Sunday, 11th May 2025

ಸದಾ ಮನದಲ್ಲಿ ಉಳಿಯುವವರೇ ಮಹನೀಯರು

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಡಾ.ಕೆ.ಪಿ.ಪುತ್ತೂರಾಯ ಅವರಿಂದ ಅರಿವಿನ ಉಪನ್ಯಾಸ

ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು

ಜೀವನದಲ್ಲಿ ನಮ್ಮ ಕಣ್ಣೆದುರು ಬಂದವರೆಲ್ಲ ಮನದೊಳಗೆ ಬಂದಾರೇ… ಮನದೊಳಗೆ ಬಂದವರೆಲ್ಲಾ ಹೃದಯದಲ್ಲಿ ಇಳಿ ದಾರೇ… ಇಲ್ಲ, ಹಾಗೇ ಸತ್ತವರೆಲ್ಲಾ ಮರೆತೇ ಹೋದಾರೇ…. ಇಲ್ಲ ಕೆಲವರು ಶಾಶ್ವತವಾಗಿ ನಮ್ಮ ಮನಃಪಟದಲ್ಲಿ ಉಳಿಯುತ್ತಾರೆ. ಅಂಥ ನೂರಾರು ಮಂದಿ ನಮ್ಮ ಮಧ್ಯೆ ಇದ್ದಾರೆ.

ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಮರೆಯಲಾಗದ ಮಹನೀಯರು ಕಾರ್ಯಕ್ರಮ ದಲ್ಲಿ ಡಾ.ಕೆ.ಪಿ.ಪುತ್ತುರಾಯ ಅರಿವಿನ ಉಪನ್ಯಾಸ ನೀಡಿದ್ದು ಹೀಗೆ… ಕೆಲವರು ಸತ್ತಮೇಲೂ ಜನಮಾನಸದಲ್ಲಿ ಮರೆಯದೇ ಬದುಕಿರುತ್ತಾರೆ. ತಮ್ಮ ಆದರ್ಶ ಪ್ರಾಯ ವಾದ ತತ್ವ ಸಿದ್ಧಾಂತ, ಮೌಲ್ಯಾಧಾರಿತ ಜೀವನದಿಂದ, ಸತ್ಕಾರ್ಯ ಸದ್ಗುಣಗಳಿಂದ ಸತ್ತಮೇಲು ಶಾಶ್ವತವಾಗಿ ಚರಿತ್ರೆಯಲ್ಲಿ ಬದುಕುಳಿಯುತ್ತಾರೆ. ಅವರೇ ಮಹಾನ್ ಕೆಲಸಗಳನ್ನು ಮಾಡಿದ ಮರೆಯಲಾರದ ಮಹನೀಯರು.

ಪೌರಾಣಿಕ, ಸಾಂಕೇತಿಕ ಹಾಗು ಸಾಮಾಜಿಕವಾಗಿ ಬದುಕಿ ಬಾಳಿದ ಕೆಲವು ಮರೆಯ ಲಾರದ ಮಹನೀಯರ ಬಗ್ಗೆ ನಾವು ತಿಳಿಯಲೇ ಬೇಕು. ರಾಮಾಯಣ ಮತ್ತು ಮಹಾ ಭಾರತ ಸರ್ವಕಾಲಿಕ, ಸರ್ವಮಾನಿಕವಾದ ದೇಶದ ಎರಡು ಮಹಾಕಾವ್ಯಗಳು. ಒಂದು ಜೀವನದಲ್ಲಿ ಏನು ಮಾಡಬಾರದು ಎಂದು ತಿಳಿಸಿದರೆ, ಮತ್ತೊಂದು ಏನು ಮಾಡಬೇಕು ಎಂಬುದನ್ನು ಹೇಳುತ್ತದೆ.

ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎಂದು ಈ ಎರಡೂ ಮಹಾ ಕಾವ್ಯಗಳು ತಿಳಿಸುತ್ತವೆ. ಶ್ರೀರಾಮ ಮತ್ತು ಶ್ರೀಕೃಷ್ಣ ಇಬ್ಬರು ಈ ಮಹಾಕಾವ್ಯಗಳಲ್ಲಿ ಬರುವ ಅವತಾರಪುರುಷರು. ಮನುಷ್ಯ ರೂಪದಲ್ಲಿ ಅಧರ್ಮವನ್ನು ಖಂಡಿಸಿ ಧರ್ಮವನ್ನು ಮಂಡಿಸಲು ಈ ಜಗತ್ತಿನಲ್ಲಿ ಜನಿಸಿದ ದೈವೀಸ್ವರೂಪರು. ಧರ್ಮವೇನು ಎಂಬುದನ್ನು ಆಡಿ ತೋರಿಸಿದರು, ಮಾಡಿ ತೋರಿಸಿದರು, ನುಡಿದು ತೋರಿಸಿದರು ಮತ್ತು ನಡೆದು ತೋರಿಸಿದರು. ಆದರೆ, ಇವರಿಬ್ಬರ ವ್ಯಕ್ತಿತ್ವದಲ್ಲಿ ಹಾಗು ಕಾರ್ಯ ತಂತ್ರದಲ್ಲಿ, ಕಾರ್ಯ ಶೈಲಿಯಲ್ಲಿ ಬಹಳಷ್ಟು ವ್ಯತ್ಯಾಸವಿದೆ.

ಅದನ್ನು ರಂಜನೀಯವಾಗಿ ನೋಡುವುದಾದರೆ, ಶ್ರೀರಾಮಚಂದ್ರ ಅರಮನೆಯಲ್ಲಿ ಜನಿಸಿದ-ಶ್ರೀಕೃಷ್ಣ ಸೆರೆಮನೆಯಲ್ಲಿ ಜನಿಸಿದ.
ಶ್ರೀರಾಮ ಮಧ್ಯಾನ ಜನಿಸಿದ- ಶ್ರೀಕೃಷ್ಣ ಮಧ್ಯರಾತ್ರಿ ಜನಿಸಿದ. ಶ್ರೀ ರಾಮ ಏಕಪತ್ನಿ ವೃತಸ್ಥ- ಶ್ರೀಕೃಷ್ಣ ಬಹುಗೋಪಿಕಾ ವಲ್ಲಭ. ಶ್ರೀರಾಮನದು ಏಕ ದೃಷ್ಟಿ- ಶ್ರೀಕೃಷ್ಣನದು ಅನೇಕ ದೃಷ್ಟಿ, ಶ್ರೀರಾಮ ಅನುಕರಣೀಯ- ಶ್ರೀಕೃಷ್ಣ ಅಪ್ರಮೇಯ, ಶ್ರೀರಾಮ ಶಕ್ತಿ ಸ್ವರೂಪ – ಶ್ರೀಕೃಷ್ಣ ಯುಕ್ತಿ ಸ್ವರೂಪ, ಶ್ರೀರಾಮ ರಾಜ ಆದವ- ಶ್ರೀಕೃಷ್ಣ ರಾಜರನ್ನು ಮಾಡಿದವ.

ಒಂದೇ ಮಾತಿನಲ್ಲಿ ಹೇಳುವುದಾದರೇ ಶ್ರೀರಾಮ ಸ್ಮರಣೀಯ- ಶ್ರೀ ಕೃಷ್ಣ ರಮಣೀಯ. ಒಟ್ಟಾರೆ ಈ ಇಬ್ಬರು ಪ್ರಾಥಸ್ಮರಣೀಯರು ಮರೆಯಲಾರದ ಮಹನೀಯರು ಎಂದು ತಿಳಿಸಿದರು.

