ಲಖನೌ: ಇದೊಂದು ಯಾವುದೇ ಸಸ್ಪೆನ್ಸ್ ಫ್ಯಾಮಿಲಿ ಥ್ರಿಲ್ಲರ್ ಸಿನೆಮಾ ಕಥೆಗೂ ಕಡಿಮೆ ಇಲ್ಲದಂತೆ ನಡೆದಿರುವ ನಿಜ ಘಟನೆ. ಈ ಘಟನೆಯನ್ನು ಓದಿದವರ ಕಣ್ಣುಗಳಲ್ಲಿ ಹನಿ ನೀರು ಸುರಿಯದೇ ಇರದು. ಚಿಕ್ಕ ಮಗುವಾಗಿದ್ದ ಕಿಡ್ನ್ಯಾಪ್ ಆಗಿದ್ದವ ಇದೀಗ ಬರೋಬ್ಬರಿ 31 ವರ್ಷಗಳ ಬಳಿಕ ಆತನ ಹೆತ್ತವರ ಮಡಿಲನ್ನು ಸೇರಿದ್ದಾನೆ. ಆದರೆ ಈ ಕಥೆಯಲ್ಲಿ ಟ್ವಿಸ್ಟ್ ಎಂಬಂತೆ ಬೇರೊಂದು ಊರಿನ ಇನ್ನೊಂದು ಕುಟುಂಬ ಈ ಯುವಕನನ್ನು ತಮ್ಮ ಮಗ ಎಂದು ಹೇಳಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಈ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.
ರಾಜು ಎಂಬ ಹೆಸರಿನ ಈ ಯುವಕ ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿರುವ ತನ್ನ ಹೆತ್ತವರನ್ನು 31 ವರ್ಷಗಳ ಬಳಿಕ ಸೇರಿಕೊಂಡಿದ್ದಾನೆ. ಈತ ಬಾಲಕನಿದ್ದಾಗ ಈತನ ಅಪಹರಣವಾಗಿತ್ತು ಎಂದು ತಿಳಿದುಬಂದಿದೆ. ತಮ್ಮ ಮಗ 31 ವರ್ಷಗಳ ಬಳಿಕ ಮರಳಿ ಮನೆಗೆ ಬಂದ ಸಂದರ್ಭದಲ್ಲಿ ಆ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಆ ತಾಯಿಯ ಖುಷಿ ಹೆಚ್ಚು ದಿನ ಇರಲಿಲ್ಲ, ಕಾರಣವೇನೆಂದರೆ ರಾಜು ತಮ್ಮ ಮಗ ಎಂದು ಡೆಹ್ರಾಡೂನ್‌ನ ಕುಟುಂಬವೊಂದು ತಗಾದೆ ತೆಗೆದಿದ್ದು ಇದೀಗ ಈ ಕಹಾನಿಗೆ ಟ್ವಿಸ್ಟ್ ಸಿಕ್ಕಿದೆ.
ಡೆಹ್ರಾಡೂನ್ ನ ಕುಟುಂಬವೊಂದು, ರಾಜು, ಗಾಝಿಯಾಬಾದ್ ನಲ್ಲಿ ಹೇಳಿದ್ದ ಕಥೆಯನ್ನೇ ನಾಲ್ಕು ತಿಂಗಳ ಹಿಂದೆ ನಮ್ಮ ಬಳಿಯೂ ಹೇಳಿದ್ದ, ತನ್ನನ್ನು ಅಪಹರಿಸಿ, ಜೀತಕ್ಕಿಟ್ಟುಕೊಳ್ಳಲಾಗಿತ್ತು ಮತ್ತು ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೆನೆಂದು ಹೇಳಿದ್ದ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ ಬಳಿಕ ಈ ಪ್ರಕರಣ ಇದೀಗ ಇನ್ನಷ್ಟು ಕಗ್ಗಂಟಾಗಿದೆ.
