Sunday, 11th May 2025

Vishweshwar Bhat Column: ಡಾ.ಸಿಂಗ್‌ ವಿತ್ತ ಸಚಿವರಾಗಿದ್ದು ಹೇಗೆ ?

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಡಾ.ಮನಮೋಹನ್ ಸಿಂಗ್ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿದರೆ ಹೇಗೆ ಎಂಬ ಯೋಚನೆ ಮೊದಲ ಬಾರಿಗೆ ಬಂದಿದ್ದು ಯಾರಿಗೆ?’ ಪ್ರಾಯಶಃ ಈ ಪ್ರಶ್ನೆಗೆ ಎಲ್ಲರೂ ಪಿ.ವಿ.ನರಸಿಂಹರಾವ್ ಎಂದು ಹೇಳಬಹುದು. ಆದರೆ ಈ ಯೋಚನೆ ಬಂದಿದ್ದು ಆರ್.ವೆಂಕಟರಾಮನ್ ಅವರಿಗಂತೆ. ಈ ವಿಷಯವನ್ನು ಹಿರಿಯ ಪತ್ರಕರ್ತೆ ನೀರಜಾ ಚೌಧುರಿ ತಮ್ಮ ಪುಸ್ತಕ ’How Prime MInisters Decide’ದಲ್ಲಿ ಬರೆದಿದ್ದಾರೆ.

2002ರಲ್ಲಿ ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರು ಈ ವಿಷಯವನ್ನು ಖುದ್ದಾಗಿ ನೀರಜಾ ಅವರಿಗೆ ಹೇಳಿದ್ದರಂತೆ. ಸಾಮಾನ್ಯವಾಗಿ ನರಸಿಂಹರಾವ್ ಅವರು ಪ್ರಮುಖ ವಿಷಯಗಳ ಬಗ್ಗೆ ವೆಂಕಟರಾಮನ್‌ರಿಂದ ಸಲಹೆಗಳನ್ನು ಪಡೆಯುತ್ತಿದ್ದರು. 1980-82ರವರೆಗೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ವೆಂಕಟ‌ ರಾಮನ್ ಹಣಕಾಸು ಸಚಿವರಾಗಿದ್ದರು. ಅವರು ಹಣಕಾಸು ಇಲಾಖೆಯ ಒಳಮರ್ಮವನ್ನು ಅರಿತವರು.

ಈ ಸಂದರ್ಭದಲ್ಲಿ ಯಾರನ್ನು ಹಣಕಾಸು ಸಚಿವರನ್ನಾಗಿ ಮಾಡಿದರೆ ಒಳ್ಳೆಯದು ಎಂದು ನರಸಿಂಹರಾಯರು ಕೇಳಿದಾಗ, ವೆಂಕಟರಾಮನ್ ಎರಡು ಹೆಸರುಗಳನ್ನು ಸೂಚಿಸಿದರು. ಮೊದಲನೆಯವರು ಐ.ಜಿ.ಪಟೇಲ್. ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದವರು. ಎರಡನೆಯವರು ಡಾ.ಮನಮೋಹನ್ ಸಿಂಗ್. ಆದರೆ ಪಟೇಲ್ ಆ ಆಹ್ವಾನವನ್ನು ನಯವಾಗಿ ನಿರಾಕರಿಸಿದರು. ಡಾ.ಸಿಂಗ್ ಸಂತಸದಿಂದ ಒಪ್ಪಿಕೊಂಡರು. ಆ
ಸಂದರ್ಭದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಆರ್ಥಿಕ ಹೊರೆ, ಸಾಲ ಮಿತಿಮೀರಿತ್ತು.

ಚಂದ್ರಶೇಖರ್ ಪ್ರಧಾನಿಯಾಗಿದ್ದಾಗ ವಿದೇಶಿ ಸಾಲವನ್ನು ತೀರಿಸಲು ಬಂಗಾರವನ್ನು ಅಡ ಇಡಲಾಗಿತ್ತು. ಆ ಬಂಗಾರವನ್ನು ಮರಳಿ ತರಬೇಕಾದ ಜರೂರು ಇತ್ತು. ಸೋವಿಯತ್ ಒಕ್ಕೂಟ ಪತನವಾಗಿತ್ತು. ವಿಶ್ವಬ್ಯಾಂಕ್ ಮತ್ತು ಐಎಂಎಫ್ ಭಾರತದ ವಿತ್ತ ಪರಿಸ್ಥಿತಿ ನೋಡಿ‌ ಕಳವಳ ವ್ಯಕ್ತಪಡಿಸಿದ್ದವು. ಇವೆರಡೂ ಅಂತಾರಾಷ್ಟ್ರೀಯ ಸಂಸ್ಥೆ ಗಳನ್ನು ನಿಭಾಯಿಸುವವರು ದೇಶದ ಹಣಕಾಸು ಸಚಿವರಾದರೆ ಒಳ್ಳೆಯದು ಎಂದು ನರಸಿಂಹರಾಯರಿಗೆ ಬಲವಾಗಿ ಅನಿಸಿತ್ತು. ಅದೇ ವೇಳೆ, ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಸತೀಶ್ ಶರ್ಮ ಬಂದು ನರಸಿಂಹರಾಯರನ್ನು ಭೇಟಿಯಾ ದರು.

