ವಿಶ್ವವಾಣಿ ಕ್ಲಬ್‌ಹೌಸ್ 200ರ ಸಂಭ್ರಮದಲ್ಲಿ ಮಂಜುವಾಣಿ
ಮೊದಲ ಬಾರಿಗೆ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರಿಂದ ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವುದು ಹೇಗೆ? ಎಂಬ ವಿಷಯದ ಕುರಿತು ಉಪನ್ಯಾಸ
ದಾಖಲೆಯ ಪ್ರಮಾಣದ ಶ್ರೋತೃಗಳು ಭಾಗಿ
ಬೆಂಗಳೂರು: ದಕ್ಷಿಣ ಭಾರತದ ಪರಮ ಪವಿತ್ರ ತಾಣ ಧರ್ಮಸ್ಥಳ. ಅಲ್ಲಿನ ಅಭಯ ದಾನ, ಅನ್ನದಾನಕ್ಕೆ ಕೋಟ್ಯಂತರ ಭಕ್ತರು ಮನಸೋತಿದ್ದಾರೆ, ಮನ ಸೋಲುತ್ತಿದ್ದಾರೆ, ಮುಂದೆಯೂ ಮನಸೋಲುತ್ತಾರೆ. ಇದು ಬದುಕು ರೂಪಿಸುವ ಹಾಗೂ ದುರ್ಬಲರನ್ನು ಸಬಲರನ್ನಾಗಿ ಪರಿವರ್ತಿಸುವ ನೆಲೆ… ಹೌದು, ಎಲ್ಲ ವರ್ಗದ ಜನರನ್ನು ಏಕರೀತಿಯಲ್ಲಿ ಕಾಣುವ ಶಾಂತಿಯ ನೆಲೆವೀಡು ಶ್ರೀಕ್ಷೇತ್ರ ಧರ್ಮಸ್ಥಳ. ಧಾನ, ಧರ್ಮ, ನೀತಿ, ಭಕ್ತಿಗೆ ಇಲ್ಲಿ ಕೊರತೆಯಿಲ್ಲ. ಇಂತಹ ಪುಣ್ಯ ಕ್ಷೇತ್ರವನ್ನು ವಿಶ್ವವಿಖ್ಯಾತಗೊಳಿಸಿದ ಧರ್ಮಾಧಿಕಾರಿ.
ಪದ್ಮಭೂಷಣ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ವಿಶ್ವವಾಣಿ ಕ್ಲಬ್‌ಹೌಸ್‌ನ 200ನೇ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ನಮ್ಮ ಬದುಕನ್ನು ಸಾರ್ಥಕಪಡಿಸಿ ಕೊಳ್ಳುವುದು ಹೇಗೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಅನ್ನದಾನ, ಔಷಧ ದಾನ, ವಿದ್ಯಾದಾನ ನಡೆಯುತ್ತಿದೆ. ದೇವರು ಕೊಟ್ಟಿರುವ ಶ್ರೇಷ್ಠವಾದ ಮನುಷ್ಯ ಜನ್ಮವನ್ನು ದಾನ, ಧರ್ಮದಂತಹ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬೇಕು. ಹಾಗಾದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕ ಎಂದು ಅವರು ನುಡಿದರು.
ರಾಜಕಾರಣಿಗಳು ಆತ್ಮಶೋಧನೆ ಮಾಡಿಕೊಳ್ಳಬೇಕಿದೆ. ತಮಗೆ ಸಿಗುವ ಅವಕಾಶ ಸದುಪಯೋಗಪಡಿಸಿ ಕೊಳ್ಳಬೇಕು. ಸೇವಾ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ನಿಸ್ವಾರ್ಥದಿಂದ ಬದುಕು ಸಾಗಿಸಲು ಸಾಧಿಸಬಹುದು. ಸಿಕ್ಕ ಅವಕಾಶ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಜನರಿಗೆ ಉಪಯೋಗ ವಾಗಬೇಕಾದ ಯೋಜನೆಗಳು ಸರಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು.
