Sunday, 11th May 2025

ಮನುಷ್ಯನ ಗುರಿ ಸಾಧನೆಗೆ 8 ಮಾರ್ಗಗಳು

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ -೨೪೭

ಸೈಕೋಥೆರೆಪಿ ಮತ್ತು ಕೌನ್ಸೆಲಿಂಗ್ ಪ್ರವೀಣ ಸುರೇಶ್ ರಾಜು ಅವರಿಂದ ಅರಿವಿನ ಉಪನ್ಯಾಸ

ಬೆಂಗಳೂರು: ಹೊಸ ವರ್ಷ ಬಂತೆಂದರೆ ಹೊಸ ಹೊಸ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಹೊಸ ವರ್ಷಕ್ಕೆ ಇಂತಿಂಥಾ ನಿರ್ಣಯ ಕೈಗೊಂಡಿದ್ದೇನೆ ಎಂದು ಹೇಳುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ, ಆ ನಿರ್ಣಯದಂತೆ ಗುರಿ ತಲುಪುವವರು ಎಷ್ಟು ಮಂದಿ? ಕೆಲವರು ಆರಂಭದಲ್ಲೇ ವಿಫಲರಾದರೆ, ಇನ್ನು ಕೆಲವರು ಅರ್ಧ ದಾರಿಯಲ್ಲಿ ವಿಫಲರಾಗುತ್ತಾರೆ ಇಲ್ಲವೇ, ನಿರ್ಣಯ ಕೈಬಿಡುತ್ತಾರೆ.

ಆದರೆ, ಯಾವುದೇ ನಿರ್ಣಯ ಕೈಗೊಳ್ಳಲು ಅಥವಾ ಜೀವನದಲ್ಲಿ ಗುರಿ ತಲುಪಲು ಕೆಲವು ಅಂಶಗಳು ಮುಖ್ಯವಾಗುತ್ತವೆ. ಅದನ್ನು ಪಾಲಿಸುವಾತ ಜೀವನದಲ್ಲಿ ಯಶಸ್ವಿಯಾಗು ತ್ತಾನೆ. ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಗುರಿ ತಲುಪಲು ಎಂಟು ಪಾತ್ರಗಳು’
ಕಾರ್ಯಕ್ರಮದಲ್ಲಿ ಸೈಕೋ ಥೆರೆಪಿ ಮತ್ತು ಕೌನ್ಸೆಲಿಂಗ್ ಪ್ರಾವೀಣ್ಯ ಹೊಂದಿರುವ ಸುರೇಶ್ ರಾಜು ಅರಿವಿನ ಉಪನ್ಯಾಸ ನೀಡಿದ್ದು ಹೀಗೆ..

ನಮ್ಮೆಲ್ಲರಿಗೂ ಜೀವನದ ಗುರಿ ಸಾಧಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಆದರೆ, ಆ ನಿಟ್ಟಿನಲ್ಲಿ ಮಾಡಿರುವ ನಿರ್ಣಯ ಹಾಗೆಯೇ ಉಳಿಯುತ್ತದೆ. ಇದಕ್ಕೆ ಕಾರಣ ನಿರ್ಣಯ ಪಾಲಿಸಲು ಸೂಕ್ತ ಮಾರ್ಗಗಳನ್ನು ಅನುಸರಿಸದೇ ಇರುವುದು. ಅದರ ಬದಲು ಈ ೮ ಮಾರ್ಗವನ್ನು ಅಳವಡಿಸಿಕೊಂಡರೆ ಸಾಧನೆಯ ಗುಣಮಟ್ಟಹೆಚ್ಚಾಗುತ್ತದೆ. ಜೀವನದ ಗುರಿ ಎಂದ ತಕ್ಷಣ, ಆ ಗುರಿಯ ದಿಕ್ಕು ನಮ್ಮ ತಲೆಗೆ ಬರುತ್ತದೆ. ಈ ವಿಚಾರವಾಗಿ ಬೆಂಗಳೂರು ನಗರದ ಆಟೋ ಚಾಲಕರು ನಾವು ಉದಾಹರಣೆಯಾಗಿ ನೆನಪಿಗೆ ಬರುತ್ತಾರೆ. ಪ್ರಯಾಣಿಕರು ಕುಳಿತಾಗ ಆ ಚಾಲಕ ಓಟೋ ಓಡಿಸುವ ರೀತಿಯೇ ಬೇರೆ, ಪ್ರಯಾಣಿಕ ಇಲ್ಲದಿದ್ದರೆ ಆಟೋ ಓಡಿಸುವ ರೀತಿಯೇ ಬೇರೆ. ಏಕೆಂದರೆ, ಪ್ರಯಾಣಿಕರಿದ್ದಾಗ ಚಾಲಕನಿಗೆ ಗುರಿ ಇರುತ್ತದೆ.

