Sunday, 11th May 2025

IT Raid: ಟಯರ್‌ನೊಳಗೆ ಪತ್ತೆಯಾಯ್ತು ಕಂತೆ ಕಂತೆ ನೋಟು- ದಂಗಾದ ಪೊಲೀಸರು!

Assembly Election

ರಾಂಚಿ: ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆ (Jharkhand Assembly Election) ನಡೆಯುತ್ತಿದ್ದು, ಬುಧವಾರ ಮೊದಲ ಹಂತದ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ನಡುವೆ ಗಿರಿದಿಹ್ ಜಿಲ್ಲೆಯ ಜಾರ್ಖಂಡ್-ಬಿಹಾರ ಗಡಿಯ ಸಮೀಪದಲ್ಲಿರುವ ಡಿಯೋರಿ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್‌ ಪೋಸ್ಟನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ವಶಪಡಿಸಿಕೊಳ್ಳಲಾಗಿದೆ. ವಾಹನದ ಟೈರ್‌ನಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ  50 ಲಕ್ಷ ರೂ.ಗಳನ್ನು ಆದಾಯ ಇಲಾಖೆಯ (IT Raid) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸದ್ಯ ಟಯರ್‌ನಿಂದ ಹಣ ತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೈರಲ್‌ ಆಗಿರುವ ವಿಡಿಯೋವನ್ನು ಜಾರ್ಖಂಡ್‌ನ ಗೊಡ್ಡಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಅವರು ಎಕ್ಸ್‌ ನಲ್ಲಿ ಹಂಚಿಕೊಂಡಿದ್ದು, ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಅದರ ಮಿತ್ರ ಪಕ್ಷ ಕಾಂಗ್ರೆಸ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ ಈ ರೀತಿಯಲ್ಲಿ ಬರೆದಿದ್ದು, “ನೀವು ಭ್ರಷ್ಟಾಚಾರ ಮತ್ತು ಹಣದ ರಾಶಿಯನ್ನು ನೋಡಲು ಬಯಸಿದರೆ, ಜಾರ್ಖಂಡ್‌ಗೆ ಬನ್ನಿ. ಇಂದು, ಆದಾಯ ತೆರಿಗೆ ಇಲಾಖೆ ಜೆಎಂಎಂ ಹಾಗೂ ಕಾಂಗ್ರೆಸ್‌ನ ಹಣವನ್ನು ಜಪ್ತಿ ಮಾಡಿದ್ದಾರೆ. ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಂಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಇದೇ ಪೋಸ್ಟ್‌ ಅನ್ನು ಮರು ಹಂಚಿಕೊಂಡಿರುವ ಬಿಜೆಪಿ ಜಾರ್ಖಂಡ್‌ನ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಕಾಂಗ್ರೆಸ್ ಮತ್ತು ಜೆಎಂಎಂ “ಹಣಬಲ” ಬಳಸಿಕೊಂಡು ಚುನಾವಣೆಯಲ್ಲಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವೈರಲ್‌ ಆದ ವಿಡಿಯೋದಲ್ಲಿ ವಾಹನದ ಟೈರಿನಲ್ಲಿ ಹಣದ ಕಂತೆ ಮಾಡಿ ಸಾಗಿಸಲಾಗುತ್ತಿತ್ತು. ಅಧಿಕಾರಿಗಳಿಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಕಂತೆ ಕಂತೆ ನೋಟುಗಳು ಹೊರ ಬಂದಿವೆ.

ಇದನ್ನೂ ಓದಿ: R Ashok: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ, ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌: ಆರ್‌. ಅಶೋಕ್‌

ಜಾರ್ಖಂಡ್ ವಿಧಾನಸಭೆಯ 43 ಕ್ಷೇತ್ರಗಳಿಗೆ ಬುಧವಾರ ನಡೆದ ಮತದಾನ ಶಾಂತಿಯುತವಾಗಿ ಸಂಪನ್ನಗೊಂ ಡಿದೆ. 43 ಸ್ಥಾನಗಳಿಗೆ 683 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಶೇ.66ರಷ್ಟು ಮತದಾನವಾಗಿದೆ. ರಾಜ್ಯದಲ್ಲಿ ಈ ಬಾರಿ ಆಡಳಿತಾರೂಢ ಜೆಎಂ ಎನ್- ಕಾಂಗ್ರೆಸ್ ಮೈತ್ರಿ ಕೂಟ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಉಳಿದ 37 ಸ್ಥಾನಕ್ಕೆ ನ.20 ಮತದಾನ ನಡೆಯಲಿದೆ.