Thursday, 15th May 2025

ಪುರಂದರದಾಸರ ಸ್ಮರಣೆಯಿಂದ ಜನ್ಮಾಂತರದ ಪಾಪ ನಾಶ

ಕ್ಲಬ್‌ಹೌಸ್‌ ಸಂವಾದ 204

ಪುರಂದರದಾಸರ ಜಯಂತಿ ಅಂಗವಾಗಿ ಕ್ಲಬ್‌ಹೌಸ್‌ನಲ್ಲಿ ಏರ್ಪಡಿಸಿದ್ದ ‘ದಾಸಶ್ರೇಷ್ಠಂ ದಯಾನಿಧಿಂ: ಪುರಂದರೋತ್ಸವ ಗಾನಯಾನ’ ಕಾರ್ಯಕ್ರಮ

ಬೆಂಗಳೂರು: ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ, ದಾಸ ಸಾಹಿತ್ಯದ ಸರ್ವಶ್ರೇಷ್ಠ ಮಹಾಮಹಿಮ ಎಂದು ಕರೆಸಿಕೊಂಡವರು ಪುರಂದರ ದಾಸರು. ದಾಸರೆಂದರೆ ಪುರಂದರದಾಸರಯ್ಯ ಎಂದು ಗುರು ವ್ಯಾಸರಾಯರೇ ಹಾಡಿ ಹೊಗಳಿದ್ದಾರೆ ಎಂದರೆ ಅವರ ಮೇರು ವ್ಯಕ್ತಿತ್ವ ಎಂತಹದ್ದು ಎಂದು ತಿಳಿದು ಬರುತ್ತದೆ.

ದುರಾಸೆಯ ವ್ಯಕ್ತಿಯಾಗಿದ್ದ ಒಬ್ಬಾತ ಎಲ್ಲವನ್ನೂ ತ್ಯಜಿಸಿ, ವೈರಾಗ್ಯ ತಾಳಿ ದಾಸ ಶ್ರೇಷ್ಠರು ಎನಿಸಿಕೊಳ್ಳ ಬೇಕಾದರೆ ಅವರ ಸಾಹಿತ್ಯ ಪ್ರೀತಿ, ದೇವರ ಮೇಲಿನ ಭಕ್ತಿ ಎಷ್ಟು ದೊಡ್ಡ ಮಟ್ಟದಲ್ಲಿತ್ತು ಎಂಬುದಕ್ಕೆ ಸಾಕ್ಷೀ ಭೂತರಾಗಿರುವವರು ಪುರಂದರ ದಾಸರು. ಅವರ ಸ್ಮರಣೆಯೇ ಜನ್ಮ ಜನ್ಮಾಂತರದ ಪಾಪವನ್ನು ನಾಶ ಮಾಡು ವಂತಹದ್ದು. ಹೀಗೆ ಪುರಂದರ ದಾಸರ ಕುರಿತು ಮಾತನಾಡುತ್ತಾ, ಅವರ ಕೀರ್ತನೆಗಳನ್ನು ಹಾಡಿ, ಅವುಗಳಲ್ಲಿ ರುವ ಒಳಾರ್ಥದ ಅರಿವನ್ನು ನೀಡಿದವರು ಖ್ಯಾತ ಗಾಯಕ ಶಂಕರ ಶಾನುಭಾಗ್.

ಪುರಂದರದಾಸರ ಜಯಂತಿ ಅಂಗವಾಗಿ ಕ್ಲಬ್ ಹೌಸ್‌ನಲ್ಲಿ ಏರ್ಪಡಿಸಿದ್ದ ‘ದಾಸಶ್ರೇಷ್ಠಂ ದಯಾನಿಧಿಂ : ಪುರಂದರೋತ್ಸವ ಗಾನಯಾನ’ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಂಕರ ಶಾನುಭಾಗ್, ಪುರಂದರ ದಾಸರ ಬಗ್ಗೆ ಮಾತನಾಡಿದ್ದು ಹೀಗೆ…

