂಬಲಾಗಲಿಲ್ಲ. ಆದರೆ ಆತ ಪಕ್ಕದಲ್ಲಿಯೇ ಇದ್ದ ಕ್ಯಾಟಲಾಗ್ ತೋರಿಸಿದ. ಪ್ರಾಯಶಃ ಒಂದು ಚಾಕೊಲೇಟ್ ಕಂಪನಿ ಇಷ್ಟೊಂದು ಬಗೆಯ ಚಾಕೊಲೇಟುಗಳನ್ನು ತಯಾರಿಸಿದ ನಿದರ್ಶನ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಕಿಟ್ ಕ್ಯಾಟ್ ಚಾಕೊಲೇಟ್ ತಯಾರಿಸುವ ನೆಸ್ಲೆ ಕಂಪನಿಯು ಜಪಾನಿನ ಅಂಚೆ ವಿಭಾಗದೊಂದಿಗೆ ಒಡಂಬಡಿಕೆ ಮಾಡಿಕೊಂಡು, ಆ ದೇಶದ 20000 ಪೋಸ್ಟಾಫೀಸುಗಳಲ್ಲಿ ಕಿಟ್ ಕ್ಯಾಟ್ ದೊರಕುವ ವ್ಯವಸ್ಥೆ ಮಾಡಿತು.
ಆ ಮಾರ್ಕೆಟಿಂಗ್ ಕ್ಯಾಂಪೇನ್ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಜಪಾನಿನ ಯಾವುದೇ ಊರಿಗೆ ಹೋದರೂ, ಕಿಟ್ ಕ್ಯಾಟ್ ಲಭಿಸು ವಂತಾಯಿತು. ಅಷ್ಟೇ ಅಲ್ಲ, ಕಿಟ್ ಕ್ಯಾಟ್ ಜಪಾನಿನ ಮನೆ ಮಾತಾಯಿತು. 2010ರಲ್ಲಿ ಆ ಕ್ಯಾಂಪೇನ್‌ಗೆ ಅತ್ಯುತ್ತಮ ಮಾರ್ಕೆಟಿಂಗ್ ತಂತ್ರ ಗಾರಿಕೆ ಎಂಬ ಪ್ರಶಸ್ತಿಯೂ ಲಭಿಸಿತು. ಆ ದೇಶದಲ್ಲಿ ಆ ಚಾಕೊಲೇಟ್ ಅಷ್ಟು ಜನಪ್ರಿಯವಾಗಲು ಬೇರೆ ಕಾರಣವಿದೆಯಾ? ಜಪಾನಿ ಭಾಷೆಯಲ್ಲಿ ಕಿಟ್ ಕ್ಯಾಟ್ ಪದ ಅವರಿಗೆ ‘ಕಿಟೋ ಕಥ್ಸು’ ಅಂತ (ಕಿಟ್ ಕಾಟ್ಸ್ ಅಥವಾ ಕಿಟೋ ಕಾಟೊ ಅಥವಾ ಕಿಟೋ ಕತ್ಸುಟೂ) ಕೇಳಿಸುತ್ತದೆ. ‘ಕಿಟೋ ಕಥ್ಸು’ ಅಂದರೆ You will surely win ಎಂದರ್ಥ. ಪರೀಕ್ಷೆಗಿಂತ ಮುನ್ನ ನೆಸ್ಲೆ ಕಂಪನಿಯು ಜಪಾನಿ ವಿದ್ಯಾರ್ಥಿಗಳಿಗೆ You will surely win ಎಂಬ ಗುಡ್‌ಲಕ್ ಮೆಸೇಜುಗಳನ್ನು ಪೋಸ್ಟಿನಲ್ಲಿ ಕಳಿಸುತ್ತಿತ್ತು.
