ಉತ್ತರಪ್ರದೇಶ: ಸಾಮಾನ್ಯವಾಗಿ ನಾವು ನೋಡಿದ ಹಾಗೇ ಎಷ್ಟೋ ಪ್ರಕರಣದಲ್ಲಿ ಪತಿ ಕುಡಿದು ಬಂದು ಪತ್ನಿಗೆ ಹಿಂಸೆ ಮಾಡುವುದು, ಒತ್ತಡ ಹಾಕುವುದನ್ನು ನಾವು ಕೇಳಿರುತ್ತೇವೆ. ಆದರೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಪತ್ನಿಯೇ ಮದ್ಯ ಸೇವಿಸಿ ಪತಿಗೂ ಕುಡಿಯುವಂತೆ ಒತ್ತಾಯ ಮಾಡಿ ಹಿಂಸಿಸಿದ್ದಾಳೆ. ಹಾಗಾಗಿ ಈ ವಿಚಾರ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್(Viral News) ಆಗಿತ್ತು.
ವರದಿ ಪ್ರಕಾರ, ಮಹಿಳಾ ಪೊಲೀಸ್ ಠಾಣೆಯ ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ನಲ್ಲಿ ಈ ಪ್ರಕರಣ ವರದಿಯಾಗಿದೆ. ಈ ಪ್ರಕರಣದಲ್ಲಿ, ಪತಿಯು ತನ್ನ ಪತ್ನಿ ಮದ್ಯಪಾನ ಮಾಡುವುದರ ಜೊತೆಗೆ ತನಗೂ ಮದ್ಯಪಾನ ಮಾಡಲು ಒತ್ತಾಯಿಸುತ್ತಾಳೆ ಎಂದು ಉಲ್ಲೇಖಿಸಿ ದೂರು ದಾಖಲಿಸಿದ್ದಾನೆ. ಪತ್ನಿಯ ಕಿರುಕುಳದಿಂದ ಬೇಸತ್ತ ಆತ ಆಕೆಯನ್ನು ಅವಳ ತಾಯಿಯ ಮನೆಯಲ್ಲಿ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾನೆ. ಆದರೆ ಪತಿಯ ವಿರುದ್ಧ ಪತ್ನಿ ಕೂಡ ದೂರು ದಾಖಲಿಸಿದ್ದರಿಂದ ಪೊಲೀಸರು ಇದು ತಾವು ಬಗೆಹರಿಸಲಾಗದ ಸಮಸ್ಯೆ ಎಂಬುದಾಗಿ ತಿಳಿದು ದಂಪತಿಯನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ಗೆ ಕಳುಹಿಸಿದ್ದಾರೆ.
ಕೌನ್ಸಿಲರ್ ಪ್ರಕಾರ ದಂಪತಿಗೆ ಕೌನ್ಸೆಲಿಂಗ್ ಶುರು ಮಾಡಿದಾಗ, ಸ್ಥಳದಲ್ಲೇ ಅವರ ನಡುವೆ ಜಗಳ ಶುರುವಾಗಿದೆ. ಪತ್ನಿ ಪ್ರತಿದಿನ ಮದ್ಯಪಾನ ಮಾಡುತ್ತಾಳೆ ಮತ್ತು ಅದೇ ರೀತಿ ತನಗೂ ಮಾಡಲು ಒತ್ತಡ ಹೇರುತ್ತಾಳೆ ಎಂದು ಪತಿ ಆರೋಪಿಸಿದ್ದಾನೆ. ತನ್ನ ಪತ್ನಿ ಒಮ್ಮೆಗೆ ಮೂರರಿಂದ ನಾಲ್ಕು ಪೆಗ್‍ಗಳನ್ನು ಕುಡಿಯುತ್ತಾಳೆ ಎಂದು ಪತಿ ತಿಳಿಸಿದ್ದಾನೆ. ಮತ್ತೊಂದೆಡೆ, ಪತಿ ಮದ್ಯಪಾನವನ್ನು ಇಷ್ಟಪಡುವುದಿಲ್ಲ. ಆತ ತನ್ನ ವಿರುದ್ಧ ಮಾಡಿದ ಎಲ್ಲಾ ಆರೋಪಗಳು ಸತ್ಯ ಎಂಬುದನ್ನು ಪತ್ನಿ ಕೂಡ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ಗೋವಾ ಬೀಚ್‍ನಲ್ಲಿ ಬಿಕಿನಿಯಲ್ಲಿ ಮಿಂಚಿದ ಸಾರಾ ತೆಂಡೂಲ್ಕರ್! ವಿಡಿಯೊ ಇದೆ
ಅಲ್ಲದೇ ಇವರಿಬ್ಬರಿಗೂ ಎರಡು ತಿಂಗಳ ಹಿಂದೆ ಮದುವೆಯಾಗಿದ್ದು, ಮೊದಲ ಬಾರಿಗೆ ಮಾತುಕತೆ ನಡೆಸಿದ್ದಾಗ ಆಕೆ ಸ್ವಲ್ಪ ಮದ್ಯಪಾನ ಮಾಡುವುದಾಗಿ ತಿಳಿಸಿದ್ದಳು. ಆದರೆ ನಂತರ, ಅವಳು ಪ್ರತಿದಿನ ಆಲ್ಕೋಹಾಲ್ ಕುಡಿಯಲು ಶುರುಮಾಡಿದ್ದಾಳೆ ಮತ್ತು ಪತಿಗೂ ಕುಡಿಯಲು ಒತ್ತಾಯಿಸಿದ್ದಾಳೆ. ತನ್ನ ಹೆಂಡತಿಯ ಕುಡಿತದ ಅಭ್ಯಾಸದಿಂದ ಅಸಮಾಧಾನಗೊಂಡ ಪತಿ ಅವಳನ್ನು ಅವಳ ತಾಯಿಯ ಮನೆಯಲ್ಲಿ ಬಿಟ್ಟು ಬಂದಿದ್ದಾನೆ. ಇದೀಗ ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ನಲ್ಲಿ ಇವರಿಬ್ಬರಿಗೂ ಕೌನ್ಸೆಲಿಂಗ್ ನೀಡಲಾಗಿದ್ದು, ಸಲಹೆಗಾರರ ತಂಡವು ದಂಪತಿಯ ನಡುವಿನ ವಿವಾದವನ್ನು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬಗೆಹರಿಸಿದೆ. ಕೊನೆಗೆ ಪತಿ-ಪತ್ನಿ ಇಬ್ಬರು ಒಟ್ಟಿಗೆ ವಾಸಿಸಲು ಒಪ್ಪಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.