ಮುಂಬೈ: ಇತ್ತೀಚಿನ ದಿನಗಳಲ್ಲಿ ದಾರಿ ಬದಿಯಲ್ಲಿ ನಡ್ಕೊಂಡು ಹೋಗೋದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೈ ಎಂಡ್ ಟೆಕ್ನಾಲಜಿಯ ಕಾರುಗಳಿದ್ದರೂ ನಮ್ಮ ದೇಶದಲ್ಲಿ ಅಪಘಾತಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಮದ್ಯ ಅಥವಾ ಮಾದಕ ದ್ರವ್ಯದ ನಶೆಯಲ್ಲಿ ವಾಹನಗಳನ್ನು ಓಡಿಸುವುದು ಅಥವಾ ನಿದ್ದೆಗಣ್ಣಿನಲ್ಲಿ ಡ್ರೈವಿಂಗ್ ಮಾಡುವುದು ಅಥವಾ ನಿರ್ಲಕ್ಷ್ಯದ ಚಾಲನೆಯಿಂದ ಅದೆಷ್ಟೋ ಪಾದಚಾರಿಗಳ ಜೀವವನ್ನೇ ಕಸಿದಿರುವ ಅಥವಾ ಅವರು ಗಂಭೀರವಾಗಿ ಗಾಯಗೊಳ್ಳುವಂತೆ ಆಗಿರುವ ಘಟನೆಗಳು ಅದೆಷ್ಟೋ ನಡೆಯುತ್ತಿದೆ. ಇದಕ್ಕೊಂದು ಲೆಟೆಸ್ಟ್ ಉದಾಹರಣೆಯೆಂಬಂತೆ ತಮ್ಮ ಸಾಕು ನಾಯಿಯ ಜೊತೆ ಲೇಟ್ ನೈಟ್ ವಾಕಿಂಗ್ ಹೋಗ್ತಿದ್ದ ದಂಪತಿ ಮೇಲೆ ಕಾರೊಂದು ಹರಿದು, ದಂಪತಿ ಗಾಯಗೊಂಡಿರುವ ಹಾಗೂ ಅವರ ಮುದ್ದಿನ ಸಾಕುನಾಯಿ ತೀವ್ರ ಗಾಯಗಳಿಂದ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ವಸಾಯಿಯಿಂದ ವರದಿಯಾಗಿದ್ದು ಈ ಅಪಘಾತ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿದೆ.
ಈ ದುರ್ಘಟನೆ ವಸಾಯಿಯ ಯಶ್ವಂತ್ ಸ್ಮಾರ್ಟ್ ಸಿಟಿ ಪ್ರದೇಶದಲ್ಲಿ ನ.25ರಂದು ರಾತ್ರಿ 11.30ಕ್ಕೆ ನಡೆದಿದ್ದು ರಸ್ತೆಯಲ್ಲಿ ತಮ್ಮ ನಾಯಿ ಜೊತೆ ವಾಕಿಂಗ್ ಹೋಗ್ತಿದ್ದ ದಂಪತಿಗೆ ವೇಗವಾಗಿ ಬಂದ ವ್ಯಾಗನರ್ ಕಾರೊಂದು ಢಿಕ್ಕಿಯಾಗಿದೆ. ಅಪಘಾತದಲ್ಲಿ ಗಾಯಗೊಂಡ ದಂಪತಿಯನ್ನು 36 ವರ್ಷದ ಕಾರ್ತಿಕ್ ಗೋರ್ ಹಾಗೂ 35 ವರ್ಷದ ರಿಧಿ ಪಾಂಡ್ಯ ಎಂದು ಗುರುತಿಸಲಾಗಿದೆ ಮತ್ತು ರಾಜಾ ಹೆಸರಿನ ಸಾಕು ನಾಯಿ ಈ ಅಪಘಾತದಲ್ಲಿ ಮೃತಪಟ್ಟಿದೆ.
