Tuesday, 13th May 2025

24 ವರ್ಷ ಕಳೆದರೂ ದೊರಕದ ನ್ಯಾಯ

ಮಲತಾಯಿ ಮಕ್ಕಳಂತಾದ ರಾಜ್ಯ ಮೀಸಲು ಪಡೆ ಅಧಿಕಾರಿಗಳು

ನ್ಯಾಯಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಅಧಿಕಾರಿ ವರ್ಗ

ವಿಶೇಷ ವರದಿ: ಕೆ.ಜೆ.ಲೋಕೇಶ್ ಬಾಬು

ಮೈಸೂರು: ಸರಕಾರಿ ವ್ಯವಸ್ಥೆೆಯ ಅಸಡ್ಡೆಯ ಪರಿಣಾಮ ಸಮಾಜದ ರಕ್ಷಣೆಯ ಹೊಣೆ ಹೊತ್ತ ವಿಭಾಗವೊಂದು ನರಳುತ್ತಿದೆ. ಮಾತ್ರವಲ್ಲ, ಕಳೆದ 24 ವರ್ಷಗಳಿಂದ ನ್ಯಾಯ ಕೋರಿ ನ್ಯಾಯಾಲಯದ ಬಾಗಿಲ ಬಳಿ ನಿಂತಿದ್ದರೂ, ಈ ಕ್ಷಣದವರೆಗೆ ಅವರಿಗೆ ನ್ಯಾಯ ದೊರಕಿಲ್ಲ. ಇಂತಹ ವಿಲಕ್ಷಣ ಹಾಗೂ ವಿಚಿತ್ರ ಪ್ರಸಂಗ ಎದುರಿಸುತ್ತಿರುವುದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ ಆರ್‌ಪಿ) ಮೇಲಧಿಕಾರಿಗಳ ವರ್ಗ.

ಸರಕಾರಿ ಇಲಾಖೆಗೆ ಸೇರಿದ ಯಾವುದೇ ವ್ಯಕ್ತಿ ತನ್ನ ಸೇವಾವಧಿಯಲ್ಲಿ ಕನಿಷ್ಠ 3 ಬಾರಿ ಪದೋನ್ನತಿ ಹೊಂದಬೇಕು ಎಂಬ ನಿಯಮಾವಳಿ ಇರುವುದು ಒಂದೆಡೆಯಾದರೆ, ಇದಕ್ಕೆ ಪೂರಕವಾಗಿ ರಾಜ್ಯ ಉಚ್ಛ ನ್ಯಾಯಾಲಯವೂ ಕೂಡ ಇದೇ ಆದೇಶವನ್ನು
ನೀಡಿದೆ. ಆದರೆ, ದುರ್ದೈವವಶಾತ್ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಈ ನಿಯಮಾವಳಿಗೆ ತದ್ವಿರುದ್ಧವಾದ ನಿಯಮ
ಜಾರಿಯಲ್ಲಿದೆ. ಪರಿಣಾಮ, ಕೇವಲ ಒಂದು ಪದೋನ್ನತಿಯೊಂದಿಗೆ ಇಡೀ ತಮ್ಮ ಸೇವಾವಧಿಯನ್ನೇ ಮುಗಿಸಬೇಕಾದ ಸಂದಿಗ್ಧ
ಪರಿಸ್ಥಿತಿಯಲ್ಲಿ ಕೆಎಸ್‌ಆರ್‌ಪಿ ಕಮಾಂಡೆಂಟ್‌ಗಳು ಸಿಲುಕಿ ನರಳುತ್ತಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಸಹಾಯಕ ಕಮಾಂಡೆಂಟ್ ಹುದ್ದೆಗೆ ಆಯ್ಕೆಯಾದ ರಾಜ್ಯದ ಆರು ಮಂದಿ ಅಧಿಕಾರಿಗಳು ಕೆಲ ವರ್ಷಗಳ ಸೇವೆಯ ಬಳಿಕ ಕಮಾಂಡೆಂಟ್ ಹುದ್ದೆಗೆ ಪದೋನ್ನತಿ
ಪಡೆದಿದ್ದರು. ಆದರೆ, ಆ ಆರೂ ಮಂದಿಗೆ ಇದೇ ಮೊದಲ ಹಾಗೂ ಕೊನೆಯ ಪದೋನ್ನತಿ ಎಂಬಂತಾಗಿದೆ.

