ಕ್ಲಬ್ ಹೌಸ್ ಸಂವಾದ ೧೭೫
ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾಮ ಬುದ್ಧಿಮಾತು
ಬೆಂಗಳೂರು: ಮೊದಲ ದಿವಸ ನುಡಿಯುವದಾದರೆ ಓಂಕಾರ ನುಡಿಯಬೇಕು, ಝೇಂಕಾರ ನುಡಿಯಬೇಕು, ಶ್ರೀಕಾರ ನುಡಿಯಬೇಕು, ಜೈಕಾರವನ್ನು ನುಡಿಯಬೇಕು. ಅಂತಹ ಜೈಕಾರದಲ್ಲಿ ನಮ್ಮ ಬದುಕಿನ ಹೆಜ್ಜೆ ದಿಟ್ಟವಾಗಿ ಸಾಗಬೇಕು.
ಇದು ಸಂಸ್ಕೃತಿ ಚಿಂತಕ, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾಮ ಬುದ್ಧಿಮಾತು. ವಿಶ್ವವಾಣಿ ಕ್ಲಬ್ ಹೌಸ್ ಏರ್ಪಡಿಸಿದ್ದ ‘ವರುಷ ಬಂದಿತು ವರುಷ ಹೋಯಿತು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಂದಿ ನಂತೆ ಸಲಹೆ, ತಿಳಿವಳಿಕೆ, ಮಾರ್ಗದರ್ಶನದ ಮೂಲಕ ಪ್ರಾಸದ ವಾಗ್ಝರಿ ಹರಿಸಿದರು.
ಡಿವಿಜಿ, ವಿ. ಸೀತಾರಾಮಯ್ಯನವರ ಕವನ, ವೈಎಮ್ಮೆನ್ ಮೂರ್ತಿ ಅವರ ಪ್ರಸಂಗ ಮತ್ತಿತರೆ ಮಾತುಗಳ ಮೂಲಕ ಕ್ಲಬ್ಹೌಸ್ ಸದಸ್ಯರನ್ನು ಚಿಂತನೆಗೆ ಹಚ್ಚಿದರು. ಮಾತುಗಳ ನಡುವೆ ಪುಟ್ಟಮ್ಮ (ನಾಗಶ್ರೀ) ಗಾನ ಮಾಧರ್ಯ ಸಾಗಿತ್ತು. ಇಲ್ಲಿಯವರೆಗೆ ಮನುಷ್ಯನಾಗಿ ಬದುಕಿ ಬಾಳಿದ ನಾವು ಜಗತ್ತಿಗೆ ಏನು ಕೊಟ್ಟಿದ್ದೇವೆ? ಅರಿತೋ ಅರಿಯದೇ ಮಾಡಿದ ಅವಗುಣಗಳು, ಕಳೆದ ವರ್ಷದ ನಡವಳಿಕೆಗಳಲ್ಲಿ ನಮಗೆ ಇದ್ದಿದ್ದೇ ಆದರೆ ಇವನ್ನು ಸುಡಬೇಕು. ನಮ್ಮಲ್ಲಿ ಇನ್ನೊಬ್ಬರ ಬಗ್ಗೆಗಿನ ದ್ವೇಷ, ಮತ್ತೊಬ್ಬರ ಬಗ್ಗೆ ಹೇಳುವಾಗ ಅನವಶ್ಯಕ ಕ್ಲೇಶಗಳನ್ನು ಸುಡಬೇಕು.
‘ನನಗೇ ಗೊತ್ತು ಕಣಯ್ಯಾ, ಅವನಿಗೇನು ಮಾಡಬೇಕು’ ಎಂಬುದನ್ನು ಸುಡಬೇಕು. ಕರೋನಾ ಕಲಿಸಿದ ಪಾಠವನ್ನು ನಾವು ಅರ್ಥ ಮಾಡಿಕೊಂಡರೆ, ಬೇರೆ ಯಾರೂ ಮಾರ್ಗದರ್ಶಿಯಾಗಬೇಕಿಲ್ಲ. ಕಾಯಬೇಕಾದ ದೇವರೂ ಬಾಗಿಲು ಹಾಕಿಕೊಂಡು ನಿದ್ದೆ ಮಾಡಿದನಲ್ಲ. ನಿಮ್ಮ ಬದುಕು ನಿಮ್ಮ ಕೈಯಲ್ಲೇ ಇದೆ, ನಿಮ್ಮ ಜೀವನವನ್ನು ನೀವೇ ರಕ್ಷಿಸಿ ಕೊಳ್ಳಿ ಎಂದು ಕರೋನಾ ಸಂದೇಹವಿಲ್ಲದ ಸಂದೇಶ ಕೊಟ್ಟಿತು ಎಂದು ಎಚ್ಚರಿಕೆ ನೀಡಿದರು.