ಹಾಗಾಗಿ ಒಂದು ನಿರ್ದಿಷ್ಟವಾದ ಮಾರ್ಗದಲ್ಲಿ ಚಲಿಸುತ್ತಾನೆ. ಇದನ್ನು ನೋಡಿದರೆ ಜೀನವದಲ್ಲಿ ಗುರಿ ತಲುಪುವುದು ಎಷ್ಟು ಮುಖ್ಯವೋ. ಅದನ್ನು ತಲುಪುವ ದಾರಿಯೂ ತುಂಬಾ ಮುಖ್ಯವಾಗುತ್ತದೆ ಎಂಬುದು ಅರ್ಥವಾಗುತ್ತದೆ.

ಗುರಿ ಸಾಧನೆಗೆ ಎಂಟು ನಿರ್ಣಯಗಳು ಕನಸುಗಾರ: ಗುರಿ ಸಾಧನೆಗಾಗಿ ಮೊದಲು ಕನಸುಕಾಣು ಎಂದು ಅನೇಕ ಸಾಧಕರು ಹೇಳಿದ್ದಾರೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ‘ನಿದ್ದೆ ಮಾಡಲು ಬಿಡದ ಕನಸು ಕಾಣು’ ಎಂದಿದ್ದರೆ, ಸ್ವಾಮಿ ವಿವೇಕಾನಂದರು ‘ಒಂದು ಗುರಿಯ ಬಗ್ಗೆ ಕನಸು ಕಂಡು ಸದಾ ಅದರ ಬಗ್ಗೆ ಆಲೋಚನೆ ಮಾಡಿದರೆ ಕಂಡಿತಾ ಯಶಸ್ಸು ಕಾಣಬಹುದು’ ಎಂದಿದ್ದರು.

ಹೀಗಾಗಿ ನಮ್ಮ ಗುರಿಯ ಬಗ್ಗೆ ಕನಸನ್ನು ಎಷ್ಟು ಆಳವಾಗಿ ಹಿಡಿದಿಕೊಳ್ಳುತ್ತೇವೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಕಾರ್ಯಕ್ಕೆ ಇಳಿಯುವುದು: ಕನಸು ಕಂಡರೆ ಸಾಲದು, ಅದನ್ನುಕಾರ್ಯರೂಪಕ್ಕೆ ತರುವುದು ಮುಖ್ಯವಾಗುತ್ತದೆ. ಅದರ ಬಗ್ಗೆ
ಚಿಂತಿತರಾಗಿ ಕಾರ್ಯರೂಪದಲ್ಲಿ ತೊಡಗಿಸಿಕಳ್ಳಬೇಕು.

ಪರಿಶೋಧನೆ: ಒಂದು ಗುರಿ ಮುಟ್ಟಲು ನಮ್ಮಲ್ಲಿರುವ ಶಕ್ತಿ ಮತ್ತು ದೌರ್ಬಲ್ಯ, ಅವಕಾಶ, ಸವಾಲುಗಳ ಬಗ್ಗೆ ಮೆಲಕು ಹಾಕಿ ಅದನ್ನು ಹೆಜ್ಜೆ ಹೆಜ್ಜೆಗೂ ಪರಿಶೋಧನೆ ಮಾಡಿಕೊಳ್ಳಬೇಕು. ನನ್ನ ಗುರಿ ತಲುಪಲು ನಾನು ಏನು ಮಾಡಬೇಕು ಎಂದು ಪ್ರತಿ ನಿತ್ಯ ಕುಳಿತು ಅಲೋಚನೆ ಮಡಬೇಕು. ಯಾವಾಗ ನಾವು ಪರಿಶೋಧಕರಗುತ್ತೇವೆಯೋ, ನಮ್ಮಲ್ಲಿರುವ ನ್ಯೂನ್ಯತೆಗಳು ನಮಗೆ ಕಾಣುತ್ತದೆ. ಆ ನ್ಯೂನ್ಯತೆ ಕಂಡಾಗ ನಾಲ್ಕನೇ ಪಾತ್ರಕ್ಕೆ ಅವಕಾಶ ತೆರೆದುಕೊಳ್ಳುತ್ತದೆ.

