ಕ್ಲಬ್‌ಹೌಸ್ ಸಂವಾದ 154
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸಂವಿಧಾನ ವಿಶ್ಲೇಷಕ ಡಾ.ಸುಧಾಕರ ಹೊಸಳ್ಳಿ ಅಭಿಮತ
ಬೆಂಗಳೂರು: ಬಾಬಾಸಾಹೇಬ ಅಂಬೇಡ್ಕರ್ ಅವರ ಕಲ್ಪನೆಯ ಸಂವಿಧಾನ ರಚನೆ ಮಾಡಲು ಅಂದಿನ ಕಾಂಗ್ರೆಸ್ ಸರಕಾರ ಸಹಕರಿಸಲಿಲ್ಲ. ಏಕೆಂದರೆ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ ಎಂದು ಸಂವಿಧಾನ ವಿಶ್ಲೇಷಕ ಡಾ. ಸುಧಾಕರ ಹೊಸಳ್ಳಿ ಹೇಳಿದರು.
ವಿಶ್ವವಾಣಿ ಕ್ಲಬ್‌ಹೌಸ್‌ನ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, ಪ್ರಧಾನಿಗೋಸ್ಕರ (ಜವಾಹರಲಾಲ್ ನೆಹರು) ಇಡೀ ಸಂವಿಧಾನವನ್ನು ತಿರುಚಿಸುವ ಕೆಲಸ ಮಾಡಲಾಗಿದೆ. ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡುವಾಗ ಸದಸ್ಯರೊಬ್ಬರ ಪ್ರಶ್ನೆಗೆ ನೆಹರು ಅವರು, ‘ಸಂವಿಧಾನ ರಚನೆಯಲ್ಲಿ ಬ್ರಿಟಿಷ್ ಸಂಸತ್ತಿನ ಕೈವಾಡವಿದೆ’ ಎಂದು ಹೇಳಿದ್ದರು.
‘ನಾನು ಮಂಡಿಸಿದ ಗಣರಾಜ್ಯ ನಿರ್ಣಯಕ್ಕೆ ಯಾರೂ ಏನನ್ನೂ ಸೇರಿಸುವ, ತೆಗೆಯುವು ದನ್ನು ಒಪ್ಪುವುದಿಲ್ಲ’ ಎಂದು ಅಂಬೇಡ್ಕರ್ ಅವರು ಇದ್ದ ಸಭೆಯಲ್ಲೇ ನೆಹರು ಹೇಳಿದ್ದರು. ಸಂವಿಧಾನ ರಚನೆಯಲ್ಲಿ ನೆಹರು ಮತ್ತು ಕಾಂಗ್ರೆಸ್ ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದುಕೊಂಡಿದೆ ಎಂದು ತಿಳಿಸಿದರು. ಕೆಲವರು ಕಾನೂನಿಗೆ ಮಿಗಿಲಾದ ಸಂವಿಧಾನ ರಚನೆಗೆ ಮುಂದಾಗಿದ್ದರು. ಆದರೆ, ಅಂಬೇಡ್ಕರ್ ಅವರು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಪ್ರತಿಪಾದಿಸಿದರು.
