ಲೆಕ್ಕ (Maths) ಬಹುತೇಕರಿಗೆ ಪಕ್ಕ ಅರ್ಥ ಆಗೋದಿಲ್ಲ. ನಾವೆಲ್ಲ ಶಾಲೆಯಲ್ಲಿ ಲೆಕ್ಕಕ್ಕೆ ಹೆದರ್ತಿದ್ದಷ್ಟು ಬೇರಿನ್ಯಾವುದೇ ಸಬ್ಜೆಕ್ಟ್ಗೂ ಅಷ್ಟೊಂದು ಹೆದರುತ್ತಿರಲಿಲ್ಲ. ಆದರೆ ಗಣಿತ ತಜ್ಞರು ಮತ್ತು ಲೆಕ್ಕ ಪ್ರಿಯರು ಹೇಳುವಂತೆ ಲೆಕ್ಕಕ್ಕಿಂತ ಸುಲಭವಾದ ಸಬ್ಜೆಕ್ಟ್ ಬೇರೊಂದು ಇಲ್ಲ! ಕೆಲವೊಂದು ಸುಲಭ ಟ್ರಿಕ್ಸ್ ಗೊತ್ತಿದ್ದರೆ ಲೆಕ್ಕವನ್ನು ಪಕ್ಕಾ ಸುಲಭವಾಗಿಸಬಹುದು. ಇದಕ್ಕೆ ಸಂಬಂಧಿಸಿದ ವಿಡಿಯೊ ಇದೀಗ ಸೋಶಿಯಲ್ ಮಿಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಈ ವಿಡಿಯೊ 9 ಸಂಖ್ಯೆಗೆ ಸಂಬಂಧಪಟ್ಟದ್ದಾಗಿದ್ದು, 9 ಸಂಖ್ಯೆ ಎಷ್ಟು ಸ್ಟ್ರಾಂಗ್ ಅನ್ನೋದನ್ನು ಈ ವಿಡಿಯೋದಲ್ಲಿರುವ ವ್ಯಕ್ತಿ ಲೆಕ್ಕದ ಉದಾಹರಣೆ ಸಹಿತ ವಿವರಿಸಿದ್ದಾನೆ. ಅಂದ ಹಾಗೆ ಸಂಖ್ಯಾಶಾಸ್ತ್ರದಲ್ಲೂ 9 ಸಂಖ್ಯೆಗೆ ವಿಶೇಷವಾದ ಪ್ರಾಧಾನ್ಯತೆ ಇದೆ ಮತ್ತು ಇದನ್ನು ಶಕ್ತಿಶಾಲಿ ಸಂಖ್ಯೆ ಎಂದೇ ನಂಬಲಾಗುತ್ತದೆ.
@ಬಿಗ್ ಡ್ಯೂಕ್13_ (@bigduke13_) ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಅಪ್ಲೋಡ್ ಮಾಡಲಾಗಿದ್ದು, ಇಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬರೊಂದಿಗೆ 9 ಸಂಖ್ಯೆ ಎಷ್ಟು ಪವರ್ ಫುಲ್ ಗೊತ್ತಾ ಎಂದು ಕೇಳುತ್ತಾನೆ ಮತ್ತು ಈ ಸಂಖ್ಯೆ ಜಗತ್ತಿನೆಲ್ಲೆಡೆ ಅತೀ ಚರ್ಚಿತ ಸಂಖ್ಯೆಗಳಲ್ಲಿ ಒಂದೂ ಎಂದು ಅವನು ಹೇಳುತ್ತಾನೆ.
9ನ್ನು ಯಾವುದೇ ಸಂಖ್ಯೆಯಿಂದ ಗುಣಿಸಿದರೂ ಅದರಲ್ಲಿ ಸಿಗುವ ಉತ್ತರಗಳನ್ನು ಕೂಡಿಸಿದಾಗ ಸಿಗುವ ಸಂಖ್ಯೆ ಒಂಭತ್ತೇ ಆಗಿರುತ್ತದೆ! ಇದನ್ನು ಆ ವ್ಯಕ್ತಿ ತನ್ನ ಫೋನ್ ಕ್ಯಾಲುಕ್ಯುಲೇಟರ್ ನಲ್ಲಿ ಒಂದೆರಡು ಸಂಖ್ಯೆಗಳ ಉದಾಹರಣೆ ಮೂಲಕ ತೊರಿಸಿದ್ದಾನೆ.
