ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಜಪಾನಿಯರು ಹೊಸತನಕ್ಕೆ ಮತ್ತು ಆವಿಷ್ಕಾರಕ್ಕೆ ಹೆಸರುವಾಸಿ. ದೈನಂದಿನ ಜೀವನದಲ್ಲಿ ಎಲ್ಲಿ ಸಾಧ್ಯವೋ ಅಲ್ಲ ಸುಧಾರಣೆ ತರಲು ಅವರು ಸತತ ಪ್ರಯತ್ನಿಸುತ್ತಲೇ ಇರುತ್ತಾರೆ. ಯಾವುದೇ ಒಂದು ಹೊಸ ಪದ್ಧತಿಯನ್ನು ಜಾರಿ ಗೊಳಿಸಿದರೆ, ಅದನ್ನು ಕಾಲಕಾಲಕ್ಕೆ ಅಭಿವೃದ್ಧಿಪಡಿಸಿ, ಸುಧಾರಿಸುವುದು ಮತ್ತು ಗುಣಮಟ್ಟವನ್ನು ಹೆಚ್ಚಿಸುವುದು ಅವರ ರಕ್ತಗುಣ.
ಹೀಗಾಗಿ ಯಾವುದೇ ಒಂದು ಹೊಸ ಪದ್ಧತಿ ಜಾರಿಗೆ ಬಂದ ಕೆಲವೇ ದಿನಗಳಲ್ಲಿ ಅದರ ಸುಧಾರಿತ ಆವೃತ್ತಿಯೂ ಬಂದಿರುತ್ತದೆ. ಜಾರಿ ಮಾಡುವಾಗ ಇದ್ದ ನ್ಯೂನಗಳನ್ನು ತಕ್ಷಣವೇ ಸುಧಾರಿಸಿರುತ್ತಾರೆ. ಇದಕ್ಕೆ ಜಪಾನಿನ ರೈಲು
ನಿಲ್ದಾಣವೇ ಒಂದು ಉತ್ತಮ ನಿದರ್ಶನ. ಮೂಲತಃ ಜಪಾನಿಯರ ಜೀವನ ದಲ್ಲಿ ರೈಲು ಅವಿಭಾಜ್ಯ ಅಂಗ. ಐವರಲ್ಲಿ ಮೂವರು ಸಂಚಾರಕ್ಕೆ ರೈಲನ್ನು ಅವಲಂಬಿಸಿರುತ್ತಾರೆ. ಹೀಗಾಗಿ ರೈಲು ಮತ್ತು ರೈಲು ನಿಲ್ದಾಣದಲ್ಲಿ ಆಗಾಗ ಹೊಸ ತನ, ಬದಲಾವಣೆ ಮತ್ತು ಸುಧಾರಣೆಗಳು ರೈಲು ಬೋಗಿಗಳಂತೆ ಒಂದನ್ನೊಂದು ಹಿಂಬಾಲಿಸುತ್ತಿರುತ್ತವೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ರೈಲು ನಿಲ್ದಾಣಗಳು ಹೊಸ ಹೊಸ ಅವತಾರಗಳನ್ನು ಪಡೆಯುತ್ತಲೇ ಇವೆ.
ಅವು ಪ್ರಯಾಣಿಕರು ಬರುವ-ಹೋಗುವ, ರೈಲನ್ನು ಹತ್ತುವ-ಇಳಿಯುವ ತಾಣಗಳಲ್ಲ. ಹಾಗೆ ನೋಡಿದರೆ, ಅದೇ ಒಂದು ಪ್ರಪಂಚ. ಅಲ್ಲಿ ಏನುಂಟು ಏನಿಲ್ಲ? ರೈಲನ್ನು ಬಳಸಿ ಸಂಚರಿಸುವವರು ತಮ್ಮ ಅಗತ್ಯ ವಸ್ತುಗಳನ್ನು ಖರೀ
ದಿಸಲು ಬೇರೆಲ್ಲೂ ಹೋಗಬೇಕಿಲ್ಲ. ಎಲ್ಲವೂ ಅಲ್ಲಿಯೇ ಲಭ್ಯ. ರೈಲಿಗಾಗಿ ಕಾಯುವ ಸಂದರ್ಭದಲ್ಲಿ ಪ್ಲಾಟ್-ರ್ಮಿನಲ್ಲಿರುವ ಬೃಹತ್ ಗಾತ್ರದ ಪರದೆಯ ಮೇಲೆ ಕಿರುಚಿತ್ರಗಳನ್ನು ವೀಕ್ಷಿಸಬಹುದು. ಒಂದು ನಿಮಿಷವನ್ನೂ
ನೀರಸವಾಗಿ ಕಳೆಯಬೇಕಿಲ್ಲ. ಪ್ರಯಾಣಿಕರ ಜೀವನವನ್ನು ಸುಧಾರಿಸಲು ನಿರಂತರವಾಗಿ ಹೊಸ ಹೊಸ ಪ್ರಯೋಗ ಗಳು ನಡೆಯುತ್ತಲೇ ಇರುತ್ತವೆ.