ಪುರಂದರದಾಸರು ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮೌಲಿಕವಾದದ್ದು. ಬಹುಮುಖ ವ್ಯಕ್ತಿತ್ವ ಹೊಂದಿದ್ದ ದಾಸಶ್ರೇಷ್ಠರು ಒಬ್ಬ ವೈರಾಗ್ಯ ಮೂರ್ತಿ. ಅದನ್ನು ವರ್ಣಿಸಲು ಶಬ್ಧಗಳೇ ಸಾಲುವುದಿಲ್ಲ. ನಾವು ಬೇಡಿದ್ದನ್ನು ಕೊಡುವ ಮಹಾಚೇತನ. ಅವರ ಕೀರ್ತನೆಗಳಲ್ಲಿ ವೇದ, ಉಪನಿಷತ್, ಸ್ತೋತ್ರ, ಪುರಾಣ ಗಳೆಲ್ಲವೂ ತುಂಬಿರುತ್ತವೆ.

ಅವೆಲ್ಲವನ್ನೂ ಮಜ್ಜಿಗೆ ಕಡೆದು ಬೆಣ್ಣೆಯನ್ನು ನೀಡಿ ದಂತೆ ನಮ್ಮಂತ ಪಾಮರರಿಗೆ ಸುಲಭವಾಗಿ ಸಿಗುವಂತೆ ಮಾಡಿದ್ದಾರೆ. ಹೀಗಾಗಿ ವ್ಯಾಸತೀರ್ಥರು ಅವರ ರಚನೆಗಳನ್ನು ಪುರಂದರೋಪನಿಷತ್ ಎಂದು ಕರೆದರು. ಪುರಂದರದಾಸರ ಜೀವನ ಚರಿತ್ರೆ ಕುರಿತು ನಿಖರ ದಾಖಲೆ ಇನ್ನೂ ಸಿಕ್ಕಿಲ್ಲ. ಹಲವು ದಾಖಲೆ ಮತ್ತು ಕೃತಿಗಳಲ್ಲಿ ದಾಖಲಿಸಿದ ಪ್ರಕಾರ, ಮಹಾರಾಷ್ಟ್ರದ ಪುರಂದರಗಢದಲ್ಲಿ ಅವರ ಜನನ ಎಂದು ತಿಳಿದು ಬರುತ್ತದೆ. ನಂತರ ನಡೆದ ಸಂಶೋಧನೆಗಳ ಪ್ರಕಾರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆರಗ ಅವರ ಹುಟ್ಟೂರು. ಅವರ ಮೂಲ ಹೆಸರು ಶ್ರೀನಿವಾಸ ನಾಯಕ.

ಲೇವಾದೇವಿ ವೃತ್ತಿ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ದಾಂಪತ್ಯಕ್ಕೆ ಕಾಲಿಟ್ಟ ಹಲವು ವರ್ಷಗಳ ನಂತರ ಮೂಗುತಿ ದಾನ ನೀಡಿದ ಘಟನೆ ಮೂಲಕ ಮಹಾ ಸಾಧಿಯಾದ ಮಡದಿ ಸರಸ್ವತಿ ಬಾಯಿ ಅವರ ಕಾರಣದಿಂದ ವೈರಾಗ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಪುರಂದರ ದಾಸರಾಗುತ್ತಾರೆ.

