ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್
ನಾನು ಜಪಾನಿಗೆ ಹೋಗುತ್ತೇನೆ ಎಂದು ಹೇಳಿದಾಗ ನನ್ನ ತಾಯಿ ತಕ್ಷಣ ಕೇಳಿದ ಪ್ರಶ್ನೆ – ‘ಜಪಾನ್ ಸುರಕ್ಷಿತ ದೇಶವಾ?’ ನಾನು ನನ್ನ ತಾಯಿಗೆ ‘ಆ ಪ್ರಶ್ನೆಯನ್ನು ಕೇಳಿದ ಉದ್ದೇಶವೇನು?’ ಎಂದು ಕೇಳಿದೆ. ಅದಕ್ಕೆ ಅವಳು ಹೇಳಿದ್ದು – ‘ಜಪಾನಿನಲ್ಲಿ ಪದೇ ಪದೆ ಭೂಕಂಪ ಸಂಭವಿಸುತ್ತದೆಯಂತೆ. ಹೀಗಿರುವಾಗ ನೀನು ಅಲ್ಲಿಗೆ ಹೋಗ್ತೇನೆ ಅಂತ ಹೇಳುತ್ತಿದ್ದೀಯಲ್ಲ, ಯಾವುದಕ್ಕೂ ಇನ್ನೊಮ್ಮೆ ಯೋಚಿಸಿ ನೋಡು.’ ಆಗ ನಾನು ಅವಳಿಗೆ, ‘ಜಪಾನಿನಲ್ಲಿ ಹದಿಮೂರು ಕೋಟಿ ಜನ ವಾಸಿಸುತ್ತಿದ್ದಾರೆ.
ಪ್ರತಿದಿನ ಭೂಕಂಪವಾಗುತ್ತಿದ್ದರೂ ಅವರೆಲ್ಲ ಜೀವಿಸುತ್ತಿದ್ದಾರಲ್ಲ? ಹೀಗಿರುವಾಗ ಅಲ್ಲಿಗೆ ಹೋಗಲು ನಾನೇಕೆ
ಹೆದರಬೇಕು? ನಾನು ಹೋದರೆ ನೀನ್ಯಾಕೆ ಭಯಪಡಬೇಕು? ಅಷ್ಟಕ್ಕೂ ನಾನು ಅಲ್ಲಿಗೆ ಯುದ್ಧಕ್ಕೆ ಹೋಗುತ್ತಿಲ್ಲವಷ್ಟೆ’ ಎಂದು ಹೇಳಿದೆ. ಆದರೂ ಹೆತ್ತ ಕರುಳಿಗೆ ಪೂರ್ತಿ ಸಮಾಧಾನವಾಗಲಿಲ್ಲ. ನಾವು ಜಪಾನಿನ ಕ್ಯೋಟೋ ನಗರದಿಂದ
ರಾಜಧಾನಿ ಟೋಕಿಯೋಕ್ಕೆ ಬಂದ ಮಾರನೇ ದಿನ ಹೋಟೆಲಿನಲ್ಲಿ ಬೆಳಗಿನ ಉಪಾಹಾರ ಸೇವಿಸುವಾಗ ನನ್ನೊಂದಿ ಗಿದ್ದವರೊಬ್ಬರು, ‘ನಿನ್ನೆ ರಾತ್ರಿ ಭೂಕಂಪವಾಯ್ತಂತೆ ಗೊತ್ತಾ?’ ಎಂದು ಕೇಳಿದರು.
ಅದಕ್ಕೆ ಜತೆಯಲ್ಲಿದ್ದ ಇನ್ನೊಬ್ಬರು, ‘ಜಪಾನಿನಲ್ಲಿ ಬಿಡಿ, ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ, ಅದು ಇಲ್ಲಿ ಹೊಸತೇನೂ ಅಲ್ಲ’ ಎಂದು ರಾಗ ಎಳೆದು, ಅದು ಅಷ್ಟೇನೂ ಪ್ರಮುಖ ಸಂಗತಿಯಲ್ಲ ಎಂದು ಕೊಡವಿ ಹಾಕಿದರು. ಅವರ ಮಾತಿನಲ್ಲಿ ನಿಜಾಂಶವಿತ್ತು. ಕಾರಣ, ಜಪಾನಿನಲ್ಲಿ ವರ್ಷಕ್ಕೆ ಸುಮಾರು 1500ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸುತ್ತವೆ. ಈ ಮಾಹಿತಿ ಸತ್ಯವಾಗಿದೆಯೆಂದು ಭೂವಿಜ್ಞಾನಿಗಳೂ ದೃಢ ಪಡಿಸಿದ್ದಾರೆ.