ಜನ ನಮಸ್ಕರಿಸುತ್ತಿದ್ದುದು ನನಗಲ್ಲ, ಮಂಜು ನಾಥ ಸ್ವಾಮಿಗೆ ಎಂದು ಭಾವಿಸಿದೆ: 1968 ಅಕ್ಟೋಬರ್ 12ರಂದು ನನ್ನ ತಂದೆ ಇಹಲೋಕ ತ್ಯಜಿಸಿದರು. ಅಕ್ಟೋಬರ್ 24ರಂದು ನನಗೆ ಪಟ್ಟಾಭಿಷೇಕ ಆಯಿತು. ಆಗ ನನಗೆ ಕೇವಲ 19 ವರ್ಷ ವಯಸ್ಸು. ಕೈಯಲ್ಲಿ ಪಟ್ಟದ ಕತ್ತಿ ಕೊಟ್ಟರು. ಧರ್ಮಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನ ನನ್ನ ತಲೆಯಲ್ಲಿದ್ದುದು ಶೂನ್ಯ ಮಾತ್ರ. ಏನೂ ಗೊತ್ತಿರಲಿಲ್ಲ.
ಅಲ್ಲಿನ ಪುರೋಹಿತ ವರ್ಗ, ಸಿಬ್ಬಂದಿ ಹೇಳಿದ್ದನ್ನ ಯಾಂತ್ರಿಕವಾಗಿ ಮಾಡುತ್ತಿದ್ದೆ. ತಂದೆಯವರನ್ನು ಕಳೆದುಕೊಂಡ ನೋವಿನ ನಡುವೆ ಈ ಅಧಿಕಾರ, ಈ ಪಟ್ಟ ಏಕೆ? ಎಂಬ ಎಂಬ ಯೋಚನೆ. ಜನರು ನನಗೆ ನಮಸ್ಕಾರ ಮಾಡಲು ಶುರು ಮಾಡಿದರು. ಆಗ ಇದ್ಯಾವುದೂ ನನಗಲ್ಲ, ಮಂಜುನಾಥ ಸ್ವಾಮಿಗೆ ಅಂತ ನಿರ್ಧಾರ ಮಾಡಿದೆ. ಆಗಿಂದ ಇಲ್ಲಿಯವರೆಗೂ ಹಾಗೆಯೇ ನಡೆದುಕೊಂಡು ಬಂದಿದ್ದೇನೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಮಂಜುನಾಥ ಸನ್ನಿಧಿಯಲ್ಲಿ ನಾನು ಮಾಡುವ ಸೇವೆಗಳು ದೇವತೆಗಳ ಆಶಿರ್ವಾದದಿಂದ. ಶ್ರೀಕ್ಷೇತ್ರದಲ್ಲಿನ ಕಾಳರಾಹು, ಕಾಳರಕಾಯ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿ ದೇವತೆಗಳು ನೀಡುವ ಉಪದೇಶಗಳ ಆಧಾರದ ಮೇಲೆ ನಾನು ಕೈಂಕರ್ಯಗಳಲ್ಲಿ ತೊಡಗಿದ್ದೇನೆ. ಭಕ್ತರಿಗೆ ಅನ್ನದಾನ, ಸೇವೆ ಮಾಡುವ ಕರ್ತವ್ಯ ನಮ್ಮದು. ಭಕ್ತರು ಬಂದು ಅಹವಾಲು ಹೇಳಿಕೊಂಡಾಗ, ಹೆಗ್ಗಡೆಯಾಗಿ ನಾನು ಹೇಳುವುದು ಭಯಪಡಬೇಡಿ ಎಂದು. ಮೋಸ ವಂಚನೆ ಮಾಡಬೇಡಿ ಎಂದು ವೀರೇಂದ್ರ ಹೆಗ್ಗಡೆ ಉಪದೇಶ ನೀಡಿದರು.
