Thursday, 15th May 2025

ಸಂಜೆಯ ರಾಗಕೆ ಬಾನು ಕೆಂಪೇರಿದ ಸಮಯ

ಸಂವಾದ – ೧೬೭

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅನಂತ-ಅಶ್ವತ್ಥ ಗಾನಯಾನದ ಕೆನೆಹಾಲ್ಜೇನು ಸವಿದ ಕೇಳುಗ ಕಿವಿಗಳು

ಬೆಂಗಳೂರು: ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬುಧವಾರ ಸಂಜೆ ರಾಗ ರತಿಯಿಂದ ಬಾನು ಕೆಂಪೇರಿದ ಸಮಯ. ಏಳು ಗಂಟೆಯ ಇಳಿಸಂಜೆಯಲ್ಲಿ ಆರಂಭ ವಾದ ಗಾನಯಾನ ಸಮಯ ಮೀರಿದರೂ ಶೋತೃಗಳ ಎದೆಗೆ ಝಲ್ಲೆನ್ನುವ ಅನುಭವವನೀಯುತ್ತಲೇ ಇತ್ತು.

ವಿಭಿನ್ನ ಪ್ರಯತ್ನಗಳಿಗೆ ಹೆಸರಾದ ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ಇಂದು, ಸುಗಮ ಸಂಗೀತ ದಿಗ್ಗಜ ರಾದ ಮೈಸೂರು ಅನಂತಸ್ವಾಮಿ-ಸಿ.ಅಶ್ವಥ್ ಅವರ ಸ್ಮರಣಾರ್ಥ ಗೀತ ಗಾಯನ ಕಾರ್ಯಕ್ರಮ ಆಯೋಜಿಸಿತ್ತು. ಅವರ ಶಿಷ್ಯಂದಿರು ಮಾಡಿದ ಗಾಯನ ಮೋಡಿಗೆ ಬುಧವಾರದ ಕ್ಲಬ್‌ಹೌಸ್ ಮಂತ್ರಮುಗ್ಧವಾಗಿತ್ತು.

ಅನಂತ-ಅಶ್ವಥ್ ಸುಗಮ ಸಂಗಮ ಶೀರ್ಷಿಕೆಯಡಿ ಮಧು ಮನೋಹರನ್ ಹಾಗೂ ಬಿ.ವಿ. ಪ್ರವೀಣ್- ಪ್ರದೀಪ್ ಸಹೋದರರು ಹರಿಸಿದ ರಾಗದ ರಂಗು, ಇದರ ನಡುವೆ ರೂಪಾ ಗುರುರಾಜ್ ಅವರ ಸವಿಯಾದ ನಿರೂಪಣೆ ಕಾರ್ಯಕ್ರಮ ಕಳೆಗಟ್ಟಿತ್ತು. ಕ್ಲಬ್‌ಹೌಸ್‌ನ ಇಂದಿನ ಕಾರ್ಯಕ್ರಮದ ಮತ್ತೊಂದು ವಿಶೇಷತೆಯೆಂದರೆ ವಾದ್ಯ ಮೇಳವಿಲ್ಲದೇ ಗಾಯಕರು ಗಾನಸುಧೆ ಹರಿಸಿದ್ದು. ಮೂವರೂ ಗಾಯಕರು ವಾದ್ಯ ಪರಿಕರಗಳ ಹಂಗಿಲ್ಲದೇ, ಹಾಡುತ್ತಾ ಹೋಗುತ್ತಿದ್ದರು.

ಕುವೆಂಪು ವಿರಚಿತ, ಎಚ್.ಕೆ. ನಾರಾಯಣ ಸಂಗೀತ ನಿರ್ದೇಶನದಲ್ಲಿ ರಾಜು ಅನಂತಸ್ವಾಮಿ ಗಾಯನದಲ್ಲಿ ಮೂಡಿಬಂದಿರುವ ‘ಮುಚ್ಚು ಮರೆ ಇಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೇ ಓ ಗುರುವೇ ಅಂತರಾತ್ಮ… ಎಂದು ಮಧು ಮನೋಹರನ್ ತಂಗಾಳಿಯಂತೆ ಪ್ರಸ್ತುತಪಡಿಸಿದರು.