ಹೀಗಾಗಿ ಜಪಾನನ್ನು ‘ಭೂಕಂಪಗಳ ದೇಶ’ ಮತ್ತು ‘ಜಗತ್ತಿನ ಭೂಕಂಪದ ರಾಜಧಾನಿ’ ಎಂದೂ ಕರೆಯುವುದುಂಟು. ಅಂದರೆ ದೇಶದ ಯಾವುದಾದರೂ ಪ್ರದೇಶದಲ್ಲಿ ಭೂಮಿ ಅದುರುತ್ತಿರುತ್ತದೆ. ಅಂದರೆ ಒಂದು ದಿನದಲ್ಲಿ ಮೂರು-ನಾಲ್ಕು ಕಡೆಗಳಲ್ಲಿ ಭೂಕಂಪವಾಗುವುದು ಸಾಮಾನ್ಯ. ಜಪಾನಿನ ಅಧುನಿಕ ತಂತ್ರeನವು ಬಹು ಸೂಕ್ಷ್ಮವಾಗಿರುವ ಭೂಕಂಪ ಪತ್ತೆ ಸಾಧನಗಳನ್ನು ಹೊಂದಿದೆ. ಅಲ್ಪ ಪ್ರಮಾಣದ ಕಂಪನಗಳನ್ನೂ ಇವು ದಾಖಲಿಸುತ್ತವೆ. ಕೆಲವು ಕಂಪನಗಳು ರಿಕ್ಟರ್ ಮಾಪಕದಲ್ಲಿ 2.0ಕ್ಕಿಂತ ಕಡಿಮೆ ತೀವ್ರತೆ ಹೊಂದಿರುವುದುಂಟು. ಈ ಭೂಕಂಪಗಳಲ್ಲಿ ಹೆಚ್ಚಿನವು ತೀವ್ರವಾದವುಗಳಾಗಿರದೇ, ಅಲ್ಪ ಪ್ರಮಾಣದ ಕಂಪನಗಳಾಗಿರುತ್ತವೆ.
ತಮಾಷೆಯೆಂದರೆ, ಅಲ್ಲಿನ ಜನ ಈ ಕಂಪನಗಳನ್ನು ಹೆಚ್ಚಾಗಿ ಗಮನಿಸುವುದೂ ಇಲ್ಲ. ವರ್ಷದಲ್ಲಿ 10-15 ಬಾರಿ ಮಾತ್ರ ಭಾರಿ ಸ್ವರೂಪದ ಭೂಕಂಪಗಳು (ರಿಕ್ಟರ್ ಮಾಪಕದಲ್ಲಿ 6.0 ಅಥವಾ ಅದಕ್ಕಿಂತ ಹೆಚ್ಚು ತೀವ್ರತೆ) ಸಂಭವಿಸು ತ್ತವೆ. ಜಪಾನ್ ನಾಲ್ಕು ಪ್ರಮುಖ ಟೆಕ್ಟೊನಿಕ್ ಪ್ಲೇಟ್ (ಪದರ)ಗಳಾದ – ಪೆಸಿಫಿಕ್ ಪ್ಲೇಟ, ಯುರೇಷಿಯನ್ ಪ್ಲೇಟ, ಫಿಲಿಪೈನ್ ಸೀ ಪ್ಲೇಟ್ ಮತ್ತು ಉತ್ತರ ಅಮೆರಿಕನ್ ಪ್ಲೇಟ್ ಗಳು ಸಂಗಮ ಪ್ರದೇಶದಲ್ಲಿದೆ. ಈ ಪ್ಲೇಟ್‌ಗಳು ಆಗಾಗ ಪಲ್ಲಟಗೊಳ್ಳುವುದರಿಂದ ಮತ್ತು ಪರಸ್ಪರ ಘರ್ಷಣೆಗೊಳಗಾಗುವುದರಿಂದ ಭೂಕಂಪ ಉಂಟಾಗುತ್ತದೆ.