ತುಳಿಸಿ ರಾಮಾಯಣ ಬರೆದ ತುಳಸಿದಾಸರು: ಅನೇಕ ಮಹನೀಯರು ತಮ್ಮ ಮಡದಿಯಿಂದ ಸ್ಪೂರ್ತಿ ಮಾರ್ಗವನ್ನು ಪಡೆದ ವರಿದ್ದಾರೆ ಎಂದು ಪುರಾಣ, ಇತಿಹಾಸ ತಿಳಿಸುತ್ತದೆ. ರಾಮಕೃಷ್ಣ ಪರಮಹಂಸರು, ಪುರಂದರದಾಸರು, ಹಾಗೆಯೇ ಮಡದಿ ಯಿಂದ ಮಾರ್ಗದರ್ಶನ ಪಡೆದವರು ತುಳಸಿದಾಸರು. ತುಲಾರಾಮನಿಗೆ(ತುಳಸೀದಾಸ) ಪತ್ನಿ ರಾತ್ನಾವಳಿಯನ್ನು ಬಿಟ್ಟಿರಲು ಸಾಧ್ಯವಾಗುತ್ತಿರಲಿಲ್ಲ. ತನ್ನ ಸಹೋದರನೊಂದಿಗೆ ತವರಿಗೆ ಹೋಗಿದ್ದ ಪತ್ನಿಯನ್ನು ಸೇರಲೇಬೇಕು ಎಂದು ಧಾವಿಸು ತ್ತಾನೆ. ಮಡದಿಯನ್ನು ಸೇರಲು ನದಿ ದಾಟಬೇಕಿತ್ತು. ಪ್ರವಾಹವನ್ನು ಲೆಕ್ಕಿಸದೆ ತಾನೇ ಈಜಿ ದಡ ಸೇರಿದ. ಗಂಡನ ಪ್ರೀತಿ ಕಂಡ
ಹೆಂಡತಿ ಮಾಂಸ, ಮೂಳೆಗಳಿಂದ ಕೂಡಿದ ನನ್ನ ಮೇಲೆ ಪ್ರೀತಿ ತರವಲ್ಲ. ಈ ಪ್ರೀತಿಯನ್ನು ಶ್ರೀರಾಮನ ಮೇಲೆ ಇಟ್ಟಿದ್ದರೆ ಪ್ರತ್ಯಕ್ಷನಾಗುತ್ತಿದ್ದನೋ ಏನೋ ಎಂದಿದ್ದಳು.

ಅದರಿಂದ ಪ್ರೇರೇಪಿತರಾದ ತುಳಸೀದಾಸರು ಮುಂದೆ ಶ್ರೀರಾಮಚರಿತ ಮಾನಸ ರಚಿಸುತ್ತಾರೆ. ಆ ಮೂಲಕ ಅವರು ಮರೆಯ ಲಾರದ ಮಹನೀಯರಾಗುತ್ತಾರೆ. ಈ ಮೂಲಕ ಪರಿವರ್ತನೆಗೆ ಒಂದು ಸಣ್ಣ ವಿಚಾರ ಸಾಕು ಎಂದು ತಿಳಿಯುತ್ತದೆ ಎಂದರು.

ಆದರ್ಶಪುರುಷ ಶ್ರೀರಾಮ

೧೪ ವರ್ಷಗಳ ಕಾಲ ವನವಾಸದ ನಂತರ ಅರಮನೆ ಪ್ರವೇಶಿಸಿದ ರಾಮ ತಾಯಿಯನ್ನು ನೋಡಲು ಹೋಗದೆ, ಕಾಡಿಗೆ ಹೋಗಲು ಕಾರಣಳಾದ ಕೈಕೇಯಿಯನ್ನು ನೋಡಲು ಹೋಗುತ್ತಾನೆ. ರಾಮ ಕಾಡಿಗೆ ಹೋಗಲು ಕಾರಣಳಾದ ಕೈಕೇಯಿಗೆ ನರಕ ಪ್ರಾಪ್ತಿ ಯಾಗಲಿ ಎಂದು ಅಯೋಧ್ಯೆಯ ಬಹುತೇಕರು ಶಾಪ ಹಾಕುತ್ತಿದ್ದರೆ, ಶ್ರೀರಾಮ ಮಾತ್ರ ಆಕೆಗೆ ಸ್ವರ್ಗ ಪ್ರಾಪ್ತಿಯಾಗಬೇಕು ಎಂದು ಹೇಳುತ್ತಾನೆ.