ಎಷ್ಟೇ ಪ್ರಯತ್ನಪಟ್ಟರೂ ಅಂಬೇಡ್ಕರ್ ಅಂದುಕೊಂಡಿದ್ದ ಸಂವಿಧಾನ ರಚನೆಯಾಗಲಿಲ್ಲ. ಅಂಬೇಡ್ಕರ್ ಅವರನ್ನು ಮೀಸಲು ಎಂಬ ಸಂಕುಚಿತ ಶಬ್ದಕ್ಕೆ ‘ಮೀಸಲು’ ಮಾಡುತ್ತಾರೆ. ಬಿಜೆಪಿ, ಸಂಘ ಪರಿವಾರ ಮೀಸಲು ವಿರೋಧಿಸುತ್ತದೆ. ಈ ಮೀಸಲು ಎನ್ನುವ ವಿಷಯ ಬ್ರಿಟೀಷರಲ್ಲೂ ಇತ್ತು. ಈ ಪದಕ್ಕೆ ಶಕ್ತಿ ಬಂದಿದ್ದು, ಸಂವಿಧಾನ ರಚನಾ ಸಭೆಯಲ್ಲಿ. ಶೋಷಿತ ಸಮುದಾಯ, ಸಮಸಮಾಜ ನಿರ್ಮಾಣಕ್ಕೆ ಮೀಸಲು ಎಂಬುದು ಸಂವಿಧಾನದಲ್ಲಿ ಒಂದು ಭಾಗವಾದ ಬಳಿಕ ಎಂದು ವಿವರಿಸಿದರು.
ಅಂಬೇಡ್ಕರ್ ಅವರನ್ನು ಸೀಮಿತಗೊಳಿಸಿದ್ದೇವೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಅನುಭಾವ ಆಗ ಬೇಕಾಗಿತ್ತು. ಆದರೆ, ನಾವು ಅವರನ್ನು ಅನುಕೂಲಕ್ಕೆ ಸೀಮಿತವಾಗಿಸಿದ್ದೇವೆ. ಅನುಸಂಧಾನ, ಅನುಷ್ಠಾನವಾಗಬೇಕಾಗಿದ್ದ ಅವರ ಮೌಲ್ಯಗಳು ಆಚರಣೆಗೆ ಸೀಮಿತವಾಗಿವೆ. ಅವರು ಆದರ್ಶವಾಗಬೇಕಾಗಿತ್ತು, ಹೊಗಳಿಕೆಗೆ ಸೀಮಿತವಾಗಿಬಿಟ್ಟಿದ್ದಾರೆ. ಅವರು ಮೌಲ್ಯಗಳನ್ನು ಸಾರುವ ಹಂತದಲ್ಲಿ ಕಣ್ಮರೆಯಾದರು. ಅವರೊಬ್ಬ ಹೆಮ್ಮೆಯ ಭಾರತೀಯ ಸುಪುತ್ರ ಎಂದರು.
ಜಗತ್ತು ಅಂಬೇಡ್ಕರ್ ಅವರನ್ನು ವಿವಿಧ ಆಯಾಮಗಳಲ್ಲಿ ನೋಡುತ್ತದೆ. ಬದುಕು ಮತ್ತು ಭಾಷೆಯಲ್ಲಿ ಅಂತರ ಇಲ್ಲದ ವ್ಯಕ್ತಿತ್ವ ಅವರದ್ದು. ಸಂವಿಧಾನದಲ್ಲಿ ಕಾನೂನಿನ ಸಮಾನತೆ ಮೊದಲ ಅಧ್ಯಾಯದಿಂದ ಕೊನೆಯವರೆಗೂ ಇದೆ. ಅಂಬೇಡ್ಕರ್ ಅವರು ಬದುಕಿನುದ್ದಕ್ಕೂ ಸಮಾನತೆಗೆ ಹಪಹಪಿಸುತ್ತಿದ್ದರು. ಭಾರತೀಯತೆ ಅವರಲ್ಲಿತ್ತು. ಅಂಬೇಡ್ಕರ್ ಅವರ ಚಿಂತನೆ ಹಾಗೂ ಆಲೋಚನೆಗಳು ಅಂತ್ಯವಾಗದಿರಲು ಪರಿನಿರ್ವಾಣ ದಿನವನ್ನು ಮರುನಿರ್ಮಾಣ ದಿನವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಗಾಂಧಿ-ಅಂಬೇಡ್ಕರ್ ಆಲೋಚನೆ ಸಮೀಕರಿಸಲಿ