ಗ್ರಾಮೀಣ ಜನರಿಗೆ ನೆರವು
ಗ್ರಾಮೀಣ ಜನತೆಗೆ ಸರಕಾರದಲ್ಲಿನ ಯೋಜನೆಗಳ ಕುರಿತು ಅಷ್ಟೊಂದು ಜ್ಞಾನ ಇರುವುದಿಲ್ಲ. ಪ್ರತಿಯೊಂದು ಮನೆಯಲ್ಲೂ ಸರ್ವೇ ಕಾರ್ಯ ಮಾಡುವ ಮೂಲಕ ಭೂ ಶಕ್ತಿ, ಜಲ ಶಕ್ತಿ , ಜನ ಶಕ್ತಿ….ಹೀಗೆ ವರದಿ ತಯಾರಿಸಲಾಗಿತ್ತು. ಗ್ರಾಮೀಣ ಜನರ ಏಳಿಗೆಗೆ ಗ್ರಾಮೀಣಾಭಿವೃದ್ಧಿ ಯೋಜನೆ ರೂಪಿಸಲಾಯಿತು. ದುಡಿಯುವ ಕೈಗಳಿಗೆ ಬೇಕಾದ ಸವಲತ್ತುಗಳನ್ನು ಒದಗಿಸಲಾಗಿತ್ತು.
ಇದರೊಂದಿಗೆ ಕುಟುಂಬದ ಏಳಿಗೆಗೆ ದಾರಿ ತೋರಿಸಲಾಗುತ್ತಿದೆ. ಬದುಕಲು ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಈ ಕಾರ್ಯಕ್ರಮ ಪರಿವರ್ತನೆಯಾಗಿ ಸ್ವಸಹಾಯ ಗುಂಪುಗಳ ನಿರ್ಮಾಣ ಮಾಡಿ ಪ್ರಗತಿ ಸಾಧಿಸಲಾಗುತ್ತಿದೆ. 50 ಲಕ್ಷ ಸ್ವಸಹಾಯ ಸದಸ್ಯರು ಇದ್ದಾರೆ.
ಸಂಘದ ಸದಸ್ಯರು 2500 ಕೋಟಿ ರು. ಉಳಿತಾಯ ಮಾಡಿದ್ದಾರೆ. ವಾರದಲ್ಲಿ 10ರಿಂದ 20 ರು. ಸಂಘದಲ್ಲಿ ಹೂಡಿಕೆ ಮಾಡುತ್ತಾರೆ. ನಾವು ಬ್ಯಾಂಕಿನಿಂದ ನೇರವಾಗಿ ಸಾಲ ಕೊಡಿಸುವ ಕೆಲಸ ಮಾಡಿದ್ದೇವೆ. 16000 ಕೋಟಿ ರು. ಸಾಲ ನೀಡಲಾಗಿದೆ. ಸ್ವ ಉದ್ಯೋಗ ಹೈನುಗಾರಿಕೆಗೆ ಬಂಡವಾಳ ಹೂಡಲು ಸಾಲ ನೀಡಲಾಗುತ್ತಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ಸ್ವಯಂ ಉದ್ಯೋಗಿಗಳ ನಿರ್ಮಾಣ
ಯುವ ಜನರಿಗೆ ವಿಭಿನ್ನ ಉದ್ಯೋಗಗಳಲ್ಲಿ ತರಬೇತಿಯನ್ನು ಕೊಟ್ಟು ಅವರು ಯಾರ ಕೈಕೆಳಗೂ ದುಡಿಯದೆ ಸ್ವಂತವಾಗಿ ತಮ್ಮ ಕಾಲ ಮೇಲೆ ನಿಲ್ಲುವಂತೆ ಜೀವನ ರೂಪಿಸಿಕೊಳ್ಳಲು ಸ್ವ-ಉದ್ಯೊಗ ತರಬೇತಿ ಕೇಂದ್ರ ‘ರುಡ್ ಸೆಟ್’ ಸ್ಥಾಪನೆ ಮಾಡಲಾಯಿತು. ದೇಶಾದ್ಯಂತ ಈಗ 585 ಕ್ಕೂ ಹೆಚ್ಚು ಕೇಂದ್ರಗಳನ್ನು ತೆರೆಯ ಲಾಗಿದೆ. 5 ಲಕ್ಷಕ್ಕೂ ಹೆಚ್ಚು ಮಂದಿ ಸ್ವಯಂ ಉದ್ಯೋಗಿಗಳಾಗಿದ್ದಾರೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ಸಾಮೂಹಿಕ ವಿವಾಹ
1972ರಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಅರಂಭಿಸಲಾಯಿತು. ಈಗ ವಾರ್ಷಿಕವಾಗಿ 500ಕ್ಕೂ ಹೆಚ್ಚು ದಂಪತಿ ಸಾಮೂಹಿಕ ವಿವಾಹವಾಗುತ್ತಾರೆ. ಈವರೆಗೂ 13 ಸಾವಿರಕ್ಕೂ ಹೆಚ್ಚು ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ವಿಧಿಯನುಸಾರ ಮದುವೆ ಮಾಡಿಸಲಾಗುತ್ತದೆ ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು.
