ಕ್ಲಬ್‌ಹೌಸ್ ಸಂವಾದ – 230
ಯುವಕರಿಗೆ ಸೇವೆಯ ಅನುಭೂತಿ ಆಗಬೇಕು, ಕೊಡುವುದರಲ್ಲಿ ಇರುವ ಆನಂದ ಅನುಭವಿಸಬೇಕು: ವೆಂಕಟೇಶ ಮೂರ್ತಿ
ಬೆಂಗಳೂರು: ಬೇರೆಯವರ ಕಷ್ಟಕ್ಕೆ ಸ್ಪಂದಿಸುವುದು ಮನುಷ್ಯನ ಸಹಜ ಸ್ವಭಾವ. ಆದರೆ, ಶೇ. ೯೯.೯ರಷ್ಟು ಮಂದಿ ಯಾವ ರೀತಿ ಸ್ಪಂದಿಸಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾಗುತ್ತಾರೆ. ಸೇವಾ ಭಾವನೆ ಎಲ್ಲರಲ್ಲೂ ಮೂಡುತ್ತದೆ, ಆದರೆ ಅದನ್ನು ಕ್ರಿಯಾರೂಪಕ್ಕೆ ತರುವುದು ಗೊತ್ತಿಲ್ಲದ ಕಾರಣ ಆ ಯೋಚನೆ ಅವರಲ್ಲೇ ಸಾಯುತ್ತದೆ. ಮನದಲ್ಲಿ ಮೂಡಿದ ಸೇವಾ ಮನೋ ಭಾವನೆ ಕಾರ್ಯರೂಪಕ್ಕೆ ಬಾರದಿದ್ದಲ್ಲಿ ಕಾಲಾನಂತರ ಮುದುಡಿಹೋಗುತ್ತದೆ. ಇದು ಅನೇಕರಲ್ಲಿರುವ ದೊಡ್ಡ ತೊಂದರೆ.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಸಮಾಜದ ಋಣ ತೀರಿಸುವುದು ಹೇಗೆ’ ಕಾರ್ಯ ಕ್ರಮದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ಸಂಸ್ಥಾಪಕ ವೆಂಕಟೇಶ್ ಮೂರ್ತಿ ಅರಿವಿನ ಉಪನ್ಯಾಸ ನೀಡಿದರು. ಸಮಾಜದ ಋಣ ತೀರಿಸುವುದು ಹೇಗೆ ಎಂಬ ಬಗ್ಗೆ ಅವರು ವಿವರಿಸಿದ್ದು ಹೀಗೆ… ಸೇವಾ ಮನೋಭಾವ ಇರುವ ಅನೇಕರು, ಏನು ಮಾಡಬೇಕು ಎಂದು ತಿಳಿಯದೆ ಆಶ್ರಮಕ್ಕೆ ಹೋಗಿ ಅನ್ನದಾನ ಮಾಡಿ, ಸೆಲಿ ತೆಗೆದುಕೊಳ್ಳುವ ಕೆಲಸ ಮಾಡು ತ್ತಿದ್ದಾರೆ. ಇದರಿಂದಾಗಿ ಯಾವುದೇ ಶಾಶ್ವತ ಪರಿಹಾರ ದೊರಕುವುದಿಲ್ಲ. ಹೀಗಾಗಿ ಸೇವೆ ಮಾಡುವ ತುಡಿತ ಇರುವ ಮನಸ್ಸುಗಳಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ೨೦೦೭ರಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಪ್ರಾರಂಭಿಸಲಾಯಿತು. ಅಲ್ಲಿ ಬರುವ ಸ್ವಯಂ ಸೇವಕರಿಗೆ, ಅವರ ಸಮಯ ಮತ್ತು ಅವರ ಆಲೋಚನೆಗೆ ಅನುಗುಣವಾಗುವಂತೆ ಮಾರ್ಗದರ್ಶನ ಮಾಡಲಾಗುತ್ತಿದೆ.
