ಲಖನೌ: ಆಸ್ತಿ ಮತ್ತು ಹಣಕ್ಕಾಗಿ ಕೆಲವರು ತಮ್ಮವರ ಮೇಲೆಯೇ ನಿರ್ದಯವಾಗಿ ಮತ್ತು ಕ್ರೂರತೆಯಿಂದ ವರ್ತಿಸುವ ವಿಚಾರ ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತದೆ. ಅಂತಹದ್ದೇ ಒಂದು ಘಟನೆಯಲ್ಲಿ ಮಹಿಳೆಯೊಬ್ಬಳು ಆಸ್ತಿಯ ಆಸೆಗೆ ಬಿದ್ದು ತನ್ನ ಹೆತ್ತವರಿಗೇ ನಿರಂತರ ಕಿರುಕುಳ ಮತ್ತು ತೊಂದರೆ ಕೊಡುತ್ತಿರುವ ವಿಡಿಯೊ ಇದೀಗ ವೈರಲ್ (Viral Video) ಆಗುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ತನ್ನ ಹೆತ್ತವರ ಮನೆಯ ಮೇಲೆ ಮಹಿಳೆಯೊಬ್ಬಳು ಉದ್ದೇಶಪೂರ್ವಕವಾಗಿ ಇಟ್ಟಿಗೆಗಳನ್ನು ಎಸೆಯುತ್ತಿರುವ ಕೃತ್ಯವೊಂದು ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು, ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಆರೋಪಿ ಮಹಿಳೆ ಇದೇ ರೀತಿಯಾಗಿ ಕಳೆದ ಕೆಲವು ತಿಂಗಳುಗಳಿಂದ ತನ್ನ ಹೆತ್ತವರಿಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಈ ವಿಡಿಯೊ ಪೋಸ್ಟ್ ಮಾಡಿರುವವರು ಬರೆದುಕೊಂಡಿರುವಂತೆ ಕಳೆದ ಕೆಲವು ಸಮಯಗಳಿಂದ ಮಹಿಳೆ ಈ ರೀತಿಯ ಕೃತ್ಯವನ್ನು ಎಸಗುತ್ತಿದ್ದರೂ ಸ್ಥಳೀಯ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ವಿಡಿಯೊದಲ್ಲಿ ದಾಖಲಾಗಿರುವಂತೆ, ಆರೋಪಿ ಮಹಿಳೆ ರಸ್ತೆ ಬದಿಯಲ್ಲಿ ತನ್ನ ಸ್ಕೂಟರನ್ನು ನಿಲ್ಲಿಸಿ ಅದರಲ್ಲಿರಿಸಿದ್ದ ಚೀಲದಿಂದ ಒಂದೊಂದೇ ಇಟ್ಟಿಗೆಯನ್ನು ತೆಗೆದು ತನ್ನ ಹೆತ್ತವರ ಮನೆ ಮೇಲೆ ಎಸೆಯುತ್ತಾಳೆ. ಬಳಿಕ ಆಕೆ ಅಲ್ಲಿಂದ ತೆರಳಿದಂತೆ ಮಾಡಿ, ಮನೆಯಿಂದ ವಯಸ್ಸಾದ ವ್ಯಕ್ತಿ (ತಂದೆ) ಹೊರ ಬಂದಾಗ ಮತ್ತು ವಾಪಾಸು ಬಂದು ಇನ್ನೊಂದು ಇಟ್ಟಿಗೆಯನ್ನು ಎಸೆಯುತ್ತಾಳೆ. ಆಗ ಆ ವೃದ್ಧ ವ್ಯಕ್ತಿ ಭಯದಿಂದ ಒಳಗೆ ಓಡಿ ಹೋಗುತ್ತಾರೆ.