? ಹೊಸ ವರ್ಷದ ೨೨ರಲ್ಲಿ ೨ ಎರಡು ಇವೆ, ನಮಗೆ ಕಣ್ಣು, ಕಿವಿ, ತುಟಿ, ಕೈ, ಕಾಲು, ಶ್ವಾಸಗಳೆಲ್ಲವೂ ಎರಡು. ಆದರೆ, ವಿಶ್ವಾಸ ಒಂದೇ.
? ಆಂಗ್ಲದ ಕ್ಯಾಲೆಂಡರ್ ನವೆಂ ‘ಬರ’, ಡಿಸೆಂ ‘ಬರ’, ಜನ ‘ವರಿ’, ಫೆಬ್ರು ‘ವರಿ’, ಮಾರ್ಚ್ ಫಾಸ್ಟ್ ಯಾವಾಗ? ಏಪ್ರಿಲ್ಗೆ ಫೂಲ್ ಎಂತೇವೆ, ಕೂಲ್
ಆಗೋದು ಯಾವಾಗ?
? ಪ್ರಕೃತಿ ಒಮ್ಮೆ ಆಕಳಿಸುತ್ತೆ, ಗುಟುರು ಹಾಕುತ್ತೆ. ತಂದೆತಾಯಿ ನಮಗೆ ಎಚ್ಚರಿಕೆ ನೀಡುವಂತೆ ಎಚ್ಚರಿಕೆ ಕೊಟ್ಟಿದೆ.
? ನಾವು ಇನ್ನಾದರೂ ಸುಡುವುದಾದರೆ ಅಹಂಕಾರ, ಅಸಮಾನತೆಯನ್ನು ಸುಡಬೇಕು.
? ನಾವು ಮಲಗಿದ್ದಲ್ಲೇ ಮಲಗಿದ್ದರೆ ಮರಣ, ಕೂತ ಜಾಗದಲ್ಲೇ ಕುಕ್ಕರಿಸಿದ್ದರೆ ರೋಗ, ನಿಂತಲ್ಲೇ ನಿಂತಿದ್ದರೆ ಶಿಕ್ಷೆ, ನಡೆಯುತ್ತಲೇ ಇದ್ದರೆ ಅದು ಜೀವನ.
? ನಗದನ್ನು ಸಂಪಾದಿಸಿ, ನಗುವಿಗೆ ಅವಕಾಶ ನೀಡದೇ, ನೆಗೆದು ಬೀಳುವುದಕ್ಕೆ ಏನೆನ್ನಬೇಕು? ಸದ್ಗುಣಗಳನ್ನು ಹಂಚಿಕೊಳ್ಳಬೇಕು.
? ತಿಳಿದಂತೆ ಮಾಡು, ಏನ್ ಕಷ್ಟ ನಿನಗೆ. ತಿಳಿದಂತೆ ಮಾಡು, ನಡೆದಂತೆ ಜಾಡು. ತಿಳಿಯದಂತೆ ಮಾಡಬಾರದು. ಇನ್ನಾದರೂ ತಿಳಿದಂತೆ ಮಾಡು,
ನಡೆದಂತೆ ಜಾಡು. ಬಯಸದಿರು ಇನ್ನಾದರೂ ಮತ್ತೊಬ್ಬರಿಗೆ ಕೇಡು. ಬಯಸುವಂಥ ಸನ್ನಿವೇಶ ಬಂದರೆ ಮರೆತುಬಿಡು ಸೇಡು.
? ಕಲ್ಪ ಮಾನವರಾಗಬೇಕಾದ ನಾವು, ಅಲ್ಪ ಮಾನವರಾಗಿಯೇ ಕುಳಿತಿದ್ದೇವಲ್ಲ?
? ಕರೋನಾ ಮನುಷ್ಯನಿಗೆ ಬಂತು, ಪ್ರಕೃತಿಗೆ, ಪಚ್ಚೆ ಪೈರುಗಳಿಗೆ, ಪ್ರಾಣಿಗಳಿಗೆ ಬಂತೇ? ಅತಿಯಾಸೆಯ ಮಾನವನಿಗೆ ಬಂತು.
? ಪ್ರಕೃತಿ ನಮಗೆ ಯಾವತ್ತೂ ಕಡಿಮೆ ಮಾಡಿಲ್ಲ. ಸ್ವೀಕೃತಿ ಕಡಿಮೆ ಮಾಡಿತು.
? ನಮ್ಮ ಧೀಮಾಕೆಲ್ಲಾ ಎಷ್ಟು ಹೊತ್ತು ರೀ?