‘ಬೀಯಿಂಗ್ ಗುಡ್, ಡೂಯಿಂಗ್ ಗುಡ್ ಇಸ್ ಹೋಲ್ ಆಫ್ ರಿಲೀಜಿಯನ್’ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಆದರೆ, ಇಂದಿನ ಕಾಲಘಟ್ಟದಲ್ಲಿ ‘ಬೀಯಿಂಗ್ ಗುಡ್’ ಮಾತು ಕಾಣಿಸುತ್ತಿಲ್ಲ. ಅನೇಕರು ವೃದ್ಧಾಶ್ರಮ ನಡೆಸುತ್ತಿರುತ್ತಾರೆ. ಆದರೆ, ಅವರ
ತಂದೆ-ತಾಯಂದಿರನ್ನು ಮತ್ತೊಂದು ವೃದ್ಧಾಶ್ರಮದಲ್ಲಿ ಇರಿಸಿರುತ್ತಾರೆ. ಬೇರೆಯವರಿಗೆ ಒಳಿತು ಮಾಡುವ ಮೊದಲು ನಾವು ಒಳ್ಳೆ
ಯವರಾಗಿರಬೇಕು. ಯವ ಜನತೆಯಲ್ಲಿ ಸೇವಾ ಆಸಕ್ತಿ ಇದೆ. ಆದರೆ, ಕುಟುಂಬದ ಜವಾಬ್ದಾರಿ ಕಮ್ಮಿ. ದುಡಿಮೆ ಜಾಸ್ತಿ ಮಾಡು ತ್ತಾರೆ.
ಜವಾಬ್ದಾರಿ ಇಲ್ಲದ ಕಾರಣ ನಾನು ದುಡಿಯುತ್ತಿರುವುದಾದರೂ ಏತಕ್ಕೆ ಎಂಬ ಭಾವನೆ ಅವರಲ್ಲಿ ಮನೆಮಾಡಿದೆ. ಯುವಕರಿಗೆ ಸೇವೆ ಮಾಡುವುದರಲ್ಲಿ ಅನುಭೂತಿ ಆಗಬೇಕು. ಕೊಡುವುದರಲ್ಲಿ ಇರುವ ಆನಂದ ಯುವ ಸಮ ದಾಯಕ್ಕೆ ಸಿಗಬೇಕು ಎಂಬುದೇ ನಮ್ಮ ಮತ್ತು ಸಂಸ್ಥೆಯ ಆಶಯ.
ವಿಶ್ವಾಸದ ಕೊರತೆ : ಸಮಾಜ ಸೇವೆ ಮಾಡಲು ಜನರಿಗೆ ಹಣದ ಕೊರತೆ ಇಲ್ಲ. ಅದರೆ ವಿಶ್ವಾಸದ ಕೊರತೆ ಇದೆ. ಕೊಟ್ಟ ಹಣ ಸದುಪಯೋಗ ಆಗುತ್ತದೆಯೋ ಇಲ್ಲವೂ ಎಂಬ ಸಂಶಯ ಕಾಡುತ್ತದೆ. ಹಲವು ಎನ್ ಜಿಓಗಳು ಸ್ವಯಂ ಸೇವಕರನ್ನು ಕೆಲಸ ನಡೆಯುವ ಜಾಗಕ್ಕೆ ಕಳಿಸುವುದಿಲ್ಲ. ಎಲ್ಲವನ್ನು ಅಲ್ಲಿರುವ ನಿಯೋಜಿತ ವ್ಯಕ್ತಿಗಳೇ ಮಾಡುತ್ತಾರೆ. ಕೆಲಸವಾಗುವ ಸ್ಥಳಕ್ಕೆ ಅವರನ್ನು ಕಳುಹಿಸಿದಾಗಲೇ ಅವರಿಗೂ ನಂಬಿಕೆ ಬರುತ್ತದೆ. ನಮ್ಮ ಸಂಸ್ಥೆ ಯಾರನ್ನೂ ಹಣ ಕೇಳುವುದಿಲ್ಲ. ಕೇವಲ ಸಮಯ ಮಾತ್ರ ಕೇಳುತ್ತೇವೆ.
ಡಾಕ್ಟರ್ ಫಾರ್ ಸೇವಾ: ಕೊಳಗೇರಿ ಪ್ರದೇಶಗಳ ಶಾಲೆಗಳಲ್ಲಿ ಉಚಿತವಾಗಿ ಅರೋಗ್ಯ ತಪಾಸಣೆ ವ್ಯವಸ್ಥೆಯನ್ನು ಸಂಸ್ಥೆಯಿಂದ ಮಾಡಲಾಗಿದೆ. ಇದಕ್ಕಾಗಿ ಹಲವಾರು ವೈದ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇವಲ ಚಿಕಿತ್ಸೆ ನೀಡುವು ದಲ್ಲದೇ, ಮಕ್ಕಳಿಗೆ ಹೆಚ್ಚುವರಿ ಚಿಕಿತ್ಸೆಗೆ ಬೇಕಾದ ಸಲಹೆಗಳು ಮತ್ತು ಶಿಫಾರಸ್ಸು ಗಳನ್ನು ಕೂಡ ಡಾಕ್ಟರ್ ಫಾರ್ ಸೇವಾ ಮೂಲಕ
ಕೈಗೊಳ್ಳಲಾಗುತ್ತಿದೆ.
