ವಿಶ್ವವಾಣಿ ಕ್ಲಬ್‌ಹೌಸ್‌ನ ಕೆರೆಗಳ ಪುನರುತ್ಥಾನ ಕುರಿತ ಉಪನ್ಯಾಸದಲ್ಲಿ ಆನಂದ ಮಲ್ಲಿಗವಾಡ
ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ಬಯಲು ಸೀಮೆಯಲ್ಲಿ ನೀರಿನ ಬೇಡಿಕೆಗಳನ್ನು ಬಹುತೇಕ ಪೂರೈಸುತ್ತಿದ್ದುದು ಕೆರೆಗಳು. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಕೆರೆ ಗಳೇ ಇಲ್ಲವಾಗುತ್ತಿವೆ. ಬಯಲು ಸೀಮೆಯಲ್ಲಿ ಕೆರೆಗಳೇ ಇಲ್ಲವಾದರೆ…? ನೀರಿಗಾಗಿ ಜನ ಯಾವ ರೀತಿ ಪರದಾಡಬೇಕಾಗುತ್ತದೆ ಎಂಬುದನ್ನು ಒಮ್ಮೆ ಪರಿಸ್ಥಿತಿಯ ಬಗ್ಗೆ ಆಲೋ ಚಿಸಿ. ಇಂತಹ ಕೆರೆಗಳ ಬಗ್ಗೆ, ಅವುಗಳ ಸ್ಥಿತಿಗಳ ಬಗ್ಗೆ ಆನಂದ ಮಲ್ಲಿಗವಾಡ ಅವರು ಮಾತನಾಡಿದ್ದಾರೆ.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಕೆರೆಗಳ ಪುನರುತ್ಥಾನ’ ಕುರಿತ ಕಾರ್ಯಕ್ರಮದಲ್ಲಿ ಅವರು ಅರಿವಿನ ಉಪನ್ಯಾಸ ನೀಡಿದರು. ನಾನು ಕೆರೆಗಳನ್ನು ‘ಲಂಗ್ಸ್ ಆಫ್ ದಿ ಅರ್ಥ್’ ಅರ್ಥಾತ್ ಭೂಮಿಯ ಶ್ವಾಸಕೋಶ ಎಂದು ಕರೆಯುತ್ತೇನೆ. ಏಕೆಂದರೆ, ಈ ಭೂಮಿಯ ಉಳಿವಿನಲ್ಲಿ ಕೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಕೆರೆಗಳಲ್ಲಿ ಮೂರು ವಿಂಗಡಣೆ ಇವೆ. ಮೊದಲನೆಯದಾಗಿ ನಗರದ ಕೆರೆಗಳು. ನಗರ ಅಭಿವೃದ್ಧಿಯ ಹೆಸರಿನಲ್ಲಿ ಈ ಕೆರೆಗಳು ಒತ್ತು ವರಿಯಾಗಿವೆ. ಎರಡನೆಯದ್ದು ಅರೆ ನಗರದ ಕೆರೆಗಳು. ಲೇಕ್ ವ್ಯೂ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಿಂದಾಗಿ ಇವು ಕೂಡ ಹಾಳಾಗುತ್ತಿವೆ. ಮೂರನೆಯದ್ದು ಗ್ರಾಮೀಣ ಕೆರೆಗಳು. ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದಿಂದಾಗಿ ಇವು ಕೂಡ ಹಾನಿಗೊಳಗಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