? ನೀತಿ ಸಮ್ಮೇಳನ ಬಿಟ್ಟು ಜಾತಿ ಸಮ್ಮೇಳನ, ವಿಭಜನೆ, ಭಜನೆ, ದುರಾಲೋಚನೇ ಶುರುವಾಗಿದೆಯಲ್ಲ.
***
ಮುಂದೇನು ಮತ್ತೇನು ಇಂದಿಗಾ ಮಾತೇಕೆ? ಸಂದರ್ಭ ಬರಲಿ ಬಂದಾಗ ಚಿಂತೆ ಹೊಂದಿಸುವನಾರೊ, ನಿನ್ನಾಳಲ್ಲ ಬೇರಿಹನು ಇಂದಿಗಿಂದಿನ ಬದುಕು ಮಂಕುತಿಮ್ಮ ||
– ಡಿವಿಜಿ
ಗಗನದಂಚನು ಯಾರೂ ನೋಡಿಹರೊ ಪಯಣದಲ್ಲಿ ಸುಗಮವಲ್ಲವೋ ಇಲ್ಲಿ ಈ ಸೃಷ್ಟಿ ಅರಿವು… ಗೀತೆಗಳನ್ನು ನಾಗಶ್ರೀ ಪ್ರಸ್ತುತಪಡಿಸಿದರು.
ದೇವರನ್ನು ನಂಬುತ್ತೀರಾ?
ವೈಎಮ್ಮೆನ್ ಮೂರ್ತಿ ಅವರನ್ನು ನಾನೊಮ್ಮೆ, ಮಾಮ ನೀವು ದೇವರನ್ನು ನಂಬುತ್ತೀರಾ? ಎಂದು ಕೇಳಿದ್ದೆ. ಅದಕ್ಕವರು, ಅಬ್ರಹಾಂ ಲಿಂಕನ್ಗೂ ಹೀಗೆ
ಯಾರೋ ಕೇಳಿದ್ದರಂತೆ. ಅದಕ್ಕೆ ಲಿಂಕನ್, ದೇವರಿದ್ದಾನೋ, ಇಲ್ಲವೋ ಗೊತ್ತಿಲ್ಲ. ನಾನಂತೂ ಅವನ ಪಕ್ಕದಲ್ಲೇ ಇದ್ದೇನೆ. ನಾನು ಬೆಳಿಗ್ಗೆ ನಿದ್ದೆಯಿಂದ ಕಣ್ಣು ಬಿಟ್ಟ ತಕ್ಷಣ ಅವನಿಗೊಂದು ಸೆಲ್ಯೂಟ್ ಹೊಡೆಯುತ್ತೇನೆ. ಜಗತ್ತನ್ನು ನೋಡಲು ಕಣ್ಣು ನೀಡಿರುವುದಕ್ಕೆ. ಕಾಫಿ ಕುಡಿದ ನಂತರ, ಕಾಫಿ ತಂದು ಕೊಟ್ಟ ಇಂತಹ ಸುಂದರಿಯಾದ ಮಡದಿಯ ಮೋಹನತ್ವವನ್ನು ತೋರಿಸುತ್ತಿದೆಯಲ್ಲ ಮತ್ತೊಮ್ಮೆ ಸೆಲ್ಯೂಟ್ ಹೊಡೆಯುತ್ತೇನೆ. ಮಧ್ಯಾಹ್ನ ಊಟ ಮಾಡಿದ ತಕ್ಷಣ, ಈ ವಯಸ್ಸಿನಲ್ಲಲೂ ಜೀರ್ಣಿಸಿಕೊಳ್ಳುವ ಶಕ್ತಿ ನೀಡಿದ್ದೇಯಲ್ಲ ಎಂದು ಮತ್ತೊಮ್ಮೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಲಿಂಕನ್ ಹೇಳಿಕೆಯನ್ನು ಮೂರ್ತಿ ಅವರು ಪ್ರಸ್ತಾಪಿಸಿದ್ದನ್ನು ಕಣ್ಣನ್ ಮಾಮ ನೆನಪಿಸಿಕೊಂಡರು.
