Thursday, 15th May 2025

ಮನೆ ಸ್ವಚ್ಛತೆಯ ಮನೋಭಾವ ಊರಿನ ಸ್ವಚ್ಛತೆಗೂ ಬರಬೇಕು

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ – 176

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಏಕಗಮ್ಯಾನಂದ ಸ್ವಾಮೀಜಿ ಕಿವಿಮಾತು

ಬೆಂಗಳೂರು:  ಸ್ವಚ್ಛತೆ ಪ್ರತಿಯೊಬ್ಬಮನುಷ್ಯನಲ್ಲಿದೆ. ಆದರೆ, ಕೇವಲ ತಮ್ಮ ಮನೆಗೆ ಸೀಮಿತಗೊಳಿಸಿದ್ದಾರೆ. ಅದನ್ನು ಹೊರತುಪಡಿಸಿ, ಪ್ರತಿಯೊಬ್ಬರು ತಮ್ಮ ಊರು, ರಸ್ತೆ, ರಾಜ್ಯ, ದೇಶವನ್ನು ಕೂಡ ತಮ್ಮ ಮನೆಯಂತೆ ಶ್ವಚ್ಛವಾಗಿಡುವ ಕಡೆ ಹೆಚ್ಚಿನ ಗಮನಹರಿಸಬೇಕು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೋಮವಾರ ಸ್ವಚ್ಛತೆ ಹಾಗೂ ಮನೆ ಕಸ ನಿರ್ವಹಣೆ ಕುರಿತಂತೆ ವಿಶೇಷ ಅತಿಥಿ ಯಾಗಿ ಮಂಗಳೂರಿನ ರಾಮಕೃಷ್ಣ ಆಶ್ರಮದ ಏಕಗಮ್ಯಾನಂದ ಸ್ವಾಮೀಜಿ ಸ್ವಚ್ಛತೆ ಕುರಿತಂತೆ ಹೇಳಿದ್ದು ಹೀಗೆ. ಸ್ವಚ್ಛತೆ ಎಂಬುದು ಎಲ್ಲರಿಗೂ ಬೇಕು. ಆದರೆ, ನಮ್ಮ ಮನೆ ಸ್ವಚ್ಛತೆ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ. ಅದನ್ನು ಬಿಟ್ಟು ಮನೆ ಹೊರಗಿನ ಸ್ವಚ್ಛತೆಯ ಬಗ್ಗೆಯೂ ಯೋಚಿಸಿದಾಗ ಸ್ವಚ್ಛತೆಯ ಕನಸು ನನಸಾಗುತ್ತದೆ. ಜನರಲ್ಲಿ ಇಂತಹ ಭಾವನೆ ಮೂಡಿಸುವುದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ರೂಪಿಸಿ ದರು.

ಊರಿನ ಸ್ವಚ್ಛತೆಗೆ ಯಾರೂ ಕೈಜೋಡಿಸುವುದಿಲ್ಲ ಎಂದು ಕುಳಿತರೆ ಉದ್ದೇಶ ಸಫಲವಾಗುವುದಿಲ್ಲ. ಯಾರು ಬರದೇ ಇದ್ದರೂ ಪರವಾಗಿಲ್ಲ, ನಾನೊಬ್ಬ ನಾದರೂ ಮಾಡಿಕೊಂಡು ಹೋಗುತ್ತೇನೆ ಎಂದು ನಿರ್ಧರಿಸಿ ಮುಂದೆ ಹೆಜ್ಜೆ ಇಟ್ಟರೆ ಕ್ರಮೇಣ ಇತರರೂ ಬಂದು ಸೇರಿಕೊಳ್ಳುತ್ತಾರೆ. ಇದಕ್ಕೆ ತಾವು ಮಂಗಳೂರಿನಲ್ಲಿ ಕೈಗೊಂಡಿದ್ದ ಅಭಿಯಾನವೇ ಸಾಕ್ಷಿ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಅಭಿಯಾನ ಕರೆಕೊಟ್ಟಾಗ ನಮ್ಮ ರಾಮಕೃಷ್ಣ ಮಠಕ್ಕೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಮಂತ್ರಣ ಬಂದಿತ್ತು. ಪ್ರತಿ ಭಾನುವಾರ 2 ತಾಸು, 5 ವರ್ಷ ನಿರಂತರವಾಗಿ ಸ್ವಚ್ಛತೆಗಾಗಿ ಮೀಸಲಿಡುವಂತೆ ಪ್ರಧಾನಿ ಕರೆ ನೀಡಿದ್ದರು.

ಆದರೆ, ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಚಿಂತೆಯಾಗಿತ್ತು. ಜನರು ಇದಕ್ಕೆ ಬೆಂಬಲ ನೀಡುತ್ತಾರೋ, ಇಲ್ಲವೋ ಎಂಬ ಅನುಮಾನ ಇತ್ತು. ಹತ್ತು ಹಲವು ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಚರ್ಚಿಸಿಲಾಯಿತು. ಆರಂಭದಲ್ಲಿ ಜನರು ಬೆಂಬಲ ನೀಡುತ್ತಾರೆ. ಬರುಬರುತ್ತ ಆಸಕ್ತಿ ಕಳೆದು ಕೊಳ್ಳುತ್ತಾರೆ ಎಂದವರೇ ಹೆಚ್ಚು. ಇನ್ನು ಮಂಗಳೂರಿನಲ್ಲಿ ಭಾನುವಾರವೆಂದರೆ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಿ ಜನರು ವಿಶ್ರಾಂತಿಗೋ ಅಥವಾ ಖಾಸಗಿ ಕೆಲಸಗಳಲ್ಲೋ ತೊಡಗಿಕೊಳ್ಳುತ್ತಾರೆ. ಹೀಗಾಗಿ ಇದು ಸಾಧ್ಯವೇ ಎಂಬ ಅನುಮಾನ ನನಗೂ ಉಂಟಾಗಿತ್ತು.

ಹೇಗಾದರೂ ಇದನ್ನು ಕಾರ್ಯರೂಪಕ್ಕೆ ತರಲೇ ಬೇಕು ಎಂದು ನಿರ್ಧರಿಸಿ 2015ರ ಜ. 30ರಂದು ಗಾಂಧಿ ಹುತಾತ್ಮರಾದ ದಿನ ಸ್ವಚ್ಛತೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡು -. 1ರಂದು ಜನರ ಸಹಕಾರ ಪಡೆದು ಶ್ರಮದಾನ ಮಾಡಿದೆವು. ಮೊದಲ ಒಂದೆರಡು ವಾರ ಉತ್ತಮ ಪ್ರತಿಕ್ರಿಯೆ ಬಂದಿತ್ತು. ನಂತರದಲ್ಲಿ ಜನರ ಆಸಕ್ತಿ ಕಡಿಮೆಯಾಗುತ್ತಾ ಹೋಯಿತು. ಆದರೆ, ಧೃತಿಗೆಡಲಿಲ್ಲ, ಆರಂಭಿಸಿದ್ದಾಗಿದೆ.

ಯಾರೂ ಬಾರದೇ ಇದ್ದರೂ ನಾನೊಬ್ಬನೇ ಮುಂದಿನ 40 ವಾರ ಪ್ರತಿ ಭಾನುವಾರ ಸ್ವಚ್ಛತೆಗೆ ಮೀಸಲಿಡಲು ನಿರ್ಧರಿಸಿದೆ. ಹತ್ತನೆ ಕಾರ್ಯಕ್ರಮದ ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್ ಕರೆ ಮಾಡಿ, ನಿಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದೇ ಎಂದು ಕೇಳಿದರು. ಆಹ್ವಾನಿಸಿದಾಗ ಬಂದು ಪಾಲ್ಗೊಂಡರು. ಆ ಕಾರ್ಯಕ್ರಮ ಭಾರೀ ಬದಲಾವಣೆ ತಂದಿತು. ಜನ ನಮ್ಮೊಂದಿಗೆ ಕೈಜೋಡಿಸಿದರು.

ಮಂಗಳೂರಿನಲ್ಲಿ ಕೇವಲ ಕಸ ಗುಡಿಸುವುದಲ್ಲದೆ, ಬಸ್ ನಿಲ್ದಾಣ ಸ್ವಚ್ಛತೆ, ಬಸ್ಸ್ ತಂಗುದಾಣಗಳಿಗೆ ಬಣ್ಣ ಬಳಿಯುವುದು, ರಸ್ತೆ ಸ್ವಚ್ಛತೆ, ಪಾಳುಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಪಾರ್ಕ್‌ಗಳನ್ನು ಪುನರ್ ನಿರ್ಮಾಣ ಮಾಡುವುದು, ನಗರದಲ್ಲಿ ಅಂಟಿಸಿದ್ದ ಕರಪತ್ರಗಳು ಮತ್ತು ಬ್ಯಾನರ್ ಗಳನ್ನು ತೆರವುಗೊಳಿಸುವ ಕಾರ್ಯ ಹೀಗೆ ಸ್ವಚ್ಛತೆಗೆ ಒತ್ತು ಕೊಡುತ್ತಾ ಬಂದೆವು. ಇದನ್ನು ಯಶಸ್ವಿಯಾಗಿ ಮುಗಿಸಲು ನಮ್ಮೊಂದಿಗೆ ಸುಮಾರು 60 ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿವೆ. ಹೀಗೆ 39 ಕಾರ್ಯಕ್ರಮಗಳನ್ನು ನೆರವೇರಿಸಿ, 40ನೇ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ಆಹ್ವಾನಿಸಿ ಮೊದಲ ಹಂತದ ಸಮಾರೋಪ ಸಮಾರಂಭ ನೆರವೇರಿಸಿದೆವು. ಎರಡು ತಿಂಗಳ ಬಿಡುವು ನೀಡಿ ಮತ್ತೆ 2ನೇ ಹಂತದ ಸ್ವಚ್ಛತ ಕೆಲಸವನ್ನು ಪ್ರಾರಂಭಿಸಿದೆವು.

ಎರಡನೇ ಹಂತದಲ್ಲಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕೆಂದು ನಿರ್ಧರಿಸಿ, ಶಾಲೆಗಳಿಗೆ ತೆರಳಿ ಅರಿವಿನ ಕಾರ್ಯಕ್ರಮಗಳನ್ನು ನೀಡಿ ದೆವು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 108 ಶಾಲೆಗಳು ಮತ್ತು 13000 ಮಕ್ಕಳಿಗೆ ತಿಂಗಳಿಗೊಂದರಂತೆ 6 ಕಾರ್ಯಕ್ರಮಗಳನ್ನು ನೀಡಲಾಯಿತು. ಹಾಗೆಂದು ನಾವು ಸಾಧಿಸಿದ್ದೇವೆ ಎಂಬ ಭಾವನೆ ಇನ್ನೂ ಬಂದಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಆಶಯವಿದೆ. ಸ್ವಚ್ಛತೆ ಅಭಿಯಾನಕ್ಕೆ ನೀಡಿದ ಬೆಂಬಗವನ್ನು ಮಂಗಳೂರಿನ ಜನ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಏಕಗಮ್ಯಾನಂದ ಸ್ವಾಮೀಜಿ ಹೇಳಿದರು.

ಮಂಗಳೂರು ನಗರಸಭೆ ತ್ಯಾಜ್ಯ ವಿಲೇವಾರಿ ಮಾಡುವ ಉದ್ದೇಶ ಮಂಗಳೂರಿನಲ್ಲಿ ಕಾಲಿ ಜಾಗದಲ್ಲಿ ಕಸ ಹಾಕಲಾಗುತ್ತಿತ್ತು. ಅದನ್ನು ಬ್ಲಾಕ್ ಸ್ಪಾಟ್ ಎಂದು ಗುರುತಿಸಿ, ಕಸ ಹಾಕುವುದನ್ನು ತಪ್ಪಿಸಲು ಬಹಳ ಕಷ್ಟ ಪಡಬೇಕಾಯಿತು. ಹಗಲು, ರಾತ್ರಿ ಎನ್ನದೆ ಕೆಲಸ ಮಾಡಿ, ಕೊನೆಯಲ್ಲಿ ಕಸ ಹಾಕಿದವರು ಸಿಕ್ಕಿದರೆ, ಅದನ್ನು ಅವನರ ಮನೆಗೆ ತಲುಪಿಸುವ ಕೆಲಸ ಮಾಡಿ, ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಇದರ ಪರಿಣಾಮ ಮಂಗಳೂರಿನಲ್ಲಿ ಸುಮಾರು ೮೦೦ರಷ್ಟಿದ್ದ ಬ್ಲಾಕ್‌ಸ್ಪಾಟ್‌ಗಳ ಸಂಖ್ಯೆ ಈಗ ೮ಕ್ಕೆ ಇಳಿದಿದೆ.

ಮಂಗಳೂರಿನ ನಗರಸಭೆ ಕಸವಿಲೆವಾರಿ ಕಾರ್ಯಕ್ಕೆ ವಾರ್ಷಿಕ 40 ಕೋಟಿ ರು. ವೆಚ್ಚ ಮಾಡುತ್ತಿದೆ. ನಮಗೆ ಈ ಟೆಂಡರ್ ನೀಡಿದಲ್ಲಿ ಪ್ರಿತಿ ವರ್ಷ ಶೇ.5 ರಷ್ಟು ವೆಚ್ಚ ಏರಿಕೆಯನ್ನು ವರ್ಷಕ್ಕೆ ಶೇ. 5ರಷ್ಟು ಕಡಿಮೆ ಮಾಡುತ್ತೇವೆ. ಮೊದಲ 7 ವರ್ಷ ಹೀಗೆ ಮಾಡಿದರೆ ನಂತರದ ೭ವರ್ಷ ನಗರಸಭೆ ಕಸ ವಿಲೆ ವಾರಿಗೆ ಯಾವುದೆ ಹಣ ವ್ಯಯ ಮಾಡದಂತೆ ಮಾಡಿತೋರಿಸುತ್ತೇವೆ ಎಂದು ಹೇಳಿದ್ದೇವೆ. 3 ನೇ ಹಂತದಲ್ಲಿ ನಾವೆ ಕಸದಿಂದ ಹಣ ಸಂಪಾದಿಸಿ ನೀಡುವೆ ಎಂದು ಪಾಲಿಕೆಗೆ ಭರವಸೆ ನೀಡಿದ್ದೇವೆ. ಪಾಲಿಕೆ ಏನು ನಿರ್ಧರಿಸುತ್ತದೋ ನೋಡಬೇಕು ಎಂದು ಏಕಗಮ್ಯಾನಂದ ಸ್ವಾಮೀಜಿ ಹೇಳಿದರು.

***

ಏಕಗಮ್ಯಾನಂದ ಸ್ವಾಮಿಜಿ ಸ್ವಚ್ಛ ಮಂಗಳೂರು ಕಾರ್ಯಕ್ರಮದ ಹಿಂದಿನ ಶಕ್ತಿ. 10000 ಸ್ವಯಂ ಸೇವಕರನ್ನು ಪ್ರೇರೇಪಿಸಿ ಸ್ವಚ್ಛತೆಗೆ ತೊಡಗಿಸಿದ ಹೆಗ್ಗಳಿಕೆ ಅವರದ್ದು. ಒಟ್ಟಾರೆ 20ಲಕ್ಷ ತಾಸು ಸ್ವಚ್ಛತಾ ಶ್ರಮದಾನ ಮಾಡಿದ ಹೆಗ್ಗಳಿಗೆ ಸ್ವಾಮೀಜಿಗೆ ಸಲ್ಲುತ್ತದೆ. ವಿದ್ಯುತ್ ಚಾಲಿತ ವಾಹನವನ್ನು ರಾಜ್ಯ ದಲ್ಲಿ ಮೊದಲು ಪ್ರಯತ್ನ ಮಾಡಿ ಯಶಸ್ಸು ಸಾಧಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
– ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಶ್ವವಾಣಿ ಪತ್ರಿಕೆ

ವಿಶಿಷ್ಟ ಆಲೋಚನೆ ಮತ್ತು ಅದನ್ನು ಕಾರ್ಯರೋಪಕ್ಕೆ ತರುವುದರಲ್ಲಿ ಸ್ವಾಮೀಜಿಯವರ ಬದ್ಧತೆ ಮೆಚ್ಚುವ ವಿಚಾರ. ಹೊಸ ಯೋಜನೆಗಳಿಗೆ ಮುಕ್ತ
ಮನಸ್ಸಿನಿಂದ ಸ್ಪಂದಿಸಿ ಅದನ್ನು ಕಾರ್ಯರೂಪಕ್ಕೆ ತರುತ್ತಾರೆ. ಕೇವಲ ಸನ್ಯಾಸ, ಸಮಾಜಸೇವೆ, ಶಿಕ್ಷಣ ಮಾತ್ರವಲ್ಲದೆ, ಸ್ವಚ್ಛತೆ ಬಗ್ಗೆ ಹೊಸ ಮಾರ್ಗ ಸೂಚಿ ಹಾಕಿಕೊಟ್ಟ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.

– ಡಾ.ಎಂ.ಆರ್.ರವಿ, ಚಾಮರಾಜನಗರ ಜಿಲ್ಲಾಧಿಕಾರಿ

***

ಏಕಗಮ್ಯಾನಂದ ಸ್ವಾಮೀಜಿ ಹೇಳಿದ್ದು

? ರಾಮಕೃಷ್ಣ ಆಶ್ರಮ ಮೊದಲಿನಿಂದಲೂ ಪ್ರಸಿದ್ಧಿ ಪಡೆದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ನಿರ್ಲಕ್ಕೀಡಾದ ಕಾರ್ಯಕ್ರಮಗಳನ್ನು ಗಮನಿಸಿ ಅದರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗುತ್ತದೆ. ಇದು ಮಠದ ವಾಡಿಕೆ.
? ಕಾಲಿ ಜಾಗದಲ್ಲಿ ಕಸ ಹಾಕುತ್ತಿದ್ದುದನ್ನು ತಪ್ಪಿಸಲು ಸಾಕಷ್ಟು ಕಷ್ಟಪಡಬೇಕಾಯಿತು. ಬೆಳಿಗ್ಗೆ, ರಾತ್ರಿ ಎನ್ನದೆ ಸ್ವಯಂ ಸೇವಕರು ಕಾರ್ಯ ನಿರ್ವಹಿಸಿ
ಯಶಸ್ಸು ಕಂಡಿದ್ದಾರೆ.

? ಮನೆ ಕಸ ಸಾವಯವ ಗೊಬ್ಬರವಾಗಿ ಪರಿವರ್ತನೆ, ಮಿಯಾವಾಕಿ ಹೆಸರಿನಡಿ ಮರನೆಡುವ ಮತ್ತು ಸಂರಕ್ಷಿಸುವ ಕಾರ್ಯ, ಕಸ ವಿಲೆವಾರಿಗೆ ಯಾವುದೆ ವೆಚ್ಚ ಬಾರದೇ ಇರಲು ವಿದ್ಯುತ್‌ತ್ ಚಾಲಿತ ವಾಹನ ಬಳಕೆ ಮಾಡುತ್ತಿದ್ದೇವೆ.
? ಮಂಗಳೂರಿನಾದ್ಯಂತ ಪೋಸ್ಟರ್ ಮತ್ತು ಬ್ಯಾನರ್ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. 800 ಸಂಖ್ಯೆಯಲ್ಲಿದ್ದ ಬ್ಲಾಕ್ ಸ್ಪಾಟ್ಸ್ 8 ಇಳಿಸಲಾಗಿದೆ.

ಮನೆ-ಮನೆಗೆ ತೆರಳಿ ಕಸ ವಿಲೆವಾರಿ ಮತ್ತು ಅರಿವು ಮೂಡಿಸುವ ಕಾರ್ಯ ನಡೆಸಲಾಗಿದೆ.