ಉಡುಪಿ: ಎರಡು ದಿನಗಳ ಹಿಂದೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾದ ನಕ್ಸಲ್ ನಾಯಕ(Naxalites) ವಿಕ್ರಂ ಗೌಡ (Vikram Gowda) ಅಂತ್ಯಸಂಸ್ಕಾರವನ್ನು ಹುಟ್ಟೂರಾದ ಕೂಡ್ಲು ನದಿ ತಟದಲ್ಲಿ ಬುಧವಾರ ಸಂಜೆ ನೆರವೇರಿಸಲಾಯಿತು. ಕುಟುಂಬಸ್ಥರು, ಗ್ರಾಮಸ್ಥರು, ಆಪ್ತರು ಅಂತಿಮ ವಿಧಿವಿಧಾನದಲ್ಲಿ ಭಾಗಿಯಾದರು. ಈ ವೇಳೆ ಪೊಲೀಸರು ಉಪಸ್ಥಿತರಿದ್ದರು.
ಸೋಮವಾರ ನಕ್ಸಲರು ಮತ್ತು ನಕ್ಸಲ್ ನಿಗ್ರಹ ಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ವಿಕ್ರಂ ಗೌಡ ಹತ್ಯೆಯಾಗಿದ್ದ. ಹೆಬ್ರಿ ತಾಲೂಕಿನ ಸೋಮೇಶ್ವರ ನಾಡ್ಪಾಲು ಗ್ರಾಮದ ಕೂಡ್ಲು ನಿವಾಸಿ ವಿಕ್ರಂ ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ನಕ್ಸಲ್ ನಾಯಕ ವಿಕ್ರಂ ಗೌಡ 61 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಪೀತಬೈಲ್‌ನಲ್ಲಿ ಆಹಾರ ಪದಾರ್ಥ ತೆಗೆದುಕೊಳ್ಳಲು ಬಂದಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.
ಇನ್ನು ಅಂತ್ಯಕ್ರಿಯೆ ವೇಳೆ ಮಾತನಾಡಿದ ವಿಕ್ರಂ ಗೌಡ ಸಹೋದರ ಸುರೇಶ ಗೌಡ ಅವರು, ನನ್ನ ಅಮ್ಮ ಅಪಘಾತದಲ್ಲಿ ಮೃತಪಟ್ಟಿದ್ದರು. ನಾನು ಮನೆಯಲ್ಲಿ ಇರಲಿಲ್ಲ ಸಣ್ಣಂದಿನಲ್ಲೇ ಮುಂಬೈಗೆ ಹೋಗಿದ್ದೇನೆ. ನಾನು ಹೊರಗಡೆ ಕೆಲಸ ಮಾಡಿಕೊಂಡಿದ್ದೆ ಕುಟುಂಬಸ್ಥರ ಜೊತೆ ಇರಲಿಲ್ಲ. ನಾನು ಈ ಊರು ಬಿಟ್ಟು ಮುಂಬೈ ಮತ್ತಿತರ ಕಡೆ ಕೆಲಸ ಮಾಡಿ 18 ವರ್ಷ ಆಯ್ತು. ನಾನು ನನ್ನ ಕುಟುಂಬದ ಜೊತೆ ಬೇರೆ ಇದ್ದೇನೆ. ಅವನು ನಕ್ಸಲರ ಸಂಪರ್ಕಕ್ಕೆ ಹೋದದ್ದು ನನಗೆ ಆರಂಭದಲ್ಲಿ ಗೊತ್ತಿರಲಿಲ್ಲ. ಆನಂತರದಲ್ಲಿ ಗೊತ್ತಾಯಿತು ಎಂದು ಹೇಳಿದರು.
ವಿಕ್ರಂ ಗೌಡ ನಕ್ಸಲೀಯರ ಜೊತೆ ಹೋಗಿದ್ದಾನೆ ಎಂಬ ಮಾಹಿತಿ ಇತ್ತು. ಆತ ಇನ್ನು ಜೀವಂತ ಇದ್ದಾನೆ ಎಂದು ನಮಗೆ ಗೊತ್ತಿರಲಿಲ್ಲ. ವಿಕ್ರಂ ಗೌಡ ಜೀವಂತ ಇದ್ದಾನೆ ಎಂಬ ಭರವಸೆ ನಮಗೆ ಇರಲಿಲ್ಲ. ಎನ್ಕೌಂಟರ್ ಆಗಿದೆ ಎಂದು ಮಾಧ್ಯಮಗಳಲ್ಲಿ ನೋಡಿ ಗೊತ್ತಾಗಿದ್ದು. ಪೊಲೀಸರು ಫೋನ್ ಮಾಡಿ ಕರೆದರು ಅಲ್ಲಿ ಹೋಗಿ ನೋಡಿದೆವು. ಎಂದು ಅವರ ಸಹೋದರ ಹೇಳಿದರು.
ರಾಜ್ಯದ ಕುಖ್ಯಾತ ಮಾವೋವಾದಿ ಸಾಕೇತ್ ರಾಜನ್ ಮತ್ತು ಅವನ ಆಪ್ತ ಸಹಚರ ಶಿವಲಿಂಗು ಇಬ್ಬರು ಪೊಲೀಸರು 2005ರ ಫೆಬ್ರುವರಿಯಲ್ಲಿ ಚಿಕ್ಕಮಗಳೂರಿನ ಮೆಣಸಿನಹಾಡ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗುಂಡೇಟಿಗೆ ಬಲಿಯಾಗಿದ್ದರು. ಅವರ ನಂತರ, ಕೃಷ್ಣಮೂರ್ತಿ ಮತ್ತು ವಿಕ್ರಂ ಗೌಡ ನಾಯಕತ್ವದ ಪ್ರಮುಖ ಪಾತ್ರಗಳನ್ನು ವಹಿಸಿಕೊಂಡರು. ಚಿಕ್ಕಮಗಳೂರಿನವರಾದ ಅವರು ಸಿಪಿಐ (ಮಾವೋವಾದಿ) ಪಕ್ಷದ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು ಮತ್ತು ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಈತನ ವಿರುದ್ಧ ಕರ್ನಾಟಕದಲ್ಲಿ ಹಾಗೂ ಕೇರಳದಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆತ ಕನಿಷ್ಠ ಮೂರು ಸಂದರ್ಭಗಳಲ್ಲಿ ಬಂಧನದಿಂದ ತಪ್ಪಿಸಿಕೊಂಡಿದ್ದ, ಆತನಿಗಾಗಿ ಕರ್ನಾಟಕ ಸರ್ಕಾರ 3 ಲಕ್ಷ ರೂ. ಹಾಗೂ ಕೇರಳ ಸರ್ಕಾರ 50,000 ರೂ. ಬಹುಮಾನ ಘೋಷಿಸಿತ್ತು.
ಈ ಸುದ್ದಿಯನ್ನೂ ಓದಿ: Vikram Gowda’s encounter: ನಕ್ಸಲ್ ಚಟುವಟಿಕೆ ನಿಗ್ರಹಿಸಲು ವಿಕ್ರಂ ಗೌಡ ಎನ್‌ಕೌಂಟರ್: ಸಿಎಂ ಸಿದ್ದರಾಮಯ್ಯ