ನವದೆಹಲಿ: ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದ ವಿದ್ಯಾರ್ಥಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಶಿಕ್ಷೆ ವಿಧಿಸಲು ಸೂಚಿಸಿರುವುದು ಅಕ್ಷಮ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆಕ್ಷೇಪಿಸಿದ್ದಾರೆ. ‘ತಮಗೆ ಕನ್ನಡ ಬರುತ್ತದೆ. ಈಗೇನು ಉರ್ದು ಮಾತನಾಡುತ್ತಿದ್ದೇನಾ?’ ಎಂದು ಪ್ರಶ್ನಿಸುತ್ತಲೇ ವಿದ್ಯಾರ್ಥಿ ಮೇಲೆ ಗರಂ ಆಗಿದ್ದೂ ಅಲ್ಲದೇ, ಕ್ರಮ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದು ಶಿಕ್ಷಣ ಸಚಿವರ ಬಾಲಿಶತನವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕನ್ನಡ ಬರುತ್ತದೆ ಎನ್ನುತ್ತಲೇ ಆ ವಿದ್ಯಾರ್ಥಿಗೆ ಇಂಗ್ಲೀಷ್‌ನಲ್ಲೇ ಶಿಕ್ಷೆಗೆ ಸೂಚಿಸಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ಕನ್ನಡ ಭಾಷೆ, ನಾಡು-ನುಡಿ ಮೇಲೆ ಅವರಿಗಿರುವ ಅಭಿಮಾನ ಎಂಥದ್ದು ಎಂದು ಜೋಶಿ ಟೀಕಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | ಮಂಗಳೂರು ವಿವಿ ಅಂತರ ಕಾಲೇಜು ಕುಸ್ತಿ: 3 ಪದಕ ಗೆದ್ದ ಬೆಸೆಂಟ್ ಕಾಲೇಜು
ತಮಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಈ ಹಿಂದೆ ಸ್ವತಃ ತಾವೇ ಹೇಳಿದ್ದಾರೆ. ಅದನ್ನೇ ಆ ವಿದ್ಯಾರ್ಥಿ ನೆನಪಿಸಿದ್ದಾನೆ. ಅದಕ್ಕಾಗಿ ವಿದ್ಯಾರ್ಥಿಗೆ ಶಿಕ್ಷೆ ವಿಧಿಸುವುದು ಸರ್ಕಾರ ಮತ್ತು ಶಿಕ್ಷಣ ಸಚಿವರು ಸರ್ವಾಧಿಕಾರಿ ಧೋರಣೆ ಆಗಿದೆ ಎಂದು ಪ್ರಲ್ಹಾದ್ ಜೋಶಿ ಖಂಡಿಸಿದ್ದಾರೆ.
ಕನ್ನಡ ನಾಡು-ನುಡಿಗೆ, ಅದರ ಗೌರವಕ್ಕೆ ಧಕ್ಕೆ ತರುವ ಯಾರೇ ಆದರೂ ಕನ್ನಡಿಗರು ಸಹಿಸುವುದಿಲ್ಲ. ಅಂಥದ್ದರಲ್ಲಿ ಶಿಕ್ಷಣ ಸಚಿವರೇ ಹೀಗೆ ವರ್ತಿಸಿದರೆ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ. ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದಿದ್ದನ್ನು ಸಹಿಸದೆ ವಿದ್ಯಾರ್ಥಿ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಇಂಗ್ಲಿಷ್‌ನಲ್ಲೇ ಸೂಚಿಸಿದ್ದಾರೆ. ಹಾಗಾದರೆ ಇದು ಏನನ್ನು ಸಾಬೀತು ಪಡಿಸುತ್ತದೆ? ಎಂದು ಸಚಿವ ಜೋಶಿ ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Time Deposit Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿದೆ ಲಕ್ಷ ರೂ.ವರೆಗೆ ಬಡ್ಡಿ ಗಳಿಸುವ ಅವಕಾಶ!
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರುತ್ತದೆ. ಶಿಕ್ಷಣ ಸಚಿವರ ಫರ್ಮಾನು ಇದಕ್ಕೆ ಇನ್ನೊಂದು ಉದಾಹರಣೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.