Saturday, 10th May 2025

VAO Recruitment: ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ; 1:3 ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಿದ ತುಮಕೂರು ಜಿಲ್ಲಾಡಳಿತ

VAO Recruitment

ತುಮಕೂರು: ಗ್ರಾಮ ಆಡಳಿತಾಧಿಕಾರಿ (ವಿಎಒ) ಹುದ್ದೆ ನೇಮಕಾತಿಗೆ (VAO Recruitment) ಸಂಬಂಧಿಸಿದಂತೆ ಅಂಕ ತಿದ್ದುಪಡಿ ಮಾಡಿ ಎಡವಟ್ಟು ಮಾಡಿಕೊಂಡಿದ್ದ ಜಿಲ್ಲಾಡಳಿತ ಪಟ್ಟಿಯನ್ನು ವಾಪಸ್ ಪಡೆದು, ಪರಿಷ್ಕೃತ 1:3 ಪ್ರವರ್ಗವಾರು ಅಂತಿಮ ಪಟ್ಟಿಯನ್ನು ಪ್ರಕಟಗೊಳಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಜಿಲ್ಲಾಡಳಿತ ತಿದ್ದುಪಡಿ ಮಾಡಿ ವ್ಯತ್ಯಾಸ ಮಾಡಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಪರಿಣಾಮವಾಗಿ ಅಂಕ ತಿದ್ದುಪಡಿ ಮಾಡಿದ್ದ 1:3 ಪಟ್ಟಿಯನ್ನು ರದ್ದು ಮಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅನುಗುಣವಾಗಿ ಪರಿಷ್ಕೃತ 1:3 ಪ್ರವರ್ಗವಾರು ಪಟ್ಟಿಯನ್ನು ಪ್ರಕಟ ಮಾಡಿದೆ.

ಕೆಇಎ ಅಂಕಗಳನ್ನು ಜಿಲ್ಲಾಡಳಿತದ ವತಿಯಿಂದ ತಿದ್ದುಪಡಿ ಮಾಡಲಾಗಿದ್ದು ಇದರಿಂದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ವರ್ಷಾನುಗಟ್ಟಲೆ ಪರೀಕ್ಷೆಗಾಗಿ ವ್ಯಾಸಂಗ ಮಾಡಿದ್ದು ವ್ಯರ್ಥವಾಗಲಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ನೊಂದ ಅಭ್ಯರ್ಥಿಗಳು ಕಿಡಿ ಕಾರಿದ್ದರು. ತಕ್ಷಣವೇ ಎಚ್ಚೆತ್ತ ಜಿಲ್ಲಾಡಳಿತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅನ್ವಯದಂತೆ 1:3 ಪಟ್ಟಿಯನ್ನು ಪ್ರಕಟ ಮಾಡಿದ್ದು ದಾಖಲಾತಿ ಪರಿಶೀಲನೆಗೆ ಕ್ರಮ ಕೈಗೊಂಡಿದೆ.

ಈ ಸುದ್ದಿಯನ್ನೂ ಓದಿ | Food Poisoning: NCC ಶಿಬಿರದಲ್ಲಿ ವಿಷಾಹಾರ ಸೇವಿಸಿ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಗ್ರಾಮ ಆಡಳಿತಾಧಿಕಾರಿ (ವಿಎಒ) ಹುದ್ದೆಗಳ ನೇಮಕಾತಿಗೆ (VAO Recruitment 2024) ಸಂಬಂಧಿಸಿದಂತೆ ಇತ್ತೀಚೆಗೆ ಜಿಲ್ಲಾಡಳಿತ ಪ್ರಕಟಿಸಿದ್ದ 1:3 ಪಟ್ಟಿಯಲ್ಲಿ ಅಭ್ಯರ್ಥಿಗಳ ಅಂಕಗಳಲ್ಲಿ ಭಾರಿ ವ್ಯತ್ಯಾಸವಾಗಿದ್ದು, ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಜಿಲ್ಲಾಡಳಿತದ ವಿರುದ್ಧ ಆಕಾಂಕ್ಷಿಗಳು ಆಕ್ರೋಶ ಹೊರಹಾಕಿದ್ದರು.

ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ನಡೆಸಲಾಗಿತ್ತು. ಅದರ ಅನ್ವಯ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ 1:3 ಪಟ್ಟಿಯನ್ನು ಪ್ರಕಟಿಸಿ ದಾಖಲಾತಿ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪಟ್ಟಿಯನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ಅಂಕಗಳಿಗೆ ಹಾಗೂ ಜಿಲ್ಲಾಡಳಿತದ ವತಿಯಿಂದ ಪ್ರಕಟಿಸಿರುವ ಅಂಕಗಳಿಗೂ ಭಾರಿ ವ್ಯತ್ಯಾಸವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಪರಿಷ್ಕೃತ 1:3 ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಜಿಲ್ಲಾಡಳಿತ ಪ್ರಕಟಿಸಿದೆ.