‘ರಾಯರೇ, ಯಾರನ್ನು ಹಣಕಾಸು ಸಚಿವರನ್ನಾಗಿ ಮಾಡುತ್ತಿದ್ದೀರಿ?’ ಎಂದು ಸಹಜವಾಗಿ ಕೇಳಿದರು. ಕ್ಯಾಪ್ಟನ್ ಶರ್ಮ ಹಾಗೆ ಕೇಳಿದಾಗ, ಸೋನಿಯಾ ಗಾಂಧಿಯವರಿಂದ ಯಾವುದೇ ಹೆಸರನ್ನು ಹೊತ್ತು ತಂದಿರಬಹುದಾ ಎಂಬ ಯೋಚನೆರಾಯರ ಮನಸ್ಸಿನಲ್ಲಿ ಹಾದುಹೋಯಿತು. ಆ ದಿನಗಳಲ್ಲಿ ಕ್ಯಾಪ್ಟನ್ ಶರ್ಮ ಮೂಲಕ ಸೋನಿಯಾ ಗಾಂಧಿ ಸಂದೇಶಗಳನ್ನು ಕಳಿಸುತ್ತಿದ್ದರು.

ರಾಯರು ಯಾರ ಹೆಸರನ್ನೂ ಹೇಳದೇ, ‘ಮುಂದಿನ ಹಣಕಾಸು ಸಚಿವರು ವಿಷಯ ಪರಿಣತರಾಗಿರುತ್ತಾರೆ’ ಎಂದು ಮುಗುಮ್ಮಾಗಿ ಹೇಳಿದರು. ಹಾಗೆ ಹೇಳಿದಾಗ ಕ್ಯಾಪ್ಟನ್ ಶರ್ಮ ಏನನ್ನೂ ಹೇಳಲಿಲ್ಲ. ಸೋನಿಯಾ ಯಾವುದೇ ಹೆಸರನ್ನು ಹೇಳಿಲ್ಲ ಎಂಬುದು ರಾಯರಿಗೆ ಖಾತ್ರಿಯಾಯಿತು. ಸಂಪುಟ ರಚನೆಯಲ್ಲಿ ನೆರವಾಗುತ್ತಿದ್ದ ಪಿ.ಸಿ.ಅಲೆ ಗ್ಸಾಂಡರ್ ಅವರನ್ನು ಕರೆದು, ಡಾ.ಸಿಂಗ್ ಅವರನ್ನು ಭೇಟಿ ಮಾಡಿ ವಿಷಯವನ್ನು ಚರ್ಚಿಸುವಂತೆ ಸೂಚಿಸಿದರು.

1991ರ ಜೂನ್ 21ರಂದು ಬೆಳಗ್ಗೆ 5 ಗಂಟೆಗೆ ಅಲೆಗ್ಸಾಂಡರ್, ಡಾ.ಸಿಂಗ್‌ಗೆ ಫೋನ್ ಮಾಡಿ ತಮ್ಮನ್ನು ಭೇಟಿ ಮಾಡು ವಂತೆ ಸೂಚಿಸಿದರು. ಅದಾದ ಬಳಿಕ ರಾಯರ ಸೂಚನೆ ಮೇರೆಗೆ ಅವರ ಭೇಟಿಗೆ ಹೋದರು. ಅಲೆಗ್ಸಾಂಡರ್ ವಿಷಯ ವನ್ನು ಪ್ರಸ್ತಾಪಿಸುತ್ತಿದ್ದಂತೆ, ಡಾ.ಸಿಂಗ್ ಮರುಮಾತಾಡದೇ ಒಪ್ಪಿಕೊಂಡರು (ಚಂದ್ರಶೇಖರ್ ಅವಧಿಯಲ್ಲಿ ಯುಜಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದ ಡಾ.ಸಿಂಗ್, ತಮ್ಮನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತೆ ಕೇಳುವವ ರಿದ್ದರು). ಅದೇ ದಿನ ಮಧ್ಯಾಹ್ನದ ವೇಳೆಗೆ ನರಸಿಂಹರಾಯರು ಪ್ರಧಾನಿಯಾಗಿ ಮತ್ತು ಡಾ.ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಡಾ.ಸಿಂಗ್ ಅವರು ಆ ಸಚಿವರಾಗಿದ್ದು ಎಲ್ಲರಿಗೂ ಅಚ್ಚರಿ ಯನ್ನುಂಟು ಮಾಡಿತ್ತು.

ಇದನ್ನೂ ಓದಿ: @vishweshwarbhat