Saturday, 10th May 2025

Viral Video: ಯೂಟ್ಯೂಬ್ ನೋಡ್ಕೊಂಡು ಬ್ಯಾಂಕ್ ದರೋಡೆಗೆ ಬಂದ ಯುವಕನ ಕಥೆ ಕೇಳಿದ್ರೆ ನೀವೂ ನಗ್ತೀರಾ – ಇಲ್ಲಿದೆ ವಿಡಿಯೊ!

ಆನ್ ಲೈನ್ ಗೇಮಿಂಗ್‌ನಲ್ಲಿ (online gaming) ಸಿಕ್ಕಾಪಟ್ಟೆ ಹಣವನ್ನು ಕಳೆದುಕೊಂಡ ಯುವಕನೊಬ್ಬ ಈ ಸಾಲದ ಹಣವನ್ನು ಮರುಪಾವತಿಸಲು ಬ್ಯಾಂಕ್ ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆಯೊಂದು ಮಧ್ಯಪ್ರದೇಶದ (Madhya Pradesh) ಭೋಪಾಲ್‌ನಲ್ಲಿ(Bhopal) ನಡೆದಿದೆ ಎಂದು ವರದಿಯಾಗಿದೆ. ಈ ಸುದ್ದಿ ಮತ್ತು ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ. ವಿಪರ್ಯಾಸವೆಂದರೆ ಬಿ.ಎ.ಎಂ.ಎಸ್. (BAMS) ವಿದ್ಯಾರ್ಥಿಯೇ ಇಂತಹ ದುಃಸ್ಸಾಹಸಕ್ಕೆ ಕೈಹಾಕಿದ ಯುವಕ.

ಮುಖಕ್ಕೆ ಮಾಸ್ಕ್ ಧರಿಸಿಕೊಂಡು, ಕೈಯಲ್ಲಿ ಮೆಣಸಿನ ಹುಡಿ ಹಿಡಿದುಕೊಂಡು ಈ ಯುವಕ ಇಲ್ಲಿನ ಧನಲಕ್ಷ್ಮೀ ಬ್ಯಾಂಕ್‌ಗೆ (Dhanlaxmi Bank) ಕನ್ನ ಹಾಕುವ ವಿಫಲ ಯತ್ನ ನಡೆಸಿದ್ದಾನೆ. ಬ್ಯಾಂಕ್ ಸಿಬ್ಬಂದಿಗಳನ್ನು ಬೆದರಿಸಿ ದರೋಡೆ ನಡೆಸುವ ಈತನ ಪ್ರಯತ್ನ ಫಲಕಾರಿಯಾಗಿಲ್ಲ. ಬ್ಯಾಂಕ್ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿ, ಅಲ್ಲಿದ್ದ ಗ್ರಾಹಕರೊಬ್ಬರ ಮೇಲೆ ಮೆಣಸಿನ ಪುಡಿ ಎರಚುವಾಗಲೇ ಈ ಯುವಕನ ಮೀಟರ್ ಆಫ್ ಆಗಿದೆ ಹಾಗೂ ಅಲ್ಲಿಂದ ಓಡಲು ಯತ್ನಿಸಿದ್ದಾನೆ! ಅಷ್ಟರಮಟ್ಟಿಗೆ ಆತನ ಪ್ಲ್ಯಾನ್ ವರ್ಕೌಟ್ ಆದ್ರೂ, ಆಮೇಲೆ ಎಲ್ಲವೂ ಫ್ಲಾಪ್ ಶೋ ಆಗಿದೆ! ಬಳಿಕ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಈ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.

ಬ್ಯಾಂಕ್ ದರೋಡೆಗೆ ವಿಫಲ ಯತ್ನ ನಡೆಸಿದ ಆರೋಪಿ ಯುವಕನನ್ನು 24 ವರ್ಷದ ಸಂಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಉಜ್ಜೈನಿಯವನಾಗಿದ್ದು, ಭೋಪಾಲ್‌ನ ಖಾಸಗಿ ಕಾಲೇಜೊಂದರಲ್ಲಿ ಬಿಎಎಂಎಸ್ ವ್ಯಾಸಂಗ ಮಾಡುತ್ತಿದ್ದ.

