ಬೆಂಗಳೂರು: ಚಿನ್ನದ ವ್ಯಾಪಾರಿಗೆ 2.42 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ವರ್ತೂರ್ ಪ್ರಕಾಶ್‌ಗೆ (Varthur Prakash) ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಅವರು ಪೊಲೀಸರ ಎದುರು ವಿಚಾರಣೆಗಾಗಿ ಮಂಗಳವಾರ ಹಾಜರಾಗಿದ್ದು, ಬಂಧನ ಭೀತಿ ಎದುರಾಗಿದೆ.
ಪ್ರಕರಣದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಾಗಲಗುಂಟೆ ನಿವಾಸಿ ಶ್ವೇತಾ ಗೌಡ ಅವರನ್ನು ಬಂಧಿಸಿದ್ದರು. ಅವರಿಂದ ಚಿನ್ನ, ಕಾರು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಆರೋಪಿ ವಿಚಾರಣೆ ವೇಳೆ ವರ್ತೂರ್ ಪ್ರಕಾಶ್ ಅವರ ಹೆಸರು ಬಾಯಿಟ್ಟಿದ್ದರು. ಆರೋಪಿ ಹೇಳಿಕೆ ಆಧರಿಸಿ ಪ್ರಕಾಶ್ ಅವರಿಗೆ ಮೂರು ಬಾರಿ ನೋಟಿಸ್ ನೀಡಲಾಗಿತ್ತು. ಮಂಗಳವಾರ ಬೆಳಗ್ಗೆ ವಿಚಾರಣೆಗೆ ಪ್ರಕಾಶ್ ಹಾಜರಾಗಿದ್ದು, ಎಸಿಪಿ ಗೀತಾ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ತಾನು ವಂಚಿಸಿ ಸಂಪಾದಿಸಿದ್ದ ಚಿನ್ನದಲ್ಲಿ ವರ್ತೂರು ಪ್ರಕಾಶ್ ಅವರಿಗೆ ಸಹ ಪಾಲು ಕೊಟ್ಟಿದ್ದೇನೆ. ನನಗೆ ಚಿನ್ನದ ವ್ಯಾಪಾರಿ ಸಂಜಯ್ ಬಾಪ್ನ ಅವರನ್ನು ಮಾಜಿ ಸಚಿವರೇ ಪರಿಚಯಿಸಿದ್ದರು ಎಂದು ವಿಚಾರಣೆ ವೇಳೆ ಆರೋಪಿ ಶ್ವೇತಾಗೌಡ ಹೇಳಿಕೆ ನೀಡಿದ್ದಳು ಎನ್ನಲಾಗಿದೆ.
6 ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಶ್ವೇತಾಗೌಡಳಿಗೆ ವರ್ತೂರು ಪ್ರಕಾಶ್ ಪರಿಚಯವಾಗಿದ್ದರು. ತಾನಾಗಿಯೇ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಮಾಜಿ ಸಚಿವರನ್ನು ಸ್ನೇಹದ ಬಲೆಗೆ ಶ್ವೇತಾ ಬೀಳಿಸಿಕೊಂಡಿದ್ದಳು. ಬಳಿಕ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಪರಸ್ಪರ ಚಾಟಿಂಗ್ ಶುರುವಾಗಿದ್ದು, ಬಳಿಕ ಇಬ್ಬರ ನಡುವೆ ಮೊಬೈಲ್ ಸಂಖ್ಯೆ ವಿನಿಮಯವಾಗಿ ವಾಟ್ಸ್ ಆ್ಯಪ್ ಮಾತುಕತೆ ಮುಂದುವರಿದಿತ್ತು ಕಳೆದ ನಾಲೈದು ತಿಂಗಳಿಂದ ಶ್ವೇತಾ ಹಾಗೂ ವರ್ತೂರು ಪ್ರಕಾಶ್ ನಡುವೆ ಆತ್ಮೀಯ ಒಡನಾಟವಿತ್ತು ಎನ್ನಲಾಗಿದೆ. ಹೀಗಾಗಿಯೇ ಮಾಜಿ ಸಚಿವರ ಹೆಸರೇಳಿಕೊಂಡು ಚಿನ್ನದ ವ್ಯಾಪಾರಿಗೆ ಮಹಿಳೆ ವಂಚಿಸಿದ್ದಾಳೆ.