ವಸ್ತು ಸಂಗ್ರಹಾಲಯದಲ್ಲಿ ಡ್ಯಾಮ್ಲರ್ ಕಾರು
ಮೈಸೂರಿನ ಅರಮನೆಯಲ್ಲಿದ್ದ 1947 ಮೋಡೆಲ್‌ನ ಡ್ಯಾಮ್ಲರ್ ಕಾರನ್ನು ಜಯಚಾಮರಾಜೇಂದ್ರ ಒಡೆಯರ್ ಅವರು ಕಾರು ಮ್ಯೂಸಿಯಂಗೆ ನೀಡಿದ್ದು ನನಗೆ ಅತ್ಯಂತ ಪ್ರಿಯವಾದ ವಿಷಯ. ಈಗಲೂ ಅದು ಚಾಲನಾ ಸ್ಥಿತಿಯಲ್ಲಿದ್ದು, ವಿಶೇಷ ಸಂದರ್ಭಗಳಲ್ಲಿ ನಾನು ಅದನ್ನು ಬಳಸುತ್ತೇನೆ. ಕಾರು ಖರೀದಿಸಲು ನಾನು ಸುತ್ತೂರು ಮಠದ ಶ್ರೀಗಳನ್ನು ಭೇಟಿ ಮಾಡಿದೆ. ಅವರು ಮಹಾರಾಜರ ಬಳಿ ಚೌಕಾಸಿ ಮಾಡಬಾರದು ಎಂದು ಹೇಳಿದರು. ಬಳಿಕ ಕಾರನ್ನು ಪಡೆದೆ ಎಂದು ಸ್ಮರಿಸಿದ ಅವರು, ವಸ್ತು ಸಂಗ್ರಹಾಯಲದಲ್ಲಿ ತಾಳೆಪ್ರತಿಗಳು, ಭಾಷೆಗಳು ಇವೆ ಎಂದು ಮಾಹಿತಿ ನೀಡಿದರು.
ಪ್ರಾಚೀನ ದೇವಾಲಯಗಳಿಗೆ ಹೊಸರೂಪ
ಪ್ರಾಚೀನ ದೇವಾಲಯಗಳು ಸುಂದರವಾದ ಕೆತ್ತನೆಗಳಿಂದ ಕೂಡಿದ್ದು, ಹಲವೆಡೆ ಕಟ್ಟಡಗಳು ಬಿದ್ದು ಹೋಗಿದೆ. ಅದರ ಜೋರ್ಣೋದ್ಧಾರ ಮಾಡಲಾಗುತ್ತಿದೆ. ಅಂತಹ ದೇವಾಯಲಗಳನ್ನು ಅಧುನಿಕ ವಿನ್ಯಾಸಗಳಿಂದ ನವೀಕರಿಸಲಾಗುತ್ತದೆ. ಪಲ್ಲವ ಚೋಳರು, ಹೊಯ್ಸಳರ ಕಾಲದ ದೇವಾಲಯಗಳು ನಾಶವಾಗುತ್ತಿದೆ. ಅವುಗಳನ್ನು ನವೀಕರಿಸುವ ಮೂಲಕ ನಮ್ಮ ಐತಿಹಾಸಿಕ ಕುರುಹುಗಳನ್ನು ರಕ್ಷಿಸಲಾಗುತ್ತಿದೆ. ಹಳೆಯ ದೇವಾಲಯಗಳ ಸ್ವರೂಪದಲ್ಲಿ ಮರು ನಿರ್ಮಾಣ
ಮಾಡಲಾಗುತ್ತಿದೆ. ಕೇಂದ್ರ ಸರಕಾರವೂ ಸಹಾಯ ಮಾಡುತ್ತಿದೆ ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು.
