ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ (SM Krishna) ಅಂತ್ಯಕ್ರಿಯೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸ್ವಗ್ರಾಮ ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿತು. ಕುಟುಂಬಸ್ಥರು, ಸಂಬಂಧಿಕರು, ಆಪ್ತರು, ರಾಜಕೀಯ ನಾಯಕರು ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
ಸಿಎಂ ಸಿದ್ದರಾಮಯ್ಯ ಸೇರಿ ಪ್ರಮುಖ ರಾಜಕೀಯ ನಾಯಕರು ಪುಷ್ಪನಮನ ಸಲ್ಲಿಸಿದ ಬಳಿಕ ರಾಷ್ಟ್ರಗೀತೆ ನುಡಿಸಿ, ಪೊಲೀಸರಿಂದ 3 ಸುತ್ತು ಕುಶಾಲ ತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಎಸ್.ಎಂ. ಕೃಷ್ಣ ಅವರ ಮೊಮ್ಮಗ, ಡಿಕೆಶಿ ಪುತ್ರಿ ಐಶ್ವರ್ಯ ಅವರ ಪತಿ ಅಮರ್ತ್ಯ ಹೆಗ್ಡೆ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು. ಡಾ.ಭಾನು ಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಅಂತಿಮ ವಿಧಿ-ವಿಧಾನ ನಡೆಯಿತು. ಅಂತ್ಯಕ್ರಿಯೆಗೆ ಮೈಸೂರಿಂದ 1 ಸಾವಿರ ಕೆಜಿ ಗಂಧದ ಕಟ್ಟಿಗೆ ತರಲಾಗಿತ್ತು.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಬೆಳಗ್ಗೆ ಇಲ್ಲಿಂದ ಅಂತಿಮ ಯಾತ್ರೆ ಹೊರಟಿತ್ತು. ಮಾರ್ಗದುದ್ದಕ್ಕೂ ಸಾವಿರಾರು ಜನ ಅಂತಿಮ ನಮನ ಸಲ್ಲಿಸಿದರು. ಬೆಂಗಳೂರಿನಿಂದ ಮದ್ದೂರಿಗೆ ತೆರಳುವ ಮಾರ್ಗ ಮಧ್ಯೆ ರಾಮನಗರ ಜಿಲ್ಲೆಯ ಬಿಡದಿ, ರಾಮನಗರ ಪಟ್ಟಣ, ಚನ್ನಪಟ್ಟಣದಲ್ಲಿ ಜಿಲ್ಲೆಯ ಜನರಿಗೆ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು.

ಅಂತ್ಯಸಂಸ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಚಲುವರಾಯಸ್ವಾಮಿ, ಡಾ.ಜಿ. ಪರಮೇಶ್ವರ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಕೃಷ್ಣಬೈರೇಗೌಡ, ಎಂ.ಸಿ. ಸುಧಾಕರ್, ಲಕ್ಷ್ಮಿ ಹೆಬ್ಬಾಳ್ಕರ್, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸಂಸದ ಡಾ.ಕೆ.ಸುಧಾಕರ್, ಶಾಸಕ ಅಶ್ವತ್ಥನಾರಾಯಣ್, ಮತ್ತಿತರ ಪ್ರಮುಖರು ಭಾಗಿಯಾಗಿದ್ದರು.

ಈ ಸುದ್ದಿಯನ್ನೂ ಓದಿ | SM Krishna Death: ಹುಟ್ಟೂರಿಗೆ ಹೊರಟ ಎಸ್‌ಎಂ ಕೃಷ್ಣ ಪಾರ್ಥಿವ ಶರೀರ, ದಾರಿಯುದ್ದಕ್ಕೂ ಅಂತಿಮ ದರ್ಶನ
ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಡಿಸೆಂಬರ್ 10ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾಗಿದ್ದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ.