ಈ ರೀತಿಯಾಗಿ ತನ್ನ ಹೆತ್ತವರ ಮೇಲೆ ದೌರ್ಜನ್ಯ ಎಸಗುತ್ತಿರುವ ಮಹಿಳೆಯನ್ನು ಸುರೇಖ ಕುಮಾರಿ ಎಂದು ಗುರುತಿಸಲಾಗಿದೆ. ಈಕೆ ತನ್ನಿಷ್ಟದ ವ್ಯಕ್ತಿಯೊಂದಿಗೆ ಮದುವೆಯಾದ ಬಳಿಕ ತನ್ನ ಹೆತ್ತವರ ಸಂಬಂಧವನ್ನು ಕಡಿದುಕೊಂಡಿದ್ದಳು ಎಂಬ ಮಾಹಿತಿಯೂ ಲಭಿಸಿದೆ. ಆದರೆ ಇದೀಗ ಈ ಮಹಿಳೆ ಆಸ್ತಿಯ ಆಸೆಗೆ ಬಿದ್ದು ತನ್ನ ಹೆತ್ತವರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾಳೆ ಮತ್ತು ಅವರ ಮನೆ ಮೇಲೆ ಕಲ್ಲು ಹಾಗೂ ಇಟ್ಟಿಗೆಗಳನ್ನು ಎಸೆದು ದಾಂಧಲೆ ನಡೆಸುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಈ ಘಟನೆ ಉತ್ತರಪ್ರದೇಶದ ಆಗ್ರಾದ (Agra) ಜಗದೀಶಪುರ (Jagdishpura) ಪ್ರದೇಶದಲ್ಲಿ ನಡೆದಿದೆ. ಮಹಿಳೆಯ ಹೆತ್ತವರು ಪೊಲೀಸ್ ದೂರು ನೀಡಿದ್ದರೂ ಸಹ, ಪೊಲೀಸರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೊಪವೂ ಸ್ಥಳೀಯರದ್ದಾಗಿದೆ.
ಇದೀಗ ಮಹಿಳೆಯ ಈ ದುಷ್ಕೃತ್ಯದ ವಿಡಿಯೊ ವೈರಲ್ ಆಗುತ್ತಿದ್ದಂತೆ ಡಿಸಿಪಿ ಸಿಟಿ, ಆಗ್ರಾ ಎಂಬ ಹೆಸರಿನಲ್ಲಿರುವ ‘ಎಕ್ಸ್’ ಅಕೌಂಟ್ ಈ ವಿಡಿಯೋ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ದೂರನ್ನು ಸ್ವೀಕರಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹಿಂದಿಯಲ್ಲಿ ಬರೆದುಕೊಂಡಿದೆ.
ಇನ್ನು ಈ ವಿಡಿಯೊದಲ್ಲಿ ಮಹಿಳೆ ನಡೆಸಿರುವ ಕೃತ್ಯದ ಬಗ್ಗೆ ನೆಟ್ಟಿಗರು ಗರಂ ಆಗಿದ್ದು ಹಲವಾರು ರಿತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ʼʼಈ ಮಹಿಳೆಗೆ ಆಕೆಯ ಹೆತ್ತವರ ಆಸ್ತಿಯಲ್ಲಿ ಯಾವುದೇ ಪಾಲು ನೀಡಬಾರದುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇದೊಂದು ರಾಕ್ಷಸೀ ಕೃತ್ಯʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಆಸ್ತಿ ವಿಚಾರ ಬಿಟ್ಟುಬಿಡಿ, ಇಂತಹ ಮಹಿಳೆಗೆ ಆಕೆ ತನ್ನ ಹೆತ್ತವರ ಹೆಸರನ್ನೂ ಸಹ ಹೇಳಲು ಅವಕಾಶ ನೀಡಬಾರದುʼʼ ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಈಗಾಗಲೇ 11 ಸಾವಿರ ಸಲ ವೀಕ್ಷಣೆಗೊಳಪಟ್ಟಿದೆ.
ಇದನ್ನೂ ಓದಿ: Viral Video: ಶೌಚಾಲಯದಲ್ಲಿ ಹೆಣ್ಣು ನಾಯಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮುದುಕ! ವಿಡಿಯೊ ನೋಡಿ
ಒಟ್ಟಿನಲ್ಲಿ, ಆಸ್ತಿಯ ಆಸೆಗೆ ಬಿದ್ದು ತನ್ನನ್ನು ಹೆತ್ತು, ಹೊತ್ತು, ಆಡಿ ಬೆಳೆಸಿದ ಹೆತ್ತವರ ಮೇಲೆಯೇ ದೌರ್ಜನ್ಯವೆಸಗುವ ಮತ್ತು ತಾನು ಆಡಿ ಬೆಳೆದ ಮನೆಯ ಮೇಲೆಯೇ ಕಲ್ಲೆಸೆಯುವ ಇಂತಹವರಿಗೆ ಕಾನೂನು ತಕ್ಕ ಪಾಠ ಕಲಿಸಬೇಕಿದೆ ಎಂಬುದು ನೆಟ್ಟಿಗರ ಆಗ್ರಹ.