Monday, 12th May 2025

Viral News: ಇದು ನಿಜವಾಗ್ಲೂ ಶಾಕಿಂಗ್‌ ಸುದ್ದಿ! ಭವಿಷ್ಯದಲ್ಲಿ ದ.ಕೊರಿಯಾ ಭೂಪಟದಿಂದಲೇ ಮಾಯವಾಗಬಹುದಂತೆ – ಇಲ್ಲಿದೆ ಕಾರಣ

ಸಿಯೋಲ್‌: ವಿಶ್ವದ ರಾಷ್ಟ್ರಗಳಲ್ಲಿ ತಂತ್ರಜ್ಞಾನ ಮತ್ತು ಆಧುನಿಕತೆಯಲ್ಲಿ ದಕ್ಷಿಣ ಕೊರಿಯಾಗೆ ವಿಶಿಷ್ಟವಾದ ಸ್ಥಾನವಿದೆ. ಆರ್ಥಿಕತೆಯಲ್ಲೂ ಅಭಿವೃದ್ಧಿ ಹೊಂದಿದ ದೇಶವಾಗಿ ದಕ್ಷಿಣ ಕೊರಿಯಾ (South Korea) ಗುರುತಿಸಲ್ಪಟ್ಟಿದೆ. ಹೀಗೆ ಎಲ್ಲಾ ವಿಷಯದಲ್ಲೂ ಈಗಾಗಲೇ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರುವ ದ.ಕೊರಿಯಾ ಇದೀಗ ವಿಚಿತ್ರವಾದ ಭೀತಿಯನ್ನು ಎದುರಿಸುತ್ತಿದೆ. ಮತ್ತು ಅದರಿಂದಾಗಿ ಭವಿಷ್ಯದಲ್ಲಿ ಈ ದೇಶ ವಿಶ್ವದ ಭೂಪಟದಿಂದಲೇ ಮಾಯವಾಗುವ ಭೀತಿಯೂ ಇದೀಗ ಎದುರಾಗಿದ್ದು, ಈ ಸುದ್ದಿ ಇದೀಗ ವೈರಲ್‌ (Viral News) ಆಗುತ್ತಿದೆ.

ಹಾಗಾದ್ರೆ, ಏನದು ದ.ಕೊರಿಯಾ ದೇಶವನ್ನು ಕಾಡುತ್ತಿರುವ ಭೀತಿ ಎಂಬುದನ್ನು ನೋಡಿಕೊಂಡು ಬರೋಣ. ಕೆಲವು ದೇಶಗಳಿಗೆ ಜನಸಂಖ್ಯೆ ಏರಿಕೆ ಒಂದು ಸಮಸ್ಯೆಯಾದರೆ, ವಿಶ್ವದ ಕೆಲವೊಂದು ರಾಷ್ಟ್ರಗಳಿಗೆ ಜನಸಂಖ್ಯಾ ಕುಸಿತವೇ ಶಾಪವಾಗುತ್ತಿದೆ, ಅಂತಹ ದೇಶಗಳಲ್ಲಿ ದ.ಕೊರಿಯಾ ಕೂಡಾ ಒಂದಾಗಿದೆ. ವರದಿಗಳ ಪ್ರಕಾರ ದ.ಕೊರಿಯಾದಲ್ಲಿ ಜನನ ಪ್ರಮಾಣ ಗಣನೀಯ ಮಟ್ಟದಲ್ಲಿ ಕುಸಿದಿದೆ ಮಾತ್ರವಲ್ಲದೇ ಈ ಶತಮಾನದ ಅಂತ್ಯಕ್ಕೆ ಆ ದೇಶದ ಜನಸಂಖ್ಯೆ ಈಗಿನ ಜನಸಂಖ್ಯೆಯ ಮೂರನೇ ಭಾಗಕ್ಕೆ ಕುಸಿಯುವ ಆತಂಕವನ್ನು ಅಲ್ಲಿನ ತಜ್ಞರು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ-ಆರ್ಥಿಕ ಒತ್ತಡ ಹಾಗೂ ಹೆಚ್ಚುತ್ತಿರುವ ಲಿಂಗಾನುಪಾತವೇ ಈ ಸಮಸ್ಯೆಯ ಮೂಲ ಕಾರಣವೆನ್ನಲಾಗುತ್ತಿದೆ.

