ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 203
ಸ್ವಾತಂತ್ರ್ಯ ಹೋರಾಟದ ವೇಳೆ ನರಬಲಿ ಪದ್ಯ ಬರೆದಿದ್ದಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು
ಬಳಿಕ ೧೦ ವರ್ಷ ಕೆಲಸ ಕೊಡದಂತೆ ಬ್ರಿಟಿಷರು ಆದೇಶಿಸಿದ್ದರು
ಬೇಂದ್ರೆಯವರಿಂದಲೇ ಸಾಹಿತ್ಯ ಪಾಠ ಹೇಳಿಸಿಕೊಳ್ಳುತ್ತಿದ್ದ ಗುರು ವಿ.ಕೃ.ಗೋಕಾಕ್
ಜೀವನದಲ್ಲಿ ಬೆಂದರೆ ಮಾತ್ರ ಬೇಂದ್ರೆಯಾಗಬಹುದು ಎಂಬಂತಿತ್ತು ಅವರ ಜೀವನ
ಬೆಂಗಳೂರು: ದ.ರಾ. ಬೇಂದ್ರೆ ಎಂದರೆ ನೆನಪಿಗೆ ಬರುವುದು ಅವರೊಬ್ಬ ಜ್ಞಾನಪೀಠ ಕವಿ. ಅಂಬಿಕಾತನಯದತ್ತ ಎಂಬ ಕಾವ್ಯನಾಮದಲ್ಲಿ ಸಾಕಷ್ಟು ಸಾಹಿತ್ಯ ಕೃಷಿ ಮಾಡುವ ಮೂಲಕ ಕನ್ನಡ ಸಾಹಿತ್ಯವನ್ನು ಮೇರು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರು ಕನ್ನಡದ ವರಕವಿ, ಅವಧೂತ ಕವಿ, ರಸಋಷಿ ಎಂದೆಲ್ಲಾ ಬಣ್ಣಿಸುತ್ತಾರೆ. ಇದೆಲ್ಲವೂ ಹೌದಾಗಿದ್ದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರದ್ದು ಇನ್ನೊಂದು ಮುಖವೂ ಇದೆ. ಅದುವೇ ದೇಶಪ್ರೇಮದ ಮುಖ. ಅಪ್ಪಟ ದೇಶಭಕ್ತರಾಗಿದ್ದ ಅವರು ಬ್ರಿಟಿಷರ ಅವಧಿಯಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದರು. ಬೇಂದ್ರೆ ಅವರು ನರಬಲಿ ಪದ್ಯ ಬರೆದಾಗ, ಇದು ನಮ್ಮನ್ನು ಟೀಕಿಸುವ, ಭಾರತೀಯರನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ಪದ್ಯ ಎಂದು ಭಾವಿಸಿದ್ದ ಬ್ರಿಟಿಷರು ಅವರನ್ನು ಒಂದು ವರ್ಷ ಕಾರಾಗೃಹಕ್ಕೆ ತಳ್ಳಿದರು.
ಅಷ್ಟೇ ಅಲ್ಲದೆ, ಹತ್ತು ವರ್ಷ ಎಲ್ಲೂ ನೌಕರಿ ನೀಡದಂತೆ ಆಜ್ಞೆ ಹೊರಡಿಸಿದರು. ಇದರಿಂದಾಗಿ ಬೇಂದ್ರೆ ಅವರಿಗೆ ಹತ್ತು ವರ್ಷ ಕೆಲಸವಿಲ್ಲದಂತಾಯಿತು. ಹೌದು, ಬೇಂದ್ರೆಯವರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲದ ಈ ಸಂಗತಿ ಯನ್ನು ಹೇಳಿದ್ದು ಕವಿ ಡಾ.ಜಿ.ವಿ.ಕುಲಕರ್ಣಿ. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ದ.ರಾ.ಬೇಂದ್ರೇಯವರ ೧೨೬ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕವಿ ದಿನ ಸಂಭ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡು ಅರಿವಿನ
ಉಪಸನ್ಯಾಸ ನೀಡಿದರು.
ವರಕವಿ, ಅವಧೂತ ಕವಿ, ರಸಋಷಿ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಬಿರುದುಗಳಿಗೆ ಪಾತ್ರರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ.ಬೇಂದ್ರೆ) ಅವರ ಕಾವ್ಯಗಳು ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಧಾರವಾಡದ ವೇದ ಪಂಡಿತ ಮನೆತನದಲ್ಲಿ ೮೯೬ರಲ್ಲಿ ಬೇಂದ್ರೆ ಅವರು ಜನಿಸಿದರು. ಮಾತೃಭಾಷೆ ಮರಾಠಿ ಯಾದರೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಕನ್ನಡ ಭಾಷೆಯ ಮೇಲೆ ಅತ್ಯಂತ ಪ್ರೀತಿ, ಗೌರವ ಹೊಂದಿದ್ದರು. ಬಡಕುಟುಂಬದಲ್ಲಿ ಜನಿಸಿದ ಬೇಂದ್ರೆ ಅವರು ಸಣ್ಣ ವಯಸ್ಸಿನಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡು ಕಷ್ಟದ ದಿನ, ವಷಗಳನ್ನು ಎದುರಿಸುವಂತಾಯಿತು.