ಡೆಹ್ರಾಡೂನ್ ನ ಆ ಕುಟುಂಬದ ಸದಸ್ಯೆಯರಲ್ಲಿ ಒಬ್ಬರಾಗಿರುವ ಆಶಾ ದೇವಿ ಹೇಳುವಂತೆ, ‘ನಾವು ರಾಜುವನ್ನು ಗುರುತಿಸಿದ್ದೇವೆ. ಮತ್ತು ಆತ ಅಕ್ಟೋಬರ್ ನಲ್ಲಿ ಕೆಲಸ ಹುಡುಕಿಕೊಂಡು ದೆಹಲಿಗೆ ತೆರಳುವ ಮೊದಲು ಸ್ವಲ್ಪ ಸಮಯ ನಮ್ಮೊಂದಿಗಿದ್ದ’ ಎಂದು ಅವರು ಹೇಳಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಡೆಹ್ರಾಡೂನ್ ನ ಈ ಕುಟುಂಬದ ಹೇಳಿಕೆಯ ಬಳಿಕ ಇದೀಗ ಪೊಲೀಸರು ಗಾಝಿಯಾಬಾದ್ ಗೆ ತೆರಳಿದ್ದು, ಅಲ್ಲಿಂದ ರಾಜುವನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದಿಗ ಈ ವಿಚಿತ್ರ ಪ್ರಕರಣದ ಕಥೆ ಹೇಗಾಗಿದೆಯೆಂದ್ರೆ ಎರಡೂ ರಾಜ್ಯಗಳ ಪೊಲೀಸರು ತಮ್ಮ ತಲೆ ಕೆರೆದುಕೊಳ್ಳುವಂತಾಗಿದೆ. ಗಾಝಿಯಾಬಾದ್ ಪೊಲೀಸರು ಐದು ತಿಂಗಳ ಹಿಂದೆಯೇ, ಆಶಾ ದೇವಿ ಕುಟುಂಬದ ಜೊತೆ ರಾಜು ಇರುವ ಫೊಟೋವನ್ನು ತೋರಿಸಿದ್ದ ಸಂದರ್ಭದಲ್ಲಿ, ರಾಜು ಆ ಪೊಟೋದಲ್ಲಿರುವ ವ್ಯಕ್ತಿ ತಾನಲ್ಲ ಎಂದು ಹೇಳಿದ್ದ. ಇದೀಗ ಎರಡೂ ಕುಟುಂಬಸ್ಥರೂ, ರಾಜು ತಮ್ಮ ಮನೆ ಮಗ ಎಂದು ಹೇಳುತ್ತಿರುವುದು ಯಾಕೆ ಎಂಬ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: Nargis Fakhri: ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸಹೋದರಿ ಬಂಧನ! ಆಗಿದ್ದೇನು?
“ಯಾಕೆ ಎರಡು ಬೇರೆ ಬೇರೆ ಕುಟುಂಬಗಳು ರಾಜುವನ್ನು ತಮ್ಮವನೆಂದು ಹೇಳಿಕೊಳ‍್ಳುತ್ತಿವೆ ಎಂಬುದರ ಆಳವನ್ನು ತಿಳಿದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ನಾವು ಈ ಸಂಕೀರ್ಣ ಪ್ರಕರಣದಲ್ಲಿರುವ ನಿಗೂಢತೆಯನ್ನು ಶೀಘ್ರ ಬಹಿರಂಗಗೊಳಿಸುತ್ತೇವೆ’ ಎಂದು ಶಹಿಬಾಬಾದ್ ಎಸ್.ಪಿ. ರಜನೀಶ್ ಉಪಾಧ್ಯಾಯ ಹೇಳಿದ್ದಾರೆ.
ಪೊಲೀಸ್ ತನಿಖೆಯ ಬಳಿಕವಷ್ಟೇ ನಾವು ರಾಜುವಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಆಶಾ ದೇವಿಯ ಕುಟುಂಬ ಹೇಳಿಕೊಂಡಿದೆ, ಇನ್ನೊಂದೆಡೆ, ರಾಜು ತಮ್ಮ ಜೊತೆ ಕಳೆದ ಎರಡು ದಿನಗಳಿಂದ ವಾಸಿಸುತ್ತಿದ್ದಾನೆ, ಆದರೆ ಆತ ಸಾಯಂಕಾಲ ಹೊತ್ತು ಹೊರಗೆ ಹೋಗುತ್ತೇನೆಂದು ಹೇಳುತ್ತಿದ್ದಾಗ ಆತನ ತಾಯಿ ಮತ್ತು ಸಹೋದರಿ ತಡೆಯುತ್ತಿದ್ದರು ಎಂದು ಗಾಝಿಯಾಬಾದ್ ಕುಟುಂಬ ಹೇಳಿಕೊಂಡಿದೆ.
