Thursday, 15th May 2025

Vishwa Havyaka Sammelana: ಸಂಪ್ರದಾಯ ಉಳಿಯಬೇಕಿದ್ದರೆ ಅದು ಆಚರಣೆಯಲ್ಲಿರಬೇಕು: ಮಾಧವಾನಂದ ಭಾರತೀ ಸ್ವಾಮೀಜಿ

Vishwa Havyaka Sammelana

ಬೆಂಗಳೂರು: ಸಂಪ್ರದಾಯ ಉಳಿಯಬೇಕಾದರೆ ನಾವು ಸಂಪ್ರದಾಯಗಳನ್ನು ಆಚರಣೆಯಲ್ಲಿ ಇಟ್ಟಕೊಳ್ಳಬೇಕು. ಸಮಾಜ ಸಿಂಹಾವಲೋಕನ ಮಾಡಿಕೊಳ್ಳಬೇಕಾದ ಹೊತ್ತು ಇದಾಗಿದ್ದು, ನಮ್ಮ ಅಜ್ಜ ಮುತ್ತಜ್ಜ ಹೇಗೆ ಇದ್ದರು, ಅವರ ಜೀವನ ಶೈಲಿ ಹೇಗಿತ್ತು (Vishwa Havyaka Sammelana) ಎಂಬುದನ್ನು ನಾವು ಚಿಂತಿಸಬೇಕಿದ್ದು, ಅವುಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ನೆಲಮಾವಿನಮಠದ ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಕರೆ ನೀಡಿದರು.

ಅರಮನೆ ಮೈದಾನದಲ್ಲಿ ಆಯೋಜಿಸಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಶನಿವಾರ ಮಾತನಾಡಿದ ಅವರು, ನದಿ ತೊರೆಗಳೆಲ್ಲಾ ಸಮುದ್ರವನ್ನು ಸೇರುವಂತೆ ಹವ್ಯಕರೆಲ್ಲರೂ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸೇರಿದ್ದಾರೆ, ಹವ್ಯಕರ ಸಂಸ್ಕಾರ, ಸಂಸ್ಕೃತಿ ಹಾಗೂ ಸಂಘಟನಾ ಶಕ್ತಿಗೆ ಈ ವಿಶ್ವ ಹವ್ಯಕ ಸಮ್ಮೇಳನ ಸಾಕ್ಷಿಯಾಗಿದೆ. ಕೂಡು ಕುಟುಂಬ ಹವ್ಯಕರ ವೈಶಿಷ್ಟ್ಯವಾಗಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಉಳಿದ ಸದಸ್ಯರು ಸನ್ಮಾರ್ಗದಲ್ಲಿ ನಡೆಯುತ್ತಿದ್ದರು. ಆದರೆ ಈಗ ಕುಟುಂಬ ವಿಂಗಡನೆಯಾಗಿದ್ದು ಹಳ್ಳಿಗಾಡಿನ ಹವ್ಯಕರು ಪಟ್ಟಣವನ್ನು ಸೇರುತ್ತಿದ್ದಾರೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ನಾವು ನಮ್ಮ ಮೂಲವನ್ನು ಮರೆಯದೇ ನಮ್ಮ ತನವನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಉಪಕಾರ ಮಾಡಿದವರನ್ನು ಮರೆಯಬಾರದು ಎಂದು ಕಲಿಸಿದ ಸಮಾಜವೆಂದರೆ ಅದು ಹವ್ಯಕ ಸಮಾಜ. ಆತ್ಮೀಯತೆಗೆ ಮತ್ತೊಂದು ಹೆಸರು ಅದು ಹವ್ಯಕರು. ಹವ್ಯಕರು ಕೇವಲ ಜಾತಿಯ ಸೂಚಕವಾಗಿ ಇದ್ದವರಲ್ಲ. ಸಂಸ್ಕಾರ, ಸಂಸ್ಕೃತಿಯ ಸೂಚಕವಾಗಿ ಇದ್ದವರು. ಎಲ್ಲ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಒಗ್ಗಟ್ಟಿನ ಸಮಾಜವಾಗಿ ಇದ್ದವರು. ಪ್ರಸ್ತುತ ಸಂಖ್ಯೆಯಲ್ಲಿ ಕಡಿಮೆ ಆಗುತ್ತಿರುವ ಹವ್ಯಕ ಸಮಾಜ ಸಂಘಟನೆಯು ಅತಿ ಮುಖ್ಯ ಎನ್ನುವುದನ್ನು ಅರಿತು ವ್ಯವಹರಿಸಬೇಕಿದೆ. ಸಮಾಜದಲ್ಲಿ ಒಗ್ಗಟ್ಟು ಇದ್ದರೆ ಎಲ್ಲವನ್ನೂ ಗಳಿಸಬಹುದು. ಹಾಗಾಗಿ ಒಗ್ಗಟ್ಟಿನ ಮೂಲಕ ನಾವು ಒಂದು ಜಾಗೃತ ಸಮಾಜ ಎನ್ನುವುದನ್ನು ಸಾಬೀತುಪಡಿಸಬೇಕಿದೆ ಎಂದು ತಿಳಿಸಿದರು.

ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಹವ್ಯಕ ಸಮಾಜ ಸಮಸ್ತ ಸಮಾಜಕ್ಕೆ ಆಸ್ತಿಯಾಗಿದೆ. ಪಾರಂಪರಿಕ ಜ್ಞಾನ ಹಾಗೂ ಆಧುನಿಕ ಜ್ಞಾನ ಎರಡರಲ್ಲೂ ಮುಂಚೂಣಿಯಲ್ಲಿ ಹವ್ಯಕ ಸಮಾಜವಿದೆ. ಅಡಿಕೆ ಕೃಷಿಯ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ಹವ್ಯಕರ ಸಾಧನೆ ಅನುಪಮವಾಗಿದೆ. ಇಂತಹ ಸಮಾಜದ ಜನಸಂಖ್ಯೆ ಕ್ಷೀಣಿಸುತ್ತಿರುವುದು ಆಘಾತಕಾರಿ. ಈ ಬಗ್ಗೆ ಯುವಜನತೆ ಆಲೋಚಿಸಬೇಕಿದ್ದು, ಮಕ್ಕಳನ್ನು ಹೊಂದುವ ಮೂಲಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಸೌಹಾರ್ದ ಸನ್ಮಾನ

ಸರ್ವಸಮಾಜದ ಜತೆ ಸ್ನೇಹ ಪೂರ್ವಕ ಸಂಬಂಧವನ್ನು ಹೊಂದಿರುವ ಹವ್ಯಕ ಸಮಾಜವು, ತನ್ನ ಸೌಹಾರ್ದತೆಯ ಭಾವವನ್ನು ಸೌಹಾರ್ದ ಸನ್ಮಾನದ ಮೂಲಕ ವ್ಯಕ್ತಪಡಿಸಿ; ಈ ಎಲ್ಲಾ ಸಮಾಜದ ಸಂಸ್ಥೆಗಳನ್ನು ಹವ್ಯಕ ಸಮ್ಮೇಳನದ ವೇದಿಕೆಯಲ್ಲಿ ಗೌರವಿಸಿತು.

ಇಂದು 28 ಬ್ರಾಹ್ಮಣ ಉಪಪಂಗಡಗಳ ಸಂಸ್ಥೆಗಳನ್ನು ಗೌರವಿಸಲಾಯಿತು. ಇದೇ ರೀತಿ ನಿನ್ನೆ 25 ವಿವಿಧ ಜಾತಿಗಳ ಸಂಘಸಂಸ್ಥೆಗಳನ್ನು ಗೌರವಿಸಿ ಸನ್ಮಾನಿಸಲಾಗಿತ್ತು.

Vishwa Havyaka Sammelana: ‘ನಾನು’ ಸತ್ತಾಗ ಮಾತ್ರ ಸಮಾಜದ ಉದ್ಧಾರ ಸಾಧ್ಯ: ರಾಘವೇಶ್ವರಭಾರತೀ ಶ್ರೀ