Monday, 12th May 2025

Vistara Airlines: ವಿಸ್ತಾರ ಏರ್‌ಲೈನ್ಸ್‌ ವಿಮಾನದ ಕೊನೆಯ ಹಾರಾಟ! ಅಧಿಕಾರಿಗಳಿಂದ ಭಾವುಕ ವಿದಾಯ

Vistara Airlines

ನವದೆಹಲಿ: ನವೆಂಬರ್‌ 12 ರಿಂದ ಏರ್‌ ಇಂಡಿಯಾದ ಜೊತೆ ವಿಲೀನಗೊಳ್ಳಲಿರುವ ವಿಸ್ತಾರ ವಿಮಾನಯಾನ (Vistara Airlines) ಸಂಸ್ಥೆಯ ತನ್ನದೇ ಬ್ರಾಂಡ್‌ನಲ್ಲಿ ತನ್ನ ಅಂತಿಮ ಹಾರಾಟವನ್ನು ನಡೆಸಲಿದೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳ ಹಿಂದೆ ವಿಸ್ತಾರ ಹಾಗೂ ಏರ್‌ ಇಂಡಿಯಾ (Air India) ಒಪ್ಪಂದ ಮಾಡಿಕೊಂಡು ವಿಲೀನಗೊಳಿಸಲು ನಿರ್ಧರಿಸಿದ್ದವು. ವಿಸ್ತಾರ ವಿಮಾನಯಾನ ಕೊನೆಯ ಹಾರಟದ ಬಗ್ಗೆ ಬರೆದುಕೊಂಡಿರುವ ಸಿಇಒ ಹಾಗೂ ಅಲ್ಲಿನ ಅಧಿಕಾರಿಗಳು ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಸ್ತಾರವೂ ಕಳೆದ 10 ವರ್ಷಗಳಲ್ಲಿ ಕಾರ್ಯಾರಂಭ ಮಾಡಿದ ಏಕೈಕ ಸಂಪೂರ್ಣ ಸೇವಾ ಏರ್‌ಲೈನ್‌ ಆಗಿತ್ತು. ಕಿಂಗ್‌ಫಿಷರ್ ಮತ್ತು ಏರ್ ಸಹಾರಾಗಳು ಕಾರ್ಯಾರಂಭ ನಿಲ್ಲಿಸಿದಾಗ 2015ರಲ್ಲಿ ವಿಸ್ತಾರ ಶುರುವಾಗಿತ್ತು. ಇದೀಗ ವಿಸ್ತಾರ ಏರ್‌ಲೈನ್ಸ್‌ ಏರ್‌ ಇಂಡಿಯಾ ಜೊತೆ ವಿಲೀನಗೊಳ್ಳುತ್ತಿದ್ದು ವಿಲೀನದ ಮೂಲಕ ಸಿಂಗಾಪುರ್ ಏರ್‌ಲೈನ್ಸ್‌ಗೆ ಏರ್ ಇಂಡಿಯಾದಲ್ಲಿ ಶೇ 25.1 ಹಂಚಿಕೆ ದೊರೆಯುತ್ತದೆ. ವಿದೇಶಿ ನೇರ ಹೂಡಿಕೆ (FDI) ಉಗಮದ ನಂತರ ವಿದೇಶಿ ವಿಮಾನಯಾನ ಸಂಸ್ಥೆಯೊಂದಿಗೆ ಸಹ-ಮಾಲೀಕತ್ವ ಹೊಂದಿದ್ದ ಮತ್ತೊಂದು ಭಾರತೀಯ ಏರ್‌ಲೈನ್‌ ವಿಸ್ತಾರ ಇನ್ನು ಮುಂದೆ ತನ್ನ ಕಾರ್ಯಾಚಾರಣೆ ನಿಲ್ಲಿಸುತ್ತಿದೆ.

ಇದನ್ನೂ ಓದಿ:Air India Express: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಮತ್ತೆ ಸಂಕಷ್ಟ; ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ

ಏರ್ ಇಂಡಿಯಾದಲ್ಲಿ ನಿರ್ವಹಣಾ ಬದಲಾವಣೆಗಳ ಘೋಷಣೆ

ಮತ್ತೊಂದೆಡೆ, ವಿಲೀನಕ್ಕೂ ಮುನ್ನ ಏರ್ ಇಂಡಿಯಾ ಗ್ರೂಪ್ ಕಳೆದ ವಾರ ಹಲವಾರು ನಿರ್ವಹಣಾ ಬದಲಾವಣೆಗಳನ್ನು ಘೋಷಿಸಿದೆ. ವಿಸ್ತಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕನ್ನನ್, ಪೂರ್ಣ ಸೇವಾ ಏರ್‌ಲೈನ್ಸ್‌ಗಳ ವಿಲೀನದ ಮುಖ್ಯ ಸಮನ್ವಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಿಲೀನದ ನಂತರವೂ ಅವರೇ ಮುಂದುವರೆಯುತ್ತಾರೆ ಎಂದು ತಿಳಿಸಿದೆ. ವಿಸ್ತಾರದ ಮುಖ್ಯ ವಾಣಿಜ್ಯಾಧಿಕಾರಿ ದೀಪಕ್ ರಾಜವತ್, ಹೊಸದಾಗಿ ವಿಸ್ತರಿಸಲ್ಪಟ್ಟ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.