ಸಾಮಾನ್ಯವಾಗಿ ರೈಲು ಹಿಡಿದು ಆಫೀಸಿಗೆ ಹೋಗಿ, ಬರುವವರಿಗೆ ತಮ್ಮ ಸ್ವಂತ ಕೆಲಸವನ್ನು ಮಾಡಿಕೊಳ್ಳಲು ಸಮಯವಿರುವುದಿಲ್ಲ. ಅದರಲ್ಲೂ ಡಾಕ್ಟರರನ್ನು ಕಾಣಬೇಕೆಂದರೆ ಆಫೀಸಿಗೆ ರಜೆ ಹಾಕಬೇಕು. ಈ ಕಾರಣದಿಂದ
ಅನೇಕರು ಗಂಭೀರ ಕಾಯಿಲೆಯನ್ನು ಎದುರಿಸುತ್ತಿದ್ದರೂ ಡಾಕ್ಟರರನ್ನು ಭೇಟಿಯಾಗಲು ಸಾಧ್ಯವಾಗಿರುವುದಿಲ್ಲ. ಇದಕ್ಕಾಗಿ ರೈಲು ನಿಲ್ದಾಣದಲ್ಲಿಯೇ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಬೋಗಿಯಿಂದ ಇಳಿದು ಹತ್ತು ಹೆಜ್ಜೆ ನಡೆದು
ನೇರವಾಗಿ ಕ್ಲಿನಿಕ್‌ಗೆ ಹೋಗಬಹುದು. ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದರೆ ವೈದ್ಯರು ಕಾಯುತ್ತಿರುತ್ತಾರೆ. ಇನ್ನು ಕೆಲವು ರೈಲುಗಳಲ್ಲಿ ಒಂದು ಬೋಗಿಯನ್ನೇ ಕ್ಲಿನಿಕ್ ಆಗಿ ಪರಿವರ್ತಿಸಲಾಗಿದೆ.
ಪ್ರಯಾಣ ಮಾಡುತ್ತಲೇ ಡಾಕ್ಟರರಿಂದ ಆರೋಗ್ಯ ತಪಾಸಣೆಯನ್ನೂ ಮಾಡಿಸಿಕೊಳ್ಳಬಹುದು. ಜ್ವರ, ಮೈ ಕೈ ನೋವು, ನೆಗಡಿ, ಶೀತ, ತಲೆನೋವು ಮುಂತಾದ ಬಾಧೆಯಿರುವವರು ಬೋಗಿಯಲ್ಲಿರುವ ಕ್ಲಿನಿಕ್‌ಗಳಿಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ. ಇದಕ್ಕಾಗಿ ದೈನಂದಿನ ದಿನಚರಿಯನ್ನು ಬದಲಿಸಿಕೊಳ್ಳಬೇಕಿಲ್ಲ. ಮನೆಯಲ್ಲಿ ಪತಿ-ಪತ್ನಿ ಇಬ್ಬರೂ ಆಫೀಸಿಗೆ ಹೋಗುವವರಾದರೆ, ಚಿಕ್ಕ ಮಕ್ಕಳನ್ನು ‘ಡೇ ಕೇರ್ ಸೆಂಟರ್’ಗಳಲ್ಲಿ ಬಿಡುವುದು ಮತ್ತು ಕೆಲಸದಿಂದ ಮರಳುವಾಗ ಅವರನ್ನು ಕರೆದುಕೊಂಡು ಬರುವುದು ಕಷ್ಟವೇ. ಈ ಅಂಶವನ್ನು ಪರಿಗಣಿಸಿ,
ಜಪಾನಿನ ರೈಲು ಕಂಪನಿಗಳು ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತೆ ಶಿಶುಪಾಲನಾ ಕೇಂದ್ರಗಳನ್ನು ತೆರೆದಿವೆ. ರೈಲು ನಿಲ್ದಾಣದ ಒಂದು ಪಾರ್ಶ್ವದಲ್ಲಿರುವ
ಶಿಶುಪಾಲನಾ ಕೇಂದ್ರದಲ್ಲಿ ತಮ್ಮ ಮಕ್ಕಳನ್ನು ಬಿಟ್ಟು, ರೈಲಿನಲ್ಲಿ ನಿರಾತಂಕವಾಗಿ ಕೆಲಸಕ್ಕೆ ಹೋಗಬಹುದು. ಆಫೀಸಿನಿಂದ ಮರಳುವಾಗ ರೈಲು ನಿಲ್ದಾಣದಿಂದಲೇ ಅವರನ್ನು ಮನೆಗೆ ಕರೆದುಕೊಂಡು ಬರಬಹುದು. ಇದು ಪಾಲಕರ ಎಷ್ಟೋ ಕೆಲಸವನ್ನು ಸುಲಭಗೊಳಿಸುತ್ತದೆ. ರೈಲು ನಿಲ್ದಾಣವನ್ನೇ ಕೇಂದ್ರವ ನ್ನಾಗಿಸಿಕೊಂಡು ಹಲವು ಸೌಕರ್ಯಗಳನ್ನು ನೀಡಲಾಗುತ್ತಿದೆ. ಕೆಲವು ರೈಲು ನಿಲ್ದಾಣಗಳಲ್ಲಿ, ಬ್ಯೂಟಿ ಪಾರ್ಲರ್, ಸಲೂನ್ ಸೌಕರ್ಯವನ್ನೂ ಒದಗಿಸಲಾಗಿದೆ. ರೈಲಿನಿಂದ ಇಳಿದವರೇ ಆ ಕೆಲಸವನ್ನು ಪೂರೈಸಿಕೊಂಡು ಮನೆಗೆ ಮರಳಬಹುದು. ಇನ್ನು ಕೆಲವು ರೈಲು ನಿಲ್ದಾಣಗಳಲ್ಲಿ ಮನೆ-ಸಾಮಾನುಗಳ ರಿಪೇರಿ ಅಂಗಡಿಗಳನ್ನೂ ತೆರೆಯಲಾಗಿದೆ. ಒಂದೇ ಸ್ಥಳದಲ್ಲಿ ಹಲವು
ಸುವಿಧಾಗಳು, ಸೌಕರ್ಯಗಳು! ರೈಲು ನಿಲ್ದಾಣ ಎರಡನೇ ಮನೆಯಿದ್ದಂತೆ.
ಇದನ್ನೂ ಓದಿ: @vishweshwarbhat