ಭಾರತದಲ್ಲಿ ಸಮಾನತೆ ಆಚರಣೆಗೆ ತರಲು ಇಬ್ಬರು ವ್ಯಕ್ತಿಗಳು ಭಿನ್ನ ಪಾತ್ರ ವಹಿಸುತ್ತಾರೆ. ಮಹಾತ್ಮ ಗಾಂಧಿ ತಮ್ಮ ಬಳಿ ಇದ್ದ ಕೋಟನ್ನು ಕಳಚಿ ಸಮಾನತೆ ಸಾರಿದವರು. ಅಂಬೇಡ್ಕರ್, ತನ್ನ ಬಳಿ ಇಲ್ಲದ ಸೂಟನ್ನು ಹೊಲಿಸಿ ಕೊಂಡು ತಾನು ಎಲ್ಲರಂತೆ ಸಮಾನ ವ್ಯಕ್ತಿ ಎಂದು ಸಾರಿದರು. ಹೀಗಾಗಿ ಗಾಂಧಿ, ಅಂಬೇಡ್ಕರ್ ಅವರ ಆಲೋಚನೆ ಸಮೀಕರಿಸಬೇಕಿದೆ. ಈ ನಿಟ್ಟಿನಲ್ಲಿ ನಿಜವಾದ ಅಂಬೇಡ್ಕರ್ ಅವರನ್ನು ಜಗತ್ತಿಗೆ, ಯುವ ಸಮುದಾಯಕ್ಕೆ ಪರಿಚಯಿಸುವ ಅವಶ್ಯಕತೆ ಇದೆ ಎಂದು ಎಂದು ಸಂವಿಧಾನ ವಿಶ್ಲೇಷಕ ಡಾ.ಸುಧಾಕರ ಹೊಸಳ್ಳಿ ಅಭಿಪ್ರಾಯಪಟ್ಟರು.
ಶ್ರೀರಾಮಚಂದ್ರನನ್ನು ಒಪ್ಪಿದ್ದ ಅಂಬೇಡ್ಕರ್
ಭಾರತವನ್ನು ವಿಭಜಿಸುವುದು ಎಂದರೆ ಒಂದು ಭಾಗವನ್ನು ಕತ್ತರಿಸಿ ಕೊಡುವುದು ಎಂದರ್ಥ ಎಂಬುದು ಅಂಬೇಡ್ಕರ್
ಅವರ ಅಭಿಪ್ರಾಯವಾಗಿತ್ತು. ಪ್ರಸ್ತುತ ಅಂಬೇಡ್ಕರ್ ಅವರನ್ನು ಈ ದೇಶದ ಸಂಸ್ಕೃತಿ, ನಾಗರಿಕತೆ ವಿರುದ್ಧವಾಗಿ ಬಿಂಬಿಸ ಲಾಗುತ್ತಿದೆ. ಆದರೆ, ಅವರು ಸಂವಿಧಾನದ ೩ನೇ ಭಾಗದಲ್ಲಿ ಶ್ರೀರಾಮಚಂದ್ರ ಪ್ರಭುವಿನ ಭಾವಚಿತ್ರ ಹಾಕುತ್ತಾರೆ. ಲಂಕೆಯನ್ನು ಗೆದ್ದು ಜಯಿಸಿದ ರಾಮ- ಲಕ್ಷ್ಮಣರನ್ನು ಸಂವಿಧಾನದ ಒಳಗೆ ಸೇರಿಸಿದ್ದಾರೆ.
ಸಂವಿಧಾನದ ೪ನೇ ಭಾಗ ಒಳ್ಳೆಯ ಸರಕಾರ ರಚನೆ ಕುರಿತು ಹೇಳುತ್ತದೆ. ಅದರಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ
ಗೀತೆಯ ಸಾರವನ್ನು ಉಲ್ಲೇಖ ಮಾಡಿದ್ದಾರೆ. ಅವರು ದೇಶದ ಭಾಷೆ, ಸಂಸ್ಕೃತಿಯನ್ನು ಯಾವತ್ತೂ ವಿರೋಧಿಸಿಲ್ಲ ಎಂದು ಡಾ.ಸುಧಾಕರ ಹೊಸಳ್ಳಿ ಹೇಳಿದರು.