ಆದದ್ದೆಲ್ಲ ಒಳಿತೇ ಆಯಿತು… ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆಯ ತಗ್ಗಿಸಿ ನಾಚುತಲಿದ್ದೆ…. ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿ
ದಳಯ್ಯ… ಎಂದು ತಮ್ಮ ಮೊದಲ ಸಾಹಿತ್ಯ ರಚನೆಯಲ್ಲಿ ತಮ್ಮ ವೈರಾಗ್ಯಕ್ಕೆ ಹೆಂಡತಿ ಕಾರಣವಾದ ಬಗ್ಗೆ ವಿವರಿಸುತ್ತಾರೆ. ವೈರಾಗ್ಯಕ್ಕೆ ಒಳಗಾಗಿ ತಮ್ಮ ಅಷ್ಟೈಶ್ವರ್ಯವನ್ನು ಕೃಷ್ಣನಿಗೆ ಅರ್ಪಿಸಿ, ಮಡದಿ ಮಕ್ಕಳೊಂದಿಗೆ ಹಂಪಿಯ ಕಡೆ ಪ್ರವಾಸ ಬೆಳೆಸಿ, ಅಲ್ಲಿ ವ್ಯಾಸರಾಯರನ್ನು ಭೇಟಿ ಮಾಡಿ ಅವರಿಂದ ಮಾಧ್ವ ಸಂಪ್ರದಾಯದ ದೀಕ್ಷೆ ಪಡೆಯುತ್ತಾರೆ. ಎಲ್ಲಾ ಪುಣ್ಯ ಕ್ಷೇತ್ರಗಳ ಯಾತ್ರೆಗೆ ಮುಂದಾಗುತ್ತಾರೆ.

‘ಕೇಳನೊ ಹರಿ ತಾಳನೋ, ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ, ಕೇಳನೊ ಹರಿ ತಾಳನೋ’ ಹಾಡಿನಲ್ಲಿ ಸಂಗೀತಗಾರರು ಹೇಗೆ ಹಾಡಬೇಕು?
ಸಂಗೀತ ಹೇಗಿರಬೇಕು? ಸಂಗೀತದ ಉದ್ದೇಶವೇನು? ಎಂಬುದನ್ನು ತಿಳಿಸಿದ್ದಾರೆ. ನಾವೆಲ್ಲರು ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಒಪ್ಪಿಕೊಳ್ಳುವುದಾದರೆ, ಸಂಗೀತವನ್ನು ಹಾಡುವ ಮುಂಚೆ ಅವರ ಈ ರಚನೆಯನ್ನು ಒಮ್ಮೆ ಮನನ ಮಾಡಿಕೊಳ್ಳಬೇಕು. ದೇವರನ್ನು ಏನು ಬೇಡ
ಬೇಕು ಎಂಬುದಕ್ಕೆ ದೃಷ್ಠಿ ನಿನ್ನ ಪಾದದಲ್ಲಿ ನೆಡೋಹಾಂಗೆ ರಚನೆ ತಿಳಿಸುತ್ತದೆ. ಪುರಂದರದಾಸರು ಸುಮಾರು ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ
ಕೀರ್ತನೆಗಳನ್ನು ರಚನೆ ಮಾಡಿದ್ದಾರೆ. ಆದರೆ, ನಮಗೆ ಸಿಕ್ಕಿರುವುದು ಕೆಲವೇ ಸಾವಿರ ಮಾತ್ರ. ಇದರ ಕುರಿತು ಅನೇಕ ಗೊಂದಲಗಳಿತ್ತು. ಆದರೆ, ಭಗವಂತನ ಅನುಗ್ರಹ ಆದವರಿಗೆ ಎಲ್ಲಾ ಸಾಧ್ಯವಾಗುತ್ತದೆ ಎಂದು ಶಂಕರ ಶಾನುಭೋಗ್ ಹೇಳಿದರು.

ಭಕ್ತಿಯ ಜತೆಗೆ ಸಾಮಾಜಿಕ ಕಳಕಳಿ: ಪುರಂದರದಾಸರ ರಚನೆಗಳಲ್ಲಿ ಕೇವಲ ಭಕ್ತಿ ಮಾತ್ರವಲ್ಲ, ಸಾಮಾಜಿಕ ಕಳಕಳಿಯ ಕಾವ್ಯದ ಕಿರಣಗಳು ಸಿಗುತ್ತದೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ, ವರವಪಡೆದವರಂತೆ ಕಾಣಿರೊ. ಹರಿಯ ಕರುಣದೊಳಾದ ಭಾಗ್ಯವ, ಹರಿ ಸಮರ್ಪಣೆ ಮಾಡಿ ಬದುಕಿರೊ’ ರಚನೆಯಲ್ಲಿ ಸಮಾಜಮುಖಿ ಚಿಂತನೆ ಕಾಣುತ್ತದೆ. ಈ ರಚನೆಯನ್ನು ಕರ್ನಾಟಕ ಸಂಗೀತದ ಪ್ರಾರಂಭಿಕ ಶಿಕ್ಷಣದಲ್ಲಿ ಹೇಳಿಕೊಡಲಾಗುತ್ತದೆ. ನಾವು ಮಾಡುವ ಪ್ರತಿ ಸಂಪಾದನೆ ಕೂಡ ಭಗವಂತನ ಕರುಣೆ. ಅದನ್ನು ಹಿಂತಿರುಗಿಸಬೇಕು ಎಂದು ಇದರಲ್ಲಿ ತಿಳಿಸುತ್ತಾರೆ.