ದ.ಕೊರಿಯಾದಲ್ಲಿ ಈ ಸಮಸ್ಯೆಯ ಮೂಲ ಎಲ್ಲಿಂದ ಎಂದು ಕೇಳಿದರೆ, 1960ರಲ್ಲಿ ಆ ದೇಶ ಅಳವಡಿಸಿಕೊಂಡ ಜನನ ನಿಯಂತ್ರಣ ನೀತಿಯಿಂದ ಎಂದೆನ್ನಬಹುದು. ಆಗಿನ ದ.ಕೊರಿಯಾ ಸರಕಾರವು, ದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ತನ್ನ ದೇಶದ ಆರ್ಥಿಕ ಪ್ರಗತಿಗೆ ಮಾರಕ ಎಂದುಕೊಂಡು ಕಠಿಣ ಜನಸಂಖ್ಯಾ ನೀತಿಯನ್ನು ರೂಪಿಸಿತು.
ಆ ಸಮಯದಲ್ಲಿ ದ.ಕೊರಿಯಾದ ತಲಾ ಆದಾಯ ಜಾಗತಿಕ ಸರಾಸರಿಯ 20 ಪ್ರತಿಶತವಿತ್ತು, ಹಾಗೂ ಸಂತಾನೋತ್ಪತ್ತಿ ಪ್ರಮಾಣ ಪ್ರತೀ ಮಹಿಳೆಗೆ 6 ಮಕ್ಕಳು ಎಂಬ ರೀತಿಯಲ್ಲಿತ್ತು. 1982ರ ಹೊತ್ತಿಗೆ, ದೇಶದ ಆರ್ಥಿಕ ಪ್ರಗತಿ ಹೆಚ್ಚಾಗಿ, ಸಂತಾನೋತ್ಪತ್ತಿ ಪ್ರಮಾಣ 2.4ಕ್ಕೆ ಕುಸಿದರೂ, ನಿಗದಿತ ಗುರಿಯಾಗಿದ್ದ 2.1ಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು.

ಈ ಸುದ್ದಿಯನ್ನೂ ಓದಿ: UP horror: ಪೊಲೀಸರ ಎದುರೇ ನಡೆಯಿತು ಮರ್ಡರ್‌! ಆಸ್ಪತ್ರೆಯ ಹೊರಗೆ ವ್ಯಕ್ತಿಯ ತಲೆಬುರುಡೆ ಒಡೆದ ಕಿರಾತಕರು

ಈ ರೀತಿಯಾಗಿ 1983ರಲ್ಲಿ ದ.ಕೊರಿಯಾದ ಸಂತಾನೋತ್ಪತ್ತಿ ಪ್ರಮಾಣ ಒಂದು ನಿರ್ಣಾಯಕ ಘಟ್ಟಕ್ಕೆ ಬಂದು ಮುಟ್ಟಿತ್ತು. ಮತ್ತಿದು ಬದಲಿ ಮಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಅಲ್ಲಿಂದ ಬಳಿಕ ಈ ಸಂತಾನೋತ್ಪತ್ತಿ ಪ್ರಮಾಣ ಇಳಿಮುಖವಾಗಿದ್ದು ಮಾತ್ರವಲ್ಲದೆ ತೀವ್ರ ಕುಸಿತವನ್ನು ಕಾಣಲಾರಂಭಿಸಿತು. ಆದರೆ, ಪ್ರಾರಂಭದಲ್ಲಿ ಇದೊಂದು ನಿಯಂತ್ರಿತ ಕುಸಿತದಂತೆ ಕಾಣಲಾರಂಭಿಸಿದರೂ, ಸದ್ಯದ ಪರಿಸ್ಥಿತಿಯಲ್ಲಿ ಈ ಕುಸಿತ ಗಂಭೀರ ಕಳವಳಕ್ಕೆ ಕಾರಣವಾಗಿದೆ.