1966ರಲ್ಲಿ ನಮ್ಮ ಬೆಂಗಳೂರಿನ ಪ್ರತಿಯೊಂದು ಮನೆಯಲ್ಲೂ ಒಂದು ಬಾವಿ ಇತ್ತು. ವಾಟರ್ ಪ್ಯೂರಿಫೈರ್‌ಗಳಲ್ಲಿ ಬರುವಂಥ ಶುದ್ಧ ನೀರು ಈ ಬಾವಿಗಳಲ್ಲಿ ಲಭ್ಯವಾಗುತ್ತಿತ್ತು. ಆದರೆ, ಇದು ಬಾವಿಗಳೇ ಇಲ್ಲವಾಗಿದೆ. ಇನ್ನು ಕೆರೆಗಳ ಪರಿಸ್ಥಿತಿ ನೋಡಿದರೆ ಮುಂದಿನ ಪೀಳಿಗೆಯ ಬಗ್ಗೆ ಚಿಂತೆಯಾಗುತ್ತದೆ. 2015ರಲ್ಲಿ ಪತ್ರಿಕೆಯೊಂದರಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಬಿಟ್ಟರೆ, 2025 ರಲ್ಲಿ ಬೆಂಗಳೂರು ಶೂನ್ಯ ನೀರಿನ ನಗರವಾಗುತ್ತದೆ. 2030ರ ವೇಳೆಗೆ 31 ನಗರಗಳು ಶೂನ್ಯ ನೀರಿನ ನಗರಗಳು ಸೃಷ್ಟಿಯಾಗುತ್ತವೆ ಎಂಬ ವರದಿ ಪ್ರಕಟವಾಗಿತ್ತು ಎಂದು ನೆನಪಿಸಿಕೊಂಡರು.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ತಾಯಿಯ ಮಾತು ಉಳಿಸಲು ಸುಮಾರು 850 ಕೆರೆ ಕಟ್ಟಿದ್ದರು. ಅದರಿಂದ ಬೆಂಗಳೂರಿ ನಲ್ಲಿ ಅಂತರ್ಜಲ ಚೆನ್ನಾಗಿತ್ತು. ಆದರೆ, ಆ ಕೆರೆಗಳೇ ಇಲ್ಲವಾದ ಮೇಲೆ ಜನರ ಪರಿಸ್ಥಿತಿ ಏನಾಗಬಹುದು ಎಂಬ ಚಿಂತೆ ಆವರಿಸಿತು. ಹೀಗಾಗಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಾನು ಕೆರೆ ಪುನರೋತ್ಥಾನದಲ್ಲಿ ಆಸಕ್ತಿ ಮೂಡಿ 2017ರಲ್ಲಿ ಒಂದು ಕೆರೆ ಅಭಿವೃದ್ಧಿ ಮಾಡಬೇಕೆಂದು ನಿರ್ಧರಿಸಿದೆ. ಅದರಂತೆ ಸುಮಾರು ೩೬ ಎಕರೆ ವ್ಯಾಪ್ತಿಯ ಕಲಸನಹಳ್ಳಿ ಕೆರೆಯನ್ನು ಆಯ್ಕೆ ಮಾಡಿ ಕೊಂಡೆ.
ರಾಜಕಾಲುವೆ ಮುಚ್ಚಿದ್ದರಿಂದ, ನೀರಿನ ಒಳ ಹರಿವಿಗೆ ಜಾಗವಿಲ್ಲದೇ ಇರುವುದು ಹಾಗೂ ಮೋರಿ ನೀರನ್ನು ಕೆರೆಗೆ ಬಿಟ್ಟ ಕಾರಣ ಕೆರೆ ಹಾಳಾಗಿತ್ತು. ಇದರ ಪುನರೋತ್ಥಾನಕ್ಕಾಗಿ ಜನಾಭಿಪ್ರಾಯ ಮೂಡಿಸುತ್ತಾ ಬಂದೆ. ನಂತರ ಆ ಕುರಿತ ಪ್ರಸ್ತಾವನೆಯನ್ನು
ನಾನು ಕೆಲ ಮಾಡುತ್ತಿದ್ದ ಕಂಪನಿ ಮತ್ತು ಸರಕಾರಕ್ಕೆ ನೀಡಿದೆ. ಆದರೆ, ಯಾರು ನಂಬಲಿಲ್ಲ. ಆದರೂ 2017ರಲ್ಲಿ ಸರ್ವೇ