ಏನಿದು ರಾಜುವಿನ ಕಥೆ..!?
ರಾಜು ಅಲಿಯಾಸ್ ಬೀಮ್ ಸಿಂಗ್ ತನ್ನ ಕುಟುಂಬಸ್ಥರನ್ನು ಹುಡುಕಿಕೊಂಡು ಗಾಝಿಯಾಬಾದ್ ನಲ್ಲಿರುವ ಖೋಡಾ ಪೊಲೀಸ್ ಠಾಣೆಗೆ ಬಂದಿದ್ದಾನೆ ಮತ್ತು ಅಲ್ಲಿ ತನ್ನ ಕಥೆಯನ್ನೆಲ್ಲಾ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಈತನ ಕಥೆಯನ್ನು ಕೇಳಿದ ಪೊಲೀಸರು 31 ವರ್ಷಗಳ ಹಿಂದೆ ದಾಖಲಾಗಿದ್ದ ನಾಪತ್ತೆ ಪ್ರಕರಣದ ಆಧಾರದಲ್ಲಿ ಆತನ ಕುಟುಂಬಸ್ಥರನ್ನು ಕರೆಸಿ ರಾಜು ಮತ್ತೆ ತನ್ನ ಕುಟುಂಬದ ಜೊತೆ ಒಂದಾಗುವಂತೆ ಮಾಡಿದ್ದರು.
ತಾನು 8 ವರ್ಷ ಪ್ರಾಯದವನಿದ್ದಾಗ ತನ್ನನ್ನು ಯಾರೋ ಅಪಹರಿಸಿದ್ದರು ಬಳಿಕ, ಆತನನ್ನು ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಗದ್ದೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು. ಅಲ್ಲಿ ಆತ ಕುರಿಗಳನ್ನು ಮೇಯಿಸುತ್ತಿದ್ದ ಮತ್ತು ಅದಕ್ಕೆ ಪ್ರತಿಯಾಗಿ ರಾಜುವಿಗೆ ದಾಲ್ ಮತ್ತು ರೋಟಿ ಮಾತ್ರವೇ ಸಿಗುತ್ತಿತ್ತು, ರಾತ್ರಿ ಹೊತ್ತು ಆತನ ಕಾಲುಗಳನ್ನು ಸರಪಳಿಯಿಂದ ಬಂಧಿಸಿಡಲಾಗುತ್ತಿತ್ತು, ಎಂದು ಆತ ತನ್ನ ಕರುಣಾಜನಕ ಕಥೆಯನ್ನು ಹೇಳಿಕೊಂಡಿದ್ದಾನೆ.
ಈತ ಅಲ್ಲಿಂದ ತಪ್ಪಿಸಿಕೊಳ್ಳಲು ಒಬ್ಬ ವ್ಯಾಪಾರಿ ತನಗೆ ಸಹಾಯ ಮಾಡಿರುವುದಾಗಿ ರಾಜು ಹೇಳಿಕೊಂಡಿದ್ದಾನೆ. ಆ ಮೂಲಕ ಆತ ಗಾಝಿಯಾಬಾದ್ ಗೆ ತಲುಪಿ ಅಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾಗೆ ತಿಳಿಸಿದ್ದಾನೆ. ಆದರೆ ಇದೀಗ ನಡುವೆ ಡೆಹ್ರಾಡೂನ್ ಕುಟುಂಬವೊಂದು ರಾಜು ತಮ್ಮ ಮನೆಮಗ ಎಂದು ಹೇಳಿಕೊಂಡಿರುವುದು ನಿಜವಾಗಿಯೂ ಈ ಪ್ರಕರಣವನ್ನು ಇನ್ನಷ್ಟು ನಿಗೂಢವಾಗಿಸಿದೆ.