ಕಲಿಕೆ: ನಮ್ಮಲಿರುವ ನ್ಯೂನ್ಯತೆ ಕಂಡುಕೊಂಡ ನಂತರ ನಾವು ಮಾಡಬೇಕಾದ ಕೆಲಸ ಕಲಿಕೆ. ಕಲಿಯುವಾಗ ನಮ್ಮಲ್ಲಿ ಮುಕ್ತ
ವಾದ ಮನಸ್ಸಿರಬೇಕು ಎಷ್ಟು ಮುಕ್ತ ಮನಸ್ಸಿನಿಂದ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆಯೋ ಅದು ಸಾಧನೆಗೆ ಉತ್ತಮ
ಮಾರ್ಗವಾಗುತ್ತದೆ.

ಪ್ರಾಯೋಗ ಮಾಡಬೇಕು: ನಾವು ಕಲಿತ ವಿಚಾರವನ್ನು ತಕ್ಷಣದಲ್ಲೇ ಪ್ರಯೋಗ ಮಾಡಿಕೊಳ್ಳಬೇಕು. ಹೇಳಿಕೊಟ್ಟದ್ದನ್ನು
ತಪ್ಪು-ಸರಿ ಅರಿಯದೆ ಸಣ್ಣ ಮಕ್ಕಳು ಹೇಗೆ ತಕ್ಷಣ ಪ್ರಯೋಗ ಮಡುತ್ತಾರೋ ಹಾಗೆಯೇ ನಾವು ಕಲಿತಿದ್ದನ್ನು ತಕ್ಷಣ ಪ್ರಯೋಗ ಮಾಡಬೇಕು.

ಕೆಲಸದಲ್ಲಿ ಮುಳುಗುವವನು: ಸಾಧನೆಯ ದಾರಿಯಲ್ಲಿ ಇದ್ದರೆ ಆ ವಿಚಾರದ ಕುರಿತು ಆಳವಾಗಿ ತಿಳಿಯಲು ಪ್ರಯತ್ನ
ಮಾಡಿದರೆ ಯಶಸ್ಸಿನ ಹಾದಿಯಲ್ಲಿ ಉಪಯೋಗವಾಗುತ್ತದೆ. ನಮ್ಮ ಗುರಿಗೆ ಸಂಬಂಽಸಿದ ವಿಚಾರಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿಯಲು ಪ್ರಯತ್ನ ಮಾಡಬೇಕು.

ಸ್ಮಾರ್ಟ್ ಗೋಲ್: ಸಾಧನಗೆ ಸ್ಮಾರ್ಟ್ ಗುರಿಗಳನ್ನು ಹಾಕಿಕೊಂಡರೆ ಉಪಯೋಗವಾಗುತ್ತದೆ. ನಮ್ಮ ಸ್ಮಾರ್ಟ್ ಗೋಲ್
ಗಳು ನೈಜತೆಗೆ ಹತ್ತಿರವಾಗಿರಬೇಕು. ನಮ್ಮ ಗುರಿಗೆ ಸಮಯ ಪ್ರಜ್ಞೆ, ಆಯೋಜನೆ ಮತ್ತು ಸಂಯೋಜನೆ ಮುಖ್ಯವಾಗುತ್ತದೆ. ಕ್ರಮೇಣವಾಗಿ ಹೆಜ್ಜೆ-ಹೆಜ್ಜೆಯನ್ನೂ ಪರಿಷ್ಕರಣೆ ಮಾಡಿಕೊಳ್ಳುತ್ತಿರಬೇಕು.