ಇದಕ್ಕೆ ಎದುರಾಗಿ ಪ್ರದೀಪ್, ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ, ನಿತ್ಯವೂ ಅವತರಿಪ ಸತ್ಯಾವತಾರ… ಎಂದು ಹಾಡಿದ್ದು ರೋಮಾಂಚನ ವಾಗಿಸಿತ್ತು. ಇನ್ನು ಅಂಬಿಕಾತನಯದತ್ತ ಅವರ ವಿರಚಿತ, ಅಂತರಂಗದ ಮೃದಂಗ ಅಂತು ತೊಂ ತನಾನ ಚಿತ್ತ ತಾಳ ಬಾರಿಸುತಲಿತ್ತು ಝಂಝಣಣ ನಾನಾ ಎಂದು ಪ್ರವೀಣ್ ಹಾಡಿದರು.

ಸಹೋದರರಿಬ್ಬರ ಧ್ವನಿಯಲ್ಲಿ ಮೂಡಿಬಂದ ಪು.ತಿ. ನರಸಿಂಹಾಚಾರ್ ಅವರ ವಿರಚಿತ, ‘ಹೆಸರೆ ಇಲ್ಲದವರು ನಾವು ಹೆಸರೆ ಇಲ್ಲದವರು… ಹಾಡು
ಬಿರುಗಾಳಿ ಸುಯ್ಯನೆ ಸುಳಿದು ಹೋದಂತಹ ಭಾವ ಮೂಡಿಸಿತು.

ತಣಿಯದ ಶೋತೃಮನ
ಕಾರ್ಯಕ್ರಮದುದ್ದಕ್ಕೂ ರಾಗದೋಕುಳಿ ಹರಿದಿದ್ದರೂ, ಶ್ರೋತೃಗಳಿಗೆ ತೃಪ್ತಿಯೆನಿಸಲಿಲ್ಲ. ಕಾರ್ಯಕ್ರಮ ಮುಕ್ತಾಯದ ನಂತರ ಕೋರಿಕೆಗಳು ಬರುತ್ತಲೇ ಇದ್ದವು. ಕೋರಿಕೆಯ ಮೇರೆಗೆ ಮಧು ಅವರ ಕಂಠದಲ್ಲಿ ಅಮ್ಮಾ ನಿನ್ನ ಎದೆಯಾಳದಲ್ಲಿ …. ಮೂಡಿಬಂದರೆ, ಜಿ.ಎಸ್.ಶಿವರುದ್ರಪ್ಪ ರಚಿತ ಕಾಣದಾ ಕಡಲಿಗೆ ಹಂಬಲಿಸಿದೆ ಮನ ಎಂದು ಸಹೋದರರು ಹಾಡುತ್ತಿದ್ದರೆ, ಕಾರ್ಯಕ್ರಮ ಮುಗಿಸುವ ಮನಸ್ಸು ಆಯೋಜಕರಿಗೂ ಇರಲಿಲ್ಲ, ಶ್ರೋತೃಗಳಿಗೂ ಇರಲಿಲ್ಲ !

ಕ್ಲಬ್‌ಹೌಸ್‌ನಲ್ಲಿ ಹರಿದ ಗಾನಸುಧೆ
ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಬಾ ಒಲವೇ, ಬಂಜೆ ಎದೆಯಲ್ಲಿ ಬೆಳೆ, ಹರಿಸು ಹರ್ಷದ ಹೊಳೆ…
ಸಂತ ಶಿಶುನಾಳ ಷರೀ-ರ ಮನಸೇ ಮನಸಿನ ಮನಸ ನಿಲ್ಲಿಸುವುದು
ಮನಸಿನ ಮನ ತಿಳೀಯುವ ಮನ ಬ್ಯಾರೆಲೊ ಮನಸೇ
ಅಂಬಿಕಾತನಯದತ್ತರ ಆಹಾಹಾ ಮಲ್ಲಿಗೆ ಬರುವೆನೆ ನಿನ್ನಲ್ಲಿಗೆ
ಚುಕ್ಕೆ ಹೊಳಪು ಬೆಳಗಿದಾಗ

ಕೆ.ಎಸ್. ನರಸಿಂಹಸ್ವಾಮಿ ಅವರ ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿತ್ತು ಅರ್ಧ ದಾರಿ
ಹೂಬಳ್ಳಿಯಿಂದ ಹೆಮ್ಮರನ ಎದೆಗೆ ಬಿಳಿ ಬಿಳಿಯ ಹಕ್ಕಿ ಹಾರಿ….
ಕೆ.ಎಸ್. ನಿಸಾರ್ ಅಹಮದ್‌ರ ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ; ನೋವು ನಗೆಯ ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವಶ್ಯ.