ಮಾಡಿಸಿ, ತಕ್ಷಣ ಕೆಲಸ ಪ್ರಾರಂಭ ಮಾಡಿದೆ. 12 ಎಕರೆ ಒತ್ತುವರಿ ತೆರವು ಮಾಡಿಸಿದೆ. ಕೆಲಸ ಮುಗಿದ 9 ದಿನದಲ್ಲಿ 15 ರಿಂದ 16 ಅಡಿ ನೀರು ತುಂಬಿತ್ತು. ಹೀಗೆ ಪರಸ್ಪರ ಸಂಪರ್ಕ ಹೊಂದಿರುವ ಕೆರೆಗಳನ್ನು ಪುನರೊತ್ಥಾನ ಮಾಡಲು ಪ್ರಾರಂಭಿಸಿದ್ದೇನೆ. ಕೆರೆಗಳ ಪುನರುತ್ಥಾನವೇ ನಾವು ಭವಿಷ್ಯಕ್ಕೆ ನೀಡುವ ಪ್ರಧಾನ ಕೊಡುಗೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಕೆರೆ: ಸದ್ಯ ಅಯೋಧ್ಯೆಯಲ್ಲಿ 108 ಕುಂಡ ಮಾಡುವ ಅವಕಾಶ ಸಿಕ್ಕಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರ ಜತೆ ಚರ್ಚೆ ಮಾಡಲಾಗಿದೆ. ಈಗಾಗಲೇ ೮ ಕುಂಡ ನಿರ್ಮಾಣದ ಕಾರ್ಯ ಆರಂಭಿಸಲಾಗಿದೆ. ಪ್ರಾಚೀನ, ಸಂಪೂರ್ಣವಾಗಿ ಸತ್ತಿದ್ದ ನದಿಯನ್ನು ಸುಮಾರು 4.6 ಕಿ.ಮೀ ತೆಗೆದು ಹರಿಯುವ ಕೆಲಸ ಮಾಡಲಾಗುತ್ತಿದೆ.
ಬರ್ಡ್ ಸೆಂಚುರಿ ನಿರ್ಮಾಣದ ಜತೆಗೆ ಮೊರಾದಾಬಾದ್‌ನಲ್ಲಿ ಮಧುಸೂಧನ್ ಎಂಬ ಕನ್ನಡಿಗ ಐಎಎಸ್ ಅಧಿಕಾರಿಯೊಂದಿಗೆ 13 ಎಕರೆ ಕೆರೆ ಪುನರೋತ್ಥಾನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭೂಮಿ ಪೂಜೆ ಮಾಡಿದ್ದಾರೆ. ಮೇಘಾಲಯ ಸರಕಾರದ ತಾಂತ್ರಿಕ ಸಲಹೆಗಾರನಾಗಿ ನೇಮಕಗೊಂಡಿದ್ದೇನೆ ಎಂದು ತಮ್ಮ ಕುರಿತಾಗಿ ವಿವರಣೆ ನೀಡಿದರು.
*
ರಾಜ್ಯದ ಬಹುತೇಕ ಕಡೆ ಅಂತರ್ಜಲ ಮಟ್ಟ 700 ರಿಂದ 1000 ಅಡಿವರೆಗೆ ಕುಸಿದಿದೆ
ಕರೋನಾ ಸಂದರ್ಭದಲ್ಲಿ ನಾಲ್ಕು ಕೆರೆಗಳನ್ನು ಅಭಿವೃದ್ಧಿ ಮಾಡಿದ್ದೇನೆ
ದೇಶದ 21 ನಗರಗಳಲ್ಲಿ ಸೇವ್ ಇಂಡಿಯಾ- ಒನ್ ಲೇಕ್ ಅಟ್ ಎ ಟೈಮ್ ಅಭಿಯಾನ ಪ್ರಾರಂಭ.
ನಿಸರ್ಗಕ್ಕೆ ನೀವು ಏನು ನೀಡುತ್ತೀರೋ ಅದೇ ನಿಮಗೆ ಮರಳಿ ಸಿಗುತ್ತದೆ.
ಕರೆಂಟ್ ಇಲ್ಲದೆ ನೀರು ನೀಡಲು ಸಾಧ್ಯವಾದರೆ ಅದು ಕೆರೆಗಳಿಂದ ಮಾತ್ರ.
**
ಇದುವರೆಗೆ 18 ಕೆರೆಗಳ ಪುನರುತ್ಥಾನ ಕೆಲಸ ಮುಗಿಸಿದ್ದೇನೆ. 7 ಕೆರೆಗಳ ಕೆಲಸ ಮುಂದುವರಿಯುತ್ತಿದೆ. 2025ಕ್ಕೆ 30 ಕೆರೆಗಳ ಪುನರೋತ್ಥಾನ ಮಾಡುವುದಾಗಿ ಸಂಕಲ್ಪ ತೊಟ್ಟಿದ್ದೆ. ಆದರೆ, 2024ಕ್ಕೇ ಈ ಕೆಲಸ ಪೂರೈಸುತ್ತೇನೆ ಎಂಬ ವಿಶ್ವಾಸವಿದೆ.