ಭಾರತೀಯ ವೈದ್ಯ ಪದ್ಧತಿ ಉಳಿಸಿ
ಭಾರತೀಯ ವೈದ್ಯಕೀಯ ಪದ್ಧತಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ. ಮೋಸ ಮಾಡುವ ಚಿಕಿತ್ಸಾ ಪದ್ಧತಿಗಳು ನಮಗೆ ಬೇಕಾಗಿಲ್ಲ. ನಮ್ಮ ಪಾರಂಪರಿಕ ವೈದ್ಯ ಪದ್ಧತಿ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಾಂಪ್ರದಾಯಿಕ ಪದ್ಧತಿಯನ್ನು ಅಧುನಿಕ ಶೈಲಿಯಲ್ಲಿ ರೂಪಿಸಬೇಕಾಗಿದೆ. ನಮ್ಮ ಆಯುರ್ವೇದ ಆಸ್ಪತ್ರೆಗಳಿಗೆ 300 ರಿಂದ 7000 ರೋಗಿಗಳು ಬರುತ್ತಿದ್ದಾರೆ. ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಮೂಲಕ ಸಾರ್ಥಕ ಸೇವೆ ಮಾಡಲಾಗುತ್ತಿದೆ. ಉಡುಪಿ ಮತ್ತು ಉಜಿರೆಯಲ್ಲಿ ಆಯುರ್ವೇದ ಸಂಶೋಧನೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ವಿಭಿನ್ನ ವ್ಯಕ್ತಿತ್ವದ ಸಾಕಾರ ಮೂರ್ತಿ
ಡಾ. ವೀರೇಂದ್ರ ಹೆಗ್ಗಡೆ ನಮ್ಮ ರಾಜ್ಯದ ಆತ್ಮಸಾಕ್ಷಿ. ನಮ್ಮ ರಾಜ್ಯವನ್ನು ಸಮಗ್ರ, ಸಮರ್ಥವಾಗಿ ಸಮದರ್ಶಿತ್ವದಿಂದ ಪ್ರತಿನಿಧಿಸುವ ಧೀಮಂತ ವ್ಯಕ್ತಿಗಳಲ್ಲಿ ಅಗ್ರಗಣ್ಯರು. ಪೂಜನೀಯ ಸ್ಥಾನ ಪಡೆದ ಅವರು ಅರ್ಧ ಶತಮಾನದಿಂದ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ರಾಷ್ಟ್ರ ಪತಿ, ಪ್ರಧಾನಿ, ಉಪರಾಷ್ಟ್ರಪತಿ, ಮುಖ್ಯಮಂತ್ರಿಗಳು ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಮಂಜುನಾಥ ಸ್ವಾಮಿಯೇ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಕೈಂಕರ್ಯ ಮಾಡಿಸುತ್ತಿದ್ದಾರೆ.
ಗ್ರಾಮೀಣಾಭಿವೃದ್ಧಿ, ಧಾರ್ಮಿಕ , ವಿಜ್ಞಾನ, ಆಯುರ್ವೇದ ಕ್ಷೇತ್ರದಲ್ಲಿ ಅವರ ಸೇವೆ ಅಸಾಧಾರಣ. ಶ್ರೀಕ್ಷೇತ್ರವು ಧಾರ್ಮಿಕ ಚೌಕಟ್ಟು ಮೀರಿ ಮಾನವೀಯ ಮೌಲ್ಯ ಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಅವರು ಧರ್ಮಾಧಿಕಾರಿಗಳಾಗಿ ಮಠಕ್ಕೆ ಬಂದ 53 ವರ್ಷಗಳಲ್ಲಿ ಶ್ರಮಿಸಿ ರಾಜ್ಯದ ಪ್ರಗತಿಗೆ ಹಲವುಕೊಡುಗೆ ನೀಡಿದ್ದಾರೆ. ೪೦ ಸಾವಿರಕುಟುಂಬಗಳಿಗೆ ಉದ್ಯೋಗ ನೀಡಿದ್ದಾರೆ. 300 ಕ್ಕೂ ಅಧಿಕ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದಾರೆ. ವಿಭಿನ್ನ ವ್ಯಕ್ತಿತ್ವದ ಸಾಕಾರ ಮೂರ್ತಿ ಅವರು ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಶ್ಲಾಘಿಸಿದರು.