ಇನ್ನೂ ಗಮ್ಮತ್ತಿನ ವಿಷಯ ಏನಂದ್ರೆ, ಈ ಯುವಕ ಬ್ಯಾಂಕ್‌ಗೆ ಕನ್ನ ಹಾಕುವುದು ಹೇಗೆಂದು ಯೂ-ಟ್ಯೂಬ್ (You Tube) ನೋಡಿ ಟ್ರೈನಿಂಗ್ ತಗೊಂಡಿದ್ದ ಎಂಬ ವಿಚಾರವನ್ನು ಈತ ಪೊಲೀಸ್ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ. ಈತನ ಕೈಯಲ್ಲಿದ್ದ ಮೆಣಸಿನ ಹುಡಿ ಮತ್ತು ಒಂದು ಏರ್ ಪಿಸ್ತೂಲನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದು, ಇವನ್ನೆಲ್ಲಾ ಈತ ಆನ್ ಲೈನ್ ನಲ್ಲಿ ಖರೀದಿಸಿದ್ದನಂತೆ. ಒಟ್ಟಿನಲ್ಲಿ ಇವನ ಆನ್ ಲೈನ್ ರಾಬರಿ ಪ್ಲ್ಯಾನ್ ರಿಯಲ್ ಟೈಮ್ ನಲ್ಲಿ ಠುಸ್ ಆಗಿದ್ದಂತೂ ಸುಳ್ಳಲ್ಲ!

ಬ್ಯಾಂಕ್ ಸಿಬ್ಬಂದಿಗಳು ಕೊಟ್ಟ ದೂರಿನ ಆಧಾರದಲ್ಲಿ ಇದೀಗ ಯುವಕನ ವಿರುದ್ಧ ಪೊಲೀಸರು ಎಫ್.ಐ.ಆರ್. ದಾಖಲಿಸಿಕೊಂಡಿದ್ದಾರೆ. ಮತ್ತು ಬಂಧಿತ ಯುವಕನನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಇನ್ನು, ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಕಾಮಿಡಿ ಫಿಲ್ಮ್ ನೋಡಿದಂತೆ ಬಿದ್ದು ಬಿದ್ದು ನಗುತ್ತಿದ್ದಾರೆ. ನೀವೂ ಬೇಕಾದ್ರೆ ಒಮ್ಮೆ ಈ ವಿಡಿಯೋ ನೋಡಿ:

ಇದನ್ನೂ ಓದಿ: Marriage fraud: ನಕಲಿ ವಧು; ಮದುವೆಯಾದ ತಿಂಗಳಿಗೆ ಹೆಂಡ್ತಿನೂ ಇಲ್ಲ, ಕೊಟ್ಟ 4 ಲಕ್ಷವೂ ಇಲ್ಲ!

ಧನಲಕ್ಷ್ಮೀ ಬ್ಯಾಂಕಿನ ಸಿಬ್ಬಂದಿಯೊಬ್ಬರು ಪೊಲೀಸರಿಗೆ ನೀಡಿರುವ ಮಾಹಿತಿಯಂತೆ, ಶುಕ್ರವಾರದಂದು ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿದ ಯುವಕನೊಬ್ಬ ಬ್ಯಾಂಕಿಗೆ ಬಂದು ಬಾಡಿಗೆ ಕರಾರು ಪತ್ರವನ್ನು ತೋರಿಸಿ ಬ್ಯಾಂಕ್ ಖಾತೆ ತೆರೆಯಲು ವಿನಂತಿಸಿಕೊಂಡಿದ್ದ ಆದರೆ ಈತನ ಮನವಿಯನ್ನು ಬ್ಯಾಂಕ್ ಸಿಬ್ಬಂದಿಗಳು ನಿರಾಕರಿಸಿದ್ದರು. ಬಳಿಕ ಆ ಯುವಕ ಅಲ್ಲಿಂದ ತೆರಳಿದ್ದ.

ಅದೇ ಯುವಕ ಆ ದಿನ ಸಾಯಂಕಾಲ 4 ಗಂಟೆ ಹೊತ್ತಿಗೆ ಬ್ಯಾಂಕಿಗೆ ಮರಳಿ ಬಂದು ಈ ದರೋಡೆ ಯತ್ನ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.