– ಆನಂದ ಮಲ್ಲಿಗವಾಡ
ಕೆರೆಗಳು ಮನುಷ್ಯನ ಸಂಸ್ಕೃತಿಯ ಕೂಡು ಕೇಂದ್ರ. ಕೆರೆ ಇದ್ದರೆ ಸಂಸ್ಕೃತಿ, ಸಮಾಜ ಇರಲು ಸಾಧ್ಯ. ಕೆರೆ ಬಿಟ್ಟು ಜನ ಜೀವನ
ಸಾಧ್ಯವಿಲ್ಲ. ಮನುಷ್ಯನ ದುರಾಸೆಯಿಂದಾಗಿ ಕೆರೆ ನಾಶ ಮಾಡಿ ಬಡಾವಣೆ ಕಟ್ಟುವ ಹೀನ ಪ್ರವೃತ್ತಿ ಕಾಣುತ್ತಿದ್ದೇವೆ. ಬೆಂಗಳೂರಿ ನಲ್ಲಿ 700 ಕೆರೆಗಳಿದ್ದವು ಎಂಬುದಕ್ಕೆ ದಾಖಲೆ ಇದೆ. ಅದನ್ನು ನೋಡಿಕೊಳ್ಳುವುದಕ್ಕೆ ಅರಣ್ಯ ಇಲಾಖೆ ಇದೆ. ಆದರೂ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಕೆರೆಗಳ ವಿಚಾರದಲ್ಲಿ ಆನಂದ್ ಅವರ ಕೆಲಸ ನೋಡಿದರೆ, ಕಾರ್ಮೋಡದಲ್ಲೂ ಕೋಲ್ಮಿಂಚು ಕಾಣುವ ಭರವಸೆ ಮೂಡುತ್ತದೆ. ವಿಶ್ವವಾಣಿ ಪತ್ರಿಕೆ ವತಿಯಿಂದ ಒಂದು ಕೆರೆ ದತ್ತು ತೆಗೆದುಕೊಳ್ಳುತ್ತಿದ್ದೇವೆ. ಸರಕಾರದ ವತಿ ಯಿಂದ ಅಂತಿಮ ನಿಯಮಾವಳಿಗಳು ನಡೆಯುತ್ತಿವೆ. ಅದಾದ ನಂತರ ಆ ಕೆರೆಯ ಪುನರೋತ್ಥಾನ ಕಾರ್ಯದಲ್ಲಿ ತೊಡಗಿಸಿ ಕೊಳ್ಳಲಿದ್ದೇವೆ.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ
ಸರಕಾರವೇ ಬೆಂಗಳೂರಿನಲ್ಲಿ ಧರ್ಮಾಂಬುದಿ ಕೆರೆ, ಸಂಪಂಗಿಕೆರೆ, ಕೋರಮಂಗಲ ಕರೆ, ಕಾರಂಜಿ ಕೆರೆ, ಮಿಲರ್ಸ್ ಕೆರೆ ಸೇರಿದಂತೆ ಸುಮಾರು 23 ಕೆರೆಗಳನ್ನು ಮುಚ್ಚಿದೆ. ಅ ಜಾಗದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಮಾಡಲಾಗಿದೆ. ನಮಗಿರುವ ತೆವಲಿಗಾಗಿ ಕೆರೆಗಳನ್ನು ನಾಶ ಮಾಡಿದ್ದೇವೆ. ಇದು ದೊಡ್ಡ ಅನಾಹುತ. ಭವಿಷ್ಯದ ಮಕ್ಕಳಿಗೆ ಮಾಡುತ್ತಿರುವ ದೊಡ್ಡ ಮೋಸ.
-ನಂಜನಗೂಡು ಮೋಹನ್, ಸಂಪಾದಕೀಯ ಸಲಹೆಗಾರರು, ವಿಶ್ವವಾಣಿ