ತುಮಕೂರು: ರೈತರಿಗೆ ಪಂಪ್ ಸೆಟ್ ಹಾಗೂ ಬೋರ್‌ವೆಲ್ ಹಾಕಿಸಿಕೊಡುವ ನೆಪದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಅವರ ಹೆಸರಲ್ಲಿ ವಂಚನೆ ನಡೆಸಿರುವ ಆರೋಪಿಯನ್ನು ಹೊಸ ಬಡಾವಣೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ (Tumkur News) ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಗೋವರ್ಧನ್ ಬಂಧಿತ ಆರೋಪಿ.
ನಕಲಿ ಲೆಟರ್ ಹೆಡ್ ಸೃಷ್ಟಿಸಿ, ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರಲ್ಲಿ, ಸಹಿ ಹಾಕಿ ವಂಚಿಸಲು ಯತ್ನಿಸಿದ ಆರೋಪಿಯನ್ನು ಹೊಸ ಬಡಾವಣೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಆರೋಪಿ ಗೋವರ್ಧನ್, ಫಲಾನುಭವಿಗಳ ಹೆಸರು ಹಾಕಿ, ಬೋರ್‌ವೆಲ್ ಕೊರೆಸುವ ಕುರಿತು ಹಾಗೂ ಪಂಪ್ ಸೆಟ್ ಮೋಟರ್ ನೀಡುವಂತೆ ನಕಲಿ ಆದೇಶ ಪ್ರತಿ ನೀಡಿದ್ದ. ಈ ಆದೇಶದ ಪ್ರತಿಗಳಲ್ಲಿ ಕೇಂದ್ರ ಸಚಿವ, ಸಂಸದ ಸೋಮಣ್ಣ ಅವರ ಸಹಿ ಮತ್ತು ಲೆಟರ್ ಹೆಡ್ ನಕಲು ಮಾಡಿ, ಹತ್ತಾರು ಮಂದಿಗೆ ಆರೋಪಿಯು ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Stabbing Case: ಹಾಸನದಲ್ಲಿ ಪ್ರಿಯಕರನಿಗೇ ಚಾಕು ಇರಿದ ಪ್ರಿಯತಮೆ; ನ್ಯೂ ಇಯರ್ ಪಾರ್ಟಿ ವೇಳೆ ಘಟನೆ
ನಕಲಿ ಆದೇಶ ಪ್ರತಿ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದದ್ದು, ಸಚಿವ ವಿ. ಸೋಮಣ್ಣ ಅವರ ಕಚೇರಿ ಆಪ್ತ ಸಹಾಯಕ ಮಹೇಶ್ ದೂರಿನ ಮೇರೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿ ಗೋವರ್ಧನ್‌ನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.