ಅನೌಪಚಾರಿಕ ಶಾಲೆ: ಕೂಲಿ ಕೆಲಸಕ್ಕೆ ಹೋಗುವ ತಂದೆ- ತಾಯಿ, ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಾರೆ. ಮನೆಯಲ್ಲಿರುವ ಸಣ್ಣ ಮಕ್ಕಳನ್ನು ಬಿಟ್ಟು, ದೊಡ್ಡ ಮಕ್ಕಳು ಶಾಲೆಗೆ ಹೋಗಲಾರದೆ ರಸ್ತೆ ಬದಿಯಲ್ಲೇ ಕಾಲ ಕಳೆಯುವುದು ಗಮನಕ್ಕೆ ಬಂತು. ಹೀಗಾಗಿ ಅಂತಹ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ‘ಅನೌಪಚಾರಿಕ ಶಾಲೆ’ ಪ್ರಾರಂಭಿಸಲಾಯಿತು.
ಕಳೆದ ೧೨ ವರ್ಷಗಳಲ್ಲಿ ಕೂಲಿ ಕೆಲಸ ಮಾಡುವವರ ೧೫೦ ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸ ಸಂಸ್ಥೆ ಮಾಡಿದೆ. ಅನೇಕ ಬಡ ಮಕ್ಕಳು ಪೋಷಕರೊಂದಿಗೆ ಕೆಲಸ ಮಾಡಿಕೊಂಡು ಓದುತ್ತಿದ್ದಾರೆ. ಮನೆಯ ಜವಾಬ್ದಾರಿ ಜತೆ ಶಿಕ್ಷಣ ಪಡೆಯುತ್ತಿದ್ದಾರೆ. ಅಂಥವ ರಿಗೆ ಪ್ರತಿ ತಿಂಗಳು ಒಂದು ಸಾವಿರದಂತೆ, ವರ್ಷಕ್ಕೆ ಹನ್ನೆರಡು ಸಾವಿರ ರು. ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.
ಪಂಚ ಯಜ್ಞಗಳ ಮೂಲಕ ಋಣ ತೀರಿಸಬೇಕು ಸಮಾಜದಲ್ಲಿ ಪರಿಚಯವಿಲ್ಲದ ಹಲವರ ಪರಿಶ್ರಮ ಹಾಗೂ ಕೊಡುಗೆ ನಮ್ಮ ಮೇಲಿದೆ. ಅನೇಕರ ಅಸ್ಮಿತೆ ನಮ್ಮ ಮೇಲಿದೆ. ಪಿತೃ, ಋಷಿ, ನರ, ಭೂತ ಹಾಗೂ ದೇವ ಯಜ್ಞಗಳಿವೆ. ಇವರ ಋಣಗಳು ನಮ್ಮ ಮೇಲಿದೆ. ಇದರಿಂದ ಮುಕ್ತವಾಗುವುದೇ ಯಜ್ಞ.
ಪಿತೃ ಯಜ್ಞ: ನಮ್ಮ ತಂದೆ-ತಾಯಿಗೆ ನಾವು ಏನು ಮಾಡಿದರೆ ಸಂತೋಷವಾಗುತ್ತದೆ ಎಂದು ತಿಳಿದು ನಡೆಯಬೇಕು. ಅವರಿಗೆ
ಗೌರವ ನೀಡಬೇಕು.
ಋಷಿ ಯಜ್ಞ: ನಾವು ಕಲಿತಿರುವುದನ್ನು ಮುಂದಿನ ಪೀಳಿಗೆಗೆ ನೀಡುವುದು. ನಮ್ಮ ಮುಂದಿನ ಪೀಳಿಗೆಗೆ ಉಚಿತ ಮತ್ತು ಉತ್ತಮ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.
ನರ ಯಜ್ಞ: ಪರಿಚಯ ಇಲ್ಲದವರಿಗೆ ಸೇವೆ, ಸಹಾಯ ಮಾಡುವುದು. ಯಾವುದೇ ನಿರೀಕ್ಷೆ ಇಲ್ಲದೆ ಕಷ್ಟಕ್ಕೆ ಸ್ಪಂದಿಸುವುದು.