ಹೀಗೆ 1997ರಿಂದ 2002ರವರೆಗೆ ರಾಜ್ಯದಲ್ಲಿ ಕೆಪಿಎಸ್‌ಸಿ ಮೂಲಕ ಸಹಾಯಕ ಕಮಾಂಡೆಂಟ್ ಆಗಿ ಆರು ಮಂದಿ ಆಯ್ಕೆಯಾಗಿದ್ದು, 1997ರಲ್ಲಿ ಇಬ್ಬರು, 2002ರಲ್ಲಿ ಒಬ್ಬರು ಹಾಗೂ 2006ರಲ್ಲಿ ಮೂವರು ಸೇರಿದಂತೆ ಎಲ್ಲರೂ ಕೆಲ ವರ್ಷಗಳ
ಸೇವೆಯ ಬಳಿಕ ಪದೋನ್ನತಿ ಪಡೆದಿದ್ದು, ಪ್ರಸ್ತುತ ರಾಜ್ಯದ ವಿವಿಧ ಕಡೆಗಳಲ್ಲಿ ಕಮಾಂಡೆಂಟ್ ಶ್ರೇಣಿಯ ಹಂತದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಿಎಟಿ ಮೊರೆ: ಸರಕಾರದ ಈ ನಿಯಮಾವಳಿ ವಿರುದ್ಧ ಸಿಎಟಿ (ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧೀಕರಣ) ಮೆಟ್ಟಿಲು ಏರಲಾಗಿತ್ತು. ಎಲ್ಲ ದಾಖಲೆಗಳೊಂದಿಗೆ ಹಲವು ವರ್ಷಗಳ ಸತತ ವಿಚಾರಣೆ ನಡೆಸಿದ ನ್ಯಾಯಾಧೀಕರಣ, ಸಾಧಕ-ಬಾಧಕ ಗಳನ್ನು ಪರಿಶೀಲಿಸಿ ಅಂತಿಮವಾಗಿ ಸಿವಿಲ್ ವಿಭಾಗದ ಅಧಿಕಾರಿಗಳಿಗೆ ನೀಡಿರುವಂತೆ ಕಮಾಡೆಂಟ್ ಆಗಿರುವ ಈ ಆರು ಮಂದಿ
ಅಧಿಕಾರಿಗಳಿಗೆ ಐಪಿಎಸ್ ಶ್ರೇಣಿ ನೀಡಬೇಕು ಮತ್ತು ಕಾಲಕಾಲಕ್ಕೆ ಪದೋನ್ನತಿ ನೀಡಬೇಕು ಎಂದು ನ್ಯಾಯಾಲಯ 2020ರ ಮಾರ್ಚ್ 9ರಂದು ಸ್ಪಷ್ಟವಾದ ಆದೇಶ ಹೊರಡಿಸಿತ್ತು.

ಆದರೆ, ದುರ್ದೈವಶಾತ್ 2021ರ ಮಾರ್ಚ್ 23ರಂದು ಸಿಎಟಿ ಮರುತೀರ್ಪು ನೀಡಿದ್ದು, ಈ ಹಿಂದೆ ನೀಡಿದ್ದ ಆದೇಶದ ವಿರುದ್ಧವಾಗಿ ತೀರ್ಪು ಪ್ರಕಟಿಸಿದೆಯಲ್ಲದೆ, ಪ್ರಕರಣಕ್ಕೆ ಪೂರಕವಾಗಿ ಈ ಹಿಂದೆ ಬಂದಿದ್ದ ಎಲ್ಲ ಆದೇಶಗಳನ್ನು ವಜಾಗೊಳಿಸಿ ಆದೇಶಿಸಿದೆ. ಇದು ಪದೋನ್ನತಿಗಾಗಿ ಕಾಯುತ್ತಿದ್ದ ಕಮಾಂಡೆಂಟ್ ಹಂತದ ಅಧಿಕಾರಿಗಳ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹೈಕೋರ್ಟ್ ನಿರ್ದೇಶನ: ಕಮಾಂಡೆಂಟ್ ಹಂತದಲ್ಲಿರುವ ಅಧಿಕಾರಿಗಳಿಗೆ ಪದೋನ್ನತಿಯೇ ದೊರಕದಿರುವ ವಿಚಾರ ತಿಳಿದ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ಕುಮಾರ್ ಅವರು, ಈ ಕುರಿತಂತೆ ಸಮಿತಿ ರಚಿಸಿ ಸಮಗ್ರವಾದ ವರದಿ ನೀಡಬೇಕು ಎಂದು ಆದೇಶಿಸಿದ್ದರು.

ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಹೈಕೋರ್ಟ್ ನಿರ್ದೇಶನದ ಮೇರೆಗೆ ಅಂದು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿ ವರದಿ ಕೇಳಿದ್ದರಲ್ಲದೆ, ಸದರಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸರಕಾರದ ವರದಿಯ ಆಧಾರದ ಮೇರೆಗೆ ಹೈಕೋರ್ಟ್ ಕೂಡ ಈ ಅನ್ಯಾಯವನ್ನು ಸರಿಸಡಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿತ್ತು.

ಅನ್ಯಾಯಕ್ಕೊಳಗಾದವರು: ರಾಮಕೃಷ್ಣ ಪ್ರಸಾದ್ (ಕೆಎಸ್‌ಆರ್‌ಪಿ 3ನೇ ಬಟಾಲಿ ಯನ್ ಕಮಾಂಡೆಂಟ್), ಬಸವರಾಜ್ ಜಿಲ್ಲೆ (ಕೆಎಸ್‌ಆರ್‌ಪಿ 6ನೇ ಬಟಾಲಿಯನ್ ಕಮಾಂಡೆಂಟ್), ಜನಾರ್ಧನ್(ಕೆಎಸ್‌ಆರ್‌ಪಿ 5ನೇ ಬಟಾಲಿಯನ್ ಕಮಾಂಡೆಂಟ್), ಬಿ.ಎಂ.ಪ್ರಸಾದ್(ಕೆಎಸ್ ಆರ್‌ಪಿ 7ನೇ ಬಟಾಲಿಯನ್ ಕಮಾಂಡೆಂಟ್), ರಘುನಾಥ್ (ಕೆಎಸ್‌ಆರ್‌ಪಿ 4ನೇ ಬಟಾಲಿಯನ್ ಕಮಾಂಡೆಂಟ್) ಹಾಗೂ ಮುನಿರಾಬಾದ್‌ನಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ರಾಮಕೃಷ್ಣ ಮುದ್ದೇಪಾಲ್ ಅನ್ಯಾಯಕ್ಕೊಳಗಾದವರು.

Leave a Reply

Your email address will not be published. Required fields are marked *