ಈ  ಪ್ರಪಂಚವೇ ಭಗವಂತನ ವಿರಾಟ್ ಸ್ವರೂಪ ಎಂದು ತಿಳಿ ಹೇಳುತ್ತಾರೆ. ಅಗತ್ಯವಿದ್ದವರಿಗೆ ಧಾನ ಧರ್ಮಗಳನ್ನು ಮಾಡುವುದರ ಮೂಲಕ ಭಗ ವಂತನನ್ನು ಕಾಣ ಬಹುದು ಎಂದು ನಾನು ತಿಳಿದಿದ್ದೇನೆ. ಪುರಂದರದಾಸರು ಅನೇಕ ಊಗಾಭೋಗಗಳನ್ನು ರಚಿಸಿದ್ದಾರೆ. ನೂರಾರು ವೈಚಾರಿಕ ಚಿಂತನೆ ಗಳಿಂದ ಕೇಳುಗರ ಮನಸ್ಸು ಗೆದ್ದಿದ್ದಾರೆ. ಮಡಿ ಮಡಿ ಎಂದು ಹಾರಾಡಿದವರಿಗೆ ತಮ್ಮ ಕೀರ್ತನೆಗಳಿಂದಲೇ ಉತ್ತರ ನೀಡಿದ್ದಾರೆ. ಪುರಂದರದಾಸರ ಬಗ್ಗೆ ಮಾತನಾಡುತ್ತಿದ್ದರೆ ಸಮಯ ಸಾಲುವುದಿಲ್ಲ. ಪುರಂದರದಾಸರನ್ನು ನಾವು ನೆನೆಸಿಕೊಂಡರೆ ಸಾಲದು, ಅವರ ಚಿಂತನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಬೇಕು ಎಂದು ಶಂಕರ ಶಾನುಭೋಗ್ ತಿಳಿಸಿದರು.

ಸಾಹಿತ್ಯದ ಆಂತರ್ಯವನ್ನು ಶ್ರೋತೃಗಳಿಗೆ ತಲುಪಿಸಬೇಕು: ಅನೇಕ ಸಂಗೀತಗಾರರು, ಸಂಗೀತವನ್ನು ಮನರಂಜನೆಯ ಮಾಧ್ಯಮ ಮಾತ್ರ ಎಂದುಕೊಂಡು ಹಾಡುತ್ತಾರೆ ಎಂಬಂತೆ ಕೆಲವೊಮ್ಮೆ ಅನ್ನಿಸುತ್ತದೆ. ಸಂಗೀತ ಕ್ಷೇತ್ರದಲ್ಲಿ ಒಂದು ಮೂಲಭೂತ ಬದಲಾವಣೆ ಅಗತ್ಯವಿದೆ ಎಂದು ನನ್ನ ವಯಕ್ತಿಕ ಅಭಿಪ್ರಾಯ. ಮುಖ್ಯವಾಗಿ ಹಾಡುಗಳಲ್ಲಿ ದಾಸ ಸಾಹಿತ್ಯದ ಪ್ರಸ್ತುತಿ, ಸಾಹಿತ್ಯ ಪ್ರಧಾನವಾಗಬೇಕಿದೆ.