ಇಲ್ಲೇ ದೂರದಲ್ಲಿದ್ದ ಸಿಸಿ ಕೆಮರಾದಲ್ಲಿ ದಾಖಲಾಗಿರುವಂತೆ ವೇಗವಾಗಿ ಬಂದ ಕಾರು ದಂಪತಿಗಳಿಗೆ ಡಿಕ್ಕಿ ಹೊಡೆದಿದ್ದು, ದಂಪತಿ ಕಾರಿನ ಅಡಿಭಾಗದಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಇವರನ್ನು ಅಲ್ಲಿದ್ದವರು ಸೇರಿ ಹೊರಗೆಳೆದಿದ್ದಾರೆ. ನಂತರ ಅಪಘಾತವೆಸಗಿದ ಕಾರು ಚಾಲಕ ಸಂತೋಷ್ ಶಿಂಧೆ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಕಾರ್ತಿಕ್ ಅವರ ಬಲಕಾಲಿನ ಲಿಗಮೆಂಟ್ ಘಾಸಿಗೊಂಡಿದ್ದು, ಬೆನ್ನುಹುರಿಗೂ ಪೆಟ್ಟು ಬಿದ್ದಿದೆ, ಇನ್ನೊಂದೆಡೆ ರಿಧಿ ಅವರ ಬಲಗೈ ಹಾಗೂ ಪಕ್ಕೆಲೆಬು ಭಾಗಕ್ಕೆ ಗಾಯಗಳಾಗಿವೆ. ಇನ್ನು ಈ ದಂಪತಿಯ ಮುದ್ದಿನ ಲ್ಯಾಬ್ರಡರ್ ನಾಯಿ ರಾಜ ಗಾಯಗೊಂಡು ಮೂರು ದಿನಗಳ ಬಳಿಕ ಸಾವನ್ನಪ್ಪಿದೆ.
ಈ ಸುದ್ದಿಯನ್ನೂ ಓದಿ: Viral Video: ರಾಮಾಯಣ ನಾಟಕ ನಡೆಯುತ್ತಿದ್ದ ವೇದಿಕೆಯ ಮೇಲೆಯೇ ಹಂದಿಯನ್ನು ಕೊಂದು ಹಸಿ ಮಾಂಸ ತಿಂದ ನಟ! ವಿಡಿಯೊ ಇದೆ
ನಮ್ಮನ್ನು ಕಾರಿನ ಅಡಿಭಾಗದಲ್ಲಿ ನೋಡಿ ರಾಜನಿಗೆ ಶಾಕ್ ಆಗಿತ್ತು. ಮತ್ತು ನಾವು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಆತ ಆಹಾರ ಸೇವನೆಯನ್ನೇ ನಿಲ್ಲಿಸಿದ. ಕೊನೆಗೆ ಸೆ.28ರಂದು ಆತ ನಮ್ಮನ್ನಗಲಿದ’ ಎಂದು ಕಾರ್ತಿಕ್ ನೋವಿನಿಂದ ಹೇಳಿದ್ದಾರೆ. ‘ಘಟನೆ ನಡೆದು ಎರಡು ದಿನಗಳ ಬಳಿಕ ಚಾಲಕನ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಅಪಘಾತವೆಸಗಿದ ಆರೊಪಿಗೆ ಶಿಕ್ಷೆಯಾಗಬೇಕೆಂಬುದು ನಮ್ಮ ಆಗ್ರಹವಾಗಿದೆ’ ಎಂದು ಕಾರ್ತಿಕ್ ಹೇಳಿದ್ದಾರೆ.
ಇನ್ನು, ಪೊಲೀಸರು ಆರೊಪಿ ಚಾಲಕ ಸಂತೋಷ್ ಶಿಂಧೆ ವಿರುದ್ಧ ವೇಗದ ಚಾಲನೆ ಮತ್ತು ಇನ್ನೊಬ್ಬರ ಜೀವಕ್ಕೆ ಅಪಾಯ ಒಡ್ಡಿದ ಆರೊಪದ ಮೇಲೆ ಭಾರತೀಯ ನ್ಯಾಯ ಸಂಹಿತೆ ಹಾಗೂ ಮೋಟಾರು ವಾಹನಗಳ ಕಾಯ್ದೆಗಳ ಸೂಕ್ತ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.