ಈ ಸುದ್ದಿಯನ್ನೂ ಓದಿ | Robber Arrested: ದರೋಡೆ, ಕೊಲೆ ಪ್ರಕರಣ; ಬರೋಬ್ಬರಿ 21 ವರ್ಷಗಳ ನಂತರ ಆರೋಪಿ ಅರೆಸ್ಟ್!
ಡಿ.ಕೆ.ಸುರೇಶ್ ತಂಗಿ ಎಂದು ಹೇಳಿ 8.41 ಕೋಟಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ಹೇಳಿಕೊಂಡು ಮಹಿಳೆಯೊಬ್ಬರು 2.42 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ ಪ್ರಕರಣದ ಬೆನ್ನಲ್ಲೇ ಅಂತಹುದೇ ಮತ್ತೊಂದು ಕೇಸ್ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಈ ಬಾರಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ಚಿನ್ನಾಭರಣ ಖರೀದಿಸಿ ಕೋಟ್ಯಂತರ ರೂಪಾಯಿ ವಂಚನೆ (Fraud case) ಮಾಡಿರುವುದು ಕಂಡುಬಂದಿದೆ.
ಮಾಜಿ ಸಂಸದ ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ ಆರೋಪದಲ್ಲಿ ಐಶ್ವರ್ಯ ಗೌಡ, ಪತಿ ಹರೀಶ್ ಕೆ.ಎನ್. ಹಾಗೂ ಸಿನಿಮಾ ನಟ ಧರ್ಮೇಂದ್ರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರ್‌ಆರ್ ನಗರ ನಿವಾಸಿ ಆಗಿರುವ ಐಶ್ವರ್ಯ ಗೌಡ ವಿರುದ್ಧ 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರಾದ ವನಿತಾ ಐತಾಳ್ ದೂರು ನೀಡಿದ್ದಾರೆ.
ಐಶ್ವರ್ಯ ಗೌಡ 2023ರ ಅಕ್ಟೋಬರ್ನಿಂದ 2024 ಏಪ್ರಿಲ್‌ವರೆಗೆ ಹಂತ ಹಂತವಾಗಿ ಚಿನ್ನ ಪಡೆದಿದ್ದರು. ಆದರೆ, ಹಣ ಕೇಳಿದಾಗ ಡಿ.ಕೆ. ಸುರೇಶ್ರಿಂದ ಕರೆ ಮಾಡಿಸಿ ಕಾಲಾವಕಾಶ ಕೋರಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಸಿನಿಮಾ ಧರ್ಮೇಂದ್ರ ಅವರಿಂದ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಇನ್ನು ಐಶ್ವರ್ಯ ಗೌಡ ಅವರ ಪತಿ ಹರೀಶ್ ಕೆ.ಎನ್ ಕೂಡ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ನಾನು ಡಿ.ಕೆ ಸುರೇಶ್ ತಂಗಿ, ನನಗೆ ಅನೇಕ ರಾಜಕೀಯ ವ್ಯಕ್ತಿಗಳ ಸಂಪರ್ಕವಿದೆ. ನಾನು ದೊಡ್ಡ ಬ್ಯುಸಿನೆಸ್ ವುಮೆನ್. ನಿಮಗೆ ಒಳ್ಳೆ ವ್ಯಾಪಾರ ವಹಿವಾಟು ನೀಡುತ್ತೇನೆ ಎಂದೆಲ್ಲ ಹೇಳಿ ವನಿತಾ ಅವರನ್ನು ಐಶ್ವರ್ಯ ನಂಬಿಸಿದ್ದರು ಎನ್ನಲಾಗಿದೆ. ಸದ್ಯ ಘಟನೆ ಬಗ್ಗೆ ಚಂದ್ರ ಲೇಔಟ್ನಲ್ಲಿರುವ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರಿ ಶಾಪ್ ಮಾಲೀಕರಾದ ವನಿತಾ ಅವರು ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Smuggler Sunil Yadav: ಶೂಟೌಟ್‌ನಲ್ಲಿ ಸ್ಮಗ್ಲರ್ ಸುನಿಲ್ ಯಾದವ್ ಬಲಿ; ಲಾರೆನ್ಸ್ ಬಿಷ್ಣೋಯ್ ಆಪ್ತನಿಂದ ಕೃತ್ಯ?