Sunday, 11th May 2025

Viral News: ‘ನನ್ನ ಶಾರ್ಪನರ್ ಕಳೆದು ಹೋಗಿದೆ..’ ಎಂದು ದೂರಿತ್ತ ವಿದ್ಯಾರ್ಥಿ..! ಹೇಗಿತ್ತು ಖಾಕಿ ರೆಸ್ಪಾನ್ಸ್..?

ಲಖನೌ: ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮಾಡಬೇಕೆನ್ನುವ ಕೂಗು ಎಲ್ಲಾ ರಾಜ್ಯಗಳಲ್ಲೂ ಕೇಳಿಬರುತ್ತಿರುತ್ತದೆ. ಮತ್ತು ಇದಕ್ಕೆ ಪೂರಕವಾಗಿ ಕೆಲವು ಉನ್ನತ ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಮತ್ತು ಆ ಮೂಲಕ ಪೊಲೀಸರ ಬಗ್ಗೆ ಜನಸಾಮಾನ್ಯರಿಗಿರುವ ತಪ್ಪು ಕಲ್ಪನೆ ಮತ್ತು ಅನಾವಶ್ಯಕ ಭೀತಿಯ ವಾತಾವರಣವನ್ನು ನಿವಾರಿಸುವ ಪ್ರಯತ್ನಗಳನ್ನೂ ಸಹ ತಮ್ಮ ಇಲಾಖೆಯ ಮೂಲಕ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಉತ್ತರ ಪ್ರದೇಶದ (Uttar Pradesh) ಹರ್ದೋಯಿ ಜಿಲ್ಲೆಯಲ್ಲಿ (Hardoi) ಪೊಲೀಸರು ಕೈಗೊಂಡಿರುವ ಜನಸ್ನೇಹಿ ಕ್ರಮವೊಂದು ಮತ್ತು ಅದರಿಂದ ಉಂಟಾಗಿರುವ ಫಲಿತಾಂಶದ ಸುದ್ದಿಯೊಂದು ಇದೀಗ ವೈರಲ್ (Viral News) ಆಗಿದ್ದು, ಪೊಲೀಸ್ ವ್ಯವಸ್ಥೆಯ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುವಂತಾಗಿದೆ.

ಸಮುದಾಯಗಳ ನಡುವೆ ಸಾಮರಸ್ಯವನ್ನು ನಿರ್ಮಾಣ ಮಾಡುವ ಸದುದ್ದೇಶದಿಂದ ಉತ್ತರಪ್ರದೇಶದ ಹರ್ದೋಯಿ ಜಿಲ್ಲೆಯ ಪೊಲೀಸರು ಇಲ್ಲಿನ ಸ್ಥಳಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳ ನಡುವಿನ ಮನಸ್ತಾಪಗಳನ್ನು ಬಗೆಹರಿಸಲು ಹೊಸ ವಿಧಾನವೊಂದರ ಮೊರೆ ಹೋಗಿದ್ದು, ಪೊಲೀಸರ ಈ ಹೊಸ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಹರ್ದೋಯಿ ಪೊಲೀಸರು ಈ ಭಾಗದಲ್ಲಿರುವ ಶಾಲೆಗಲ್ಲಿ ಪಿಂಕ್ ಬಾಕ್ಸ್ (Pink Box) ಒಂದನ್ನು ಇರಿಸಿ, ವಿದ್ಯಾರ್ಥಿಗಳು ತಾವು ಶಾಲೆಯಲ್ಲಿ ಯಾವುದಾದರೂ ಸಮಸ್ಯೆ ಎದುರಿಸುತ್ತಿದ್ದಲ್ಲಿ ಅದಕ್ಕೆ ಸಂಬಂಧಿಸಿದ ತಮ್ಮ ದೂರನ್ನು ಅನಾಮಿಕವಾಗಿ ಇದರಲ್ಲಿ ಬರೆದು ಹಾಕುವಂತೆ ಸೂಚಿಸಿದ್ದರು. ಮತ್ತು ಈ ದೂರುಗಳನ್ನು ಸಂಗ್ರಹಿಸಿ ಅವುಗಳನ್ನು ಸ್ಥಳದಲ್ಲೇ ಬಗೆಹರಿಸಲು ಪ್ರತೀ ಮಂಗಳವಾರದಂದು ಪೊಲೀಸರಿಗೆ ಅವರ ಏರಿಯಾದ ಒಂದೊಂದು ಶಾಲೆಗಳಿಗೆ ಭೇಟಿ ನೀಡುವಂತೆ ಸೂಚಿಸಲಾಗಿತ್ತು.

‘ಜಿಲ್ಲೆಯ ಪೊಲೀಸ್ ಅಧೀಕ್ಷರ ಈ ಸೂಚನೆಯಂತೆ ನವೆಂಬರ್ ತಿಂಗಳಲ್ಲಿ ಈ ಪಿಂಕ್ ಬಾಕ್ಸ್ ಗಳಲ್ಲಿ ಒಟ್ಟು 12 ದೂರನ್ನು ಸ್ವೀಕರಿಸಲಾಗಿತ್ತು ಮತ್ತು ಅವುಗಳನ್ನು ಪ್ರಾಮಾಣಿಕ ರೀತಿಯಲ್ಲಿ ಬಗೆಹರಿಸಲಾಗಿದೆ’ ಎಂದು ಹರ್ದೋಯಿ ಪೊಲೀಸರ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: Viral News: ಲೀಕ್ ಆಯ್ತು ಪಾಕ್ ಟಿಕ್‌ಟಾಕ್‌ ಸ್ಟಾರ್ ಮರ್ಯಮ್ ಫೈಸಲ್‌ ಖಾಸಗಿ ವಿಡಿಯೊ; ಈ ಜಾಲಕ್ಕೆ ಬಲಿಯಾದ 5ನೇ ಸಂತ್ರಸ್ತೆ ಈಕೆ

