ಬೆಂಗಳೂರು: ಮದುವೆ ದಿನ ವರನೊಬ್ಬ ಕಂಠಪೂರ್ತಿ ಕುಡಿದು ವಿವಾಹ ಮಂಟಪದಲ್ಲಿ ರಂಪಾಟ ಮಾಡಿದ್ದಾನೆ. ಇದರಿಂದ ಮದುವೆಯೇ ರದ್ದಾಗಿದ್ದು, ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಮಗಳ ಮುಂದಿನ ಜೀವನಕ್ಕಾಗಿ ವಧುವಿನ ತಾಯಿ ಮಹತ್ವದ ನಿರ್ಧಾರ ತೆಗೆದುಕೊಂಡು ಅದ್ದೂರಿ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಈ ವಿಡಿಯೊ ನೋಡಿದ ಹಲವರು ವಧುವಿನ ತಾಯಿಯ ದಿಟ್ಟ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ (Viral Video).
ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು,ಮದುವೆ ದಿನ ವರ ಹಾಗೂ ವರನ ಸ್ನೇಹಿತರು ಕುಡಿದು ಬಂದು ಗಲಾಟೆ ಮಾಡಿದ್ದಾರೆ. ವರನು ಮದುವೆ ಮನೆಗೆ ಕಂಠಪೂರ್ತಿ ಕುಡಿದು ಬಂದಿದ್ದು ಮಾತ್ರವಲ್ಲದೇ ಆರತಿ ತಟ್ಟೆಯನ್ನು ಎಸೆದು ಅಪಮಾನಿಸಿದ್ದಾನೆ. ಈ ಸಂದರ್ಭ ವಧು ತಾಯಿ ತಾಳ್ಮೆ ಕಳೆದುಕೊಂಡಿದ್ದು ತಮ್ಮ ಮಗಳ ಮುಂದಿನ ಜೀವನಕ್ಕಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಮಾರಂಭಕ್ಕೆ ಆಗಮಿಸಿದ್ದ ಎಲ್ಲರಲ್ಲೂ ಕ್ಷಮೆ ಕೋರಿ ಈ ಮದುವೆ ಮುರಿಯುವ ನಿರ್ಧಾರ ಮಾಡಿದ್ದೇವೆ. ನನಗೆ ನನ್ನ ಮಗಳ ಭವಿಷ್ಯವೇ ಮುಖ್ಯ. ಹೀಗಾಗಿ ಮದುವೆ ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ. ವೈರಲ್ ವಿಡಿಯೊದಲ್ಲಿ ತಾಯಿ ಎಲ್ಲರ ಮುಂದೆ ಕೈಜೋಡಿಸಿ ವಿನಂತಿ ಮಾಡುತ್ತಿರುವುದು ಕಂಡು ಬಂದಿದೆ. ಕೆಲವರು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ವಧುವಿನ ತಾಯಿ ಮದುವೆ ಕ್ಯಾನ್ಸಲ್ ಮಾಡುವ ಬಗ್ಗೆ ಖಚಿತ ನಿರ್ಧಾರ ಕೈಗೊಂಡಿದ್ದಾರೆ.
ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ವೈರಲ್ ಆಗಿದ್ದು ಬಳಕೆದಾರರು ಮಹಿಳೆಯ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಮಗಳ ಜೀವನವನ್ನು ತಾಯಿ ಉಳಿಸಿದ್ದಾಳೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ತನ್ನ ಮಗಳ ಸಲುವಾಗಿ ಅನುಚಿತ ವರ್ತನೆಯ ವಿರುದ್ಧ ನಿಲುವು ತೆಗೆದುಕೊಂಡ ತಾಯಿಯನ್ನು ಶ್ಲಾಘಿಸಿದ್ದಾರೆ.
ಇದನ್ನು ಓದಿ: Viral Video: ಇಸ್ಲಾಂ ಧರ್ಮಗುರುವಿನ ಟರ್ಬನ್ ಕಸಿದುಕೊಂಡ ಮಹಿಳೆ; ಈ ವಿಡಿಯೊ ಭಾರೀ ವೈರಲ್