Saturday, 10th May 2025

Dr.Anjali Hemanth Nimbalkar Column: ಆಡದೆ ಮಾಡಿ ರೂಢಿಯೊಳಗುತ್ತಮನಾದ ಸಿಂಗ್‌ಗೇ ಸಿಂಗ್‌ ಸರಿಸಾಟಿ !

ಡಾ.ಅಂಜಲಿ ಹೇಮಂತ್‌ ನಿಂಬಾಳ್ಕರ್

ಕಾರ್ಯಗಳು ಮಾತಿಗಿಂತ ಬಲಿಷ್ಠವಂತೆ; ಹೀಗಾಗಿ, ಆಡದೆ ಮಾಡುವವನು ರೂಢಿಯೊಳಗುತ್ತಮನು ಎಂಬ ನಾಣ್ನುಡಿ ಒಂದಿದೆ. ಇದನ್ನು ಜೀವಿಸಿ ತೋರಿಸಿದವರು ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು. ಅತಿಹೆಚ್ಚು ಟೀಕೆಗಳನ್ನು ಸಹಿಸಿಕೊಂಡು, ಅತಿ ಹೆಚ್ಚು ಕೆಲಸಗಳನ್ನು ಮೌನಿಯಾಗಿಯೇ ಮಾಡಿದ ನವಭಾರತದ ವಾಸ್ತುಶಿಲ್ಪಿ ಅವರು. ದೇಶ ಆರ್ಥಿಕ ಅಧೋಗತಿಗೆ ತಲುಪಿದಾಗ ಕೈಹಿಡಿದು ಮೇಲೆತ್ತಿದ ಅರ್ಥಮಾಂತ್ರಿಕನನ್ನು ಕಳೆದುಕೊಂಡು ಭಾರತವೀಗ ಬಡವಾಗಿದೆ.

ಟ್ರಿಲಿಯನ್ ಡಾಲರ್ ಆರ್ಥಿಕತೆಗಳ ಬಗ್ಗೆ ಮಾತನಾಡುವಷ್ಟು ನಾವು ಬಲಿಷ್ಠರಾಗಿದ್ದೇವೆಂದರೆ ಅದಕ್ಕೆ ಕಾರಣರು ಡಾ.ಸಿಂಗ್. ಆಧಾರ್ ಈಗ ಅಧಿಕೃತ ದಾಖಲೆಯಾಗಿದೆ ಎಂದರೆ ಅದಕ್ಕೆ ಅಡಿಪಾಯ ಹಾಕಿದ್ದು ಮನಮೋಹನರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯ ಮೂಲಕ ಬಡ ಗ್ರಾಮೀಣ ಜನರು ೧೦೦ ದಿನಗಳ ಉದ್ಯೋಗ ಪಡೆಯುತ್ತಿದ್ದಾರೆಂದರೆ ಅದಕ್ಕೆ ಸಿಂಗ್ ಅವರೇ ಕಾರಣರು.

ಪಡಿತರ ಕಾರ್ಡ್ ಮೂಲಕ ಆಹಾರ ಧಾನ್ಯ ಪಡೆದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆಂದರೆ ಅದು ಸಿಂಗ್ ಅವರ ಕೊಡುಗೆ. 14 ವರ್ಷದೊಳಗಿನ ಎಲ್ಲಾ ಮಕ್ಕಳು ಉಚಿತ ಶಿಕ್ಷಣ (ಆರ್‌ಟಿಇ) ಪಡೆಯುತ್ತಿದ್ದಾರೆಂದರೆ ಅದು ಸಿಂಗ್ ಅವರ ವರದಾನ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರಿಗೆ ಬಲ ನೀಡಿ, ಸರಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಸಿಂಗ್ ಜಾರಿಗೆ ತಂದ ಮಾಹಿತಿ ಹಕ್ಕು ಕಾಯ್ದೆ ಕಾರಣವಾಗಿದೆ. ಆರ್‌ಟಿಐ ಭಾರತಕ್ಕೆ ಸಿಕ್ಕ ಎರಡನೇ ಸ್ವಾತಂತ್ರ್ಯವೇ ಆಗಿದೆ.

ಸಾಮಾನ್ಯವಾಗಿ ಈಗ ಒಂದು ಪದವಿ ಪಡೆದಿದ್ದರೂ ನಾವು ದೊಡ್ಡ ಮೇಧಾವಿ ಎಂದುಕೊಳ್ಳುತ್ತೇವೆ. ಆದರೆ ಸಿಂಗ್
ಅವರು ಅಂದಿನ ಕಾಲದ ಪ್ರತಿಷ್ಠಿತ ಕೇಂಬ್ರಿಡ್ಜ್ ಹಾಗೂ ಆಕ್ಸ್ ಫರ್ಡ್ ಎರಡಲ್ಲೂ ವ್ಯಾಸಂಗ ಮಾಡಿ ಮಹಾಜ್ಞಾನಿ ಯಾಗಿದ್ದರೂ ನಿಗರ್ವಿಯಾಗಿದ್ದವರು. ಅರ್ಥವ್ಯವಸ್ಥೆಯ ಬಹುತೇಕ ಎಲ್ಲಾ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಆ ಹುದ್ದೆಗಳಿಗೆ ಗೌರವ ತಂದುಕೊಟ್ಟವರು. ಭಾರತವಷ್ಟೇ ಅಲ್ಲ, ವಿಶ್ವದ ದೊಡ್ಡ ಅಮೆರಿಕ ಕೂಡ ಆರ್ಥಿಕ ಸಂಕಷ್ಟ ದಲ್ಲಿದ್ದಾಗ ಯಾರದ್ದಾದರೂ ಆರ್ಥಿಕ ಸಲಹೆ ಪಡೆದಿತ್ತೆಂದರೆ ಅದು ಡಾ.ಮನಮೋಹನ್ ಸಿಂಗ್ ಎಂಬ ಅರ್ಥ ಶಾಸ್ತ್ರಜ್ಞರದ್ದು ಎಂಬುದು ಹೆಮ್ಮೆಯ ವಿಚಾರ.