ಇನ್ನುಳಿದ ಭೂತ ಮತ್ತು ದೇವ ಯಜ್ಞಗಳ ಬಗ್ಗೆ ಗೌರವದಿಂದ ಇರಬೇಕು. ಹಾಗೆ ಮಾಡಿದಲ್ಲಿ ನಾವು ಎಲ್ಲ ಋಣಗಳಿಂದ ಮುಕ್ತ ವಾಗುವ ಹಾದಿಯಲ್ಲಿ ಸಾಗುತ್ತೇವೆ. ಪಂಚ ಮಹಾಯಜ್ಞದ ಅಡಿಪಾಯ ಇಟ್ಟುಕೊಂಡು, ವೈಚಾರಿಕ ತಳಹದಿಯಲ್ಲಿ ನಡೆದು ಕೊಳ್ಳಬೇಕು ಎಂದು ವೆಂಕಟೇಶ್ ಮೂರ್ತಿ ತಿಳಿಸಿದರು.
ಯೂತ್ ಫಾರ್ ಸೇವಾ ಸಂಸ್ಥೆ ಕಾರ್ಯಗಳು
ಸಿಎಸ್‌ಆರ್ ನಿಧಿಯಿಂದ ೭೦ ಸರಕಾರಿ ಶಾಲೆಗಳ ದತ್ತು ಮತ್ತು ಗ್ರಾಮಗಳಲ್ಲಿ ರಿಮೋಟ್ ಟೀಚಿಂಗ್ ಪ್ರಾರಂಭ. ೧೧೦ ಹಳ್ಳಿಗಳಿಗೆ, ವನವಾಸಿ ಕಲ್ಯಾಣ ಸೇವಾ ಸಂಸ್ಥೆ ಸಹಭಾಗಿತ್ವದಲ್ಲಿ ಅರೋಗ್ಯ ಮಿತ್ರ ಟೆಲಿಮೆಡಿಸಿನ್ ಸೇವೆ ಮತ್ತು ವೈದ್ಯರ ನೇಮಕ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾಚೇತನ ಕಾರ್ಯಕ್ರಮ. ಕರೋನಾ ಸಂದರ್ಭದಲ್ಲಿ ಇತರ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ೧೨ ಐಸೊಲೇಶನ್ ಕೇಂದ್ರಗಳ ವ್ಯವಸ್ಥೆ. ಔಷಧ ಮತ್ತು ಆಹಾರ ವಿತರಣೆ.
ಸಮಾಜಕ್ಕೆ ಸಹಾಯ ಮಾಡುವ ಶಕ್ತಿ ಇರುವವರೆಗೆ ಅವರು ಯೂತ್ ಆಗಿರುತ್ತಾರೆ. ನಮಗೆ ಬೇಕಾದಷ್ಟನ್ನು ಇಟ್ಟುಕೊಂಡು ಉಳಿದಿದ್ದನ್ನು ಸಮಾಜಕ್ಕೆ ನೀಡಬೇಕು. ಸ್ವಯಂ ಸೇವೆ ಎಂಬುದು ಸಾಮಾಜಿಕ ವ್ಯವಸ್ಥೆಯಲ್ಲಿರುವ ಎಲ್ಲರ ಡಿಎನ್‌ಎ ಆಗಬೇಕು.
ಸರಕಾರದ ಮಟ್ಟದಲ್ಲಿ ಅನೇಕ ಯೋಜಗಳಿವೆ. ಆದರೆ, ಬಹುತೇಕ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿವರೆಗೆ ತಲುಪು ತ್ತಿಲ್ಲ. ಸಮಾಜದ ಸುಧಾರಣೆಗೆ ಶಿಕ್ಷಿತ ವರ್ಗದ ಸಹಭಾಗಿತ್ವ ಇಲ್ಲದಿರುವುದೇ ಇದಕ್ಕೆ ಕಾರಣ. ಬಡವರ ತ್ಯಾಗದಿಂದ ಮೇಲೆ ಬಂದಿರುವವರು ನಾವು. ಬಡವರನ್ನು ಸ್ಮರಿಸದಿದ್ದವರೇ ನಿಜವಾದ ದೇಶ ದ್ರೋಹಿ ಎಂದು ವಿವೇಕಾನಂದರು ಹೇಳಿದ್ದರು.