ಸಂವಿಧಾನ ರಚನೆ ಹೊಣೆ ಅಂಬೇಡ್ಕರ್ ಹೆಗಲಿಗೆ
ಸಂವಿಧಾನ ರಚನಾ ಸಮಿತಿಯ ಉಪಾಧ್ಯಕರಾಗಿದ್ದ ಟಿ.ಟಿ.ಕೃಷ್ಣಮಾಚಾರ್ಯರು, ಕರಡು ರಚನಾ ಸಮಿತಿಗೆ ಏಳು ಜನರನ್ನು ನೇಮಿಸಿತ್ತು. ಅದರಲ್ಲಿ ಒಬ್ಬರು ರಾಜೀನಾಮೆ ಕೊಟ್ಟಾಗ ಅವರ ಜಾಗಕ್ಕೆ ಮತ್ತೊಬ್ಬರ ಆಯ್ಕೆಯಾಯಿತು. ಒಬ್ಬರು ತೀರಿ ಹೋದರು, ಒಬ್ಬರು ಅಮೆರಿಕಕ್ಕೆ ಹೋದರೆ, ಮತ್ತೊಬ್ಬ ಸದಸ್ಯರು ತಾವು ಪ್ರತಿನಿಧಿಸುತ್ತಿದ್ದ ರಾಜ್ಯದ ವಿಷಯಗಳ ತಲ್ಲೀನರಾಗಿ ದ್ದರು. ಇನ್ನಿಬ್ಬರು ದೆಹಲಿಯಿಂದ ದೂರವಿದ್ದು, ಅನಾರೋಗ್ಯದ ಕಾರಣದಿಂದ ಸಂವಿಧಾನ ರಚನೆಯಲ್ಲಿ ಭಾಗವಹಿಸಲಿಲ್ಲ. ಹೀಗಾಗಿ ಸಂವಿಧಾನವನ್ನು ರಚಿಸುವ ಸಂಪೂರ್ಣ ಜವಾಬ್ದಾರಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಗಲಿಗೆ ಬಿತ್ತು. ಈ ಜವಾಬ್ದಾರಿ ಯನ್ನು ಸಮರ್ಪಕ ವಾಗಿ ಹಾಗೂ ಪ್ರಶಂಸನೀಯ ರೀತಿಯಲ್ಲಿ ನಿಭಾಯಿಸಿದಕ್ಕಾಗಿ ನಾವೆಲ್ಲರೂ ಅವರಿಗೆ ಋಣಿ ಯಾಗಿರಬೇಕು ಎಂದು ಹೇಳಿದರು.
ಡಾ.ಸುಧಾಕರ ಹೊಸಳ್ಳಿ ಅವರು ವಿಶ್ವವಾಣಿ ದಿನಪತ್ರಿಕೆಯಲ್ಲಿ ಅನೇಕ ಲೇಖನಗಳನ್ನು ಬರೆದಿದ್ದಾರೆ. ಸಮರ್ಥ ಲೇಖಕರ ರಾಗಿರುವ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಸುಮಾರು ೨೬ ಪುಸ್ತಕಗಳನ್ನು ರಚಿಸಿದ್ದಾರೆ. ಕೆಲವು ಪುಸ್ತಕಗಳು ಪಠ್ಯವಾಗಿ ಆಯ್ಕೆಯಾಗಿವೆ. ೨೫೦ಕ್ಕೂ ಹೆಚ್ಚು ಲೇಖನಗಳು ಪ್ರತಿಷ್ಠಿತ ಪತ್ರಿಕೆ, ಜರ್ನಲ್‌ಗಳಲ್ಲಿ ಪ್ರಕಟವಾಗಿವೆ.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು