Wednesday, 14th May 2025

ನೀರಾದಲ್ಲಿದೆ ರೋಗ ಗುಣಪಡಿಸುವ ಶಕ್ತಿ

Manohar Maski

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ ೧೫೬

ವಿಶ್ವವಾಣಿ ಕ್ಲಬ್‌ ಹೌಸ್‌ನಲ್ಲಿ ‘ಅಮೃತ ನೀರಾ’ ಕುರಿತ ಉಪನ್ಯಾಸದಲ್ಲಿ ಮನೋಹರ ಮಸ್ಕಿ ಮಾತು

ಬೆಂಗಳೂರು: ಸಹಜವಾಗಿ ಅತ್ಯಂತ ಅದ್ಭುತ ಮತ್ತು ಸಾವಯವ ಪೇಯವಾದ ನೀರಾದಲ್ಲಿ ಸೋಡಿಯಂ, ಪೊಟ್ಯಾಷಿಯಂ, ಮ್ಯಾಂಗನೀಸ್, ಕಾಪರ್, ಝಿಂಕ್, ಪ್ರೊಟೀನ್ ಸೇರಿದಂತೆ ಹಲವು ಖನಿಜಾಂಶಗಳನ್ನು ಒಳಗೊಂಡಿದೆ. 4 ರೀತಿಯ ವಿಟಮಿನ್, ಇನೋಸಿಟಾಲ್ ಇದೆ. ಅಸ್ತಮಾ, ಕ್ಷಯ, ಮೂಲವ್ಯಾಧಿ ಗುಣಕಾರಕ ಅಂಶಗಳಿವೆ ಎಂದು ಕರ್ನಾಟಕ ಸರಕಾರ ಗೆಜೆಟ್ ನೋಟಿಫಿ ಕೇಷನ್ ಹೊರಡಿಸಿದೆ.

ಇದುವರೆಗೂ ನೀರಾ ಕುಡಿದ ಕಾರಣ ನೆಗಡಿ- ಕೆಮ್ಮು ಬಂತು, ಶೀತವಾಯಿತು ಯಾರೂ ಹೇಳಿಯೇ ಇಲ್ಲ. ನೀರಾ ಇಳಿಸುವುದರಿಂದ ಗ್ರಾಹಕನ ಕೈ ಸೇರವವರೆಗೆ ಎಲ್ಲಿಯೂ ರಾಸಾ ಯನಿಕ ಬೆರೆಸುವುದೇ ಇಲ್ಲ…. ನೀರಾ ಕುರಿತು ವಿಧಾನಪರಿಷತ್ ಮಾಜಿ ಸದಸ್ಯ, ಮಲೆ ನಾಡು ನಟ್ಸ್ ಅಂಡ್ ಸ್ಪೈಸ್ ರೈತ ಉತ್ಪಾದಕ ಕಂಪನಿ ಸಂಸ್ಥಾಪಕ ಅಧ್ಯಕ್ಷ ಮನೋ ಹರ ಮಸ್ಕಿ ಅವರ ಅಭಿಪ್ರಾಯವಿದು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬುಧವಾರ ರೈತರು ಮರೆತ ಅಮೃತ- ನೀರಾ ಕುರಿತು ಉಪನ್ಯಾಸದಲ್ಲಿ ಅವರು ಹೇಳಿದ್ದಿಷ್ಟು.. ದೇಶ ದಲ್ಲೇ ಅತ್ಯಂತ ಹೆಚ್ಚು ತೆಂಗು ಬೆಳೆಯುವ 2ನೇ ಸ್ಥಾನದಲ್ಲಿ ಕರ್ನಾಟಕ ಇದೆ. ಏಷ್ಯಾದಲ್ಲೇ ತುಮಕೂರು ಜಿಲ್ಲೆಯೂ ಗುರುತಿಸಿ ಕೊಂಡಿದೆ. ಆಯುರ್ವೇದಲ್ಲಿ ನೀರಾ ಕುರಿತ ಉಲ್ಲೇಖವಿದೆ. 2001ರಲ್ಲಿ ಪ್ರೊ.ಎಂಡಿಎನ್ ನೇತೃತ್ವದಲ್ಲಿ ಚಳವಳಿ ನಡೆದು, ಅ.8ರಂದು ಗೋಲಿಬಾರ್‌ನಿಂದ ರೈತರ ಬಲಿದಾನ ವಾದರೂ ನ್ಯಾಯ ಸಿಗಲಿಲ್ಲ. ಕೆಲವರು ಕದ್ದು ಮುಚ್ಚಿ ನೀರಾ ಮಾರುತ್ತಿದ್ದರೆ, ಆಯು ರ್ವೇದ ವೈದ್ಯರ ಸಲಹೆ ಮೇರೆಗೆ ಕೆಲವರು ಕುಡಿಯುತ್ತಿದ್ದರು.

ನೀರಾ ಕುಡಿಸಲು ಹೋಗಿದ್ದೆ: ಕೇರಳದಲ್ಲಿ ನೀರಾ ಮಾರಾಟವಾಗುತ್ತಿದ್ದು, ಅಲ್ಲಿನ ಅಬಕಾರಿ ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿದೆ. ಆನಂತರ ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಅಲ್ಲಿನ ಬಗ್ಗೆ ಚರ್ಚಿಸಿದೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭ ದಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ನೀರಾ ಕುಡಿಸಲು ಹೋಗಿದ್ದೆ. ಆಗ ಸಿದ್ದರಾಮಯ್ಯ, ಏನ್ರೀ ವಿಧಾನ ಸೌಧಕ್ಕೆ ನೀರಾ ತರ‍್ತೀರಾ? ಎಂದು ಬಯ್ದರು.

ಅವರಿಗೆ ವಸ್ತುಸ್ಥಿತಿ ವಿವರಿಸಿದಾಗ, ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು. ಅಲ್ಲದೇ, ಅಂದಿನ ಹೋರಾಟದ ಸಂದರ್ಭದಲ್ಲಿ ವಿಶ್ವೇಶ್ವರ ಭಟ್ ಅವರು ಸೇರಿದಂತೆ ಪ್ರಮುಖ ದಿನಪತ್ರಿಕೆಗಳ ಸಂಪಾದಕರಿಗೂ ನೀರಾ ಕುಡಿಸಿದೆ. ನೀರಾ ಮಹತ್ವ ಕುರಿತಂತೆ ಇತ್ತೀಚೆಗೆ ‘ವಿಶ್ವವಾಣಿ’ಯ ಮುಖಪುಟದಲ್ಲಿ 4 ದಿನ ಸರಣಿ ಲೇಖನವೂ ಪ್ರಕಟವಾಯಿತು.

ನೀರಾ ಕಾಯ್ದೆ: 2016ರಲ್ಲಿ ನೀರಾ ಕಾಯ್ದೆ ತರುವುದಾಗಿ ಸಿದ್ದರಾಮಯ್ಯ ಹೇಳಿದರಾದರೂ, 2017ರಲ್ಲಿ ಅಬಕಾರಿ ನಿಯಮಕ್ಕೆ ತಿದ್ದುಪಡಿಯಾಗಿ ನೀರಾಗೆ ಅನುಮತಿ ಸಿಕ್ಕಿತು. ಹಲವು ಪರಿಶ್ರಮದ ಫಲವಾಗಿ ಮಲೆನಾಡು ನಟ್ಸ್ ಅಂಡ್ ಸ್ಪೈಸ್ ರೈತ ಉತ್ಪಾದಕ
ಕಂಪನಿ ಸ್ಥಾಪನೆಯಲ್ಲಿ ಹಲವು ಸಂಸ್ಥೆಗಳು ನಮಗೆ ಸಹಾಯ ಮಾಡಿದ್ದನ್ನು ಮರೆಯುವಂತಿಲ್ಲ. 1 ವರ್ಷದಲ್ಲೇ 19 ಲಕ್ಷ ರು.ಗಳ ಪರಿಷ್ಕರಣಾ ಯಂತ್ರವನ್ನೂ ತಂದೆವು. ಆದರೆ, ಕರೋನಾ ಪರಿಣಾಮದಿಂದ ಮೊದಲ ವರ್ಷ 6 ತಿಂಗಳು ಚಟುವಟಿಕೆಯೇ ಇರಲಿಲ್ಲ.