ಅವರು ಹಣಕಾಸು ಸಚಿವರಾಗಿ, ನಂತರ ಪ್ರಧಾನಿಯಾಗಿ ಈ ದೇಶಕ್ಕಾಗಿ ಜಾರಿಗೆ ತಂದ ಯೋಜನೆಗಳು ಭವಿಷ್ಯದ ಭಾರತದ ದಾರಿ ದೀಪವಾಗಿವೆ. ನಾವು ಅದರ ಜೀವಿಸುತ್ತಿದ್ದೇವೆ. ಆಕಸ್ಮಿಕವಾಗಿ ಅವರು ಪ್ರಧಾನಿಯಾದುದನ್ನೇ
ಆಡಿಕೊಳ್ಳುವವರ ನಡುವೆ, ಆಕಸ್ಮಿಕವೂ ಅವಕಾಶ ಎಂಬುದನ್ನು ತೋರಿಸಿಕೊಟ್ಟವರು ಅವರು. ಬಹುಶಃ ಆಕಸ್ಮಿಕವಾಗಿ ಅವರು ಪ್ರಧಾನಿಯಾಗಿರದಿದ್ದರೆ ಇಂದು ಭಾರತ ಚರಿತ್ರೆ ಸೃಷ್ಟಿಸುವ ದೇಶವಾಗಿರುತ್ತಿರಲಿಲ್ಲ.

ಎಂದೂ ಮಾಡಿರದ, ಮುಂದೂ ಯಾರೂ ಮಾಡಲಾಗದ ಸಾಧನೆಗಳನ್ನು ಅವರು ಮಾಡಿ ಹೊರಟಿದ್ದಾರೆ. ದೇಶದ ರೈತರ ಸಾಲಮನ್ನಾ ಮಾಡಿದ ಮೊದಲ ಮತ್ತು ಈವರೆಗಿನ ಪ್ರಧಾನಿಗಳಲ್ಲಿ ಏಕೈಕರು ಸಿಂಗ್. ಅಂಥ ಧೈರ್ಯದ
ನಿರ್ಧಾರಗಳನ್ನು ಸಿಂಗ್‌ರಂಥ ಸಿಂಗ್ ಅವರು ಮಾತ್ರ ಕೈಗೊಳ್ಳಲು ಸಾಧ್ಯ. ರಾಷ್ಟ್ರದ ಸೇವೆಯನ್ನು ದೇವರ ಕೆಲಸದಂತೆ ಕಣ್ಣಿಗೊತ್ತಿಕೊಂಡು ಮಾಡಿದ ಸಿಂಗ್ ಅವರನ್ನು ಇಂದು ಇಡೀ ದೇಶ, ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳು ಸ್ಮರಿಸುತ್ತಿದೆ ಎಂದರೆ ಅವರ ನಿಷ್ಠೆ, ಕಾರ್ಯತತ್ಪರತೆ ಮತ್ತು ಶಿಸ್ತು ಎಷ್ಟು ಪರಿಣಾಮಕಾರಿ ಯಾಗುತ್ತೆಂದು ಊಹಿಸಿಕೊಳ್ಳಬಹುದು.

ಅವರಿದ್ದಾಗ ಅವರ ಬಗ್ಗೆ, ಅವರ ಕೆಲಸಗಳ ಬಗ್ಗೆ ಭಾರತೀಯರು ಕೇಳಿಸಿಕೊಂಡಿದ್ದೇ ಕಡಿಮೆ. ಕಾರಣ ಅವರು ಅಬ್ಬರದ ಪ್ರಚಾರ ಬಯಸದೆ ಮೌನಿಯಾಗಿಯೇ ಕಾರ್ಯಸಾಧು ಮಾಡಿದವರು. ಆದರೆ, ಅವರನ್ನು ಟೀಕೆಗಳಿಂದ ಜರಿದವರೇ ಹೆಚ್ಚು; ಇದ್ದಾಗಲೂ, ಅಧಿಕಾರದಿಂದಿಳಿದಾಗಲೂ. ಇಂದಿನ ಮಾಧ್ಯಮಗಳು, ವಿರೋಧ ಪಕ್ಷಗಳಿಗಿಂತ, ಇತಿಹಾಸ ನನ್ನ ಬಗ್ಗೆ ಕರುಣೆ ತೋರಿಸುತ್ತದೆ ಎಂದು ಸಿಂಗ್ ಅವರು ಹಿಂದೆ ಹೇಳಿದ್ದ ನುಡಿಗಳನ್ನು ಕೇಳಿದಾಗ ನನ್ನ ಕಣ್ಣಾಲಿಗಳು ಒದ್ದೆಯಾದವು. ಸಿಂಗ್ ಸರ್, ಇತಿಹಾಸ ನಿಜಕ್ಕೂ ನಿಮ್ಮ ಮೇಲೆ ಕರುಣೆ ತೋರುತ್ತದೆ; ಈ ರಾಷ್ಟ್ರ, ಈ ಜಗತ್ತು ನಿಮ್ಮಂಥ ಅರ್ಥಶಾಸ್ತ್ರಜ್ಞರನ್ನು ಎಂದಿಗೂ ಮರೆಯುವುದಿಲ್ಲ. ಹೋಗಿ ಬನ್ನಿ.

ಇದನ್ನೂ ಓದಿ: Manmohan Singh passes way