ಎಲ್ಲಾ ಕಷ್ಟಗಳ ನಡುವೆಯೂ ಬೇಂದ್ರೆ ಅವರು ಸಾಹಿತ್ಯ ಲೋಕಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಒಮ್ಮೆ ಬೇಂದ್ರೆಯವರ ಬಳಿ ಯಾರೋ,
ನಾವೂ ಬೇಂದ್ರೆ ಆಗಬೇಕಾದರೆ ಏನು ಮಾಡಬೇಕು ಎಂದು ಕೇಳಿದ್ದರಂತೆ. ಅದಕ್ಕವರು, ಜೀವನದಲ್ಲಿ ತುಂಬ ಬೆಂದರೆ ಮಾತ್ರ ಬೇಂದ್ರೆಯಾಗಲು ಸಾಧ್ಯ
ಎಂದಿದ್ದರಂತೆ ಎಂಬುದನ್ನು ಡಾ.ಜಿ.ವಿ.ಕುಲಕರ್ಣಿ ಸ್ಮರಿಸಿಕೊಂಡರು.
ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು: ಬೇಂದ್ರೆಯವರು ಸಾಹಿತ್ಯ ಪ್ರೀತಿಯ ಜತೆಗೆ ದೇಶ ಭಕ್ತಿಯನ್ನೂ ಹೊಂದಿದ್ದರು. ಶಿಕ್ಷಕರಾಗಿದ್ದು ಕೊಂಡೇ ಸ್ವಾತಂತ್ರ್ಯ ಹೋರಾಟದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಮ್ಮೆ ಅವರು ನರಬಲಿ ಎಂಬ ಪದ್ಯ ಬರೆದಿದ್ದರು. ಇದನ್ನು ತಮ್ಮ ಕುರಿತಾಗಿಯೇ ಬೇಂದ್ರೆ ಬರೆದಿದ್ದಾರೆ ಎಂದು ಭಾವಿಸಿದ ಬ್ರಿಟೀಷರು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಸುಮಾರು ಒಂದು ವರ್ಷ ಬೇಂದ್ರೆ ಜೈಲಿನಲ್ಲಿ ಕಳೆದರು. ಜೈಲಿನಿಂದ ಬಿಡುಗಡೆಯಾದರೂ ಅವರಿಗೆ ತೊಂದರೆ ಕೊಡುವುದನ್ನು ಬ್ರಿಟಿಷರು ಬಿಡಲಿಲ್ಲ.
ಇನ್ನು ಹತ್ತು ವರ್ಷ ಯಾರೂ ಬೇಂದ್ರೆಯವರಿಗೆ ಕೆಲಸ ಕೊಡಬಾರದು ಎಂದು ಫರ್ಮಾನು ಹೊರಡಿಸಿದ್ದರು. ಹೀಗಾಗಿ ೧೦ ವರ್ಷ ಕೆಲಸವಿಲ್ಲದೆ
ಕಾಲ ಕಳೆಯುವ ಪರಿಸ್ಥಿತಿ ಬಂದಿತ್ತು. ಬ್ರಿಟಿಷರ ಆದೇಶದಿಂದ ಬೇಂದ್ರೆಯವರು ಸಂಕಷ್ಟಕ್ಕೆ ಸಿಲುಕಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ನೆರವಾಗಿದ್ದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್. ಬೇಂದ್ರೇಯವರನ್ನು ಜಯಂತಿ ಎಂಬ ಪತ್ರಿಕೆಯ ಸಂಪಾದಕರನ್ನಾಗಿ ಮಾಡಿ ಆಗಿನ ಕಾಲಕ್ಕೆ ಪ್ರತಿ ತಿಂಗಳು ೬೦ ರು. ಮನಿ ಆರ್ಡರ್ ಕಳುಹಿಸುತ್ತಿದ್ದರು.
ಅಲ್ಲಿಗೆ ಬೇಂದ್ರೆಯವರ ಸಂಕಷ್ಟ ದೂರವಾಯಿತು. ಈ ಮಧ್ಯೆ ಬೇಂದ್ರೆಯವರ ಕಷ್ಟ ಅರಿತ ಅವರ ಮಾವ ಪುಣೆಯ ತಮ್ಮ ಮನೆಗೆ ಕರೆಸಿಕೊಂಡು
ಎಂ.ಎಂ. ಓದಿಸಿದರು. ಈ ವೇಳೆ ವಿ.ಕೃ.ಗೋಕಾಕ್ ಅವರು ಬೇಂದ್ರೆಯವರಿಗೆ ಗುರುಗಳಾಗಿದ್ದರು. ಆದರೆ, ಗೋಕಾಕರೇ ಹೇಳಿಕೊಂಡಿರುವಂತೆ, ಎರಡು
ವರ್ಷಗಳ ಕಾಲ ಆಅವರು ಬೇಂದ್ರೆಯವರ ಗುರುಗಳಾಗಿದ್ದರೂ ಶಿಷ್ಯರಂತೆ ಕನ್ನಡ ಸಾಹಿತ್ಯದ ವಿವಿಧ ಆಯಾಮಗಳನ್ನು ಬೇಂದ್ರೆಯವರಿಂದ ಕಲಿತ ರಂತೆ. ಅಷ್ಟೊಂದು ಪ್ರಖರ ಸಾಹಿತ್ಯ ಜ್ಞಾನ ಬೇಂದ್ರೆ ಯವರಲ್ಲಿತ್ತು ಎಂಬುದಕ್ಕೆ ಇದು ಉದಾಹರಣೆ ಎಂದು ಡಾ.ಜಿ.ವಿ.ಕುಲಕರ್ಣಿ ಹೇಳಿದರು.