ನೀರಾದಿಂದ ರೈತರಿಗೆ ವಾರ್ಷಿಕ 1 ಮರದಿಂದ ಸುಮಾರು 8 ಸಾವಿರ ರು. ದೊರೆತರೆ, ಪ್ರತಿದಿನ 2 ಬಾರಿ ಮರ ಹತ್ತುವವರು ಗರಿಷ್ಠ 56 ಸಾವಿರ ರು. ದುಡಿಯುತ್ತಿದ್ದಾರೆ. ವ್ಯಕ್ತಿಗತವಾಗಿ ರೈತರು ನೀರಾ ಇಳಿಸುವುದು ಕಾನೂನು ಬಾಹಿರ. ಸಿಪಿಸಿಆರ್‌ಐನ ವಿಶೇಷ ಫ್ಲ್ಯಾಸ್ಕ್ ಮೂಲಕ ನೀರಾ ಇಳಿಸಬೇಕು. ಗ್ರಾಹಕರಿಗೆ ಮಾರಾಟ ಮಾಡುವುದೇ ಸವಾಲಾಗಿತ್ತು. ವಿದೇಶದಿಂದ ಯಂತ್ರ ಆಮದು ಮಾಡಿಕೊಂಡು, ವಿಶೇಷ ಕೋಲ್ಡ್ ಚೈನ್ ನಿರ್ಮಿಸಿ, ಲಾಲ್‌ಬಾಗ್‌ನಲ್ಲಿ ಮಾರಾಟ ಕೇಂದ್ರ ಸ್ಥಾಪಿಸಿದ್ದೇವೆ. ಜಯದೇವ ಹೃದ್ರೋಗ ಸಂಸ್ಥೆಯಲ್ಲಿ 2ನೇ ಘಟಕ, ಸಿಟಿ ಸಿವಿಲ್ ಕೋರ್ಟ್, ಬಸವನಗುಡಿಯ ಮರಾಠಾ ಹಾಸ್ಟೆಲ್ ಎದುರು ಸೇರಿ ಹಲವು ಜಿಲ್ಲೆಗಳಲ್ಲಿ ಕೇಂದ್ರ ಸ್ಥಾಪಿಸಲಾಗಿದೆ.

***

ಮೊದಲ ಬಾರಿಗೇ ೬ ಲೋಟ ಕುಡಿದೆ

ಕಬ್ಬಿನ ಬೆಲ್ಲಕ್ಕಿಂತ ನೀರಾ ಬೆಲ್ಲ ಅತ್ಯಂತ ಸಿಹಿ ಮತ್ತು ಸ್ವಾದಿಷ್ಟವಾಗಿರುತ್ತದೆ. ಬಡತನ ನಿರ್ಮೂಲನೆಗೆ ಇದು ಹಾದಿ. ಇದರಿಂದ ಕೋಟಿಗಟ್ಟಲೆ ಹಣ ಸಂಪಾದಿಸಬಹುದು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. 2020ರ ಫೆಬ್ರವರಿಯಲ್ಲಿ ನಾನು ಮೊದಲ ಬಾರಿ 6 ಲೋಟ ನೀರಾ ಕುಡಿದೆ. ನಮ್ಮ ಮನೆ ಬಳಿಯಿರುವ ಕೇಂದ್ರದಲ್ಲಿ ಈಗಲೂ ತಿಂಗಳಿಗೆ 10-12 ಬಾರಿ ಕುಡಿಯುತ್ತೇನೆ. ಇದೊಂದು ಅದ್ಭುತ ಡ್ರಿಂಕ್ ಆಗಿದೆ ಎಂದು ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದ್ದಾರೆ. 2001ರಲ್ಲಿ ಗಾಂಧಿಭವನದಲ್ಲಿ ನೀರಾ ಚಳವಳಿಗೆ ನಾಂದಿ ಹಾಡಲಾಯಿತು. ಗೋಲಿಬಾರ್ ನಡೆದು ವಿಠಲೇನಹಳ್ಳಿಯಲ್ಲಿ ತಮ್ಮಯ್ಯ ಮತ್ತು ಪುಟ್ಟ ನಂಜಯ್ಯ ಬಲಿಯಾದರು. ಎಚ್.ಡಿ.ದೇವೇಗೌಡರು ವಿಠಲೇನಹಳ್ಳಿಯಿಂದ ವಿಧಾನಸೌಧದವರೆಗೂ ಪಾದಯಾತ್ರೆ ಮಾಡಿದರು. ಸಿ.ಪಿ.ಯೋಗೀಶ್ವರ್ ಚಳವಳಿಯಲ್ಲಿದ್ದರು ಎಂಬುದನ್ನು ನೆನಪಿಸಿಕೊಂಡರು.