ಕಣ್ಣನ್ ಮಾಮ ವಾಕ್
ಋಷಿ, ಋಷಿ ಸದೃಶ ವ್ಯಕ್ತಿ. ಅವರು ಕೇವಲ ಮಾತುಗಾರರು ಎಂದು ಹೇಳುವುದಕ್ಕಿಂತ ಸಂಸ್ಕೃತಿ ಚಿಂತಕರು, ನಾಡು, ನುಡಿ, ಚಿಂತನೆಯ ಬಗ್ಗೆ ಅಪಾರ ಒಲವು ಇರುವ ಶ್ರೇಷ್ಠ ಚಿಂತಕ. ಅವರು ಯಾವುದನ್ನೂ ಮುಂಚೆ ಯೋಚಿಸಿ ಮಾತನಾಡೊಲ್ಲ, ಮಾತನಾಡಿದ್ದನ್ನು ರಿಪೀಟ್ ಮಾಡಿ ಎಂದರೆ ಆಗೊಲ್ಲ. ವಿಶ್ವವಾಣಿ ಕ್ಲಬ್ಗೆ ವಾಕ್ ಋಷಿ ಬಂದಿರುವುದು ನಮ್ಮ ಸುದೈವವಾಗಿದೆ. ನಾಗಶ್ರೀ ಅವರು ಒಳ್ಳೆಯ ಗಾಯಕಿ, ಚಿಂತಕಿ, ಬರಹಗಾರ್ತಿ, ವಿಶ್ವವಾಣಿಯಲ್ಲಿ ಕೆಲವು ಲೇಖನ ಬರೆದು ಮೆಚ್ಚುಗೆ ಪಡೆದಿದ್ದಾರೆ.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕ,
ವಿಶ್ವವಾಣಿ
ವಿಶ್ವವಾಣಿಗೆ ಮೆಚ್ಚುಗೆ
? ವಿಶ್ವ ವ್ಯಾಪಕತ್ವದ ವಿಶ್ವಮಾನವತ್ವದ ನಡೆ ನುಡಿಗೆ ಸಮರಸವಿರುವ ಹೃದಯ ವಿಶ್ವೇಶ್ವರ ಭಟ್ ಅವರಿಗೆ.
? ನಾವೆಲ್ಲರೂ ವಿಶ್ವವಾಣಿಯ ಕ್ಲಬ್ಗೆ ಕೃತಜ್ಞರೇ ಹೌದು. ವೀಸಿ ಕವನ ನೆನಪಿಸಿಕೊಳ್ಳಲು ಕರ್ಮ, ಭಕ್ತಿ, ಜ್ಞಾನ ಯೋಗದ ಮೂಲಕ ‘ವಿಶ್ವ ’ಯೋಗ ಪಡೆಯಲು ಸಾಧ್ಯವಾಯಿತು.
? ಕನ್ನಡನಾಡಿನಲ್ಲಿ ‘ಕರೋನಾ’ ಎಂಬ ಮೂರಕ್ಷರ ಬರದೇ ಇದ್ದರೆ, ‘ವಿಶ್ವವಾಣಿ’ ವ್ಯಾಪಿಸಲು ಸಾಧ್ಯವಾಗುತ್ತಿತ್ತೇ?
***
ವರುಷ ಹೋಯಿತು ವರುಷ ಬಂದಿತು
ಹರುಷ ಬಾರದು ಬಾರದು ;
ಬಯಕೆ, ಆಸೆಯೇ? ಒಂದು -ಲಿಸದು
ಎದೆಯ ವೇದನೆ ತೀರದು.
ಇರುಳು ಬಂದಿತು ಇರುಳು ಹೋಯಿತು
ಮನದ ಇರುಳೇ ಕಳೆಯದು ;
ಇರುಳ ಕತ್ತಲೆಗಿಂತ ನಿಬಿಡವು
ಬೆಳಕು ಅರಿವಿಗೆ ಹಾಯದು.
ಶಿಶಿರ ಕಳೆಯಿತು ಚೈತ್ರ ಸುಳಿಯಿತು
ಮನದ ಶಿಶಿರವು ಕಳೆಯದು ;
ವನವು ಹೊಸ ಹೂ ತಳಿರನಿಟ್ಟರು
ಬಾಳ್ಗೆ ಬಾರದು ಚೈತ್ರವು.
ಹಳೆಯ ಚರ್ಮವು ಸುಲಿದು ಮರಗಳು
ಹೊಸತು ಚರ್ಮವನುಟ್ಟವು ;
ಹೊರಗಿನೆಲ್ಲಕು ಹೊಸತು ಬಂದರು
ನಮ್ಮ ಹಳತನ ಹೋಗದು.
ಕೊಳಗಳಲ್ಲಿಯ ಕದಡು ತಿಳಿಯಿತು
ಚೆಲುವು ನೈದಿಲೆ ಅರಳ್ವುವು ;
ಮನದ ಕೊಳಚೆಯ ಕದಡು ಮುರಿಯದು
ತಿಳಿಯು ಹೂಗಳು ಬಾರವು.
– ವಿ. ಸೀತಾರಾಮಯ್ಯ