ಬೆಂಗಳೂರು: ನಾಡಿನ ಹಿರಿಯ ಚಿಂತಕ, ಲೇಖಕ ಪ್ರೊ.ಮುಜಾಫರ್ ಅಸ್ಸಾದಿ (Muzaffar Assadi) ಶುಕ್ರವಾರ ತಡರಾತ್ರಿ ಬೆಂಗಳೂರಿನ (Bengaluru News) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಹಿರಿಯ ವಿದ್ವಾಂಸರಾದ ಅವರು ಮೈಸೂರು ವಿವಿಯ ಹಂಗಾಮಿ ಕುಲಪತಿಯಾಗಿ, ರಾಜ್ಯಶಾಸ್ತ್ರ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಹೊಸತಾಗಿ ಸ್ಥಾಪಿಸಲಾದ ರಾಯಚೂರು ವಿವಿಯ ವಿಶೇಷಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಹಿತ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.
ಪ್ರೊ.ಮುಜಾಫರ್ ಅಸ್ಸಾದಿ ಅವರು ಬುಡಕಟ್ಟು ಸಮುದಾಯದವರ ಬದುಕು, ಜೀವನ ಶೈಲಿಯ ಬಗ್ಗೆ ಅಪಾರವಾದ ಅಧ್ಯಯನ ನಡೆಸಿದ್ದಾರೆ. ಆದಿವಾಸಿಗಳ ಸ್ಥಳಾಂತರಕ್ಕೆ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೃಷಿ ಅಧ್ಯಯನ ಕ್ಷೇತ್ರ, ಜಾಗತೀಕರಣ, ಗಾಂಧೀವಾದ, ರಾಜಕೀಯ ಸಮಾಜಶಾಸ್ತ್ರ, ಪ್ರಜಾಪ್ರಭುತ್ವ ಸಿದ್ಧಾಂತ, ಸಾಮಾಜಿಕ ಚಳವಳಿಗಳು, ಭಾರತದಲ್ಲಿ ರಾಜಕೀಯ, ಮಾನವ ಹಕ್ಕುಗಳು, ಜಾಗತಿಕ ರಾಜಕೀಯ ಸಿದ್ಧಾಂತ ಮೊದಲಾದ ವಿಚಾರಗಳ ಕುರಿತು ಅಳವಾದ ಅಧ್ಯಯನ ಮಾಡಿ ವಿಷಯ ಮಂಡನೆ ಮಾಡಿ ಗಮನ ಸೆಳೆದಿದ್ದಾರೆ.
ಉಡುಪಿ ಜಿಲ್ಲೆಯ ಶಿರ್ವ ಮೂಲದ ಡಾ. ಮುಜಾಫರ್ ಅಸ್ಸಾದಿ ಅವರು ಮಂಗಳೂರು ವಿ.ವಿ.ಯಿಂದ ಸ್ನಾತಕೋತ್ತರ ಪದವಿ, ನವದೆಹಲಿಯ ಜೆಎನ್ ಯುನಿಂದ ಎಂ.ಫಿಲ್ ಹಾಗೂ ಪಿಎಚ್ ಡಿ ನಂತರ ಶಿಕಾಗೋ ವಿ.ವಿ.ಯಿಂದ ರಾಕ್ ಫೆಲ್ಲರ್ ಫೆಲೋ, ಪೋಸ್ಟ್ ಡಾಕ್ಟೊರಲ್ ಪದವೀಧರರು. ಈವರೆಗೆ 11 ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ಹೈಕೋರ್ಟ್ ಸಮಿತಿ ಅಧ್ಯಕ್ಷರಾಗಿ ವರದಿ ನೀಡಿದ್ದಾರೆ. ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಇವರ ಪ್ರಮುಖ ಕೃತಿಗಳು.
ಇದನ್ನೂ ಓದಿ: Food Poison: ಹೊಸ ವರ್ಷದ ಕೇಕ್ ತಿಂದು 30 ವಿದ್ಯಾರ್ಥಿಗಳು ಅಸ್ವಸ್ಥ