Sunday, 11th May 2025

Waqf Board: ರೈತರ ಜಮೀನಿಗೆ ವಕ್ಫ್‌ ಆಸ್ತಿ ಎಂದು ನೋಟಿಸ್‌; ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

Waqf Controversy

ಬೆಂಗಳೂರು: ಇಷ್ಟು ದಿನ ಸರ್ಕಾರಿ ಜಮೀನು, ಆಸ್ತಿಗಳಿಗೆ ಕಣ್ಣು ಹಾಕುತ್ತಿದ್ದ ವಕ್ಫ್‌ ಬೋರ್ಡ್‌ (Waqf Board) ಇದೀಗ ರೈತರ ಜಮೀನನ್ನೂ ಕಬಳಿಸಲು ಹೊರಟಿದೆ. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ವಕ್ಫ್‌ ಕಾಯಿದೆಗೆ ತಿದ್ದುಪಡಿ ಮಾಡಲು ಹೊರಟಿದ್ದರೆ, ತುಷ್ಟೀಕರಣ ರಾಜಕೀಯಕ್ಕಾಗಿ ಕಾಂಗ್ರೆಸ್‌ ಇದನ್ನು ವಿರೋಧಿಸುತ್ತಿದೆ. ಮತ್ತೊಂದು ಕಡೆ ಕಾಂಗ್ರೆಸ್‌ ಸರ್ಕಾರದ ಪ್ರೋತ್ಸಾಹದಿಂದಾಗಿ ಅನ್ನದಾತರ ಜಮೀನನ್ನೇ ಟಾರ್ಗೆಟ್ ಮಾಡಿ ರೈತರ ಜಮೀನು ವಕ್ಫ್‌ ಆಸ್ತಿ ಎಂದು ನೋಟಿಸ್‌ ಕೊಟ್ಟು ಕಬ್ಜ ಮಾಡಲು ವಕ್ಫ್ ಮಂಡಳಿ ಹೊರಟಿದೆ ಎಂದು ಬಿಜೆಪಿ ಆರೋಪಿಸಿದೆ.

ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕೆಲವು ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ನೋಟಿಸ್‌ ಬಂದಿರುವ ಬಗ್ಗೆ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದ್ದು, ವಕ್ಫ್‌ ನೋಟಿಸ್‌ ಕೊಟ್ಟ ಕೂಡಲೇ ಸರ್ಕಾರಿ ದಾಖಲಾತಿಗಳನ್ನು ತೋರಿಸುವ ಸ್ಥಿತಿ ನಮ್ಮ ನಾಡಿನ ಅನ್ನದಾತರಿಗೆ ಬಂದಿದೆ. ಭ್ರಷ್ಟ ಸಿದ್ದರಾಮಯ್ಯ ಅವರೇ, ಮುಡಾ ಸೈಟನ್ನು ತಮ್ಮ ಪತ್ನಿ ಹೆಸರಿಗೆ ಬರೆದಂತೆ, ಕರ್ನಾಟಕವನ್ನು ತಮ್ಮ ಮತಬ್ಯಾಂಕ್‌ಗಾಗಿ ವಕ್ಫ್‌ ಬೋರ್ಡ್‌ ಹೆಸರಿಗೆ ಬರೆಯುವ ಪ್ರಯತ್ನಕ್ಕೆ ಹೋಗಬೇಡಿ. ನಿಮ್ಮ ತುಷ್ಟೀಕರಣ ರಾಜಕೀಯಕ್ಕೆ ನಾಡಿನ ಅನ್ನದಾತರು ಸಿಡಿದೇಳುವ ದಿನ ದೂರವಿಲ್ಲ ಎಂದು ಕಿಡಿಕಾರಿದೆ.

ವಕ್ಫ್ ಆಸ್ತಿ ಎಂದು ನೋಟೀಸು ಬಂದರೆ ಆತಂಕ ಬೇಡ: ಎಂ.ಬಿ.ಪಾಟೀಲ್‌

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿನ ಕೆಲವು ಜಮೀನುಗಳಿಗೆ ವಕ್ಫ್ ಆಸ್ತಿ ಎಂದು ನೋಟಿಸು ಬಂದಿರುವ ಹಿನ್ನೆಲೆಯಲ್ಲಿ ರೈತರು ಈದಿನ ವಿಜಯಪುರದ ನಿವಾಸದಲ್ಲಿ ನನ್ನನ್ನು ಭೇಟಿಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ. ಹೊಂದಾಣಿಕಗೆ ಬಾರದ ಯಾವುದೇ ಖಾಸಗಿ ಆಸ್ತಿ ಅಥವಾ ಜಮೀನುಗಳು ವಕ್ಫ್ ಹೆಸರಿನಲ್ಲಿ ದಾಖಲಾಗುವುದಿಲ್ಲ. ನೋಟಿಸ್ ಪಡೆದರೆ ಅದಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಈ ವಿಷಯ ಚರ್ಚಿಸಿದ್ದೇನೆ ಎಂದು ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru Kambala: ಬೆಂಗಳೂರು ಕಂಬಳ ನಿಲ್ಲಿಸುವಂತೆ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ ‘ಪೆಟಾ’

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರತಿಕ್ರಿಯಿಸಿದ್ದು, ಮುಂದಿನ ವಾರ ಜಿಲ್ಲಾ ಮಟ್ಟದ ಸಭೆ ನಡೆಸಿ, ಕೂಲಂಕಷವಾಗಿ ಎಲ್ಲ ವಿಷಯಗಳನ್ನು ಚರ್ಚಿಸಲಾಗುವುದು. ಜನರು ಅನಗತ್ಯವಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ. ನಮ್ಮೆಲ್ಲ, ರೈತರ, ಸಾರ್ವಜನಿಕರ ಹಕ್ಕುಗಳನ್ನು ಸುರಕ್ಷಿತವಾಗಿರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.