ದೇಶದ ಚಿಂತಕರು ಇದನ್ನೊಂದು ಗಂಭೀರ ವಿಚಾರವೆಂದು ಪರಿಗಣಿಸಿದ್ದು, ಈ ಕುಸಿತ ಪ್ರಮಾಣವನ್ನು ತೀವ್ರ ಕಳವಳಕಾರಿ ವಿಚಾರವೆಂದು ಪರಿಗಣಿಸಲಾಗಿದೆ. ಸದ್ಯ ಈ ದೇಶದ ಜನಸಂಖ್ಯೆ 52 ಮಿಲಿಯನ್‌ ಆಗಿದ್ದು, ಈ ಶತಮಾನದ ಅಂತ್ಯಕ್ಕೆ ಇದು 17 ಮಿಲಿಯನ್‌ ತಲುಪುವ ಭೀತಿ ಎದುರಾಗಿದೆ. ಕೆಲವೊಂದು ಸಮೀಕ್ಷೆಗಳು ಹೇಳುವ ಪ್ರಕಾರ ದ.ಕೊರಿಯಾದ ಜನಸಂಖ್ಯೆ ಈಗಿನ ಲೆಕ್ಕಾಚಾರಕ್ಕಿಂತ 70% ಕುಸಿಯುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದಾಗಿ ದೇಶದ ಆರ್ಥಿಕತೆಯೇ ಅಪಾಯಕ್ಕೀಡಾಗುವ ಸಾಧ್ಯತೆಗಳನ್ನು ಅಲ್ಲಿನ ಆರ್ಥಿಕ ಮತ್ತು ಸಾಮಾಜಿಕ ತಜ್ಞರು ವ್ಯಕ್ತಪಡಿಸಿದ್ದಾರೆ.

ತನ್ನ ದೇಶದಲ್ಲಿ ಜನನ ಪ್ರಮಾಣವನ್ನು ಸ್ಥಿರಗೊಳಿಸುವ ನಿಟ್ಟಿನಲ್ಲಿ ಅಲ್ಲಿನ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ, ಮಕ್ಕಳ ಪಾಲನೆಗೆ ವಿದೇಶಿ ದಾದಿಯರನ್ನು ನೇಮಿಸಿಕೊಳ್ಳುವುದು, ತೆರಿಗೆ ವಿನಾಯಿತಿ ಮಾತ್ರವಲ್ಲದೇ 30 ವರ್ಷದೊಳಗಿನ ಪುರುಷರು ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಮಾಡಿಕೊಂಡಲ್ಲಿ ಅವರು ಕಡ್ಡಾಯ ಮಿಲಿಟರಿ ಸೇವೆಯಿಂದ ವಿನಾಯತಿ ಪಡೆದುಕೊಳ್ಳುವ ಬಗ್ಗೆಯೂ ಸರಕಾರದ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ. ಆದರೆ, ವಿಶೇಷವೆಂದರೆ ಈ ಎಲ್ಲಾ ಕ್ರಮಗಳು ಜನನ ಪ್ರಮಾಣ ಏರಿಕೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ತಂದಿಲ್ಲ.