ನೀರಾಗೆ ಐತಿಹಾಸಿಕ ಹಿನ್ನೆಲೆ

ಚೋಳ ಮಹಾರಾಜರು ತಮ್ಮ ಸೈನಿಕರು ಯುದ್ಧಕ್ಕೆ ಹೊರಡುವ ಮುಂಚೆ ನೀರಾ ಸೇವಿಸಿ ಹೋಗಬೇಕೆಂದು ಆದೇಶ ನೀಡಿದ್ದರು. ಕಾಮಾಲೆ ರೋಗಿಗಳು, ಬಾಣಂತಿಯರಿಗೆ ನೀರಾ ಉತ್ತಮ ಔಷಧವಾಗಿತ್ತು. ಅಲ್ಲದೆ, ಅಡುಗೆಮನೆಯಲ್ಲೂ ಇದರ ಸ್ಥಾನವಿದ್ದು, ಇಡ್ಲಿ, ದೋಸೆಯಲ್ಲೂ ಬಳಕೆಯಾಗುತ್ತಿತ್ತು. ಆಹಾರ ಸಂಸ್ಕೃತಿಗೆ ಸೇರಿದ ನೀರಾ, ಸ್ವಾತಂತ್ರ್ಯಾನಂತರದ ಲಿಕ್ಕರ್ ಲಾಬಿಗೆ ಅಡ್ಡಿಯುಂಟು ಮಾಡುವುದೆಂಬ ಭಾವಿಸಿ ಎಲ್ಲಾ ರಾಜ್ಯಗಳಿಂದಲೂ ನಿಷೇಧವಾಯಿತು.

ಕೆಲವು ಕಡೆಗಳಲ್ಲಿ ನಿರ್ದಿಷ್ಟ ರೈತ ಗುಂಪುಗಳು ಬೆಳಿಗ್ಗೆ 10 ಗಂಟೆಯವರೆಗೂ ಮಾರಾಟ ಮಾಡುತ್ತಿದ್ದುದ್ದನ್ನು ಹೊರತುಪಡಿಸಿ ಈ ನಿಷೇಧ ಜಾರಿಯಲ್ಲಿತ್ತು. ಸರಕಾರದ ಕಾನೂನಿನ ನಿಷೇಧದಿಂದಾಗಿ ನೀರಾ ನಮ್ಮ ಸ್ಮೃತಿ ಪಟಲದಿಂದ ತೆಗೆಯಿತು. ಮರೆಯಲಿಲ್ಲ, ಸರಕಾರ ಮರೆಯಿಸಿತು ಎಂದು ಮನೋಹರ ಮಸ್ಕಿ ಹೇಳಿದರು.