ಇಲ್ಲಿ ಗಾಯಕರು ಹೇಗೆ ಹಾಡುತ್ತಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಏನು ಹಾಡುತ್ತಾರೆ ಎಂಬುದನ್ನು ಶ್ರೋತೃಗಳು ಗಮನಿಸಬೇಕು. ಸಾಹಿತ್ಯದ ಅರ್ಥವನ್ನ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆಯೇ ಎಂದು ಗಮನಿಸಬೇಕಿದೆ. ಸಾಹಿತ್ಯದ ಆಂತರ್ಯವನ್ನ ಶ್ರೋತೃಗಳಿಗೆ ತಲುಪಿಸುವ ಜವಾಬ್ಧಾರಿ ಯನ್ನು ಕಲಾವಿದರು ನಿರ್ವಹಿಸಬೇಕಾಗಿದೆ. ಆಗ ಮಾತ್ರ ನಾವು ಪುರಂದರದಾಸರ ಆರಾಧನೆ ಮಾಡಿದ್ದು ಸಾರ್ಥಕವಾಗುತ್ತದೆ ಎಂದು ಶಂಕರ ಶಾನು ಭೋಗ್ ಅಭಿಪ್ರಾಯಪಟ್ಟರು.

***

ಕನ್ನಡ ಸಾಹಿತ್ಯ ಚರಿತ್ರೆಯ ಪ್ರಮುಖ ಕಾಲಘಟಗಳಲ್ಲಿ ದಾಸ ಸಾಹಿತ್ಯವೂ ಅತ್ಯಂತ ಪ್ರಮುಖವಾದದ್ದು. ಜನರಲ್ಲಿ ಧಾರ್ಮಿಕ ಜಾಗೃತಿಯನ್ನು
ಮೂಡಿಸುತ್ತ, ಸಮಾಜದ ಸ್ವಾಸ್ತ್ಯವನ್ನು ಕಾಪಾಡುವಲ್ಲಿ ಗಣನೀಯವಾದ ಕೊಡುಗೆಯನ್ನು ನೀಡುತ್ತಾ ಬಂದವರು ನಮ್ಮ ದಾಸರು. ಅದರಲ್ಲೂ ಹರಿದಾಸರ ಸಾಲಿನಲ್ಲಿ ಪುರಂದರದಾಸರು ವಿಶಿಷ್ಠ ಸ್ಥಾನ ಪಡೆದವರು.

– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ ಪತ್ರಿಕೆ

ಕರ್ನಾಟಕ ಶಾಸೀಯ ಸಂಗೀತದಲ್ಲಿ ಶಿಸ್ತುಬದ್ಧವಾದ ಪಠ್ಯಕ್ರಮವನ್ನು ತಂದವರು ಪುರಂದರದಾಸರು.

? ಪುರಂದರಂದರದಾಸರು ಮಾಧ್ವ ಸಂಪ್ರದಾಯ ಅರಿಸಿಕೊಂಡು, ಮೆಚ್ಚಿ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಕ್ತಿ ಪಂಥವನ್ನು
ಒಪ್ಪಿಕೊಂಡವರು.
? ಜನನ- ಮರಣದಿಂದ ಹೊರಬಂದು ಭಗವಂತನಲ್ಲಿ ಮುಕ್ತಿಯನ್ನು ಪಡೆಯುವುದೇ ನಿಜವಾದ ಸುಖಃ ಎಂದು ತಮ್ಮ ಎಲ್ಲಾ ರಚನೆಗಲ ಮೂಲಕ ನಿರಂತರವಾಗಿ  ಸಾರಿದ್ದಾರೆ.
? ದಾಸರ ವೈರಾಗ್ಯ ಎಂಥಹದ್ದು ಎಂದು ಅವರ ಊಗಾಭೋಗ ತಿಳಿಸುತ್ತದೆ.

? ಪುರಂದರದಾಸರು ಸಾಮಾಜಿಕ ಬದ್ದತೆ ಉಳ್ಳವರಾಗಿದ್ದರು. ಯಾವುದೇ ದಾಕ್ಷಿಣ್ಯವಿಲ್ಲದೆ ತಮ್ಮ ಕೀರ್ತನೆಗಳ ಮೂಲಕ ಅದನ್ನು ಹೇಳಿದ್ದಾರೆ.