ಪ್ರಾಮಾಣಿಕತೆಯಿಂದ ಜವಬ್ದಾರಿ ತೆಗೆದುಕೋಳ್ಳುವುದು: ನಮ್ಮ ಶ್ರಮ ಮತ್ತು ಕೆಲಸಗಳ ಬಗ್ಗೆ ಆತ್ಮಾವಲೊಕನ ಮಾಡಿ ಕೊಳ್ಳಬೇಕು. ಗುರಿ ತಲುಪಿದ ನಂತರ ಸುಮ್ಮನಾಗದೆ, ಮುಂದೇನು ಎಂದು ಆಲೋಚನೆ ಮಾಡಬೇಕು. ಇದನ್ನು ಮಾಡಿದರೆ ನಮ್ಮಲ್ಲಿ ಮಾಲಿಕತ್ವ ಮೂಡುತ್ತದೆ. ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ತಕ್ಕ ಸಾಧಕರೇ ಆಗಿರುತ್ತಾರೆ.

ಆದರೊಟ್ಟಿಗೆ ಈ ರೀತಿಯ ಕೆಲವು ಮಾರ್ಗಗಳನ್ನು ಅಳವಡಿಸಿಕೊಂಡರೆ, ಇನ್ನು ಉತ್ತಮವಾಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಸರಿಯಾಗಿ ಪಾಲಿಸಿದರೆ, ಖಂಡಿತವಾಗಿಯೂ ನಾವು ಗುರಿ ಸಾಧಿಸಬಹುದು ಎಂದರು.

***

ನಮ್ಮ ಗುರಿ ಹೇಗಿರಬೇಕು ಎಂದರೆ? ನಾವು ಬಿ.ಎ ಓದುತ್ತ ಡಾಕ್ಟರ್ ಆಗುವ ಕನಸು ಕಾಣಲು ಆಗುವುದಿಲ್ಲ. ನಮ್ಮ ಗುರಿ ವಾಸ್ತವಿಕವಾಗಿರುವುದು ಬಹಳ ಮುಖ್ಯ. ವಾಸ್ತವಿಕವಾದ ಗುರಿ ಇಲ್ಲದಿದ್ದರೆ ಅದನ್ನು ಮುಟ್ಟುವುದು ಕಷ್ಟಸಾಧ್ಯ. ನಮ್ಮಲಿರು ವಂತ ಕನಸು, ಆಸಕ್ತಿ ಮತ್ತು ಕೌಶಲ್ಯಗಳಿಗೆ ಹೋಂದುವಂತಹ ಗುರಿ ಇರಬೇಕು. ಗುರಿ ಹಾಕಿಕೊಳ್ಳುವುದು ತುಂಬಾ ಸುಲಭ.  ಆದರೆ, ಅದನ್ನು ಸಾಧಿಸುವುದು ಕಷ್ಟ. ಹೀಗಾಗಿ ನಾವು ಗುರಿ ಇಟ್ಟುಕೊಳ್ಳುವ ಮುನ್ನವೇ ಅದನ್ನು ಸಾಧಿಸುವ ಶ್ರಮದ ಕಲ್ಪನೆ ಇರಬೇಕು. ಶ್ರಮದ ಕಲ್ಪನೆ ಇಲ್ಲದೆ ಗುರಿ ಇಟ್ಟುಕೊಂಡರೆ ಸಾಧಿಸಲು ಸಾಧ್ಯವಿಲ್ಲ.

– ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು,
ವಿಶ್ವವಾಣಿ ದಿನಪತ್ರಿಕೆ

ಗುರಿ ತಲುಪುವ ೮ ಮಾರ್ಗಸೂಚಿ ಮತ್ತು ಪಾತ್ರದಲ್ಲಿ ಶ್ರೇಣಿ ವ್ಯವಸ್ಥೆ ಇರುವುದಿಲ್ಲ. ಎಲ್ಲದರಲ್ಲೂ ಸಮಾನತೆ ಇರುತ್ತದೆ. ಅದನ್ನು ಆಂತರೀಕರಣ ಮಾಡಿಕೊಂಡರೆ ಸಾಕು. ಯಶಸ್ಸು ಸಾಧಿಸುತ್ತೇವೆ.