ನೀರಾ ಅಂಬಾಸಿಡರ್ ಗಾಂಧೀಜಿ
ಇಂಡೋನೇಷ್ಯಾ ಕೊಕಾನಟ್ ಡೆವಲಪ್‌ಮೆಂಟ್ ಬೋರ್ಡ್‌ನ ಬ್ರ್ಯಾಂಡ್ ಅಂಬಾಸಿಡರ್ ಯಾರೆಂದರೆ ಗಾಂಧೀಜಿ. 1935ರಲ್ಲಿ ಗಾಂಧೀಜಿ ಹರಿಜನ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಲೇಖನವನ್ನು ಇಂಡೋನೇಷಾ ನೀರಾ ಸಕ್ಕರೆ ಮಾರಾಟಕ್ಕೆ ಬಳಕೆ ಮಾಡಿಕೊಳ್ಳು ತ್ತಿದೆ.

ವೆಲ್‌ಕಂ ಡ್ರಿಂಕ್ ನೀರಾ
ನೀರಾ ಆರ್ಥಿಕ ಲಾಭದೊಂದಿಗೆ ಆರೋಗ್ಯವನ್ನೂ ನೀಡಲಿದೆ. 2 ವರ್ಷದ ಹಿಂದೆ ಡಾ. ಎಂ.ಮೋಹನ ಆಳ್ವ ಅವರ ಮಗನ ಮದುವೆ ಕಾರ್ಯಕ್ರಮ ಸೇರಿದಂತೆ ಇತ್ತೀಚೆಗೆ ಪಬ್ಲಿಕ್ ಟಿವಿ ರಂಗನಾಥ್ ಅವರ ಮಗಳ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ವೆಲ್‌ಕಂ ಡ್ರಿಂಕ್ ಆಗಿ ನೀರಾ ಬಳಕೆಯಾಗಿದೆ.

ನೀರಾ ಬೆಲ್ಲ ಮಾರಾಟ
ನಮ್ಮ ಸಂಸ್ಥೆಯಿಂದ 1 ಕೆಜಿ ನೀರಾ ಬೆಲ್ಲಕ್ಕೆ 800 ರು. ನಿಗದಿ ಮಾಡಿದ್ದೇವೆ. ಬೇರೆಡೆ 800 ರು.ಗಿಂತ ಕಡಿಮೆ ದರಕ್ಕೆ ಮಾರಾಟ ವಾಗುತ್ತಿದ್ದರೆ, ಉತ್ಪನ್ನದ ಬಗ್ಗೆ ಅನುಮಾನ ಪಡಲೇಬೇಕು. ಬೆಲ್ಲಕ್ಕೆ  neera.com ನಲ್ಲಿ ಬುಕ್ ಮಾಡಬಹುದು. ಅಥವಾ ನಮ್ಮ
ಶಾಖೆಗಳಲ್ಲಿ ನೇರವಾಗಿ ಖರೀದಿಸಬಹುದಾಗಿದೆ. ಬೆಂಗಳೂರಿಗರು ಮೊ.೯೫ ೩೫೭೯೯೯೫೫, ಕರ್ನಾಟಕದ ಇತರ ಕಡೆಗಳವರು ಮೊ.೬೩೬೦೧ ೩೭೦೯೦, ಹೊರರಾಜ್ಯ ಮೊ.೭೦೧೯೧ ೩೦೨೦೮ ಸಂಪರ್ಕಿಸಬಹುದು.

***

೨೭-೨೮ ವರ್ಷಗಳಿಂದ ಸ್ನೇಹಿತನಾಗಿರುವ ಮನೋಹರ ಮಸ್ಕಿ ಅವರನ್ನು ನಾನು ತೀರಾ ಸನಿಹದಿಂದ ಬಲ್ಲೆ. ವಿಧಾನ ಪರಿಷತ್ ಸದಸ್ಯರಾಗಿ, ಎಬಿವಿಪಿ ಪೂರ್ಣಾವಧಿ ಕಾರ್ಯಕರ್ತನಾಗಿ, ದೇಶದ ಹಲವು ಪ್ರಥಮಗಳ ಹೆಗ್ಗಳಿಕೆ ಹೊಂದಿರುವ ಸುಕೋ ಬ್ಯಾಂಕ್ ಸ್ಥಾಪಕರಾಗಿ ಇವರು ಹೆಸರು ಮಾಡಿದ್ದಾರೆ.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು