Wednesday, 14th May 2025

ಸೈನಿಕನನ್ನು ಹಿಂಡಿ ಹಿಪ್ಪೆ ಮಾಡುವುದೇ ಹಿಮಗಾಳಿ

ಕ್ಲಬ್‌ಹೌಸ್ ಸಂವಾದ 158

ಯುದ್ಧ ಭೂಮಿ-ಸಿಯಾಚಿನ್ ನೆತ್ತಿ ಮೇಲೆ ನಿಂತಿದ್ದು ಎಂಬ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಎಸ್.ಉಮೇಶ್ ಅಭಿಮತ

ಬೆಂಗಳೂರು: ಸಿಯಾಚಿನ್ ಭಯಾನಕ, ಅತ್ಯಂತ ಎತ್ತರದ, ದುಬಾರಿ ಯುದ್ಧಭೂಮಿ. ಜಮ್ಮು ಕಾಶ್ಮೀರದ ಶ್ರೀನಗರದ ಬೀದಿ ಬೀದಿಗಳಲ್ಲಿ ಅಡ್ಡಾಡಬಹುದು. ಆದರೆ, ಭದ್ರತೆ ದೃಷ್ಟಿಯಿಂದ ಸಿಯಾಚಿನ್ ಸೂಕ್ಷ್ಮ ಪ್ರದೇಶ. ನಾನು ಹಲವರ ಅನುಮತಿ ಮೇರೆಗೆ 6-7 ತಿಂಗಳ ನಂತರ ಸಿಯಾಚಿನ್ ಬೇಸ್ ಕ್ಯಾಂಪ್‌ಗೆ ಹೋಗಿದ್ದೆ. ಬೆಂಗಳೂರಿನಿಂದ 2500 ಕಿ.ಮೀ ಇರಬಹುದು ಎಂದು ಎಸ್. ಉಮೇಶ್ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್ ಹಮ್ಮಿಕೊಂಡಿದ್ದ ವಿಶ್ವದ ಭಯಾನಕ ಯುದ್ಧ ಭೂಮಿ- ಸಿಯಾ ಚಿನ್ ನೆತ್ತಿ ಮೇಲೆ ನಿಂತಿದ್ದು ಸಂವಾದ ದಲ್ಲಿ ಮಾತನಾಡಿದ ಅವರು, ಚಳಿಗಾಲದಲ್ಲಿ ಬಿಸಿ ನೀರನ್ನು ಮೇಲೆಸೆದರೆ ಬರುವಾಗ ಗಡ್ಡೆಗಳಾಗಿರುತ್ತವೆ, ಮೊಟ್ಟೆಯನ್ನು ಸುತ್ತಿಗೆ ಯಿಂದ ಹೊಡೆಯಬೇಕು.

ಇಲ್ಲಿ ಸೈನಿಕರು 3 ತಿಂಗಳು ಕೆಲಸ ಮಾಡಬೇಕು. ಆಮ್ಲಜನಕದ ಕೊರತೆ, ಶ್ವಾಸಕೋಶ ದಲ್ಲಿ ನೀರು ತುಂಬಬಹುದು, ಭಯಾನಕ ಗಾಳಿ ಬೀಸಿ ಟೆಂಟ್ ಕಿತ್ತುಕೊಂಡು ಹೋಗಲಿದೆ. ಎಷ್ಟೇ ಮಾನಸಿಕ ಮತ್ತು ದೈಹಿಕ ತರಬೇತಿ ನೀಡಿದ್ದರೂ, ಅಭದ್ರತೆ ಇದ್ದೇ ಇರುತ್ತದೆ. ಸ್ನೋ ಗಾಗಲ್ಸ್ ಕಡ್ಡಾಯವಾಗಿಲ್ಲದಿದ್ದರೆ ಕುರುಡುತನ ಬಂದುಬಿಡುತ್ತದೆ.

ಇದ್ದಕ್ಕಿದ್ದಂತೆ 300 ಅಡಿ ಕಂದಕ ಸೃಷ್ಟಿಯಾಗಿ, ಸೈನಿಕ ಕೆಳ ಬೀಳುತ್ತಾನೆ. ರಭಸಕ್ಕೆ ಕತ್ತು ಮುರಿಯುತ್ತದೆ. ಇಂದಿಗೂ ಕಂದಕ ಗಳಲ್ಲಿ ಬಿದ್ದ ಸೈನಿಕರ ಶವಗಳನ್ನು ತೆಗೆಯುವುದಕ್ಕೆ ಆಗಿಲ್ಲ. ಕೆಲವೊಮ್ಮೆ ಭಾರತೀಯ ಸೈನಿಕರು ಶತ್ರುಗಳ ಕ್ಯಾಂಪ್‌ಗಳ ಬಳಿಯೇ ಬಿದ್ದಿದ್ದಾರೆ. ಅಲ್ಲಿರುವವರೆಲ್ಲ ಅಪಾರವಾದ ಕಿಚ್ಚು ಇರುವವರೇ. ದೈಹಿಕ ಪರೀಕ್ಷೆಗಳನ್ನು ಪಾಸ್ ಮಾಡದಿದ್ದರೆ ವಾಪಸ್ ಕಳುಹಿಸುತ್ತಾರೆ. ಸೈನಿಕರ ಪ್ಯಾಕ್‌ನಲ್ಲಿ 62 ಸಾಮಗ್ರಿ ಗಳಿರುತ್ತವೆ.

ಸೇನಾ ಕ್ಯಾಂಪ್‌ಗೆ ಹೋದರೆ ಸುಮ್ಮನೆ ಕೂರುವಂತಿಲ್ಲ. ಅಲ್ಲಿ ಬೆಳಕೇ ಇರದೇ, ಜನರೇಟರ್ ಇದ್ದರೂ ಸೀಮೆಎಣ್ಣೆ ಬುಡ್ಡಿ ಉಪ ಯೋಗಿಸಬೇಕು. ಪೈಪ್‌ಲೈನ್ ಮೂಲಕ ಸೀಮೆಎಣ್ಣೆ ಹೋಗಲಿದೆ. ಇದೆಲ್ಲದರ ಮಧ್ಯೆ ಸೈನಿಕನನ್ನು ಹಿಂಡಿ ಹಿಪ್ಪೆ ಮಾಡುವುದೇ ಹಿಮ ಗಾಳಿ. ಅಪ್ಪಿ ತಪ್ಪಿ ಒಬ್ಬೇ ಒಬ್ಬ ಸೈನಿಕ ಒಳಗೆ ಬಿದ್ದನೆಂದರೆ, ಎಲ್ಲಿ ಬಿದ್ದನೆಂಬುದು ತಿಳಿಯುವುದೇ ಇಲ್ಲ. ಒಬ್ಬರಿಗೊಬ್ಬರು ಹಗ್ಗ ಕಟ್ಟಿಕೊಂಡಿರುತ್ತಾರೆ ಎಂದು ವಿವರಿಸಿದರು.

ಫ್ರಾಸ್ಟ್ ಬೈಟ್‌ಗೆ ಕೈ ಬೆರಳು, ಮೂಗಿನ ತುದಿ, ಕಣ್ಣು, ಕಿವಿ ಎಲ್ಲವೂ ತುತ್ತಾಗಲಿವೆ. ದಿಕ್ಸೂಚಿ ಇಲ್ಲಿ ಬಹುದೊಡ್ಡ ಸಮಸ್ಯೆಯಿದ್ದು, ಪ್ರತಿ ಸೈನಿಕನೂ ಎಚ್ಚರಿಕೆಯಿಂದ ಸಾಗಬೇಕು. ದಾರಿ ತಪ್ಪಿದರೆ, ಸರಿದಾರಿಗೆ ಬರುವುದೇ ಕಷ್ಟ. ಆಪರೇಷನ್ ಮೇಘದೂತ್ ವೇಳೆ ಮೇಲಿಂದ ಮೇಲೆ ಶತ್ರುಗಳ ದಾಳಿಯಾಗುತ್ತಿತ್ತು. ಈಗ ಪಾಕಿಸ್ತಾನದಿಂದ ಬರುವವರ ಸಂಖ್ಯೆ ಕಡಿಮೆಯಿದ್ದರೂ ಎಚ್ಚರ ಅವಶ್ಯ. ಅಲ್ಲಿ 3 ಗಂಟೆಗಿಂತ ಹೆಚ್ಚು ಕಾಲ ನಿದ್ದೆ ಮಾಡುತ್ತಿದ್ದಾನೆಂದರೆ ಏನೋ ಆಗಿದೆ ಎಂತಲೇ ಅರ್ಥ.

ಹೀಗಾಗಿ, 1 ಗಂಟೆ, 2 ಗಂಟೆಗೊಮ್ಮೆ ಎಬ್ಬಿಸುತ್ತಿರುತ್ತಾರೆ. ಸಿಯಾಚಿನ್ ಕ್ಯಾಂಪ್‌ನಲ್ಲಿ ಭಗವಂತ ಸ್ತುತಿ ಮಾಡಲಾಗುತ್ತದೆ. ಹಿಂದೂ ಗಳು ಸೇರಿ ಮುಸ್ಲಿಮ್, ಬೌದ್ಧ, ಸಿಖ್ ಎಲ್ಲರೂ ಪ್ರಾರ್ಥನೆ ಮಾಡುತ್ತಾರೆ. ಬ್ಯಾಟಲ್ ಸ್ಕೂಲ್‌ನಲ್ಲಿ ಸೈನಿಕರ ಸಮವಸ, ಗಂಟು ಗಳನ್ನು ಬಿಗಿದುಕೊಂಡು ಹೋಗುವುದು, ಶತ್ರುಗಳ ವಿರುದ್ಧ ಹೋರಾಡುವ ಕುರಿತು ತರಬೇತಿ ನೀಡಲಾಗುತ್ತದೆ. ಅಲ್ಲಿ ಭೀಕರ ಯುದ್ಧ, ಸೈನಿಕರ ಆಕ್ರಂದನ, ಹಿಮಪಾತ, ಸಾವು-ಬದುಕಿನ ಅಂತರ ನೋಡಿದರೆ ಗಾಬರಿಯಾಗುತ್ತದೆ.

ಅಲ್ಲಿನ ಸೈನಿಕನನ್ನು, ಈ ಬಗ್ಗೆ ಕೇಳಿದರೆ, ನಮ್ಮನೆಯಲ್ಲಿ ಎರಡು ವಿಷಲ್‌ಗೆ ಅನ್ನ ಆಗುತ್ತದೆ, ಇಲ್ಲಿ 22 ವಿಷಲ್‌ಗೆ ಅನ್ನವಾಗುತ್ತದೆ ಅಂತಷ್ಟೇ ಹೇಳುತ್ತಾರೆ. ಯಾವುದೇ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ. ಇದು ನಮ್ಮ ಸೈನಿಕರ ದೇಶಪ್ರೇಮ ಎಂದರು.

ಆಹಾರ, ನೀರಿಗೆ ಕಷ್ಟವೋ ಕಷ್ಟ: ಇಲ್ಲಿ ಆಹಾರ ಸೇವನೆ ತುಂಬಾ ಕಷ್ಟ. ನೀರಿಗಾಗಿ ಸಾಕಷ್ಟು ಕಷ್ಟಪಡಬೇಕು. ಕಿತ್ತಳೆ ಹಣ್ಣು ಕಾರ್ಕ್ ಬಾಲ್ ಆಗಿಬಿಡುತ್ತದೆ. ತಲೆ ಸಿಡಿದು ಹೋಗುವಂತೆ ತಲೆನೋವು, ತೂಕ ಇಳಿಕೆ, ನಿದ್ರಾಹೀನತೆ, ಜ್ಞಾಪಕ ಶಕ್ತಿ, ಲೈಂಗಿಕ ಶಕ್ತಿ
ಕುಂದುತ್ತದೆ. ಆದರೂ, ಸಿಯಾಚಿನ್‌ಗೆ ಹೋಗಲು ಸೈನಿಕರು ಮುಗಿಬೀಳುತ್ತಾರೆ. ಅಲ್ಲಿ ಸೇವೆ ಸಲ್ಲಿಸಿದ ಬ್ಯಾಡ್ಜ್ ಎದೆ ಮೇಲಿದ್ದರೆ ಸೈನಿಕ ಹೆಮ್ಮೆ ಪಡುತ್ತಾನೆ.

ಹಲ್ಲು ನೋವು ಬಂತೆಂದು ಸೈನಿಕನನ್ನು ಹೆಲಿಕ್ಯಾಪ್ಟರ್ ನಿಂದ ಕೆಳ ಬಿಡೋಕಾಗುತ್ತಾ? ಸೈನಿಕ ನಿರ್ದಾಕ್ಷಿಣ್ಯವಾಗಿ ಹಲ್ಲುಗಳನ್ನು ಕಿತ್ತೆಸೆಯುತ್ತಾನೆ. ಮಾನಸಿಕವಾಗಿ ಕಷ್ಟಕ್ಕೆ ಬೀಳುವ ಸೈನಿಕರಿಗೆ ಅಧಿಕಾರಿಗಳು ಮಾನಸಿಕ ಸ್ಥೈರ್ಯ ನೀಡುವಂತಹ ಚೆಸ್ ಆಡಿಸು ವುದು, ಮಿಲ್ಕ್ ಶೇಕ್ ಮಾಡುವ, ಜಹಾಂಗೀರ್ ಮಾಡುವ ಚಟುವಟಿಕೆಗಳನ್ನು ಮಾಡಿಸುತ್ತಾರೆ ಎಂದು ಎಸ್.ಉಮೇಶ್ ತಿಳಿಸಿ ದರು.

ಅರ್ಧ ಕಿ.ಮೀ. ಹೋಗಲು ಹರಸಾಹಸ!
ಭಾರತ-ಪಾಕಿಸ್ತಾನ ಗಡಿಯ ತುರ್ತುಕ್ ಹಳ್ಳಿ. ಮನೆಮನೆಯಲ್ಲಿಯೂ ಬಂದೂಕು, ಮದ್ದುಗುಂಡುಗಳು ತುಂಬಿರುತ್ತವೆ. ಜಿಹಾದ್ ವಿಷಬೀಜ ಬಿತ್ತಿರುತ್ತದೆ. ಈಗ ಭದ್ರವಾದ ಭಾರತೀಯ ನೆಲೆಯಿದೆ. ಆಪರೇಷನ್ ಸದ್ಭಾವನ್ ಮೂಲಕ ದೊಡ್ಡ ಬದಲಾವಣೆ ಯಾಗಿದೆ. ಭಾರತೀಯ ಸೈನ್ಯ ಇಲ್ಲಿ ನರಪಿಳ್ಳೆಯನ್ನೂ ಬಿಡುವುದಿಲ್ಲ. ಮಗ ತುರ್ತುಕ್‌ನಲ್ಲಿದ್ದರೆ ಅರ್ಧ ಕಿ.ಮೀ. ದೂರದ ಗಿಲ್ಗಿಟ್‌ನಲ್ಲಿರುವ ಅಪ್ಪನನ್ನು ನೋಡಲು ಹರ ಸಾಹಸ ಪಡಬೇಕು. ದೆಹಲಿಗೆ ಹೋಗಿ ಅನುಮತಿ ಪಡೆದು, ವಾಘಾ ಮೂಲಕ ಹೋಗಬೇಕು ಎಂದು ತಿಳಿಸಿದರು.

ಲ್ಯಾನ್ಸ್ ನಾಯಕ ಹನುಮಂತಪ್ಪ ಹೆಸರು ಕೆತ್ತನೆ
72 ರಿಂದ 83ವರೆಗೆ ಪಾಕಿಸ್ತಾನ ನಿರಂತರ ಪರ್ವತಾರೋಹಿಗಳನ್ನು ಕಳುಹಿಸುತ್ತಿತ್ತು. ಅಲ್ಲಿ ಪಾಕಿಸ್ತಾನ ಧ್ವಜ ನೆಟ್ಟು ನಮ್ಮ ಭೂಮಿ ಎನ್ನುತ್ತಿತ್ತು. ಕರ್ನಲ್‌ಕುಮಾರ್ ಗುಲ್ ಇದನ್ನು ಗುಪ್ತವಾಗಿ ತಿಳಿದುಕೊಂಡು, ಭಾರತೀಯ ಸೈನ್ಯಕ್ಕೆ ಹೇಳಿದಾಗ, ಆಪರೇಷನ್ ಮೇಘದೂತ್ ಎಂಬ ಅದ್ಭುತ ಕಾರ್ಯಾಚರಣೆ ಮಾಡಲಾಗುತ್ತದೆ. ಇದರಿಂದ ಸಂಪೂರ್ಣ ಸಿಯಾಚಿನ್ ಅನ್ನು ಭಾರತ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಬೇಸ್ ಕ್ಯಾಂಪ್‌ನಲ್ಲಿ ಆಪರೇಷನ್ ಮೇಘದೂತ್ ಸ್ಮರಣಾರ್ಥ ಭಾರತೀಯ ಸೈನಿಕರು
ಕುಟುಂಬದೊಂದಿಗೆ ಇರುವ ಸ್ಮಾರಕ ನಿರ್ಮಿಸಲಾಗಿದೆ. ಭಗವದ್ಗೀತೆ ಸಾಲುಗಳು, ಹುತಾತ್ಮ ಸೈನಿಕರ ಹೆಸರು ಕೆತ್ತಲಾಗಿದೆ. ನಮ್ಮವರೇ ಆದ ಲ್ಯಾನ್ಸ್ ನಾಯಕ ಹನಮಂತಪ್ಪ ಅವರ ಹೆಸರೂ ಇಲ್ಲಿರುವುದು ಹೆಮ್ಮೆ ವಿಚಾರ ಎಂದು ಉಮೇಶ್ ತಿಳಿಸಿದರು.

ಗೋಪಿಬಾಬಾಗೆ ಸೆಲ್ಯೂಟ್!
ಶತ್ರುಗಳೊಂದಿಗೆ ಏಕಾಂಗಿಯಾಗಿ ಹೋರಾಡುವ ಗೋಪಿಬಾಬಾ ಅವರ ಸ್ಮರಣಾರ್ಥ ಇಲ್ಲಿ ಮಂದಿರವಿದೆ. ಎತ್ತರದ  ಹಿಮ ಶಿಖರಗಳಿಗೆ ಹೋಗುವ ಮುಂಚೆ ಮತ್ತು ಹಿಂದಿರುಗಿದ ನಂತರ ಸೈನಿಕರು ಮೊದಲಿಗೆ ಇಲ್ಲಿ ಹೋಗಿ ಸೆಲ್ಯೂಟ್ ಹೊಡೆಯುತ್ತಾರೆ. ಹಿಮಪಾತಗಳ ಹಿಂದಿನ ದಿನ ಬಾಬಾ ಕನಸಿನಲ್ಲಿ ಬಂದು ಎಚ್ಚರಿಕೆ ನೀಡುತ್ತಾರೆಂದು ನಂಬಿಕೆ ಅಲ್ಲಿನವರಿಗೆ ಇದೆ. ಸಿಯಾಚಿನ್ ಪುಸ್ತಕಕ್ಕಾಗಿ ಲೇಖಕರ ಸಂಪರ್ಕ: 9900580394

***

ಎಸ್.ಉಮೇಶ್ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಇನೋಸಿಸ್‌ನ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೊಚ್ಚಲ ಕೃತಿಯಾಗಿ ದಿ ಲಾಸ್ಟ್ ಲೆಕ್ಚರ್, ನಂತರ ನಾಗಾರಹಸ್ಯ, ತಾಷ್ಕೆಂಟ್ ಡೇರಿ ಮತ್ತಿತರ ಕೃತಿಗಳನ್ನು ರಚಿಸಿದ್ದಾರೆ. ಇವರ ಸಿಯಾಚಿನ್ ಕೃತಿಯನ್ನು ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.
ಎಸ್.ಎಲ್. ಭೈರಪ್ಪನವರು ಬಿಡುಗಡೆ ಮಾಡಿದ್ದಾರೆ.
– ವಿಶ್ವೇಶ್ವರ ಭಟ್ ವಿಶ್ವವಾಣಿ ಪ್ರಧಾನ ಸಂಪಾದಕರು

***

*ಭಾರತೀಯ ಸೈನ್ಯ ಯಾವೊಬ್ಬ ಸೈನಿಕನನ್ನೂ ಸಿಯಾಚಿನ್‌ಗೆ ಆಯ್ಕೆ ಮಾಡುವುದಿಲ್ಲ.
*ಇಲ್ಲಿ ಕೆಲಸ ಮಾಡುವುದು ಆಯಾ ಸೈನಿಕನ ಸ್ವಯಂ ಆಸಕ್ತಿ
*ಇಲ್ಲಿ ಕಾರ್ಯನಿರ್ವಹಿಸಿದರೆ ಕಂದು ಮತ್ತು ಬಿಳಿಯ ಬಣ್ಣದ ಬ್ಯಾಡ್ಜ್ ಎದೆಗೇರುತ್ತದೆ
*2012ರಲ್ಲಿ ಸಿಯಾಚಿನ್‌ನಲ್ಲಿ ಪಾಕಿಸ್ತಾನದ 130 ಸೈನಿಕರು ಸಾಯುತ್ತಾರೆ.
*ಆಗ ಶಾಂತಿ ಮಾತುಕತೆ ನಡೆಯುತ್ತದೆ, ಭಾರತ ಅದನ್ನು ತಿರಸ್ಕರಿಸುತ್ತದೆ.