ಪೆಸಿಫಿಕ್ ಪ್ಲೇಟ್ ಮತ್ತು ಫಿಲಿಪೈನ್ ಸೀ ಪ್ಲೇಟ್, ಯುರೇಷಿಯನ್ ಪ್ಲೇಟ್ ಅಡಿಗೆ ಹಾಯುತ್ತವೆ. ಈ ಪ್ರಕ್ರಿಯೆಯನ್ನು ಸಬ್ಡಕ್ಷನ್ ಎಂದು ಕರೆಯಲಾಗುತ್ತದೆ. ಇದು ಭೂಕಂಪಗಳಿಗೆ ಪ್ರಮುಖ ಕಾರಣ. ಜಪಾನ್ ಪೆಸಿಫಿಕ್ ರಿಂಗ್ ಆಫ್ ಫಾರ್ ಎಂಬ ಹೆಸರಿನಿಂದ ಕರೆಯುವ ಜ್ವಾಲಾಮುಖಿ ಮತ್ತು ಭೂಕಂಪ ಚಟುವಟಿಕೆಗಳ ಉಷ್ಣವಲಯದ ಭಾಗವಾಗಿದೆ. ಈ ವಲಯದಲ್ಲಿ ಜ್ವಾಲಾಮುಖಿ ಸ್ಪೋಟ ಮತ್ತು ಭೂಕಂಪಗಳು ಸಾಮಾನ್ಯ.
ನೂರಾ ಒಂದು ವರ್ಷಗಳ ಹಿಂದೆ (1923ರಲ್ಲಿ), ಟೋಕಿಯೋ ಮತ್ತು ಯೋಕೊಹಾಮಾದಲ್ಲಿ ಸಂಭವಿಸಿದ ಭೂ ಕಂಪದಲ್ಲಿ ಸುಮಾರು 1.40 ಲಕ್ಷ ಮಂದಿ ಸಾವನ್ನಪ್ಪಿದರು. ಆ ಎರಡೂ ನಗರಗಳಲ್ಲಿ ಅಪಾರ ಆಸ್ತಿ-ಪಾಸ್ತಿ ನೆಲಸಮ ವಾಗಿದ್ದವು. ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.9 ಇತ್ತು. ಈ ಭೂಕಂಪದ ನಂತರ ಜಪಾನ್‌ನಲ್ಲಿ ನಿರ್ವಹಣಾ ವ್ಯವಸ್ಥೆಗಳಿಗೆ ಹೆಚ್ಚಿನ ಮಹತ್ವ ನೀಡಲಾಯಿತು. 2011 ರಲ್ಲಿ ಸಂಭವಿಸಿದ ಟೋಹೋಕು ಭೂಕಂಪ ಮತ್ತು ಸುನಾಮಿ ದುರಂತದಲ್ಲಿ 18 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಹತ್ತು ಮೀಟರ್ ಎತ್ತರದ ಸುನಾಮಿ, ಜಪಾನ್ನ ಪೂರ್ವ ಕರಾವಳಿಯನ್ನು ಅಪ್ಪಳಿಸಿತ್ತು. ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ 9.1 ಇತ್ತು.
‘1995 ರಲ್ಲಿ ಸಂಭವಿಸಿದ ಕೊಬೆ ಭೂಕಂಪದಲ್ಲೂ ಎಂಟು ಸಾವಿರ ಮಂದಿ ಸತ್ತಿದ್ದರು. ‘ಪ್ರತಿ ಐದು ನಿಮಿಷಕ್ಕೆ ಜಪಾನಿನ ಯಾವುದೋ ಪ್ರದೇಶ ಕಂಪಿಸುತ್ತದೆ, ಆದರೆ ನಾವು ಕಂಪಿಸುವುದಿಲ್ಲ’ ಎಂಬ ಮಾತು ಅಲ್ಲಿ ಜನಪ್ರಿಯ.
ಇದನ್ನೂ ಓದಿ: @vishweshwarbhat