ಸಾರ್ಥಕ ಸೇವೆಗಳು
? ಧರ್ಮಶಾಲೆಯಲ್ಲಿ ಪ್ರತಿಯೊಬ್ಬರಿಗೂ ಮೂಲ ಸೌಕರ್ಯ
? ರಾಜ್ಯದಲ್ಲಿ ೧೫೦೦ಕ್ಕೂ ಹೆಚ್ಚು ಮದ್ಯವರ್ಜನ ಶಿಬಿರ ಆಯೋಜನೆ
? ಪ್ರತಿ ಗ್ರಾಮಗಳಲ್ಲೂ ಶೌರ್ಯ ತಂಡ ಕಟ್ಟಲಾಗಿದ್ದು, ತುರ್ತು ಸಂದರ್ಭದಲ್ಲಿ ನೆರವು
? ಹಾಲು ಉತ್ಪಾದನೆಗೆ ಒತ್ತು, ೫ ಸಾವಿರ ಹಾಲು ಉತ್ಪಾದಕರ ಸಂಘಗಳಿಗೆ ಸಹಾಯಹಸ್ತ
? ಶೌಚಾಲಯಗಳ ನಿರ್ಮಾಣಕ್ಕೆ ಒತ್ತು
? ಆಯುರ್ವೇದ ಆಸ್ಪತ್ರೆಗಳ ಮೂಲಕ ಉತ್ತಮ ಚಿಕಿತ್ಸೆ.ಯೋಗ ತರಬೇತಿ
? ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ
೬,೨೦೦ಕ್ಕೂ ಹೆಚ್ಚು ಶ್ರೋತೃಗಳು
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವವಾಣಿಯ 200ನೇ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ೬,೨೦೦ಕ್ಕೂ ಹೆಚ್ಚು ಶ್ರೋತೃಗಳು ಭಾಗವಹಿಸಿದ್ದರು. ವಿಶೇಷ ವೆಂದರೆ, ಕರ್ನಾಟಕ, ಭಾರತ ಮಾತ್ರವಲ್ಲ, 21 ದೇಶಗಳಿಂದ ಕನ್ನಡಾಭಿಮಾನಿಗಳು ಪಾಲ್ಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದರು.
***
ವೀರೇಂದ್ರ ಹೆಗ್ಗಡೆ ಅವರ ಸೇವೆಯನ್ನು ನಾಲ್ಕು ದಶಕಗಳಿಂದ ಗಮನಿಸುತ್ತಿದ್ದೇನೆ. ಯಾವುದೇ ಸಂದರ್ಭದಲ್ಲೂ ತಾಳ್ಮೆ, ಸಹನೆ ಕಳೆದುಕೊಳ್ಳದ ವ್ಯಕ್ತಿತ್ವ. ನಾನು
ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ ಗಮನಿಸಿದ್ದೆಂದರೆ, ಸ್ವ ಸಹಾಯ ಸಂಘಟನೆ ಮೂಲಕ ನಡೆಸುತ್ತಿರುವ ಆರ್ಥಿಕ ಶಿಸ್ತು ನಿಜಕ್ಕೂ ಶ್ಲಾಘನೀಯ.