ಈಗ ಇಂಟರೆಸ್ಟಿಂಗ್ ವಿಷ್ಯ ಏನಪ್ಪಾ ಅಂದ್ರೆ, ಹೀಗೆ ಸ್ವೀಕರಿಸಲಾದ ದೂರುಗಳಲ್ಲಿ ಕೆಲವೊಂದು, ‘ಸ್ಕೂಲ್ ಬಸ್ ಗಳಲ್ಲಿ ನನಗೆ ಕೀಟಲೆ ಮಾಡಲಾಗುತ್ತಿದೆ..’, ಎಂದಿದ್ದರೆ, ಇನ್ನು ಕೆಲವರು ಗೆಳೆಯರೊಂದಿಗಿನ ಜಗಳದ ಕುರಿತು ದೂರು ನೀಡಿದ್ದರು. ಇನ್ನಿಬ್ಬರು ವಿದ್ಯಾರ್ಥಿಗಳು ತಾವು ಲೆಕ್ಕದ ಸಮಸ್ಯೆ ಬಗೆಹರಿಸದೆ ಇದ್ದ ಕಾರಣಕ್ಕೆ ಶಿಕ್ಷಕರಿಂದ ಹೊಡೆತ ತಿಂದ ಬಗ್ಗೆ ದೂರಿಕೊಂಡಿದ್ದರು, ಇನ್ನು ಒಬ್ಬ ವಿದ್ಯಾರ್ಥಿಯಂತೂ ತನ್ನ ತರಗತಿಯಲ್ಲಿ ಸಿಕ್ಕಾಪಟ್ಟೆ ಮಾತನಾಡುವ ತನ್ನ ಸಹಪಾಠಿಯ ಬಗ್ಗೆಯೇ ದೂರು ನೀಡಿದ್ದ! ಆದರೆ ಇದೆಲ್ಲದ್ದಕ್ಕಿಂತ ಗಮ್ಮತ್ತಿನ ದೂರೆಂದ್ರೆ, ತನ್ನ ಪೆನ್ಸಿಲ್ ಶಾರ್ಪ್ ನರನ್ನು ತನ್ನ ಸಹಪಾಠಿ ಎಗರಿಸಿದ್ದಾನೆಂದು ಒಬ್ಬ ವಿದ್ಯಾರ್ಥಿ ದೂರು ನೀಡಿದ್ದ!

ಈ ಎಲ್ಲಾ ದೂರುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪೊಲೀಸರು ಪಿಂಕ್ ಬಾಕ್ಸ್ ನಲ್ಲಿ ದೂರು ದಾಖಲಿಸಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರ ಸಮಸ್ಯೆಯನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ನಡುವಿನ ಜಗಳಕ್ಕೂ ಪೊಲೀಸರು ಮಧ್ಯಸ್ಥಿಕೆ ವಹಿಸಿ, ಎರಡೂ ಕಡೆಯವರ ಮಾತನ್ನು ಆಲಿಸಿ ಸೂಕ್ತವಾದ ಪರಿಹಾರವನ್ನು ಕಲ್ಪಿಸಿಕೊಟ್ಟಿದ್ದಾರೆ.

ಉತ್ತರಪ್ರದೇಶ ಪೊಲೀಸರ ಈ ಕ್ರಮಕ್ಕೆ ಇದೀಗ ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದು, ತಳಮಟ್ಟದಲ್ಲೇ ಸಮುದಾಯಗಳಲ್ಲಿ ಕಾನೂನು ಜಾರಿಯ ಬಗ್ಗೆ ಜಾಗೃತಿ ಮೂಡಿಸುವ ಈ ಕ್ರಮಕ್ಕೆ ಶಹಬ್ಬಾಸ್ ಗಿರಿ ಲಭಿಸಿದೆ.

ಇನ್ನು ಕೆಲವರು ಇದಕ್ಕೆ ತಮಾಷೆಯಾಗಿ ಕಮೆಂಟ್ ಮಾಡಿದ್ದು, ‘ಇವರು 20 ವರ್ಷ ಮೇಲ್ಪಟ್ಟವರ ದೂರನ್ನೂ ಸಹ ಸ್ವೀಕರಿಸುತ್ತಾರೋ..? ನನ್ನ ಸೇಫ್ಟಿ ಪಿನ್ ಕಳೆದುಹೋಗಿದೆ. ಇದ್ರ ಬಗ್ಗೆ ಸುಳಿವು ಬೇಕಾದರೂ ನಾನು ಕೊಡಬಲ್ಲೆ, ಇದು ತುಕ್ಕು ಹಿಡಿದಿದೆ ಮತ್ತು ಸ್ವಲ್ಪ ಬಾಗಿದೆ..!’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಪೊಲಿಸ್ ವ್ಯವಸ್ಥೆಯ ಬಗ್ಗೆ ಭರವಸೆ ಹುಟ್ಟಿಸುವ ಈ ಕ್ರಮಕ್ಕೆ ಸರ್ವತ್ರ ಪ್ರಶಂಸೆ ವ್ಯಕ್ತವಾಗುತ್ತಿರುವುದು ಮಾತ್ರ ಸುಳ್ಳಲ್ಲ…!