ಇನ್ನು, ದ.ಕೊರಿಯಾದ ಮಹಿಳೆಯರು, ಅದರಲ್ಲೂ ನಗರ ಪ್ರದೇಶದ ಮಹಿಳೆಯರು ಕೌಟುಂಬಿಕ ಜೀವನಕ್ಕಿಂತ ಹೆಚ್ಚಾಗಿ ತಮ್ಮ ವೃತ್ತಿ ಜೀವನಕ್ಕೆ ಮಹತ್ವವನ್ನು ಕೊಡುತ್ತಿದ್ದಾರೆ. 2023ರಲ್ಲಿ ಅಲ್ಲಿನ ಸರಕಾರ ನಡೆಸಿದ ಒಂದು ಮತದಾನದಲ್ಲಿ ಹೊರಬಂದ ಮಾಹಿತಿಯಂತೆ, ಇದರಲ್ಲಿ ಪಾಲ್ಗೊಂಡಿದ್ದ ಹೆಚ್ಚಿನವರ ಅಭಿಪ್ರಾಯವೆಂದರೆ ಅವರೆಲ್ಲರೂ ಮದುವೆಯಾಗುವುದಕ್ಕಿಂತ ಏಕಾಂಗಿ ಜೀವನವನ್ನೇ ಹೆಚ್ಚು ಇಷ್ಟಪಡುತ್ತಾರೆ. ಅವರ ಪ್ರಕಾರ ತಾಯ್ತನವೆಂಬುದು ಅವರ ವೃತ್ತಿ ಜೀವನಕ್ಕೊಂದು ಅಡ್ಡಿ ಎಂದೇ ಅವರು ಭಾವಿಸುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ, ದ.ಕೊರಿಯಾದ ಹೆಚ್ಚಿನ ಕುಟುಂಬಗಳು ಎರಡೆರಡು ಆದಾಯ ಮೂಲದ ಮೊರೆ ಹೋಗಿದ್ದು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ. ಇನ್ನು, ಹೆಚ್ಚಿನ ಕೊರಿಯನ್‌ ಮಹಿಳೆಯರು ಒಂದೋ ತಡವಾಗಿ ಮದುವೆಯಾಗುತ್ತಾರೆ ಅಥವಾ ಮದುವೆಯಾದರೂ ಮಕ್ಕಳು ಮಾಡಿಕೊಳ್ಳುವುದನ್ನು ಮುಂದೂಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ಮಕ್ಕಳು ಮಾಡಿಕೊಳ್ಳಲು ಮದುವೆಯೇ ಆಗಬೇಕೆಂಬ ಮನಃಸ್ಥಿತಿಯೂ ಇಲ್ಲಿನ ಜನರಲ್ಲಿ ಬದಲಾಗುತ್ತಿದೆ.

ಕಳೆದ ದಶಕದಲ್ಲಿ ಮದುವೆಯಾಗದೆ ಮಕ್ಕಳನ್ನು ಪಡೆದಿರುವ ಪ್ರಮಾಣ ೨೨ ಪ್ರತಿಶತದಿಂದ ೩೫ ಪ್ರತಿಶತಕ್ಕೆ ನೆಗೆತ ಕಂಡಿರುವುದೇ ಇದಕ್ಕೊಂದು ಉದಾಹರಣೆಯಾಗಿದೆ. ಬದಲಾಗುತ್ತಿರುವ ಸಾಮಾಜಿಕ ವರ್ತನೆಗಳೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಒಟ್ಟಿನಲ್ಲಿ, ಜನಸಂಖ್ಯಾ ನಿಯಂತ್ರಣಕ್ಕೆ ಆ ಕಾಲದಲ್ಲಿ ದ.ಕೊರಿಯಾ ಸರಕಾರ ಕೈಗೊಂಡಿದ್ದ ಕಠಿಣ ಕ್ರಮಗಳು ಮುಂದೊಂದು ದಿನ ಆ ದೇಶದ ಅಸ್ತಿತ್ವಕ್ಕೇ ಅಪಾಯವನ್ನು ತಂದೊಡ್ಡಿರುವುದು ಮಾತ್ರ ವಿಪರ್ಯಾಸವೇ ಸರಿ.