-ಡಾ.ಸಿ.ಸೋಮಶೇಖರ್ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ವೀರೇಂದ್ರ ಹೆಗ್ಗಡೆ ಅವರ ಸ್ಫೂರ್ತಿಯಿಂದ ಎಲ್ಲ ಸೇವೆಗಳನ್ನು ಮಾಡುತ್ತಿದ್ದೇನೆ. ಸಮಾಜದಲ್ಲಿನ ಲೋಪಗಳನ್ನು ತೊಡೆದು ಎಲ್ಲರನ್ನೂ ಒಂದುಗೂಡಿಸುವ ಕೆಲಸ
ಮಾಡಲಾಗುತ್ತಿದೆ. ಅವರ ಜತೆ 25 ಸರ್ವಧರ್ಮದ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಸಮಾಜದ ಸರ್ವಾಂಗೀಣ ಅಭಿವೃದ್ಧಿ ನೆಲೆಯಲ್ಲಿ ಸರಕಾರಕ್ಕಿಂತ ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ.
-ಶಿವರುದ್ರ ಸ್ವಾಮೀಜಿ ಬೇಲಿಮಠ
ವಿಶ್ವವಾಣಿ ಕ್ಲಬ್‌ಹೌಸ್‌ನ 200ನೇ ಕಾರ್ಯಕ್ರಮ ಸುವರ್ಣಾಕ್ಷರದಲ್ಲಿ ಬರೆದಿಡುವಂಹದು. ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ಸೇವೆಗಳು ಧಾರ್ಮಿಕ ಕ್ಷೇತ್ರವನ್ನು ಕೇಂದ್ರವಾಗಿಟ್ಟು, ಸಂಸ್ಕೃತಿ, ಸಮಾಜದ ಬೆಳವಣಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ.
-ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾ ಸಭಾಧ್ಯಕ್ಷ
ವೀರೇಂದ್ರ ಹೆಗ್ಗಡೆ ಅವರ ಅನುಭವ, ವಿಚಾರಧಾರೆಗಳು ಮೂಲೆ ಮೂಲೆಗೂ ತಲುಪಲು ಅವರು ದೇಶದ ಪ್ರಥಮ ಪ್ರಜೆಯಾಗಬೇಕು. ಅವರ ಆದರ್ಶ ಮಾರ್ಗ ಗಳು ಪ್ರತಿಯೊಬ್ಬರಿಗೂ ತಿಳಿಯುವಂತಾಗಬೇಕು.
-ರಾಮ ನಾರಾಯಣ ಜೋಯಿಸ್
ಶ್ರೀ ಕ್ಷೇತ್ರ ಹೊರನಾಡು
ಪ್ರತಿ ವರ್ಷವೂ ಧರ್ಮಸ್ಥಳದ ಶ್ರೀ ಕ್ಷೇತ್ರಕ್ಕೆ ಬಂದು ಆಶಿರ್ವಾದ ಪಡೆಯುತ್ತಿದ್ದೇನೆ. ವೀರೇಂದ್ರ ಹೆಗ್ಗಡೆ ಅವರು ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಸಾವಿರಾರು ರೋಗಿಗಳಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಅವರು ನಡೆದು ಬಂದ ಹಾದಿ ಕೇಳಿ ತುಂಬಾ ಸಂತೋಷವಾಗಿದೆ.
-ಭುಜಂಗಶೆಟ್ಟಿ ನಾರಾಯಣ ನೇತ್ರಾಯದ ಮುಖ್ಯಸ್ಥರು
ಉಡುಪಿ, ಉಜಿರೆಯಲ್ಲಿ ಆಯುರ್ವೇದ ಕಾಲೇಜು ಸ್ಥಾಪಿಸುವ ಮೂಲಕ ಬಡವರಿಗೆ ಉನ್ನತ ದರ್ಜೆಯ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ. ಆಯರ್ವೇಧ
ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ,
-ಗಿರಿಧರ ಖಜೆ ಆಯುರ್ವೇದ ತಜ್ಞರು
ಬದುಕು ಸಾರ್ಥಕತೆಗೆ ವೀರೇಂದ್ರ ಹೆಗ್ಗಡೆ ಅವರು ಮಾದರಿ. ಇವರು ಮಾಡಿರುವ ಕ್ಷೇತ್ರದ ಸೇವೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
– ಗುರುರಾಜ ಕರಜಗಿ ಶಿಕ್ಷಣ ತಜ್ಞರು