ಅವಸಾನವಾದಾಗ ಎಲ್ಲರು ಆಕೆಗೆ ನರಕ ಸಿಗಬೇಕು ಎನ್ನುತ್ತಾರೆ. ಆದರೆ ಶ್ರೀರಾಮ ಮಾತ್ರ, ಭರತನಂತಹ ಶ್ರೇಷ್ಠ ಮಗನಿಗೆ ಜನ್ಮ ನೀಡಿದ್ದಕ್ಕೆ ಆಕೆಗೆ ಸ್ವರ್ಗ ಪ್ರಾಪ್ತಿಯಾಗಬೇಕು ಎನ್ನುತ್ತಾನೆ. ಮತ್ತೊಮ್ಮೆ ನಿರಪರಾದಿಯಾದ ಒಬ್ಬ ಸಾಮಾನ್ಯನ ಮೇಲೆ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮತ್ತು ಶೂದ್ರ ಸೇರಿ ಹಲ್ಲೆ ಮಾಡುತ್ತಾರೆ. ನ್ಯಾಯಕ್ಕಾಗಿ ಶ್ರೀರಾಮನ ಬಳಿ ಬಂದಾಗ ಆತ ಆದೇಶ ನೀಡಿ, ಬ್ರಾಹ್ಮಣ ನಿಗೆ ೪ ಛಡಿ ಏಟು,ವೈಶ್ಯನಿಗೆ ೩,ಕ್ಷತ್ರಿಯನಿಗೆ ೨ ಹಾಗು ಶೂದ್ರನಿಗೆ ೧ ಛಡಿ ಏಟು ನೀಡಲು ಹೇಳುತ್ತಾನೆ.

ವಿದ್ಯಾವಂತರು ಹಾಗು ಹೆಚ್ಚು ತಿಳಿದವರು ತಪ್ಪು ಮಾಡಬಾರದು. ಹೆಚ್ಚು ಬುದ್ದಿವಂತರು ಸಮಾಜದಲ್ಲಿ ಎಚ್ಚರಿಕೆಯಿಂದ
ನಡೆಯಬೇಕು ಎಂಬ ಕಾರಣಕ್ಕೆ ಈ ಆದೇಶ ನೀಡಿದ್ದಾಗಿ ಹೇಳುತ್ತಾನೆ. ಇಂತಹ ಕಾರಣಗಳಿಗಾಗಿಯೇ ಶ್ರೀರಾಮ ಮರೆಯಲಾಗದ ಮಹನೀಯನಾದ ಎಂದು ಹೇಳಿದರು. ಆದಿ ಶಂಕರಾಚಾರ್ಯರು, ಬಸವಣ್ಣ, ಸ್ವಾಮಿ ವಿವೇಕಾನಂದರು, ಮಹಾತ್ಮಾ ಗಾಂಧಿ, ಸರ್.ಎಂ.ವಿಶ್ವೇಶ್ವರಯ್ಯ, ವಿನಾಯಕ ದಾಮೋದರ್ ಸಾವರ್ಕರ್, ಎ.ಪಿ.ಜೆ. ಅಬ್ದುಲ್ ಕಲಾಂ ಹೀಗೆ ಎಲ್ಲಾ ಮರೆಯಲಾರದ ಮಹನೀಯರು ಅರಿತಿದ್ದು ಮತ್ತು ನಂಬಿದ್ದು ಒಂದೇ ಮಾತು.

ಅದು ನಾನು ಸತ್ತಮೇಲೆ ನನ್ನ ಬಟ್ಟೆ ಬಡವರ ಪಾಲು, ಆಸ್ತಿಪಾಸ್ತಿ ಮಡದಿ ಮಕ್ಕಳ ಪಾಲು, ಮಗ ಹಾಕಿದ ಪಿಂಡ ಕಾಗೆಯ ಪಾಲು,
ದೇಹ ಮಣ್ಣು ಪಾಲು, ಆಸ್ತಿ ಗಂಗೆ ಪಾಲು, ದಕ್ಷಿಣೆ ಪುರೋಹಿತರ ಪಾಲು, ಭೂರಿ ಭೋಜನ ಬಂಧುಮಿತ್ರರ ಪಾಲು. ಆದರೆ, ನಾನು ಗಳಿಸಿದ ಸತ್ಕೀರ್ತಿ, ಮಾಡಿದ ಸತ್ಕಾರ್ಯ ಮಾತ್ರ ನನ್ನ ಪಾಲು. ಇದರಲ್ಲಿ ಯಾರಿಗೂ ಪಾಲು ಇಲ್ಲ ಎಂಬುದಾಗಿ. ಅಂತಹ ಮರೆಯ ಲಾಗದ ಮಹನೀಯರ ಜೀವನದ ವೃತ್ತಾಂತಗಳು ನಮಗೆ ಮಾರ್ಗದರ್ಶನವಾಗಬೇಕು ಎಂದು ಹೇಳಿದರು.