ಇದನ್ನು ಸ್ವೀಕರಿಸಿದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆ ಕಂಪನಿ ಮತ್ತು ಕಿಟ್ ಕ್ಯಾಟ್ ಬಗ್ಗೆ ಪ್ರೀತಿ ಬೆಳೆಯುವಂತಾಯಿತು. ಆ ಮೂಲಕ ಕಿಟ್ ಕ್ಯಾಟ್ ಜಪಾನಿನ ವಿದ್ಯಾರ್ಥಿಗಳ ಮನೆ-ಮನ ಗೆದ್ದಿತು. ಕಿಟ್ ಕ್ಯಾಟ್ ಜಾಗತಿಕ ಬ್ರಾಂಡ್ ಆದರೂ, ಜಪಾನಿನಲ್ಲಿ ಅದು ವ್ಯಾಪಿಸಿರುವ ಬಗೆ ಅನನ್ಯ. ಚಾಕೊಲೇಟ್‌ಗಳನ್ನು ಇಷ್ಟಪಡುವ ದೇಶಗಳಲ್ಲೂ ಕಿಟ್ ಕ್ಯಾಟ್ ಹೆಸರಿನಲ್ಲಿ ಅತಿ ಹೆಚ್ಚೆಂದರೆ 10-20 ಸ್ವಾದಗಳ ಚಾಕೊಲೇಟ್‌ಗಳಿರಬಹುದು. ಆದರೆ ಜಪಾನಿನಲ್ಲಿ ಆಯಾ ಪ್ರದೇಶ ಮತ್ತು ರುಚಿಗೆ ಅನುಗುಣವಾಗಿ 300 ವಿವಿಧ ಸ್ವಾದಗಳ ಚಾಕೊಲೇಟ್‌ಗಳನ್ನು ನೆಸ್ಲೆ ಬಿಡುಗಡೆ ಮಾಡಿದೆ. ಜಪಾನಿನಲ್ಲಿ ವಿಶೇಷ ಉಡುಗೊರೆಯಾಗಿ ಚಾಕೊಲೇಟುಗಳನ್ನು ಕೊಡುವುದು ಸಂಪ್ರದಾಯ.
ಅಷ್ಟೊಂದು ಬಗೆಯ ಚಾಕೊಲೇಟುಗಳಿರಲು ಇದೂ ಕಾರಣವಾಗಿರಬಹುದು. ನೆಸ್ಲೆ ಕಂಪನಿಯು ಇಷ್ಟೊಂದು ಬಗೆಯ ಚಾಕೊಲೇಟುಗಳನ್ನು ಜಗತ್ತಿನ ಬೇರೆ ಯಾವ ದೇಶದಲ್ಲೂ ತಯಾರಿಸುತ್ತಿಲ್ಲ. ಬೇರೆ ಕಂಪನಿಗಳೂ ಇಷ್ಟೊಂದು ಸ್ವಾದಗಳ ಚಾಕೊಲೇಟುಗಳನ್ನು ತಯಾರಿಸುತ್ತಿಲ್ಲ. ಟೋಕಿಯೋದ ಜನನಿಬಿಡ ಶಿಬುಯ ಪ್ರದೇಶದಲ್ಲಿ ‘ಮೈ ಕಿಟ್ ಕ್ಯಾಟ್’ ಎಂಬ ಬೃಹತ್ ಶೋರೂಮ್ ಇದೆ. ಅಲ್ಲಿ ಯಾರು ಬೇಕಾದರೂ ತಮಗೆ ಬೇಕಾದ ಸ್ವಾದದ ಚಾಕೊಲೇಟುಗಳನ್ನು ಕೈಯಾರೆ ಮಾಡಿ ಸೇವಿಸಬಹುದು. ಅಲ್ಲಿಗೆ ಹೋಗಿ ಕಿಟ್ ಕ್ಯಾಟ್ ಚಾಕೊಲೇಟ್ ಸೇವಿಸದೇ ಬಂದರೆ, ಅಷ್ಟರಮಟ್ಟಿಗೆ ಜಪಾನ್ ಪ್ರವಾಸ ಅಪೂರ್ಣ.
ಇದನ್ನೂ ಓದಿ: @vishweshwarbhat