ಮೊದಲಿಗೆ, ಆತ 9 ಅನ್ನು 9ರಿಂದ ಗುಣಿಸಿದ್ದಾನೆ. ಅಲ್ಲಿ ಸಿಗುವ ಉತ್ತರ 81 ಆಗಿದ್ದು ಇದನ್ನು ಕೂಡಿಸಿದಾಗ ಸಿಗುವ ಉತ್ತರ (8+1) 9. ಆ ಬಳಿಕ ಆ ವ್ಯಕ್ತಿ 174X9 ಮಾಡುತ್ತಾನೆ, ಆಗ ಸಿಗುವ ಉತ್ತರ 1,323, ಇದನ್ನು ಕೂಡಿಸಿದಾಗ (1+3+2+3) ಸಿಗುವ ಉತ್ತರ 9 ಆಗಿರುತ್ತದೆ! ಆ ಬಳಿಕ ಈ ವ್ಯಕ್ತಿ ಒಂದು ದೊಡ್ಡ ಸಂಖ್ಯೆಯನ್ನೇ ತೆಗೆದುಕೊಂಡು ಅದನ್ನು 9ರಿಂದ ಗುಣಿಸುತ್ತಾನೆ. ಅದರಂತೆ, 1,478,963ನ್ನು 9ರಿಂದ ಗುಣಿಸುತ್ತಾನೆ, ಇದರಲ್ಲಿ ಸಿಗುವ ಉತ್ತರ 13,310,667 ಆಗಿದ್ದು ಇವುಗಳನ್ನು ಕೂಡಿದಾಗ (1+3+3+1+0+6+6+7) 27 ಆಗಿದ್ದು ಇದನ್ನು ಕೂಡಿದಾಗ ಸಿಗುವ ಸಂಖ್ಯೆ ಮತ್ತೆ 9 ಆಗಿದೆ.
ಇದನ್ನೂ ಓದಿ: Viral Video: ಹಳ್ಳಿ ಹುಡುಗಿಯ ಬೌಲಿಂಗ್ ಶೈಲಿಗೆ ಫಿದಾ ಆದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್
ಈ ರೀತಿಯಾಗಿ ನೀವು ಯಾವುದೇ ಮತ್ತು ಅದೆಷ್ಟೇ ದೊಡ್ಡ ಸಂಖ್ಯೆಯನ್ನು 9ರಿಂದ ಗುಣಿಸಿದಾಗ ಸಿಗುವ ಉತ್ತರವನ್ನು ಕೂಡಿಸಿದಾಗ ಬರುವ ಸಂಖ್ಯೆ ಒಂಭತ್ತೇ ಅಗಿರುತ್ತದೆ ಎಂಬುದು ವಿಶೇಷ.
ಈ ಒಂಭತ್ತರ ನಂಟಿನ ವಿಡಿಯೊ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಈಗಾಗಲೇ 22 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. ಲೆಕ್ಕದ ಈ ಇಂಟ್ರೆಸ್ಟಿಂಗ್ ಟ್ರಿಕ್ಸ್ ಬಗ್ಗೆ ಈ ವಿಡಿಯೊ ನೋಡಿದವರು ಕಮೆಂಟ್ ಮೂಲಕ ತಮ್ಮ ಅಚ್ಚರಿ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ನಾವಿದನ್ನು ಶಾಲೆಯಲ್ಲಿ ಕಲಿತಿದ್ದೆವು ಎಂದು ಕಾಮೆಂಟ್ ಮಾಡಿದ್ದರೆ ಇನ್ನು ಕೆಲವರು ಸಂಖ್ಯೆ 9 ಯಾಕಿಷ್ಟು ಪವರ್ ಫುಲ್? ಎಂಬ ಜಿಜ್ಞಾಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಇದನ್ನು ನೋಡಿದ ಅನೇಕರು, ನಂಬರ್ 9 ಇಷ್ಟು ಪವರ್ ಫುಲ್ ಎಂದು ಗೊತ್ತಿರಲಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.