ಬೇಂದ್ರೆ ಅವರ ಕೃತಿಗಳು
ನಾಕು ತಂತಿ, ಮೂಡಲ ಮನೆ, ಬೆಳದಿಂಗಳ ನೋಡ, ಇನ್ನೂ ಯಾಕ ಬರಲಿಲ್ಲಾವ ಹುಬ್ಬಳ್ಳಿಯವ ಸೇರಿದಂತೆ ಅನೇಕ ಕವನ ಸಂಕಲನ ಮತ್ತು ಕೃತಿ ಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಬೇಂದ್ರೆಯವರ ಕೃತಿಗಳಲ್ಲಿ ಜೀವನದ ಸಹಜ ಕ್ಷಣಗಳಿರುತ್ತವೆ. ಅದೇ ರೀತಿ ಸಾಹಿತ್ಯದ ಘಮಲು ಕಾಣಿಸಿಕೊಳ್ಳುತ್ತದೆ. ಜನ ಸಾಮಾನ್ಯರಿಂದ ಹಿಡಿದು ಪಂಡಿತರವರೆಗೆ ಎಲ್ಲರಿಗೂ ಬೇಕಾದಂತಹ ಕೃತಿಗಳನ್ನು ಅವರು ರಚಿಸಿದ್ದಾರೆ.
ಬೇಂದ್ರೆಯವರಿಗೆ ರಕ್ತ ಕೊಟ್ಟಿದ್ದೆ
ನನಗೆ ಗೋಕಾಕ್ ಅವರ ಸಂಪರ್ಕ ಇದ್ದುದರಿಂದ ಅವರ ಮೂಲಕ ದ.ರಾ.ಬೇಂದ್ರಯವರ ಜತೆ ನಿಕಟ ಸಂಪರ್ಕ ಗೊಂದಲು ಸಾಧ್ಯವಾಯಿತು. ಇಂದು ನಾನೇನಾದರೂ ಸಾಹಿತ್ಯ ಕ್ಷೇತ್ರದಲ್ಲಿ ಒಂದಷ್ಟು ಸಾಧಿಸಿದ್ದೇನೆ ಎಂದರೆ ಅದಕ್ಕೆ ಕಾರಣ ಮತ್ತು ಪ್ರೇರಣೆ ದ.ರಾ.ಬೇಂದ್ರೆಯವರು. ಅವರ ಬಗ್ಗೆ ನಾನು ಎಷ್ಟು ಭಕ್ತಿ, ಭಾವ ಹೊಂದಿದ್ದೆ ಎಂದರೆ, ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಾ, ನನ್ನ ದೇಹದಲ್ಲಿ ಬೇಂದ್ರೆ ರಕ್ತ ಹರಿಯುತ್ತಿದೆ ಎಂದು
ಹೇಳಿದ್ದೆ. ಒಮ್ಮೆ ಬೇಂದ್ರೆಯವರಿಗೆ ರಕ್ತದ ಅನಿವಾರ್ಯತೆ ಎದುರಾಗಿತ್ತು.
ನಾನು ಹಿಂದೆ ಹೇಳಿದ್ದ ಮಾತು ನೆನಪಿಸಿಕೊಂಡ ಅವರು ಕೂಡಲೇ, ಜೀವಿ ದೇಹದಲ್ಲಿ ನನ್ನದೇ ರಕ್ತ ಹರಿಯುತ್ತಿದೆ. ಅಂವ ರಕ್ತ ಕೊಡಬಹುದು ಎಂದು ಹೇಳಿಕಳುಹಿಸಿದ್ದರು. ಅದರಂತೆ ನಾನು ಹೋಗಿ ರಕ್ತದ ಗುಂಪು ಪರೀಕ್ಷೆ ಮಾಡಿಸಿದಾಗ ಇಬ್ಬರ ರಕ್ತದ ಗುಂಪು ಒಂದೇ ಆಗಿತ್ತು. ಹೀಗಾಗಿ ಬೇಂದ್ರೆಯವರಿಗೆ ರಕ್ತದಾನ ಮಾಡುವ ಪುಣ್ಯ ನನಗೆ ಲಭಿಸಿತ್ತು ಎಂದು ಬೇಂದ್ರೆ ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು ಡಾ.ಜಿ.ವಿ.ಕುಲಕರ್ಣಿ.